ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಯುವ ಮೆರಿಡಿಯನ್ ಸಮೀಪದ ಲೋಟಸ್ ಎಡ್ಜ್‍ನಲ್ಲಿ ಸುಲೋಚನಾ ಸರ್ವೋತ್ತಮ ಶೆಟ್ಟಿ ಎಜುಕೇಶನಲ್ ಟ್ರಸ್ಟ್ ಪ್ರಾಯೋಜಿತ ಚಿರಂತನ ವಿದ್ಯಾಸಂಸ್ಥೆಗಳ ಉದ್ಘಾಟನೆ ಮೇ 21ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಚಿರಂತನ ವಿದ್ಯಾ ಸಂಸ್ಥೆಗಳ ಸ್ಥಾಪಕಿ, ನಿರ್ದೇಶಕಿ ಡಾ.ಚಿಂತನಾ ರಾಜೇಶ್ ಹೇಳಿದರು.
ಶಾಲೆಯ ವಠಾರದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ನೂತನ ವಿದ್ಯಾಸಂಸ್ಥೆಗಳನ್ನು ಉದ್ಘಾಟಿಸಲಿದ್ದು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಮಾನಸಿಕ ರೋಗ ತಜ್ಞ ಡಾ.ಪ್ರಕಾಶ ಸಿ.ತೋಳಾರ್, ಗುತ್ತಿಗೆದಾರ ಕಮಲ್ ಕಿಶೋರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಉತ್ತಮ ಶಿಕ್ಷಕರು ಸಮಾಜದ ಬಹುದೊಡ್ಡ ಅವಶ್ಯಕತೆ. ಒಳ್ಳೆಯ ಶಿಕ್ಷಕರ ತರಬೇತಿಯ ಅವಶ್ಯಕತೆ ದಿನೇ ದಿನೇ ಹೆಚ್ಚುತ್ತಿದೆ. ಈ ದಿಸೆಯಲ್ಲಿ ಟೀಚರ್ ಟ್ರೈನಿಂಗ್ ಸ್ಕೂಲ್ ಆರಂಭಿಸಲಾಗುತ್ತಿದೆ. ಆಧುನಿಕ ಬದುಕಿಗೆ ಬೇಕಾಗಿರುವ ಸಮಗ್ರ ಶಿಕ್ಷಣದ ಅಗತ್ಯತೆ ಕೂಡ ಹೆಚ್ಚುತ್ತಿದೆ. ಜೊತೆಗೆ ಎಲ್ಲಾ ಶಿಕ್ಷಣದ ಮೂಲ ಒಂದು ಉತ್ತಮ ಫೌಂಡೇಷನ್ ಸ್ಕೂಲ್. ಮಗುವಿನ ಶೈಕ್ಷಣಿಕ ಬದುಕಿಗೆ/ಜೀವನಕ್ಕೆ ಒಂದು ತಳಪಾಯ ಆಗುವಂತಹ ವೈಜ್ಞಾನಿಕ ಅಳವಡಿಸಿಕೊಂಡು ಪ್ರೈಮ್‍ರೋಸ್ ಫೌಂಡೇಶನ್ ಸ್ಕೂಲ್ ಪ್ರಾರಂಭಿಸಲಾಗುತ್ತಿದೆ. ಮಕ್ಕಳ ಹಾಗೂ ಹದಿಹರೆಯರವರ ಮಾನಸಿಕ ಆರೋಗ್ಯ ಸಮಸ್ಯೆಗಳು ದಿನ ಹೆಚ್ಚುತ್ತಿದೆ ಅದಕ್ಕೆ ಬೇಕಾದ ಚಿಕಿತ್ಸೆಯ ಅಗತ್ಯತೆ ಕೂಡ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳ ಮತ್ತು ಹದಿಹರೆಯದವರಿಗೆ ಮಾರ್ಗದರ್ಶನ ಕೇಂದ್ರವನ್ನು ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.
ಫೌಂಡೇಶನ್ ಶಾಲೆ (ಪ್ರೀ ಸ್ಕೂಲ್)ಯಲ್ಲಿ ಮಗುವಿನ ಬೌದ್ಧಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಪೂರಕವಾಗಿ, ವೈಜ್ಞಾನಿಕವಾಗಿ ಸಿದ್ದಗೊಂಡ ಕಲಿಕಾ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುವುದು. ಫೌಂಡೇಶನ್ ಲೆವೆಲ್ ನಲ್ಲಿ ಬೋಧಿಸುವ ಶಿಕ್ಷಕರನ್ನು ರೂಪುಗೊಳಿಸುವ ಪ್ರೀಸ್ಕೂಲ್ ಟೀಚರ್ಸ್ ಟ್ರೇನಿಂಗ್ ಕೋರ್ಸ್‍ಗಳನ್ನು ಇಲ್ಲಿ ನೀಡಲಾಗುತ್ತಿದೆ. ಇಲ್ಲಿ ಶೇ.100 ಉದ್ಯೋಗಾವಕಾಶದ ಸಾಧ್ಯತೆಗಳಿದ್ದು, ಈಗಾಗಲೇ ಮೂರನೇ ವರ್ಷದ ದಾಖಲಾತಿ ಪ್ರಕ್ರಿಯೆ ನಡಿತಾ ಇದೆ. ಎರಡು ಬ್ಯಾಚ್‍ಗಳು ತರಬೇತಿ ಪೂರ್ಣಗೊಳಿಸಿ ಉದ್ಯೋಗವನ್ನು ಪಡೆದಿದ್ದಾರೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಹಾಗೂ ಇನ್ನೂ ಉದ್ಯೋಗ ಪಡೆಯ ಬೇಕಾದವರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಇರುತ್ತದೆ ಎಂದು ಅವರು ಹೇಳಿದರು.
ಚಿರಂತನ ಸಂಸ್ಥೆ ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕೇಂದ್ರ ಕೂಡ ಆಗಿ ಕೆಲಸ ನಿರ್ವಹಿಸಲಿದೆ. ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸಂಸ್ಥೆಯಿಂದ ಶಿಕ್ಷಕರರಿಗೆ ಪುನಶ್ವೇತನ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಮಕ್ಕಳ ಹಾಗೂ ಹದಿಹರೆಯದವರ ವಿಶೇಷ ಆಪ್ತ ಸಮಾಲೋಚನೆ ಹಾಗೂ ವೃತ್ತಿಪರ ಮಾರ್ಗದರ್ಶನ ಕೇಂದ್ರವಾಗಿ ಈ ಸಂಸ್ಥೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ ವೃತ್ತಿಪರ ಆಪ್ತ ಸಮಾಲೋಚನೆ ಕೋರ್ಸ್‍ಗಳು ಕೂಡ ಇಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ NATIONAL INSTITUTE OF OPEN SCHOOLING 3 ವಿಭಾಗಗಳು ಸೇರಿಸುವ ಆಶಯ ಇದೆ ಎಂದು ಅವರು ಹೇಳಿದರು.
ಅಕಾಡೆಮಿಕ್ ಲೀಡ್ ವಿಲ್ಮಾ ಡಿಸೋಜ, ಸಂಸ್ಥೆಯ ಪ್ರಾಂಶುಪಾಲೆ ವಿನೂತಾ ಬಿ.ಶೆಟ್ಟಿ ಉಪಸ್ಥಿತರಿದ್ದರು.

Leave a Reply