Category: ರಾಜಕೀಯ

  • ಬೈಂದೂರು :ಬಿಜೆಪಿ ಒಬಿಸಿ ಮೋರ್ಚಾದಿಂದ ಸಣ್ಣ ಸಮುದಾಯಗಳ ಸಮಾವೇಶ – ಒಬಿಸಿ ಬಿಜೆಪಿ ಮಂಡಲ ಪದಗ್ರಹಣದ ಬಗ್ಗೆ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಮಾಹಿತಿ

    ಬೈಂದೂರು :ಬಿಜೆಪಿ ಒಬಿಸಿ ಮೋರ್ಚಾದಿಂದ ಸಣ್ಣ ಸಮುದಾಯಗಳ ಸಮಾವೇಶ – ಒಬಿಸಿ ಬಿಜೆಪಿ ಮಂಡಲ ಪದಗ್ರಹಣದ ಬಗ್ಗೆ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ಮಾಹಿತಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಭಾರತೀಯ ಜನತಾ ಪಕ್ಷದ ಹಿಂದೂಳಿದ ವರ್ಗಗಳ ಮೋರ್ಚಾದಿಂದ ಸಣ್ಣ ಸಣ್ಣ ಸಮುದಾಯಗಳು ಮತ್ತು ವಿವಿಧ ವೃತ್ತಿ ಬಾಂಧವರ ಸಮಾವೇಶ ನಡೆಸಲಾಗುವುದು. ಆ ಮೂಲಕ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮೀಸಲಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಹಿಂದೂಳಿದ ಮೋರ್ಚಾಗಳ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು ತಿಳಿಸಿದರು.

    ಅಂಬಿಕಾ ಇಂಟರ್ನ್ಯಾಶನಲ್ ಹೋಟೆಲ್ ನಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ಬೈಂದೂರು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ‌‌ ಮೋರ್ಚಾದ ಪದಗ್ರಹಣ ಕಾರ್ಯಕ್ರಮ ಆಗಿದೆ. ಭವ್ಯ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎನ್ನುವ ಹಿನ್ನೆಲೆಯಲ್ಲಿ ವಿವಿಧ ಮೋರ್ಚಾಗಳ ಚಟುವಟಿಕೆ ನಡೆಯುತ್ತಿದೆ. ಹಿಂದುಳಿದ ವರ್ಗದವರನ್ನೇ ಸಂಘಟಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಹಿಂದುಳಿದ ವರ್ಗಗಳ ಮೋರ್ಚಾದಿಂದ ಮಾಡಲಾಗುತ್ತಿದೆ. ಬೈಂದೂರು ಮಂಡಲದಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸುವ ದೃಷ್ಟಿಯಿಂದ ಹಿಂದುಳಿದ ವರ್ಗದಲ್ಲಿ ಬರುವ ಸಣ್ಣ ಸಣ್ಣ ಜಾತಿಗಳ ಸಮಾವೇಶ ಮಾಡುವುದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಮತ್ತು ಯೋಚನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದೇವೆ ಎಂದರು.

    ಮನವೊಲಿಸುವ ಪ್ರಯತ್ನ ನಡೆಯಲಿದೆ:
    ಕೆ.ಎಸ್. ಈಶ್ವರಪ್ಪನವರು ಒಂದು ಹಂತದಲ್ಲಿ ಬಿಜೆಪಿಗೆ ಶಕ್ತಿ ತುಂಬಿದ ವ್ಯಕ್ತಿ. ಈಗ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಹೀಗೆ ಮಾಡಿರಬಹುದು. ಪಕ್ಷದ ಹಿರಿಯರು ಅದನ್ನು ಸರಿಪಡಿಸುವ ವಿಶ್ವಾಸ ನಮಗಿದೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ತಡಿತ ಎಲ್ಲರಲ್ಲೂ ಇರುವುದರಿಂದ ಬೇರೆಯಾ ಚಟುವಟಕೆಯೂ ಈ ಚುನಾವಣೆಯಲ್ಲಿ ಮುಖ್ಯವಾಗಲಾರದು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಲಾಗುತ್ತದೆ ಎಂದರು.
    ಹಿಂದುತ್ವ ಬಿಟ್ಟು ಬಿಜೆಪಿಯಿಲ್ಲ. ಬಿಜೆಪಿ‌ ಸದಾ ದೇಶದ ಬಹುಸಂಖ್ಯಾತರ ಪರವಾಗಿಯೇ ಇರಲಿದೆ. ಅಭಿವೃದ್ಧಿಯ ಜತೆಗೆ ಹಿಂದುತ್ವ ಮೂಲಕ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
    ಯಾರಿಗೂ ಅನ್ಯಾಯವಾಗಲಿಲ್ಲ:
    ಬಿಜೆಪಿಯಿಂದ ಜಯಪ್ರಕಾಶ್ ಹೆಗ್ಡೆಯವರಿಗೆ ಯಾವುದೇ ಅನ್ಯಾಯವಾಗಿಲ್ಲ. ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ನಂತರದಲ್ಲಿ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವಧಿ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯ ಟಿಕೆಟ್ ಆಫರ್ ಮಾಡುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಉಳಿದದ್ದು ಅವರಿಗೆ ಬಿಟ್ಟ ವಿಚಾರವಾಗಿದೆ ಎಂದರು.
    ಇಬ್ಬರೂ ಜಯಿಸಲಿದ್ದಾರೆ.

    ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ
    ಕೋಟ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಿದೆ. ಅವರು ಸಚಿವರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿಯೂ ಉತ್ತಮ ಕಾರ್ಯ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ, ಸರಳ ವ್ಯಕ್ತಿತ್ವದ ವ್ಯಕ್ತಿಗೆ ಪಕ್ಷ ಟಿಕೆಟ್ ನೀಡಿದೆ ಅವರೂ ಜಯ ಸಾಧಿಸಲಿದ್ದಾರೆ ಎಂದರು.
    ಹಿಂದೂಳಿದ ವರ್ಗ ಮೋರ್ಚಾದ ರವೀಂದ್ರ ತಿಂಗಳಾಯ ಕುಂದಾಪುರ, ಶಿವರಾಜ್ ಪೂಜಾರಿ ಗೋಳಿಹೊಳೆ, ಭಾರತಿ ಚಂದ್ರಶೇಖರ್, ಶಾಂತಿ ಖಾರ್ವಿ, ಮಂಜುನಾಥ ದೇವಾಡಿಗ, ರಾಘವೇಂದ್ರ ಕೊಠಾರಿ, ವಿನೋದ್ ಗುಜ್ಜಾಡಿ, ರಾಜಶೇಖರ ಬೈಂದೂರು, ಶ್ರೀಗಣೇಶ್ ಗಾಣಿಗ ಉಪಸ್ಥಿತರಿದ್ದರು.

  • ಬೈಂದೂರು :ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡುವುದೇ ನನ್ನ ಗುರಿ – ಈಶ್ವರಪ್ಪ

    ಬೈಂದೂರು :ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡುವುದೇ ನನ್ನ ಗುರಿ – ಈಶ್ವರಪ್ಪ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ರಾಜ್ಯದಲ್ಲಿ ಯಡಿಯೂರಪ್ಪನವರ ಕುಟುಂಬ ರಾಜಕಾರಣ ನಡೆಯುತ್ತಿದೆ. ಅವರು ಅವರ ಮಕ್ಕಳು ಮಾತ್ರ ರಾಜಕಾರಣದಲ್ಲಿ ಇರಬೇಕು ಎನ್ನುವ ಇರಾದೆ ನಿಷ್ಠವಂತ ಕಾರ್ಯಕರ್ತರು, ಹಿಂದುತ್ವದ ಪರ ಹೋರಾಟ ಮಾಡುವವರಿಗೆ ನೋವು ತಂದಿದೆ. ರಾಜ್ಯದಲ್ಲಿ ಕುಟುಂಬ ರಾಜಕೀಯದಿಂದ ಕರ್ನಾಟಕ ಬಿಜೆಪಿ ಮುಕ್ತವಾಗಬೇಕು ಆ ಹಿನ್ನಲೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು ಶಿವಮೊಗ್ಗ ಲೋಕಸಭಾ ಕ್ಷೇತ್ರದದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದರು.

    ರಾಷ್ಟ್ರಭಕ್ತರ ಬಳಗ ಬೈಂದೂರು ವತಿಯಿಂದ ಉಪ್ಪುಂದ ಪರಿಚಯ ಸಭಾಂಗಣದಲ್ಲಿ ನಡೆದ ಬೈಂದೂರು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

    ಹಿಂದುತ್ವದ ಪರವಾಗಿ ಹೋರಾಟ ಮಾಡಿ, ಪಕ್ಷ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸ್ಥಿತಿ ಬಂದಿದೆ. ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು ಕೂಡಾ ನೋವು ಅನುಭವಿಸುತ್ತಿದ್ದಾರೆ. ಬೇರೆ ವಿಧಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಅಭ್ಯರ್ಥಿಗಳ ಘೋಷಣೆಯ ಕೊನೆಯ ತನಕವೂ ಟಿಕೆಟು ನೀಡುವ ಭರವಸೆಯನ್ನು ಸ್ವತಃ ಯಡಿಯೂರಪ್ಪ ಅವರೇ ನೀಡಿದ್ದರು. ಸ್ವತಃ ತಾನೇ ಬಂದು ನಿಮ್ಮ ಮಗನ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದರು. ನಾನು ಅದನ್ನು ನಂಬಿಕೊಂಡೆ. ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಈಗ ನನಗೆ ಪ್ರಾಮಾಣಿಕ ಕಾರ್ಯಕರ್ತರೇ ಬೆಂಬಲಕ್ಕೆ ನಿಂತಿದ್ದಾರೆ. ಎಂದರು.
    ಕರ್ನಾಟಕದಲ್ಲಿಂದು ಬಿಜೆಪಿಯ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಇಂಥ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ದುರ್ದೈವ. ಬಿಜೆಪಿಯ ಶುದ್ಧೀಕರಣದ ಉದ್ದೇಶದಿಂದಲೇÀ ನಾನು ಸ್ಪರ್ಧೆ ಮಾಡುತ್ತೇನೆ.

    ಯಡಿಯೂರಪ್ಪ ಆಪ್ತರಿಗೆ ಕಾರ್ಯಕರ್ತರ ವಿರೋಧ ಇದ್ದರೂ ಕೂಡಾ ಟಿಕೆಟು ಸಿಗುತ್ತದೆ. ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಕುಟುಂಭ ರಾಜಕಾರಣವನ್ನು ಮುಕ್ತ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಗೊಳಿಸುತ್ತೇನೆ ಎಂದರು.
    ಎಪ್ರಿಲ್ 12ರಂದು ನಾಮಪತ್ರಲ್ಲಿಕೆ ಮಾಡಲಿದ್ದೇನೆ. ಆ ದಿನ 15-20 ಸಾವಿರ ಜನ ರ್ಯಾಲಿಯಲ್ಲಿ ಸೇರುವ ನಿರೀಕ್ಷೆ ಇದೆ ಎಂದರು.

    ಕಾರ್ಯಕ್ರಮ ಸಂಚಾಲಕ ಶ್ರೀಧರ ಬಿಜೂರು ಮಾತನಾಡಿ, ಹಿಂದುಳಿದ ವರ್ಗದವರಿಗೆ ಒತ್ತು ನೀಡಿ ಅವರನ್ನು ನಾಯಕರನ್ನಾಗಿಸುವುದು ಯಾರಿಗೂ ಇಷ್ಟವಿಲ್ಲ. ನಾಯಕರ ಜೊತೆ ಗುರುತಿಸಿಕೊಂಡ ನಾಲ್ಕಾರು ಮಂದಿಗಷ್ಟೇ ಅವಕಾಶ ಸಿಗುತ್ತಿದೆ. ಸಾವಿರಾರು ಕೋಟಿ ಅನುದಾನಗಳು ಇವತ್ತು ನೇರ ಎಜೆನ್ಸಿಗಳ ಮೂಲಕ ಹೋಗುತ್ತಿದೆ. ಮೂರು ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೇವೆ. ಈ ಬಾರಿ ಮೋದಿ ಪೋಟೋ ಬಿಟ್ಟು ಬರಲಿ ಎಂದು ಸವಾಲು ಹಾಕಿದರು.

    ಬಿಜೆಪಿ ಕಾರ್ಯಕರ್ತರ, ಹಿಂದು ಸಂಘಟನೆಗಳ ಸ್ವಾಭಿಮಾ£ಕ್ಕೆ ಧಕ್ಕೆಯಾಗಿದೆ. ಇವತ್ತು ಸಂಸದರ ಗುರುತು ಬೆರಣಿಕೆಯ ಜನರಿಗಷ್ಟೆ ಗೊತ್ತು. ಕಾರ್ಯಕರ್ತರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನೈಜ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಸಿಗಬೇಕು, ಹಿಂದುಳಿದ ವರ್ಗಗಳ ಮಕ್ಕಳಿಗೆ ಬೆಳೆಯುವ ಅವಕಾಶ ಸಿಗಬೇಕು ಎಂದರು.

    ತಾ.ಪಂ.ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಶವಂತ ಗಂಗೊಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಪೂಜಾರಿ, ಗಣೇಶ ರಾವ್, ಗೋಪಾಲ ಗಾಣಿಗ, ಮಂಜುನಾಥ್ ರಾವ್, ವಿನಯ ನೈರಿ, ಪ್ರದೀಪ ಮೊದಲಾದವರು ಉಪಸ್ಥಿತರಿದ್ದರು‌

  • ಉಡುಪಿ :ಏಪ್ರಿಲ್ 3 ರಂದು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ -ಶಂಕರ್ ಎ ಕುಂದರ್

    ಉಡುಪಿ :ಏಪ್ರಿಲ್ 3 ರಂದು ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಕೆ -ಶಂಕರ್ ಎ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಉಡುಪಿ-ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಕೆ ಜಯಪ್ರಕಾಶ್ ಹೆಗ್ಡೆಯವರು ಎಪ್ರಿಲ್ 3 ರಂದು ಬುಧವಾರ ಬೆಳಿಗ್ಗೆ 11.00 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

    ನಾಮಪತ್ರ ಸಲ್ಲಿಕೆ ಮಾಡುವುದಕ್ಕೂ ಮುನ್ನ ಅಂದು ಬೆಳಗ್ಗೆ 9.30ಕ್ಕೆ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಸಭೆ ನಡೆದು ಬಳಿಕ ಕೆ. ಜಯಪ್ರಕಾಶ್ ಹೆಗ್ಡೆಯವರು ಕಾರ್ಯಕರ್ತರೊಂದಿಗೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಲಿರುವರು.
    ಈ ವೇಳೆ ಕಾಂಗ್ರೆಸ್ ಮುಖಂಡರು, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಕೆ. ಜಯಪ್ರಕಾಶ್ ಹೆಗ್ಡೆ ರವರ ಅಭಿಮಾನಿಗಳು ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತಿ ಹೊಂದುವರು.

    ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರಕ್ಕಾಗಿ ಎಪ್ರಿಲ್ 6 ರಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೈಂದೂರು ಅಭಿವೃದ್ಧಿಗೆ 13 ದಿನಗಳ ಸಮೃದ್ಧ ನಡಿಗೆ : ಶಾಸಕ ಗುರುರಾಜ್ ಗಂಟಿಹೊಳೆ ಸುದ್ಧಿಗೋಷ್ಟಿ

    ಬೈಂದೂರು ಅಭಿವೃದ್ಧಿಗೆ 13 ದಿನಗಳ ಸಮೃದ್ಧ ನಡಿಗೆ : ಶಾಸಕ ಗುರುರಾಜ್ ಗಂಟಿಹೊಳೆ ಸುದ್ಧಿಗೋಷ್ಟಿ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದು, ಸಮಗ್ರ ಻ಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ 13 ದಿನಗಳ ಸಮೃದ್ಧ ನಡಿಹೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಸಿದ್ದಾರೆ. ಶನಿವಾರ ಬೆಳಿಗ್ಗೆ ಬೈಂದೂರಿನ ಖಾಸಗೀ ಹೋಟೆಲ್ ನಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.

    13 ದಿನಗಳ ಸಮೃದ್ಧ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಲೋಕಸಭಾ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜೊತೆಗೂಡಿ ನಡಿಗೆ ಆರಂಭಿಸಲಾಗುವುದು. ಪ್ರತೀ ಬೂತ್ ಮಟ್ಟದಲ್ಲಿರುವ ಸಮಸ್ಯೆಗಳನ್ನು ಮನಗಂಡು ಮುಂದಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಪ್ರತೀ ಹಳ್ಳಿಗಳಿಗೂ ನಡೆದು ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಪ್ರವಾಸೋದ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸೇತುವೆಗಳು, ಕುಡಿಯುವ ನೀರು ಹೀಗೇ ಎಲ್ಲಾ ದಿಕ್ಕಿನಲ್ಲಿಯೂ ಬೈಂದೂರನ್ನು ಸಮೃದ್ಧಗೊಳಿಸುವ ಹೋರಾಟಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರ ತಂಟೆಗೆ ಬರುತ್ತಿದ್ದು, ಇದನ್ನು ಸಹಿಸುವುದಿಲ್ಲ ಎಂದೂ ಇದೇ ಸಂದರ್ಭ ಎಚ್ಚರಿಸಿದರು.

    ಈ ಸಂದರ್ಭ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಚುನಾವಣಾ ಉಸ್ತುವಾರಿ ಭಾನುಪ್ರಕಾಶ್, ಮುಖಂಡರಾದ ಅಶೋಕ ಮೂರ್ತಿ, ಜಿಲ್ಲಾ ಮುಖಂಡ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಬೈಂದೂರು ಮಂಡಲ ಕಾರ್ಯದರ್ಶಿ ಮಹೇಂದ್ರ ಪೂಜಾರಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಕೋಶಾಧಿಕಾರಿ ಗಣೇಶ್ ಗಾಣಿಗ, ಬಿಜೆಪಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಟ ಸಂಚಾಲಕ ಬಿ.ಎಸ್.ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

  • ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು: ಜನರು ಆಶಿರ್ವಾದ ಮಾಡಿದರೆ ಕ್ಷೇತ್ರವನ್ನು ಅಭಿವೃದ್ಧಿಪಥದಲ್ಲಿ ಕೊಡೊಯ್ಯುವ ಮಹತ್ವಾಕಾಂಕ್ಷೆಯಿದೆ. ಮುಖ್ಯಮಂತ್ರಿಗಳಾಗಿದ್ದಾಗ ತಂದೆ ಬಂಗಾರಪ್ಪನವರು ಅನುಷ್ಠಾನಕ್ಕೆ ತಂದ ಯೋಜನೆಗಳು ಇಂದಿಗೂ ಜ್ವಲಂತ. ಅವರು ಹಾಕಿಕೊಟ್ಟ ಅಭಿವೃದ್ಧಿ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರದಂದು ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗೋಳಿಹೊಳೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
    ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಂಗಾರಪ್ಪ ಅಭಿಮಾನಿಗಳಲ್ಲಿ ನಾವು ಬಂಗಾರಪ್ಪರನ್ನು ಕಾಣುತ್ತಿದ್ದೇವೆ. ಇಂದಿಗೂ ಅವರನ್ನು ವಿರೋಧ ಪಕ್ಷದವರ ಸಹಿತ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಸಂಸದರಾಗಿ ಇಲ್ಲಿನ ಜನರ ಸೇವೆ ಮಾಡಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಕಣಕ್ಕಿಳಿದಿದ್ದು ಅವರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಲು ಪ್ರಬುದ್ಧ ಮತದಾರರ  ಸಹಕಾರ ಬೇಕಿದೆ. ಸೇವಾ ಮನೋಭಾವನೆ ಚಿಂತನೆಯಿಂದ ನನ್ನ ಅಕ್ಕನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದರು.
    ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಲೋಕಸಭಾ ಸದಸ್ಯರಾಗಿ ಆರಿಸಿಬಂದರೆ ಬೈಂದೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಮಹಾಪೂರಕ್ಕೆ ಹೋಗಲಿದೆ. ಮಹಿಳೆಯರಿಗೆ ಜನರ ನೋವು ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ. ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಪ್ರತಿ‌ಮನೆಗೂ ತಲುಪಿದೆ. ಸಾಮಾನ್ಯ ಜನರಿಗೆ ಬದುಕು ಕಟ್ಟಿಕೊಟ್ಟ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು, ಬಂಗಾರಪ್ಪ ಅವರ ದೂರದೃಷ್ಟಿ ಚಿಂತನೆ ಇಂದಿಗೂ ಜನರಿಗೆ ನೆನಪಿದೆ. ರಾಜ್ಯದ ಈಗಿನ ಸಿಎಂ ಸಿದ್ದರಾಮಯ್ಯ ಸಾಮಾನ್ಯ ಜನರಿಗೆ ನೀಡುತ್ತಿರುವ ಕೊಡುಗೆ ಅಪಾರ ಎಂದರು.
    ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಆಯನೂರು ಮಂಜುನಾಥ್, ನಟ ಶಿವರಾಜಕುಮಾರ್, ಮುಖಂಡರುಗಳಾದ ಜಿ. ಎ. ಬಾವ, ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಕಾರ್ಯದರ್ಶಿ ಮೋಹನ್ ಪೂಜಾರಿ, ಭರತ್ ದೇವಾಡಿಗ, ಮಂಜುನಾಥ ಪೂಜಾರಿ, ಗಿರೀಶ್ ಪೂಜಾರಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
    ಕೆಪಿಸಿಸಿ ಸದಸ್ಯ ರಘುರಾಮ ಶೆಟ್ಟಿ ಸ್ವಾಗತಿಸಿದರು. ಕಿರಣ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
  • ಕೋಟ ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ – 34ನೇ ಸಾಧಕ ಕೃಷಿಕರಾಗಿ ಪ್ರವೀಣ್ ಕುಲಾಲ್ ಆಯ್ಕೆ

    ಕೋಟ ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ – 34ನೇ ಸಾಧಕ ಕೃಷಿಕರಾಗಿ ಪ್ರವೀಣ್ ಕುಲಾಲ್ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಂಯುಕ್ತ ಸಹಯೋಗದೊಂದಿಗೆ ಪ್ರತಿ ತಿಂಗಳು ಸಾಧಕ ಕೃಷಿಕನನ್ನು ಗುರುತಿಸುವ ಸರಣಿ ಕಾರ್ಯಕ್ರಮ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಗೆ ಇದೀಗ 34ರ ಸಂಭ್ರಮ ಆ ಪ್ರಯುಕ್ತ ಸಾಧಕ ಕೃಷಿಕನ ಮನೆಯಂಗಳಕ್ಕೆ ತೆರಳಿ ಕೃಷಿ ಪರಿಕರವನ್ನು ನೀಡಿ ಗೌರವಿಸುವ ಕಾರ್ಯ ಇದೇ ಮಾ.29ರ ಪೂರ್ವಾಹ್ನ.10.30ಗ ನಡೆಯಲಿದ್ದು ಕೃಷಿ ಮತ್ತು ಹೈನುಗಾರಿಕೆ ಕೃಷಿ ಕಾಯಕದಲ್ಲಿ ವಿವಿಧ ಬಗೆಯ ವಿಶಿಷ್ಟ ಸಾಧನೆಗೈದ ಕುಂದಾಪುರ ತಾಲೂಕಿನ ಮೊಳಹಳ್ಳಿ ಪ್ರವೀಣ್ ಕುಲಾಲ್ ಇವರನ್ನು ಆಯ್ಕೆಗೊಳಿಸಲಾಗಿದೆ ಎಂದು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಪ್ರಕಟಣೆಯಲ್ಲಿ ತಿಳಿದ್ದಾರೆ.

  • ಕೋಟ : ಕಾಂಗ್ರೆಸ್ ಭಿನ್ನಮತ ಶಮನ

    ಕೋಟ : ಕಾಂಗ್ರೆಸ್ ಭಿನ್ನಮತ ಶಮನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಯಾವುದೇ ನಿಗಮದ ಅಧ್ಯಕ್ಷ ಹುದ್ದೆ ಸಿಗದಿದ್ದ ಕಾರಣ ಅಸಮಧಾನಗೊಂಡಿದ್ದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ರವರಿಗೆ ಚುನಾವಣೆ ಬಳಿಕ ಹುದ್ದೆ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಶಮನಗೊಂಡಂತಾಗಿದೆ.

    ನಿಗಮ ಸ್ಥಾನ ಸಿಗದ ಹಿನ್ನೆಯಲ್ಲಿ ಶಂಕರ್ ಕುಂದರ್ ತಮ್ಮ ಕ್ಷೇತ್ರದ ಕಾರ್ಯಕರ್ತರ ಸಭೆ ಕರೆದು ಸಾಮೂಹಿಕ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದರು. ಇದನ್ನು ಮನಗಂಡು ರಾಜ್ಯ ಕಾಂಗ್ರೆಸ್ ನಾಯಕರ ಸೂಚನೆಯಂತೆ ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ರವರ ಮಾರ್ಗದರ್ಶನದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ರವರ ನೇತೃತ್ವದಲ್ಲಿ ಬ್ರಹ್ಮಾವರದ ಸಿಟಿ ಸೆಂಟರ್ ನಲ್ಲಿ ಶಂಕರ್ ಎ ಕುಂದರ್ ಮತ್ತು ಬೆಂಬಲಿಗರನ್ನು ಭೇಟಿಯಾಗಿ ತಮಗೆ ಚುನಾವಣೆ ಮುಗಿದ ನಂತರ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ನಾನೆ ಮುಖತಹ ಭೇಟಿ ಮಾಡಿಸಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಂಕರ್ ಎ ಕುಂದರ್, ಜಯಪ್ರಕಾಶ್ ಹೆಗ್ಡೆ ನೀಡಿದ ಭರವಸೆಯ ಮೇರೆಗೆ ಪಕ್ಷದಲ್ಲಿ ಪ್ರಾಮಾಣಿಕವಾಗಿ ಕಾರ್ಯಕರ್ತರೊಂದಿಗೆ ದುಡಿದು ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಲು ಶ್ರಮವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ನರಸಿಂಹಮೂರ್ತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ, ಶಂಕರ ಬಂಗೇರ ಕೋಡಿ ಕನ್ಯಾನ, ಬಸವ ಪೂಜಾರಿ ಗುಂಡ್ಮಿ, ಎಂ. ಎಸ್. ಸಂಜೀವ, ಶ್ರೀನಿವಾಸ್ ಅಮೀನ್, ರವೀಂದ್ರ ಕಾಮತ್ ಗುಂಡ್ಮಿ, ದಿನೇಶ್ ಬಂಗೇರ ಗುಂಡ್ಮಿ, ಬಾರ್ಕುರ್ ರಮಾನಂದ ಶೆಟ್ಟಿ, ಗಣೇಶ್ ಕೆ ನೆಲ್ಲಿಬೆಟ್ಟು, ಶ್ರೀನಿವಾಸ್ ವಡ್ಡರ್ಸೆ, ಸುರೇಶ್ ಕಚ್ಕೆರೆ, ರಮೇಶ್ ಎಸ್ ತಿಂಗಳಾಯ, ನವೀನ್ ಕೆ ಕುಂದರ್, ಜಯ ಏನ್ ಸುವರ್ಣ, ವಾಮನ್ ಕೆ ಕುಂದರ್, ದಯಾನಂದ ಎಂ ಕೋಟ್ಯಾನ್, ರಮೇಶ್ ಎಂ ಕೋಟ್ಯಾನ್, ಜಯ ಕೆ ಕುಂದರ್, ಹರೀಶ್ ಕುಂದರ್, ಶ್ರೀನಿವಾಸ್ ಶೆಟ್ಟಿಗಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಶಿವಮೊಗ್ಗ ಲೋಕಸಭಾ ಚುನಾವಣಾ ಕಚೇರಿ ಬೈಂದೂರಿನಲ್ಲಿ ಉದ್ಘಾಟನೆ

    ಶಿವಮೊಗ್ಗ ಲೋಕಸಭಾ ಚುನಾವಣಾ ಕಚೇರಿ ಬೈಂದೂರಿನಲ್ಲಿ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ” ಚುನಾವಣೆಯ ಕಾರ್ಯಾಲಯವನ್ನು ಸೋಮವಾರ ಬೈಂದೂರಿನ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ನಲ್ಲಿ ಉದ್ಘಾಟಿಸಲಾಯಿತು.

    ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಭಾರಿಗಳಾದ ಅಶೋಕ್ ಮೂರ್ತಿ, ಸಂಚಾಲಕ ಗೋಪಾಲ್ ಕೃಷ್ಣ, ಚುನಾವಣಾ ನಿರ್ವಹಣಾ ಸಮಿತಿಯ ಪ್ರಮುಖ ದಿನಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಮಂಡಲ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಪೂಜಾರಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

  • ಬೈಂದೂರು :ಅಭಿವೃದ್ಧಿಯಲ್ಲಿ ನಾವು ನಂಬರ್ ವನ್ ಶ್ವೇತಪತ್ರ ಹೊರಡಿಸಲು ಸಿದ್ಧ ಶಿವಮೊಗ್ಗ ಸಂಸದ ಬಿ ವೈ ಆರ್

    ಬೈಂದೂರು :ಅಭಿವೃದ್ಧಿಯಲ್ಲಿ ನಾವು ನಂಬರ್ ವನ್ ಶ್ವೇತಪತ್ರ ಹೊರಡಿಸಲು ಸಿದ್ಧ ಶಿವಮೊಗ್ಗ ಸಂಸದ ಬಿ ವೈ ಆರ್

    Video:

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ನನ್ನ ಅವಧಿಯಲ್ಲಿ ಬೈಂದೂರು ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದೇವೆ ರಾಜ್ಯದಲ್ಲಿ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಕ್ಷೇತ್ರ ನಂಬರ್ ಒನ್ ಸ್ಥಾನದಲ್ಲಿದೆ ಈ ಬಗ್ಗೆ ಶ್ವೇತಪತ್ರ ಹೊರಡಿಸಲು ನಾನು ಸಿದ್ಧ ಎಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. ಬೈಂದೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಏನು ಮಾಡಿದ್ದೇನೆ ಎನ್ನುವ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ನವರು ಸ್ವಾತಂತ್ರ್ಯದ ನಂತರ 70 ವರ್ಷಗಳಲ್ಲಿ ಬೈಂದೂರನ್ನು ಎಷ್ಟು ಅಭಿವೃದ್ಧಿಪಡಿಸಿದ್ದಾರೆ ತೋರಿಸಲಿ ಎಂದು ಹೇಳಿದರು.

    ಕುಡಿಯುವ ನೀರಿನ ಯೋಜನೆ, ಏತ ನೀರಾವರಿ ಯೋಜನೆ ಸೇರಿದಂತೆ ಬೈಂದೂರು ಮತ್ತು ಶಿವಮೊಗ್ಗವನ್ನು ಸಂಪರ್ಕಿಸುವ ಹೆದ್ದಾರಿ ಅಭಿವೃದ್ಧಿ ಯೋಜನೆ ತನಲ್ ನಿರ್ಮಾಣ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ರೈತರಿಗೆ ವಿವಿಧ ಯೋಜನೆಗಳು ಸೇರಿದಂತೆ ನೂರಾರು ಕೆಲಸಗಳನ್ನ ನನ್ನ ಅವಧಿಯಲ್ಲಿ ಮಾಡಲಾಗಿದೆ ಈ ಬಗ್ಗೆ ನೂರಾರು ಪುಟಗಳ ಸಾಧನೆಯ ಪಟ್ಟಿಯನ್ನು ಜನರ ಮುಂದಿಡಲು ನಾವು ಸಿದ್ಧರಿದ್ದೇವೆ ಎಂದರು. ಈಶ್ವರಪ್ಪ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಿ ವೈ ರಾಘವೇಂದ್ರ, ಈಶ್ವರಪ್ಪ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು. ಅವರು ಈಗಾಗಲೇ ಹೇಳಿದಂತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಕನಸು ಕೂಡ ಆ ನಿಟ್ಟಿನಲ್ಲಿ ನಾವು ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದೇವೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾದರೆ ಮೋದಿಯವರ ಕೈ ಬಲಪಡಿಸಿದಂತಾಗುತ್ತದೆ. ಈಶ್ವರಪ್ಪ ಜೊತೆ ಪಕ್ಷದ ನಾಯಕರು ಮಾತುಕತೆ ನಡೆಸಿ ಅವರ ಮನವೊಲಿಸುವಲ್ಲಿ ಯಶಸ್ಸು ಕಾಣುತ್ತಾರೆ ಆದುದರಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಬಿಜೆಪಿ ಕಾರ್ಯಕರ್ತರ ಪಕ್ಷ ಕಾರ್ಯಕರ್ತರ ನಂಬಿಕೆ ಉಳಿಸಿಕೊಳ್ಳುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ದೇಶದಲ್ಲಿ ನಡೆಯುವ ಲೋಕಸಭಾ ಚುನಾವಣೆ ರಾಷ್ಟ್ರೀಯತೆ ಮತ್ತು ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ. ಮತದಾರರು ಬುದ್ಧಿವಂತರಾಗಿದ್ದಾರೆ. ರಾಷ್ಟ್ರೀಯತೆ ಮತ್ತು ರಾಷ್ಟ್ರ ರಕ್ಷಣೆಯ ಜೊತೆಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಾರೆ ಎಂದರು.‌

    ಕಾಂಗ್ರೆಸ್ಸಿನ ಕೆಲವು ನಾಯಕರು ನನ್ನ ಬಗ್ಗೆ ಕೆಲ ಮಟ್ಟದ ಭಾಷೆಯನ್ನು ಬಳಸಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ ರಾಘವೇಂದ್ರ, ಇದು ರಾಷ್ಟ್ರೀಯ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ ಭಾಷೆ ಬಳಸುವುದು ನನಗೂ ಗೊತ್ತಿದೆ ಆದರೆ ನಮಗೆ ಸೌಜನ್ಯವಿದೆ ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಬಿಜೆಪಿಯ ಇತರ ಮುಖಂಡರುಗಳು ಉಪಸ್ಥಿತರಿದ್ದರು.

  • ಕುಂದಾಪುರ :ಸಾಧನೆಯ ಮೇಲೆ ಚುನಾವಣೆ ಎದುರಿಸುತ್ತೇವೆ – ಸಚಿವ ಮಧು ಬಂಗಾರಪ್ಪ

    ಕುಂದಾಪುರ :ಸಾಧನೆಯ ಮೇಲೆ ಚುನಾವಣೆ ಎದುರಿಸುತ್ತೇವೆ – ಸಚಿವ ಮಧು ಬಂಗಾರಪ್ಪ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಶೇ91ರಷ್ಟು ಜನರನ್ನು ಗ್ಯಾರೆಂಟಿಗಳ ಮೂಲಕ ತಲುಪಿದೆ ಎನ್ನುವ ಹೆಮ್ಮೆ ಇದೆ. ಈ ಬಾರಿಯ ಚುನಾವಣೆಯಲ್ಲಿ ನಾವು ನಮ್ಮ ಸಾಧನೆಗಳ ಮೂಲಕ ಮತ ಯಾಚಿಸುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಮಂಗಳವಾರ ಕುಂದಾಪುರದ ಪತ್ರಿಕಾ ಭವನದಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು.

    ಸಾಮಾನ್ಯವಾಗಿ ರಾಜಕಾರಣಿಗಳು ಎರಡು ರೀತಿಯಲ್ಲಿ ಚುನಾವಣೆಯನ್ನು ಎದುರಿಸುತ್ತಾರೆ. ಅದರಲ್ಲಿ ಒಂದು ಜಾತಿ ಧರ್ಮಗಳ ಆಧಾರದಲ್ಲಾದರೆ ಇನ್ನೊಂದು ಭಾವನಾತ್ಮಕವಾಗಿ. ಕಾಂಗ್ರೆಸ್ ಯಾವತ್ತೂ ಜಾತಿ ಧರ್ಮಗಳ ಆಧಾರದಲ್ಲಿ ಚುನಾವಣೆ ಎದುರಿಸಿಲ್ಲ. ಬದಲಾಗಿ ಜನರ ಭಾವನೆಗಳನ್ನು ಅರಿತುಕೊಂಡು ಅವರ ಹೊಟ್ಟೆ ಹಸಿವನ್ನು ನೀಗಿಸುವಲ್ಲಿ ಪ್ರಯತ್ನಿಸುತ್ತದೆ. ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದೂ ಗ್ಯಾರೆಂಟಿಗಳನ್ನೂ ಪೂರೈಸುವ ಮೂಲಕ ರಾಜಕಾರಣದಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಂಡಿದೆ ಎಂದರು.

    ದೇಶದಾದ್ಯಂತ ರಾಜಕೀಯ ಬದಲಾವಣೆಗಳನ್ನು ಜನ ಬಯಸುತ್ತಿದ್ದಾರೆ ಎಂದ ಅವರು, ಉಡುಪಿಯಲ್ಲಿ ಎರಡೆರಡು ಬಾರಿ ಸಂಸದೆಯಾದ ಶೋಭಾ ಕರಂದ್ಲಾಜೆ ಅಲ್ಲಿನ ಜನ ಗೋ ಬ್ಯಾಕ್ ಎನ್ನುವ ಮೂಲಕ ಸಂಸದೆಯ ಸಾಧನೆಯನ್ನು ಎತ್ತಿ ಹಿಡಿದ್ದಾರೆ ಎಂದ ಅವರು, ಶಿವಮೊಗ್ಗ ಸಂಸದ ರಾಘವೆಂದ್ರ ಸಾಧನೆ ಶೂನ್ಯ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಅನಾಯಾಸವಾಗಿ ಗೆಲ್ಲಲಿದೆ ಎಂದರು. ಈ ಹಿಂದೆ ಜೆಡಿಎಸ್ ನಲ್ಲಿದ್ದ ನಾನು ಕಾಂಗ್ರೆಸ್ ಸೇರಿರುವ ಬಗ್ಗೆ ಹೆಮ್ಮೆ ಇದೆ ಎಂದವರು, ಒಂದು ವೇಳೆ ನಾನು ಜೆಡಿಎಸ್ ನಲ್ಲಿದ್ದಿದ್ದರೆ ಇವತ್ತು ಕೋಮುವಾದಿ ಶಕ್ತಿಯಾಗಿರುವ ಬಿಜೆಪಿ ಜೊತೆ ಕೈ ಜೋಡಿಸುವ ದುರಂತ ಸಂಭವಿಸುತ್ತಿತ್ತು. ಆದರೆ ಹಾಗಾಗಲಿಲ್ಲ ಎಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದು, ರಾಜ್ಯ ಸರ್ಕಾರದ ಗ್ಯಾರೆಂಟಿ ಸಾಧನೆಗಳು ಮತ್ತು ಮಾಜೀ ಮುಖ್ಯಮಂತ್ರಿ ಬಂಗಾರಪ್ಪನವರ ಜನಪರ ಕಾರ್ಯಗಳು ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದೆ ಎಂದರು.

    ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ, ಮಾಜೀ ಶಾಸಕ ಸುಕುಮಾರ್ ಶೆಟ್ಟಿ, ವಿವಿಧ ಬ್ಲಾಕ್ ಗಳ ಅಧ್ಯಕ್ಷರಾದ ಅರವಿಂದ ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಜಿ.ಎ.ಬಾವಾ, ರಾಜು ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ ಮೊದಲಾದವರು ಇದ್ದರು. ಇದೇ ಸಂದರ್ಭ ಪ್ರಕರ್ತರ ಸಂಘದ ವತಿಯಿಂದ ಕುಂದಾಪುರದಲ್ಲಿ ಸುಸಜ್ಜಿತ ಪ್ರೆಸ್ ಕ್ಲಬ್ ನಿರ್ಮಾಣಕ್ಕೆ ಸರ್ಕಾರದ ಮನಸ್ಸು ಮಾಡಬೇಕು ಎಂಬುದಾಗಿ ಮನವಿ ನೀಡಲಾಯಿತು.