ಬಸ್ರೂರು ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ ಜೂನ್ 14ರಂದು ಅಷ್ಟಮಂಗಲ ಪ್ರಶ್ನೆ ಮುಂದುವರಿಕೆ

ಕುಂದಾಪುರ ಮಿರರ್ ಸುದ್ದಿ…

ಬಸ್ರೂರು: ಶ್ರೀ ತುಳುವೇಶ್ವರ ದೇವಸ್ಥಾನದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಮುಂದುವರಿದ ಭಾಗವಾಗಿ, ಬಸ್ರೂರಿನ ತುಳುವೇಶ್ವರಿ (ಮುಳಲ) ಸಾನಿಧ್ಯದಲ್ಲಿ 2026ರ ಜೂನ್ 14ರಂದು (ಆದಿತ್ಯವಾರ) ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ ಎಂದು ದೇವಸ್ಥಾನ ಸಮಿತಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ತಿಳಿಸಿವೆ.

ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ನಡೆದ ಪ್ರಶ್ನೆ ಚಿಂತನೆಯ ವೇಳೆ ದೊರೆತ ದೈವ ಸಂದೇಶದ ಪ್ರಕಾರ, ಶ್ರೀಚಕ್ರ ಸಾನಿಧ್ಯ ಹೊಂದಿರುವ ಮೂಲಳ ದೇವಿ–ತುಳುವೇಶ್ವರಿ ಸಾನಿಧ್ಯದ ಜೀವನೋದ್ಧಾರ ಮತ್ತು ಅಭಿವೃದ್ಧಿ ನಡೆದ ನಂತರವೇ ತುಳುವೇಶ್ವರ ದೇವರ ಪುನರ್ವೈಭವೀಕರಣ ಕಾರ್ಯಗಳು ಪೂರ್ಣ ಫಲಪ್ರದವಾಗಲಿವೆ ಎಂಬ ಸೂಚನೆ ದೊರೆತ ಹಿನ್ನೆಲೆಯಲ್ಲಿ ಈ ಮಹತ್ವದ ತಿರುವು ಉಂಟಾಗಿದೆ.

ಈ ಹಿನ್ನೆಲೆಯಲ್ಲಿ, ತುಳುವೇಶ್ವರಿ (ಮುಳಲ) ಸಾನಿಧ್ಯದ ಪ್ರಸ್ತುತ ವಾರಿಸುದಾರರಾದ ಪ್ರಶಾಂತ ಪ್ರಭು ಹಾಗೂ ಸುಭಾಷ್ ಚಂದ್ರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ 2026ರ ಜೂನ್ 14 ಆದಿತ್ಯವಾರದಂದು ಅಷ್ಟಮಂಗಲ ಪ್ರಶ್ನೆ ಚಿಂತನೆಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.

ಪ್ರಾಚೀನ ತುಳುನಾಡಿನ ಶಕ್ತಿಸ್ವರೂಪಿಣಿಯಾದ ತುಳುವೇಶ್ವರಿ ದೇವಿಯ ಮೂಲ ಸಾನಿಧ್ಯ, ಶ್ರೀಚಕ್ರ ಆರಾಧನೆ, ಶ್ರೀಚಕ್ರ ನೇಪಾಳಕ್ಕೆ ಸ್ಥಳಾಂತರ ವಾದ ಬಗ್ಗೆ, ತೀರ್ಥಭಾವಿ ಹಾಗೂ ಸಂಬಂಧಿತ ಪುರಾತನ ಕುರುಹುಗಳ ಕುರಿತು ಹೆಚ್ಚಿನ ದೈವಿಕ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಈ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.

ಈ ವಿಷಯದ ಕುರಿತು ತುಳುವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್. ಕೆ. ದೇವಾನಂದ ಶೆಟ್ಟಿ, ಸಂಚಾಲಕರಾದ ಬೇಲೂರು ದಿನಕರ ಶೆಟ್ಟಿ ಹಾಗೂ ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಬದಿಯಡ್ಕ ಮಾಹಿತಿ ನೀಡಿದರು.

ತುಳುನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪುನರುಜ್ಜೀವನದ ದಿಕ್ಕಿನಲ್ಲಿ ಈ ಅಷ್ಟಮಂಗಲ ಪ್ರಶ್ನೆ ಚಿಂತನೆ ಮಹತ್ವದ ಘಟ್ಟವಾಗಲಿದೆ.

Comments

Leave a Reply

Your email address will not be published. Required fields are marked *

More posts