Category: ರಾಜಕೀಯ

  • ಕುಂದಾಪುರ :ರಾಜಕೀಯ ಗುರು ಎ.ಜಿ.ಕೊಡ್ಗಿ ಋಣ ತೀರಿಸಿದ ಹಾಲಾಡಿ

    ಕುಂದಾಪುರ :ರಾಜಕೀಯ ಗುರು ಎ.ಜಿ.ಕೊಡ್ಗಿ ಋಣ ತೀರಿಸಿದ ಹಾಲಾಡಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿದ್ದ ಅಭ್ಯರ್ಥಿ ಆಯ್ಕೆ ಪ್ತಕ್ರಿಯೆಯ ಬಳಿಕ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬೀಳುತ್ತಿದೆ.

    ಕುಂದಾಪುರದ ಶಾಸಕ, ಕರಾವಳಿಯ ವಾಜಪೇಯಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಚಕ್ರಾಧಿಪತ್ಯವನ್ನು ತನ್ನ ರಾಜಕೀಯ ಗುರು ದಿವಂಗತ ಎ.ಜಿ.ಕೊಡ್ಗಿಯವರ ಪುತ್ರ, ತನ್ನವರಾಜಕೀಯದ ಬಲಗೈ ಬಂಟ ಕಿರಣ್ ಕೊಡ್ಗಿಯವರಿಗೆ ಬಿಟ್ಟುಕೊಟ್ಟಿದ್ದಾರೆ.

    ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಸ್ವ ಇಚ್ಚೆಯಿಂದ ಕಿರಣ್ ಕೊಡ್ಗಿಯವರಿಗೆ ಅವಕಾಶ ನೀಡುವ ಮೂಲಕ ಎ.ಜಿ.ಕೊಡ್ಗಿಯವರ ಋಣ ತೀರಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.

    ಇದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಧಿಕೃತವಾಗಿ ಕಿರಣ್ ಕೊಡ್ಗಿಯವರ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

  • ಕೋಟ :ಚುನಾವಣೆಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ – ವೆರೊನಿಕಾ ಕರ್ನೆಲಿಯೊ

    ಕೋಟ :ಚುನಾವಣೆಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ – ವೆರೊನಿಕಾ ಕರ್ನೆಲಿಯೊ

    ಕೋಟದಲ್ಲಿ ಬೃಹತ್ ಮಹಿಳಾ ಕಾಂಗ್ರೆಸ್ ಸಮಾವೇಶ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಇಂದು ದೇಶದ 50% ಮಹಿಳೆಯರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಎಂದು ಮಹಿಳಾ ಕಾಂಗ್ರೆಸ್ ಮುಖಂಡೆ ವೆರಿನಿಕಾ ಕರ್ನೆಲಿಯೋ ಹೇಳಿದರು.

    ಅವರು ಸಾಲಿಗ್ರಾಮ ಚೆಂಪಿ ಹಾಲು ಡೈರಿ ಸಮೀಪ ಮೈದಾನದಲ್ಲಿ ಮಾ.26ರಂದು ಜರಗಿದ
    ಕೋಟ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

    ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ. ಅಂತಹಾ ಪ್ತಶ್ನಿಸುವ ಅಧಿಕಾರ ನೀಡಿದ್ದು ದೇಶವನ್ನು ಮುನ್ನಡೆಸುವ ಕಾಂಗ್ರೆಸ್ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದರು.

    ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗ ಈ‌ ದೇಶಕ್ಕೆ ಹಲವು ಕೊಡುಗೆಗಳನ್ನ ನೀಡಿತ್ತು. ಆದರೆ ಬಿಜೆಪಿ ಸರಕಾರ ಕೇವಲ ಸುಳ್ಳು ಘೋಷಣೆಗಳ ಮೂಲಕ ದುರಾಡಳಿತ ನಡೆಸುತ್ತಿದೆ. ಕುಂದಾಪುರ ಕ್ಷೇತ್ರಕ್ಕೆ ನಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯಾಗುವ ಓರ್ವ ಉತ್ತಮ ಶಾಸಕ ಅಗತ್ಯವಿದ್ದು ಅದಕ್ಕಾಗಿ ದಿನೇಶ್ ಹೆಗ್ಡೆ ಮೊಳಹಳ್ಳಿಯವರಿಗೆ ಅವಕಾಶ ನೀಡಿ ಎಂದರು.‌

    ವಿಧಾನಸಭಾ ಚುನಾವಣೆಯ ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಈ‌ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಅವಕಾಶ ನೀಡಿ ಎಂದರು.

    ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀಯವರ ಲೋಕಸಭಾ ಸದಸ್ಯತ್ವವನ್ನು ವಜಾಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ಎ. ಗಪೂರ್ ಖಂಡನಾ ನಿರ್ಣಯ ಮಂಡಿಸಿದರು ಹಾಗೂ ರಾಹುಲ್ ಗಾಂಧಿಯವರ ಜತೆಗೆ ನಾವಿದ್ದೇವೆ ಎಂದು ಘೋಷಣೆ ಕೂಗಿದರು.

    ಕೋಟ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಪಿ.ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಬ್ಲಾಕ್‌ ಅಧ್ಯಕ್ಷ ಶಂಕರ್‌ ಕುಂದ‌ರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಹರಿಪ್ರಸಾದ್ ಶೆಟ್ಟಿ, ಮಲ್ಯಾಡಿ‌ ಶಿವರಾಮ‌ ಶೆಟ್ಟಿ, ದೇವಕಿ ಸಣ್ಣಯ್ಯ, ವೆರೋನಿಕ ಕರ್ನೇಲಿಯೊ, ವಿಕಾಸ‌ ಹೆಗ್ಡೆ, ತಿಮ್ಮ ಪೂಜಾರಿ ಕೋಟ, ರೋಶಿನಿ‌ ಒಲ್ವೇರ, ಅನಿತಾ ಡಿಸೋಜ ಕಾರ್ಕಳ,‌ ಮಮತಾ ಬಿ.ಪೂಜಾರಿ, ಕಲ್ಪನಾ ದಿನಕರ್ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

    ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕಾಂಗ್ರೆಸ್‌ನ ಚುನಾವಣೆ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಲಾಯಿತು.

  • ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ :ಕುಂದಾಪುರ – ದಿನೇಶ್ ಹೆಗ್ಡೆ ಮೊಳಹಳ್ಳಿ, ಬೈಂದೂರು-ಗೋಪಾಲ ಫೂಜಾರಿ, ಕಾಪು-ವಿನಯ್ ಕುಮಾರ್ ಸೊರಕೆ

    ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ :ಕುಂದಾಪುರ – ದಿನೇಶ್ ಹೆಗ್ಡೆ ಮೊಳಹಳ್ಳಿ, ಬೈಂದೂರು-ಗೋಪಾಲ ಫೂಜಾರಿ, ಕಾಪು-ವಿನಯ್ ಕುಮಾರ್ ಸೊರಕೆ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು – ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಮಾಡಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತವಾಗಿದೆ. ಟಿ.ನರಸೀಪುರದಿಂದ ಹೆಚ್.ಸಿ.ಮಹದೇವಪ್ಪಗೆ ಟಿಕೆಟ್‌ ನೀಡಲಾಗಿದೆ. ನಂಜನಗೂಡಿನಿಂದ ಧ್ರುವ ನಾರಾಯಣ್‌ ಪುತ್ರ ದರ್ಶನ್‌, ನಾಗಮಂಗಲದಿಂದ ಚಲುವನಾರಾಯಣಸ್ವಾಮಿ, ದೇವನಹಳ್ಳಿಯಿಂದ ಮುನಿಯಪ್ಪ,‌ ಕನಕಪುರದಿಂದ ಡಿ.ಕೆ.ಶಿವಕುಮಾರ್, ಬೀದರ್‌ ದಕ್ಷಿಣ ಕ್ಷೇತ್ರದಿಂದ ಅಶೋಕ್‌ ಖೇಣಿಗೆ ಟಿಕೆಟ್‌ ನೀಡಲಾಗಿದೆ.

    ಕರಾವಳಿ ಭಾಗದಲ್ಲಿ ಮಂಗಳೂರು – ಯು.ಟಿ ಖಾದರ್, ಮೂಡುಬಿದಿರೆ -ಮಿಥುನ್ ರೈ, ಬೆಳ್ತಂಗಡಿ – ರಕ್ಷಿತ್ ಶಿವರಾಂ, ಬಂಟ್ವಾಳ ರಾಮನಾಥ ರೈ , ಸುಳ್ಯ – ಕೃಷ್ಣಪ್ಪ ಜಿ, ಬೈಂದೂರು-ಗೋಪಾಲ ಫೂಜಾರಿ, ಕಾಪು-ವಿನಯ್ ಕುಮಾರ್ ಸೊರಕೆ, ಕುಂದಾಪುರ-ದಿನೇಶ್ ಹೆಗ್ಡೆ ಮೊಳಹಳ್ಳಿ ಟಿಕೆಟ್ ಲಭ್ಯವಾಗಿದೆ.

  • ಮಣೂರು- ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ

    ಮಣೂರು- ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಅಂಗವಾಗಿ ಬಿಜೆಪಿ ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ ಸಭೆಯು ಶನಿವಾರ ಕೋಟದ ರಾಜಲಕ್ಷ್ಮೀಸಭಾಭವನದಲ್ಲಿ ಜರುಗಿತು.

    ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಪ್ರಣಾಳಿಕೆಗಾಗಿ ಸಲಹೆಯನ್ನು ಪತ್ರದ ಮೂಲಕ ತಿಳಿಸಿದರು, ಕಾರ್ಯಕ್ರಮದ ವೇದಿಕೆಯಲ್ಲಿ ಸಲಹಾ ಪತ್ರಗಳನ್ನು ಸಂಗ್ರಹಿಸಲಾಯಿತು.

    ಕಾರ್ಯಕ್ರಮದಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷರಾದ ಕಿರಣ್ ಕೊಡ್ಗಿ, ಅಭಿಯಾನದ ಜಿಲ್ಲಾ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ಸಹ ಸಂಚಾಲಕ ಶ್ಯಾಮ ಸುಂದರ ನಾಯರಿ, ನೀತಾ ಪ್ರಭು, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಅಭಿಯಾನದ ಮಂಡಲ ಸಂಚಾಲಕ ಶ್ರೀನಿಧಿ ಉಪಾಧ್ಯ, ಸಹ ಸಂಚಾಲಕ ಸುಧೀರ ಪೂಜಾರಿ ಕೋಟ ಕದ್ರಿಕಟ್ಟು ಉಪಸ್ಥಿತರಿದ್ದರು.

    ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ ಪೈ ವಂದೇ ಮಾತರಂ ಹಾಡಿದರು, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಸ್ವಾಗತಿಸಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತೀಶ್ ಬಾರಿಕೆರೆ ವಂದಿಸಿದರು, ಮಂಡಲ ಕಾರ್ಯದರ್ಶಿ ಸುರೇಂದ್ರ ಸಂಗಮ್ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ದೇಶದ ಪ್ರತಿಯೊಬ್ಬ ಮಹಿಳೆಯೂ ಭಾರತಮಾತೆಯೆಂದು ಗೌರವಿಸುತ್ತೇವೆ – ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪ್ರತಿಭಾ ಕುಳಾಯಿ

    ಕುಂದಾಪುರ :ದೇಶದ ಪ್ರತಿಯೊಬ್ಬ ಮಹಿಳೆಯೂ ಭಾರತಮಾತೆಯೆಂದು ಗೌರವಿಸುತ್ತೇವೆ – ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಪ್ರತಿಭಾ ಕುಳಾಯಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿ ಭಾರತದ ನಕಾಶೆಯ ಚಿತ್ರ ಬರೆದು ಕಿರೀಟ ಮತ್ತು ವೇಷ ತೊಟ್ಟ ಮಹಿಳೆಯ ಕೈಯಲ್ಲಿ ರಾಷ್ಟ್ರಧ್ವಜವನ್ನು ಇಟ್ಟು ಭಾರತ ಮಾತೆ ಎನ್ನುತ್ತದೆ. ಆದರೆ ಕಾಂಗ್ರೆಸ್ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಭಾರತಮಾತೆ ಎಂದು ಗೌರವಿಸುತ್ತದೆ ಎಂದು ಕಾಂಗ್ರೆಸ್ ಮುಖಂಡೆ, ಮಂಗಳೂರು‌ ಮಹಾನಗರ ಪಾಲಿಕೆಯ ಮಾಜೀ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.

    ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸಹನಾ ಕನ್ವೆನ್ಷನ್‌ ಸೆಂಟರ್ ನಲ್ಲಿ ಇಂದು ಬೆಳಿಗ್ಗೆ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮಹಿಳೆಯರನ್ನುದ್ಧೇಶಿಸಿ ಮಾತನಾಡಿದರು.

    ಕಾರ್ಪೋರೇಟ್ ಕಂಪೆನಿಗಳ ಏಜೆಂಟ್ ನಂತೆ ವರ್ತಿಸುತ್ತಿರುವ ಬಿಜೆಪಿಗೆ ಈ ಬಾರಿ ಕರ್ನಾಟಕದ ಮಹಿಳಾ ಮತದಾರರು ಉತ್ತರ ನೀಡುತ್ತಾರೆ ಎಂದರು. ಕಾಂಗ್ರೆಸ್ ಯಾವತ್ತೂ ಬಡವರ ಪರ ಎನ್ನುವುದನ್ನು ಭೂಸುಧಾರಣೆ ಮಸೂದೆಯ ಮೂಲಕ ಜಗತ್ತಿಗೇ ಸಾರಿದೆ ಎಂದರು.

    ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಬೆಲೆಯೇರಿಸುತ್ತಾ, ಪ್ರಶ್ನಿಸಿದರೆ ಪ್ರತಿ ಮನೆಯಲ್ಲೂ ನಾಲ್ಕು ವಾಹನಗಳಿವೆ, ಬಡವರು ಯಾರೂ ಇಲ್ಲ ಎನ್ನುತ್ತಿದೆ. ಭಾರತದ ಬಡ ಮಹಿಳೆಯರು ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ. ಬಡವರ ತೆರಿಗೆ ಹಣದಲ್ಲಿ ಶ್ರೀಮಂತರನ್ನು ಸಾಕುತ್ತಿದೆ. ಹಾಗಾಗಿ ಬಿಜೆಪಿ ಏನಿದ್ದರೂ ಶ್ರೀಮಂತರ ಪಕ್ಷ ಎಂದ ಅವರು, ಅದಕ್ಕಾಗಿಯೇ ಜಿಲ್ಲೆಯ ಮಹಿಳೆಯರು ಈ ಬಾರಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ ಎಂದರು.

    ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಮಾಜೀ ಅಧ್ಯಕ್ಷೆ ವರೆನಿಕಾ ಕರ್ನೆಲಿಯೋ ಮಾತನಾಡಿ, ಕುಂದಾಪುರದಲ್ಲಿ‌ ಮೊದಲ ಬಾರಿಗೆ ಮಹಿಳೆಯರು ಸಮಾವೇಶಗೊಳ್ಳುವ ಮೂಲಕ‌ ಇತಿಹಾಸ ಸೃಷ್ಟಿಸಿದೆ. ಕೊರೊನಾದಂತಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿದ್ಧರಾಮಯ್ಯ ಆರಂಭಿಸಿದ ಅನ್ನಭಾಗ್ಯ ನಮ್ಮ ಕೈ ಹಿಡಿದಿದೆಯೇ ಹೊರತು ಬಿಜೆಪಿ ನಾಯಕರು ಬಾರಿಸಿದ ಗಂಟೆ ಜಾಗಟೆಗಳಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅದನ್ನೂ ಕಿತ್ತುಕೊಂಡಿರುವ ಬಿಜೆಪಿ ಸರ್ಕಾರ 5ಕೆಜಿಗಳಿಗೆ ಕಡಿತ ಮಾಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಪ್ರತೀ ಕುಟುಂಬದ ಮಹಿಳಾ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000ರೂಪಾಯಿಗಳು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವ ಕಾಂಗ್ರೆಸ್ ನ ಮೂರು ಗ್ಯಾರೆಂಟಿಗಳನ್ನು ಘೋಷಿಸಿದರು.

    ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುರಸಭೆಯ ಸದಸ್ಯೆ ದೇವಕಿ ಸಣ್ಣಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ರೇಖಾ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕುಂದಾಪುರ ಪುರಸಭೆಯ ನಗರ ಯೋಜನ ಪ್ರಾಧಿಕಾರದ ಮಾಜೀ ಅಧ್ಯಕ್ಷ ವಿಕಾಸ್ ಹೆಗ್ಡೆ ಕೋಳ್ಳೆರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಶ್ಯಾಮಲಾ ಭಂಡಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್, ಗ್ರಾಮ ಪಂಚಾಯತ್ ಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

    ಕುಂದಾಪುರ ಬ್ಲಾಕ್ ಮಂಡಳದ ಮಹಿಳಾ ಅಧ್ಯಕ್ಷೆ ದೇವಕಿ‌ ಸಣ್ಣಯ್ಯ ಸ್ವಾಗತಿಸಿದರು. ಆಶಾ ಕರ್ವಾಲ್ಲೋ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

  • ಕೋಟ ಬ್ಲಾಕ್ ಮಹಿಳಾ ಅಧ್ಯಕ್ಷೆಯಾಗಿ ರೇಖಾ ಪದ್ಮನಾಭ ಪೂಜಾರಿ ನೇಮಕ

    ಕೋಟ ಬ್ಲಾಕ್ ಮಹಿಳಾ ಅಧ್ಯಕ್ಷೆಯಾಗಿ ರೇಖಾ ಪದ್ಮನಾಭ ಪೂಜಾರಿ ನೇಮಕ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮಾಜಿ ವಿಧಾನಪರಿಷತ್ ಸಭಾಪತಿ ಕೆ.ಪ್ರತಾಪ್ ಚಂದ್ರ ಶೆಟ್ಟಿ ಅವರ ಸೂಚನೆ ಮೇರೆಗೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಅವರ ಶಿಫಾರಸಿನೊಂದಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆಯವರು ಕೋಟ ಬ್ಲಾಕ್ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ರೇಖಾ ಪದ್ಮನಾಭ ಪೂಜಾರಿ ಆಯ್ಕೆಗೊಳಿಸಿದ್ದಾರೆ.

     

  • ಕುಂದಾಪುರ: ಮೋದಿಯವರ ಅಭಿವೃದ್ಧಿ ಮಂತ್ರದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ – ಕೆ.ಎಸ್.ಈಶ್ವರಪ್ಪ

    ಕುಂದಾಪುರ: ಮೋದಿಯವರ ಅಭಿವೃದ್ಧಿ ಮಂತ್ರದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ – ಕೆ.ಎಸ್.ಈಶ್ವರಪ್ಪ

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ಪ್ರಧಾನಿ ಮೋದಿಯವರ ಅಭಿವೃದ್ದಿ ಮಂತ್ರದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಗದ್ದುಗೆ ಹಿಡಿಯಲಿದೆ  ಎಂದು ಮಾಜೀ ಸಚಿವ, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.

    ಅವರು ಚುನಾವಣೆ ಪೂರ್ವ ಸಿದ್ಧತೆ ಹಿನ್ನೆಲೆ ರಾಜ್ಯಾದ್ಯಂತ ಸಂಚರಿಸುತ್ತಿರುವ

    ವಿಜಯ ಸಂಕಲ್ಪ ಯಾತ್ರೆಯ ಪ್ರಯುಕ್ತ ಕುಂದಾಪುರ ಮಂಡಲದ ಸೈಬ್ರಕಟ್ಟೆ ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಉತ್ತರಪ್ರದೇಶದ 395ರಲ್ಲಿ ಕೇವಲ ನಾಲ್ಕು ಕ್ಷೇತ್ರದಲ್ಲಿ ಮಾತ್ರ ಡಿಪಾಸಿಟ್ ಉಳಿಸಿಕೊಂಡಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಒಂದು ಸೀಟು ಗೆಲ್ಲಲಾಗುವುದಿಲ್ಲ ಎಂದರು.
    ವಿಶ್ವದಲ್ಲಿಯೇ ಸಿಗದಿರುವಂತಹಾ ಅಪರೂಪದ ನಾಯಕ ನರೇಂದ್ರ ಮೋದಿ ನಮ್ಮ ದೇಶದಲ್ಲಿ ಪ್ರಧಾನಿಯಾಗಿದ್ದಾರೆ ಎಂದ ಅವರು, ಮೋದಿ ಅಭಿವೃದ್ಧಿ ಯೋಜನೆ ನಿರೀಕ್ಷೆಗೂ ಮೀರಿ ಜನರಿಗೆ ತಲುಪುತ್ತಿದ್ದು, ಈ ಬಾರಿ ಕರ್ನಾಟಕದಲ್ಲಿಯೂ ಬಿಜಿಪಿ ಸರ್ಕಾರ ರಚಿಸುತ್ತದೆ ಎಂದರು. ಜಲಜೀವನ್ ಮುಖಾಂತರ ಮನೆ ಮನೆಗೆ ಗಂಗೆ, ರಸ್ತೆ, ದೀಪ, ಶೌಚಾಲಯಗಳನ್ನು ನೀಡಿದ ಏಕೈಕ ಪ್ರದಾನಿ ನರೇಂದ್ರ ಮೋದಿ ಎಂದರು. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನ ಪ್ರತ್ಯೇಕ ದೇಶವಾಗಿ ಉಳಿಯಲ್ಲ. ಬದಲಾಗಿ ಅದು ಭಾರತಕ್ಕೆ ಸೇರುತ್ತದೆ ಎಂದರು.
    ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಲೆಮಹದೇಶ್ವರ ಬೆಟ್ಟದಿಂದ ಹಾಗೂ ರಾಜನಾಥ ಸಿಂಗ್ ಅವರು ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ನಂದಗಡದಿಂದ ಆರಂಭಿಸಿದ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗುತ್ತಿದೆ. ಮೋದಿಯವರ ಜನಪರ ಯೋಜನೆಗಳನ್ನು ಮತದಾರರ ಮುಂದಿಡುತ್ತಾ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಬೇಕಿದೆ ಎಂದು ಕೇಂದ್ರದ ರಾಜ್ಯ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು‌.
    ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ. ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಿ ಮೋದೀ ನೇತೃತ್ವದಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.
    ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಮಧ್ಯಾಹ್ನ 3 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ ಯಾತ್ರೆಗೆ ಬಾರ್ಕೂರಿನಲ್ಲಿ ಅದ್ದೂರಿ ಸ್ವಾಗತ ನಡೆಯಿತು. ನಂತರ ಬೈಕ್ ಜಾಥ ಮುಖೇನ ಸಾಯಬ್ರಕಟ್ಟೆ ತಲುಪಿ ಸೈಬ್ರಕಟ್ಟೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕ ಸಭೆ ನಡೆಯಿತು.
    ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಕಾರ್ಯಕ್ರಮ ಆಯೋಜಿಸಿದ್ದರು.
  • ವಿಜಯ ಸಂಕಲ್ಪ ಯಾತ್ರೆ: ಮಾ.14ರಂದು ಸೈಬ್ರಕಟ್ಟೆಯಲ್ಲಿ ಸಾರ್ವಜನಿಕ ಸಭೆ

    ವಿಜಯ ಸಂಕಲ್ಪ ಯಾತ್ರೆ: ಮಾ.14ರಂದು ಸೈಬ್ರಕಟ್ಟೆಯಲ್ಲಿ ಸಾರ್ವಜನಿಕ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಚುನಾವಣೆ ಪೂರ್ವ ಸಿದ್ಧತೆ ಹಿನ್ನಲೆ ರಾಜ್ಯಾದ್ಯಂತ ಸಂಚರಿಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್ 14 ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಲಿದ್ದು, ಕ್ಷೇತ್ರ ವ್ಯಾಪ್ತಿಯ ಬಾರ್ಕೂರಿನಲ್ಲಿ ಅದ್ದೂರಿ ಸ್ವಾಗತ ನೇರವೇರಲಿದೆ. ನಂತರ ಬೈಕ್ ಜಾಥದ ಮೂಲಕ ಸೈಬ್ರಕಟ್ಟೆ ತಲುಪಿ ಸೈಬ್ರಕಟ್ಟೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕ ಸಭೆ ನಡೆಯಲಿದೆ.

    ಈ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಪದಾಧಿಕಾರಿಗಳು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿರಲಿದ್ದು. ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

  • ಕೋಟೇಶ್ವರ :ಕರ್ನಾಟಕದಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ – ಗೋವಾ ಸಿಎಂ ಸಾವಂತ್

    ಕೋಟೇಶ್ವರ :ಕರ್ನಾಟಕದಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ – ಗೋವಾ ಸಿಎಂ ಸಾವಂತ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರದಲ್ಲಿ ಬಿಜೆಪಿ ಮಹಿಳಾ ಸಮಾವೇಶ, ಹಾಲಾಡಿ ಬಲ ಪ್ರದರ್ಶನ

    ಕುಂದಾಪುರ :ಮುಂಬರುವ ಚುನಾವಣೆಯ ಪೂರ್ವಭಾವಿ ತಯಾರಿ ಹಿನ್ನಲೆಯಲ್ಲಿ ಕೋಟೇಶ್ವರ ಕುರುಕ್ಷೇತ್ರ ಮೈದಾನದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಜಿಲ್ಲೆಯ ನಾನಾ ಭಾಗದ ಸುಮಾರು 5 ಸಾವಿರಕ್ಕೂ ಅಧಿಕ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದು ವಿಶೇಷವಾಗಿತ್ತು.

    ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮೂಲಭೂತ ಸೌಕರ್ಯಗಳನ್ನು ನೀಡುವುದರೊಂದಿಗೆ ರಾಷ್ಟ್ರದ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿ ಮುಂದಡಿಯನ್ನು ಇಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವನ್ನು ಬಲಪಡಿಸಲು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನೇ ಮತ್ತೆ ಆಯ್ಕೆ ಮಾಡುವುದರೊಂದಿಗೆ ಡಬ್ಬಲ್ ಇಂಜಿನ್ ಸರ್ಕಾರದ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ವಿನಂತಿ ಮಾಡಿದರು.

    ಭೇಟಿ ಬಚಾವ್ ಭೇಟಿ ಪಡಾವ್ ಹಾಗೂ ಶೌಚಾಲಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಮಹಿಳೆಯ ಪರವಾಗಿರುವ ಬದ್ಧತೆಯನ್ನು ಪ್ರಕಟಿಸಿರುವ ಕೇಂದ್ರದ ಪ್ರಧಾನಿ ಮೋದಿ ನೇತ್ರತ್ವದ ಸರ್ಕಾರ ಸುಕನ್ಯಾ ಸಮೃದ್ಧಿ, ಸ್ಟಾಂಡಪ್ ಇಂಡಿಯಾ, ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ, ತಲಾಕ್ ರದ್ಧತಿ ಸಹಿತ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಮಹಿಳೆಯರಿಗಾಗಿ ಹೆರಿಗೆ ಸಂದರ್ಭದಲ್ಲಿ 26 ವಾರಗಳ ಸಂಬಳ ಸಹಿತ ರಜೆಗೆ ಅವಕಾಶ ಕಲ್ಪಿಸಿದೆ. ಮಹಿಳೆಯರ ಹೆಸರಿನಲ್ಲಿಯೇ ಮನೆ ನೀಡುವ ಐತಿಹಾಸಿಕ ತೀರ್ಮಾನವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ತಡೆಗೆ ಕ್ರಮಗಳನ್ನು ಕೈಗೊಂಡಿದೆ ಒಟ್ಟಿನಲ್ಲಿ ಸಮೃದ್ಧಶೀಲ ನವ ಭಾರತದ ನಿರ್ಮಾಣಕ್ಕಾಗಿ ಆತ್ಮ ನಿರ್ಭರ ಭಾರತದಡಿಯಲ್ಲಿ ಮಹಿಳೆಯರ ಹಿತವನ್ನು ಕಾಯುವಲ್ಲಿ ತನ್ನ ಬದ್ಧತೆ ಹಾಗೂ ಕಾಳಜಿಯನ್ನು ಪ್ರಕಟಪಡಿಸಿರುವ ಬಿಜೆಪಿ, ಆಡಳಿತಕ್ಕೆ ಬಂದ ಪರ್ವಕಾಲಗಳಲ್ಲಿ ನುಡಿದಂತೆ ನಡೆದಿದೆ ಎಂದರು.

    ದಿಕ್ಸೂಷಿ ಭಾಷಣ ಮಾಡಿದ ರಾಜ್ಯ ಬಿಜೆಪಿ ಪಕ್ಷದ ಪ್ರಮುಖರಾದ ಮಾಳವಿಕ ಅವಿನಾಶ್, ಈ ದೇಶದ ಪ್ರಧಾನಮಂತ್ರಿಯಾಗಿದ್ದ ಮಹಿಳಾ ನಾಯಕಿಗೂ ಅರಿವಾಗದೆ ಇದ್ದ ಮಹಿಳೆಯರ ಶೌಚಾಲಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ಮಹಿಳೆಯರಿಗೆ ಗೌರವ ಕೊಡುವ ವ್ಯಕ್ತಿ ದೇಶದ ಪ್ರಧಾನಿಯಾಗಿರುವುದು ನಮಗೆಲ್ಲ ಹೆಮ್ಮೆ. ಜಲ್‌ಜಿವನ್ ಮಿಷನ್ ಮೂಲಕ ಮನೆ ಮನೆಗೆ ಕುಡಿಯುವ ನೀರು, ಉಜ್ವಲ್ ಯೋಜನೆಯ ಮೂಲಕ ಉಚಿತ ಅಡುಗೆ ಅನಿಲ, 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಫಲನಾಭವಿಗಳಿಗೆ ಸರ್ಕಾರ ಸೌಲಭ್ಯಗಳ ನೇರ ವರ್ಗಾವಣೆಗಾಗಿ ಜನಧನ್ ಮೂಲಕ ಠೇವಣೆ ರಹಿತ ಬ್ಯಾಂಕ್ ಖಾತೆಯಂತಹ ಯೋಜನೆಗಳನ್ನು ಸಾಕಾರಗೊಳಿಸುವ ಮೂಲಕ ಸುಧೃಢ ಹಾಗೂ ಗೌರವದ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ ಎಂದರು.

    ರಾಜ್ಯ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಎಸ್‌ಸಿ/ಎಸ್‌ಟಿ ಹಾಗೂ ದುರ್ಬಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಶ್ರೇಯಸ್ಸು ಬಿಜೆಪಿ ಪಕ್ಷಕ್ಕೆ ಇದೆ. ಕನ್ನಡ ಶಾಲೆಯ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಕುಕ್ಕರನಲ್ಲಿ ಬಾಂಬ್ ಇಡುವ ಮೂಲಕ ವಿಕೃತ ಮನಸ್ಥಿತಿಯನ್ನು ತೋರುತ್ತಿರುವ ಭಯೋತ್ಪಾನೆಯ ವಿರುದ್ಧ ಈ ಬಾರಿಯ ಚುನಾವಣೆ ನಡೆಯಲಿದೆ. ಭಯೋತ್ಪಾನೆ ಬೆಂಬಲಿಸುವವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು ಎಂದ ಅವರು ಬಾಂಬ್‌ ಬ್ಲಾಸ್ಟ್‌ ಅಂತಹ ಘಟನೆಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಯಾಕೆ ಖಂಡಿಸುವುದಿಲ್ಲ ಎಂದು ಪ್ರಶ್ನಿಸಿದರು.

    ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್ ಮೆಂಡನ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ.ಉದಯ್‌ಕುಮಾರ ಶೆಟ್ಟಿ, ಆಹಾರ ಹಾಗೂ ನಾಗರೀಕ ಪೂರೈಕೆ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್‌ಕುಮಾರ ಕೊಡ್ಗಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಮಂಡಲದ ಪ್ರ.ಕಾರ್ಯದರ್ಶಿ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ ವಕ್ವಾಡಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಸುಧೀರ್ ಕೆ.ಎಸ್. ಕಾರ್ಯದರ್ಶಿ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭೆ ಅಧ್ಯಕ್ಷ ವೀಣಾ ಭಾಸ್ಕರ್ ಮೆಂಡನ್, ಪಕ್ಷದ ಪ್ರಮುಖರಾದ ಭಾಗೀರಥಿ ಮುರುಳ್ಯಾ,ಸುಪ್ರಸಾದ್ ಶೆಟ್ಟಿ ಬೈಕಾಡಿ, ಗೀತಾಂಜಲಿ ಎಂ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರೂಪಾ ಪೈ, ವೀಣಾ ವಿ ನಾಯ್ಕ್, ಮಾಲಿನಿ ಜೆ ಶೆಟ್ಟಿ, ವಸಂತಿ ಸತೀಶ್, ಸರೋಜಾ ಶೆಟ್ಟಿಗಾರ್, ರಾಗಿಣಿ ದೇವಾಡಿಗ ಕೋಟೇಶ್ವರ, ಸುಮಾ ಶೆಟ್ಟಿ, ಅಭಿ‍ಷೇಕ್ ಅಂಕದಕಟ್ಟೆ, ಸುಲತಾ ಹೆಗ್ಡೆ, ಅನಿತಾ ಶ್ರೀಧರ ಇದ್ದರು.

    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಇಂದ್ರಾಕ್ಷೀ ಉಡುಪ ಅವರನ್ನು ಗೌರವಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ ಸ್ವಾಗತಿಸಿದರು, ರಶ್ಮೀತಾ ಶೆಟ್ಟಿ ನಿರೂಪಿಸಿದರು, ಸೌರಭಿ ಪೈ ವಂದಿಸಿದರು.

    ಕುಂದಾಪುರದ ಕೋಟೇಶ್ವರದಲ್ಲಿ ಆಯೋಜಿಸಲಾದ ಈ ಮಹಿಳಾ ಸಮಾವೇಶ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಲ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಸರಿಸುಮಾರು 5000ಕ್ಕೂ ಮಿಕ್ಕಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕುಂದಾಪುರದ ಹಾಲಾಡಿಯ ಎಂದೇ ಖ್ಯಾತರಾದ ಶ್ರೀನಿವಾಸ ಶೆಟ್ಟಿ ಅವರಿಗೆ ತಮ್ಮ ಬೆಂಬಲ ಎನ್ನುವುದು ಸಭೆಯಲ್ಲಿ ಮಹಿಳೆಯರ ಉಪಸ್ಥಿತಿಯೇ ತಿಳಿಸಿದೆ ಎಂದರೆ ತಪ್ಪಾಗಲಾರದು.

  • ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ -ಮಾ.12ರಂದು ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶ

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ -ಮಾ.12ರಂದು ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶವು ಮಾ.12ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರ ಮಂಡಲ ವ್ಯಾಪ್ತಿಯ ಕೋಟೇಶ್ವರದ ಕುರುಕ್ಷೇತ್ರ ಮೈದಾನದಲ್ಲಿ ನಡೆಯಲಿದ್ದು. ಸದ್ರಿ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ರಾಜ್ಯ ವಕ್ತಾರೆ ಮಾಳವಿಕ ಅವಿನಾಶ್, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಉಪಸ್ಥಿತರಿರಲಿದ್ದು, ಸಾವಿರಾರು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.