Author: samashti media

  • ಸರ್ಕಾರಿ ಶಾಲೆ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಗುರುರಾಜ್ ಗಂಟಿಹೊಳೆ

    ಸರ್ಕಾರಿ ಶಾಲೆ ಉಳಿವಿಗೆ ಎಲ್ಲರ ಸಹಕಾರ ಅಗತ್ಯ: ಶಾಸಕ ಗುರುರಾಜ್ ಗಂಟಿಹೊಳೆ

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ದಾನಿಗಳು ಹಾಗೂ ಸಮಾಜದ ಸಹಕಾರ ಅತಿ ಮುಖ್ಯ ಎಂದು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.

    ಚಿತ್ತೂರಿನ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್. ಮಂಜ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಹಾಗೂ ವಿವೇಕ ಕೊಠಡಿ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಪಠ್ಯ ಪರಿಕರ ವಿತರಿಸಿ ಶಾಸಕರು ಮಾತನಾಡಿದರು.

    ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300ಟ್ರೀಸ್ ಕಾರ್ಯಕ್ರಮ ರೂಪಿಸಿಕೊಂಡಿದ್ದೇವೆ. ದಾನಿಗಳ ಮೂಲಕ ಸರ್ಕಾರಿ ಶಾಲೆಯ ವ್ಯವಸ್ಥೆ, ಮೂಲಸೌಕರ್ಯ ಸುಧಾರಿಸುವ ಕಾರ್ಯವೂ ನಡೆಯುತ್ತಿದೆ. ಅನೇಕ ಸಂಘ ಸಂಸ್ಥೆ ನಮ್ಮ ಈ ಅಭಿಯಾನಕ್ಕೆ ಕೈ ಜೋಡಿಸಿವೆ ಎಂದರು.

    ಎಂ.ಕೃಷ್ಣಮೂರ್ತಿ ಮಂಜರ ಸಾರಥ್ಯದ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಮಾಡಿರುವ ಕಾರ್ಯವೂ ಶ್ಲಾಘನೀಯವಾಗಿದೆ. ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

    ನಿವೃತ್ತ ಶಿಕ್ಷಕ ಗಣಪತಿ ಕಿಣಿ ಅವರಿಗೆ ಸನ್ಮಾನ ನಡೆಯಿತು.

    ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಹಳೇ ವಿದ್ಯಾರ್ಥಿಗಳು, ಊರಿನ ಪ್ರಮುಖರು ಉಪಸ್ಥಿತರಿದ್ದರು.

  • ಕುಂದಾಪುರ ಚತುಷ್ಪಥ ಕಾಮಗಾರಿ ವಿಳಂಬ

    ಕುಂದಾಪುರ ಚತುಷ್ಪಥ ಕಾಮಗಾರಿ ವಿಳಂಬ

    ಕುಂದಾಪುರದಲ್ಲಿ ಚತುಷ್ಪಥದ ನಡುವೆ ಪಾದಚಾರಿಗಳ ಯೋಚನೆಯನ್ನೇ ಮರೆತು ಬಿಟ್ಟಂತೆ ಇದೆ. ಕಿರಿದಾದ ಸರ್ವೀಸ್ ರಸ್ತೆಯಲ್ಲಿಯೇ ಎಲ್ಲ ವಾಹನಗಳು ಅವಲಂಬಿಸಿವೆ. ಈ ನಡುವೆ ಪಾದಚಾರಿಗಳಿಗೆ ತಿರುಗಾಡಲು ಸೂಕ್ತ ಮಾರ್ಗವೇ ವ್ಯವಸ್ಥಿತವಾಗಿಲ್ಲ. ಚರಂಡಿಗೆ ಅಳವಡಿಸಿದ ಸ್ಲ್ಯಾಬ್ ಮೇಲಾದರೂ ನಡೆಯೋಣ ಎಂದರೂ ಮಳೆಗಾಲದಲ್ಲಿ ಬೆಳೆದ ಪೊದೆ ಗಿಡಗಳನ್ನು ಇನ್ನೂ ಕೂಡಾ ತೆರವು ಗೊಳಿಸುವ ಕೆಲಸವಾಗಿಲ್ಲ. ಚರಂಡಿ ಸ್ಲ್ಯಾಬ್‍ಗಳನ್ನೇ ಗಿಡಗಂಟಿಗಳು ಅತಿಕ್ರಮಿಸಿಕೊಂಡಿದ್ದರೆ ಕೆಲವೆಡೆ ಸ್ಲ್ಯಾಬ್ ತೆರೆದಿವೆ. ಇನ್ನೂ ಕೆಲವಡೆ ಗೂಡಾಂಗಡಿಗಳು ಪುಟ್‍ಪಾತ್‍ನ್ನೆ ಆಕ್ರಮಿಸಿಕೊಂಡಿದೆ. ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ವಾಹನಬಿಡಾದ ಸರ್ವೀಸ್ ರಸ್ತೆಗೆ ಇಳಿಯಬೇಕಾದ ಅನಿರ್ವಾತೆ ಸೃಷ್ಟಿಯಾಗಿದೆ.
    ಈಗ ಕುಂದಾಪುರ ಕಾಲೇಜು ರಸ್ತೆ ತಿರುವಿನಿಂದ ವಿನಾಯಕದ ತನಕವೂ ಪುಟ್‍ಪಾತ್ ಇದೆ. ಒಂದಿಷ್ಟು ಅಗಲದ ಸರ್ಕಾರಿ ಸ್ವಾಮ್ಯದ ಸ್ಥಳವೂ ಇದೆ. ಆದರೆ ಅಲ್ಲಲ್ಲಿ  ತಲೆಎತ್ತಿರುವ ಗೂಡಾಂಗಡಿಗಳು ಕಾಲುದಾರಿಯನ್ನೇ ಅತಿಕ್ರಮಿಸಿಕೊಂಡಿವೆ. ಚರಂಡಿಯ ಮೇಲೆ ಹಾಕಲಾದ ಸ್ಲ್ಯಾಬ್‍ನ ಮೇಲೆಯೇ ಪಾದಾಚಾರಿಗಳು ನಡೆಯಬೇಕು. ಅದಾದರೂ ಸರಿ, ಆದರೆ ವಿನಾಯಕದ ತನಕ ಚರಂಡಿಗೆ ನಿರಂತರವಾಗಿ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಅಲ್ಲಲ್ಲಿ ಏಕಾಏಕಿ ಮುಚ್ಚಿಗೆ ಹಾಕದೇ ಬಿಟ್ಟಿರುವುದು ಅಪಾಯಕಾರಿಯಾಗಿದೆ. ಗಾಂಧಿ ಮೈದಾನದ ಪಾಶ್ರ್ಚದಲ್ಲಿಯೇ ಮೋರಿ ಇರುವೆಡೆ ಸ್ಲ್ಯಾಬ್ ಅಳವಡಿಕೆ ಮಾಡಿಲ್ಲ. ಇದು ಅತ್ಯಂತ ಅಪಾಯಕಾರಿಯಾಗಿದೆ.
    ಪಾದಚಾರಿಗಳಿಗೆ ನಡೆದಾಡಲು ಸಮರ್ಪಕ ಕಾಲುದಾರಿಯನ್ನು ನಿರ್ಮಾಣ ಮಾಡಲು ಸರ್ಕಲ್‍ನಿಂದ ವಿನಾಯಕದ ತನಕ ಅವಕಾಶವಿದೆ. ಈಗ ಚರಂಡಿಗೆ ಹಾಕಲಾದ ಸ್ಲ್ಯಾಬ್‍ನ್ನೇ ಬಳಸಿಕೊಂಡು ಬಲ ಬದಿಗೆ ಒಂದಿಷ್ಟು ಅಗಲ ಮಾಡಿದರೆ ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಬದ್ದತೆ ಪ್ರದರ್ಶಿಸಿಸಬೇಕಿದೆ.
    ಕುಂದಾಪುರ ನಗರದಲ್ಲಿ ಪಾದಚಾರಿಗಳಿಗೆ ನಡೆದಾಡಲು ಸ್ಥಳವಕಾಶ ಇಲ್ಲ ಎನ್ನುವ ಸಾರ್ವಜನಿಕ ದೂರುಗಳು ನಿರಂತರವಾಗಿ ಕೇಳಿ ಬರುತ್ತಿದೆ. ಶಾಲಾ ಮಕ್ಕಳಿಗೂ ನಡೆದಾಡಲು ಕಷ್ಟವಾಗುತ್ತದೆ. ಅಲ್ಲದೇ ಹಲವಾರು ಸರ್ಕಾರಿ ಕಛೇರಿಗಳು ಈ ಭಾಗದಲ್ಲಿಯೇ ಇದೆ. ಹಳ್ಳಿ ಹಳ್ಳಿಗಳಿಂದ ಬಸ್‍ಗಳಲ್ಲಿ ಬರುವ ಜನಸಾಮಾನ್ಯರು ನಡೆದುಕೊಂಡೇ ಕಚೇರಿಗಳಿಗೆ ಹೋಗಬೇಕು. ಆದರೆ ಇಲ್ಲಿ ನಡೆದುಕೊಂಡು ಹೋಗಲು ಸರಿಯಾದ ಮಾರ್ಗವೇ ಇಲ್ಲದಿರುವುದು ವಿಷಾಧನೀಯ.
    ಮೇಲ್ಸೆತುವೆ ಮುಕ್ತಾಯ ಮತ್ತೆ ಮಾರ್ಚ್ ಅಂತ್ಯ!
    ಕುಂದಾಪುರದಲ್ಲಿ ಮೇಲ್ಸೆತುವೆ ಕಾಮಗಾರಿ ಕಳೆದ ಮಾರ್ಚ್ ಅಂತ್ಯದೊಳಗೆ ಮುಕ್ತಾಯ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಯಾರ ದುರಾದೃಷ್ಟವೋ ಕೊರೋನಾದ ನೆವದಿಂದ ವಿರಾಮ ಸಿಕ್ಕಿತ್ತು. ಈಗ ಎಲ್ಲಾ ಸರಿಯಾಗಿದ್ದರೂ ಕೂಡಾ ಕಂಪೆನಿ ಕಾಮಗಾರಿಯನ್ನು ವೇಗಗೊಳಿಸುತ್ತಿಲ್ಲ. 2021ರ ಮಾರ್ಚ್ ಅಂತ್ಯಕ್ಕೆ ಮುಗಿಸಲಾಗುತ್ತದೆ ಎಂದು ಜಿ.ಪಂ,.ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಎಷ್ಟು ಮಾರ್ಚ್ ಬರಬೇಕು ಎನ್ನುವುದು ಗೊತ್ತಿಲ್ಲ.
    ಚರಂಡಿ ಸ್ಲ್ಯಾಬ್ ಮೇಲಾದರೂ ಪಾದಾಚಾರಿಗಳಿಗೆ ಅನುಕೂಲ  ಕಲ್ಪಿಸಿ
    ಇಕ್ಕಟ್ಟಾದ ಸರ್ವೀಸ್ ರಸ್ತೆಯಿಂದಾಗಿ ವಾಹನಗಳು ನಿಬಿಡತೆಯಲ್ಲಿ ಸದಾ ಕರ್ಕಶ ಹಾರ್ನ್‍ಗಳ ಕಿವಿಗಡಚ್ಚುವ ಶಬ್ದಗಳು. ಇದು ಕಳೆದ ಎರಡು ವರ್ಷದಿಂದ ಕುಂದಾಪುರ ಜನ ಅನುಭವಿಸಿಕೊಂಡು ಬಂದಿರುವ ಗೋಳು. ಇದರ ನಡುವೆ ಪಾಪ ಪಾದಚಾರಿಗಳ ಗೋಳು ಕೇಳುವವರೇ ಇಲ್ಲ. ರಸ್ತೆಯ ಪಕ್ಕದ ಚರಂಡಿ ಸ್ಲ್ಯಾಬ್ ಮೇಲಾದರೂ ಹೋಗೋಣವೆಂದರೂ ಅಲ್ಲಲ್ಲಿ ಸ್ಲ್ಯಾಬ್ ಬಾಯಿ ಬಿಟ್ಟಿದೆ. ಕೆಲವಡೆ ಗೂಡಾಂಗಡಿಗಳು ಚರಂಡಿ ಸ್ಲ್ಯಾಬ್‍ಗಳನ್ನೇ ಅತಿಕ್ರಮಿಸಿಕೊಂಡಿವೆ.
  • ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾಗಿ ಕಿರಣ್ ಕೊಡ್ಗಿ ನೇಮಕ

    ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾಗಿ ಕಿರಣ್ ಕೊಡ್ಗಿ ನೇಮಕ

    ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ  ಕಿರಣ್ ಕೊಡ್ಗಿ ಅವರನ್ನು ನೇಮಕಗೊಳಿಸಿದೆ.
    ಅಮಾಸೆಬೈಲು ಕಿರಣ್ ಕೊಡ್ಗಿ ಅವರು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ
  • ಕುಂದಾಪುರ: ಜಲಸಿರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ

    ಕುಂದಾಪುರ: ಜಲಸಿರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ

    ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆಯಲ್ಲದೇ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಪುರಸಭೆ ಮಹತ್ವಾಕಾಂಕ್ಷಿ ಯೋಜನೆ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ವಿವರಣೆ ನೀಡಬೇಕಿದ್ದ ಅಧಿಕಾರಿ ಸಭೆಗೆ ಗೈರಾಗಿದ್ದಾರೆ. ಅವರಿಲ್ಲದೆ ಈ ಯೋಜನೆ ಕುರಿತು ಚರ್ಚೆ ಅಸಾಧ್ಯ. ಅಧಿಕಾರಿ ಸಮಯ ಪಡೆದು ಮತ್ತೊಮ್ಮೆ ಸಭೆ ಕರೆಯಬೇಕು. ಅಲ್ಲಿಯ ತನಕ ನಡೆಯುತ್ತಿರುವ ಕಾಮಗಾರಿಯೂ ಬಂದ್ ಮಾಡಬೇಕು ಎಂದು ಹಿರಿಯ ಸದಸ್ಯ ಮೋಹನ್‍ದಾಸ್ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.
    ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ  ಕುಡಿಯುವ ನೀರು ಹಾಗೂ ಒಳ ಚರಂಡಿ ಯೋಜನೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
    ವಾರಗಳ ಮೊದಲೇ ಅಧಿಕಾರಿಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡಿದರೂ ಸಭೆಗೆ ಬಾರದೆ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಚುನಾಯಿತ ಸದಸ್ಯರ ಮಾತಿಗೆ ಅಧಿಕಾರಗಳು ಮನ್ನಣೆ ಕೊಡೋದಿಲ್ಲ ಎಂದಾದರೆ ಸಾಮಾನ್ಯ ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೆ. ಇದು ಸುದೀರ್ಘ ಚರ್ಚೆ ನಡೆಯಬೇಕಾದ ವಿಚಾರ. ಸಾಮಾನ್ಯ ಸಭೆಯಲ್ಲಿ ಸಮಯಾವಕಾಶದ ಕೊರತೆ ಇರುವುದರಿಂದ ಅಲ್ಲಿ ನಮ್ಮ ದಿಕ್ಕು ತಪ್ಪಿಸಿ ನಡೆಯುತ್ತಾರೆ. ಸುದೀರ್ಘ ಚರ್ಚೆ ನಡೆಸುವುದಕ್ಕೋಸ್ಕರವಾಗಿಯೇ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಹಠಕ್ಕೆ ಬಿದ್ದು ನಾವೆಲ್ಲರೂ ಸೇರಿ ವಿಶೇಷ ಸಭೆಯನ್ನು ನಡೆಸಲು ಹೇಳಿದ್ದೇವೆ. ಹಲವು ವರ್ಷಗಳ ಕನಸಿದು. ಜನರಿಗೆ 24 ಗಂಟೆಯೂ ಕುಡಿಯುವ ನೀರು ಸಿಗಬೇಕೆನ್ನುವುದು. ಮೇಲಾಧಿಕಾರಿಗಳು ಸಭೆಗೆ ಎಲ್ಲಿಯ ತನಕ ಬರುವುದಿಲ್ಲವೋ ಅಲ್ಲಿಯ ತನಕ ಕಾಮಗಾರಿ ನಿಲ್ಲಿಸಲು ಆದೇಶ ನೀಡಿ ಎಂದು ಅಧ್ಯಕ್ಷರಿಗೆ ಸದಸ್ಯ ಮೋಹನ್‍ದಾಸ್ ಶೆಣೈ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಗಿರೀಶ್ ಜಿ.ಕೆ, ಶೇಖರ ಪೂಜಾರಿ, ದೇವಕಿ ಸಣ್ಣಯ್ಯ ಸಭೆಗೆ ಅರೆಬರೆ ಮಾಹಿತಿ ನೀಡಿದರೆ ಆಗೋದಿಲ್ಲ. ಮೇಲಾಧಿಕಾರಿಗಳ ಗೈರಿನಲ್ಲಿ ಜಲಸಿರಿ ಯೋಜನೆ ಚರ್ಚೆಯೇ ಅಪ್ರಸ್ತುತ. ಅಧಿಕಾರಿಗಳು ಬಂದ ನಂತರ ಚರ್ಚೆ ಮಾಡುವಂತೆ ಒತ್ತಾಯಿಸಿದರು. ಬಳಿಕ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಅಧಿಕಾರಿಗಳು ಬಂದ ಮೇಲೆ ಮತ್ತೊಮ್ಮೆ ಸಭೆ ನಡೆಸುವ ಘೋಷಣೆ ಮಾಡಿದ ನಂತರ ಜಲಸಿರಿ ಯೋಜನೆ ಚರ್ಚೆ ಕೈ ಬಿಡಲಾಯಿತು. ಸದಸ್ಯ ಚಂದ್ರಶೇಖರ್ ಖಾರ್ವಿ ಮುಂದಿನ ಸಭೆ ನಡೆಯುವ ತನಕ ಕಾಮಗಾರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು.
    ಸಭೆಯಲ್ಲಿ ವಾಕ್ಸಮರ
    ಕುಂದಾಪುರ ಫ್ಲೈ ಓವರ್ ಕಾಮಗಾರಿ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಆಡಳಿತ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯ ಚಂದ್ರಶೇಖರ ಖಾರ್ವಿ ಫ್ಲೈ ಓವರ್ ಕಾಮಗಾರಿ ನಿಧಾನಗತಿಗೆ ಶಾಸಕರು, ಸಂಸದರು ನೇರ ಕಾರಣ ಎಂದು ಅರೋಪಿಸಿದ ಬೆನ್ನಲ್ಲೇ ಆಡಳಿತ ಪಕ್ಷದ ಸದಸ್ಯರು ಒಂದುಕ್ಷಣ ಕೆಂಡಾಮಂಡಲರಾದರು. ಈವೇಳೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ದೊರಕಿದೆ. ಅಂದು ಸುಮ್ಮನಿದ್ದು ಈಗ ಆರೋಪ ಮಾಡುವುದು ಸರಿಯಲ್ಲ. ಫ್ಲೈ ಓವರ್ ಕಾಂಗಾರಿ ಮೊದಲ ನಕ್ಷೆಯಲ್ಲಿ ಇರಲಿಲ್ಲ. ಎರಡನೇ ಬಾರಿ ಅದನ್ನು ಸೇರಿಸಲಾಗಿದೆ. ನಮ್ಮ ಶಾಸಕ, ಸಂಸದರು ಪ್ರಯತ್ನದಿಂದ ಇಂದು ಕಾಮಗಾರಿ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು.
    ಯುಜಿಡಿಗೆ ಇನ್ನೂ ಎರಡು ವರ್ಷ
    ಪುರಸಭೆ ಒಳಚರಂಡಿ ಯೋಜನೆ ಆರಂಭದಲ್ಲಿ 48.14 ಕೋಟಿ ರೂ.ಇದ್ದು, ಪ್ರಸಕ್ತ ಯೋಜನೆ ಅನುದಾನ 55.6 ಕೋಟಿ ಆಗಿದ್ದು, 24 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ವೆಟ್‍ವೆಲ್, ಎಸ್‍ಟಿಪಿ ಕೆಲಸ ಬಾಕಿಯಿದ್ದು, ಪುರಸಭೆ ಜಾಗ ಒದಗಿಸಿದರೆ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಯುಜಿಡಿ ಅಭಿಯಂತರ ರಕ್ಷಿತ್ ಹೇಳಿದರು. ಈಗಾಗಲೇ ಪುರಸಭೆ ಮೂರು ವೆಟ್‍ವೆಲ್ಲಿಗೆ ಜಾಗ ಕ್ಲಿಯರ್ ಮಾಡಿದ್ದು, ಇನ್ನೆರಡು ವೆಟ್‍ವೆಲ್‍ಗೆ ಜಾಗದ ಸಮಸ್ಯೆ ಪರಿಹರಿಸಿ ನೀಡಲಾಗುತ್ತದೆ. ಒಂದು ವಾರದಲ್ಲಿ ಭೂಮಿ ಕ್ಲಿಯರ್ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾದಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು. ಒಟ್ಟಾರೆ ಕುಂದಾಪುರ ಪುರಸಭೆಯ ಎರಡು ಬೃಹತ್ ಗಾತ್ರದ ಯೋಜನೆಗೆ ಗ್ರಹಣ ಬಡಿದಿದೆ.
    ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
  • ನಿಯಂತ್ರಿಣ ತಪ್ಪಿ ಪಕ್ಕದ ರಸ್ತೆಗೆ ಬಿದ್ದ ಲಾರಿ: ಚಾಲಕನ ಸಾವು

    ನಿಯಂತ್ರಿಣ ತಪ್ಪಿ ಪಕ್ಕದ ರಸ್ತೆಗೆ ಬಿದ್ದ ಲಾರಿ: ಚಾಲಕನ ಸಾವು

    ಬೈಂದೂರು: ಲಾರಿಯೊಂದು (ಇಕೋಮೇಟ್) ನಿಯಂತ್ರಿಣ ತಪ್ಪಿ ಅಭಿಮುಖ ರಸ್ತೆಗೆ ಪಲ್ಟಿಯಾಗಿ, ಎದುರಿನಿಂದ ಬರುತ್ತಿದ್ದ ಇಕೋ ವಾಹನಕ್ಕೆ ಡಿಕ್ಕಿ ಹೊಡೆದ್ದು, ಘಟನೆಯಲ್ಲಿ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಮುಂಬೈನಿಂದ ಕೇರಳ ಕಡೆಗೆ ತೆರಳುತ್ತಿದ್ದ ಬೇಕರಿ ಉತ್ಪನ್ನಗಳನ್ನು ತುಂಬಿದ್ದ ಲಾರಿಯು ಬೈಂದೂರು ತಾಲೂಕಿನ ಒತ್ತಿನಣೆಯ ರಾಷ್ಟ್ರೀಯ ಹೆದ್ದಾರಿ 66ರ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಎದುರಿನ ರಸ್ತೆಗೆ ಬಿದ್ದಿದ್ದು, ಇದೇ ಸಂದರ್ಭ ಎದುರಿನ ರಸ್ತೆಯಲ್ಲಿ ಬರುತ್ತಿದ್ದ ಇಕೋ ವಾಹನಕ್ಕೂ ಡಿಕ್ಕಿ ಹೊಡಿದಿದೆ. ಲಾರಿ ಮೇಲ್ಬಾಗದ ರಸ್ತೆಯಿಂದ ಕೆಳಕ್ಕೆ ಬಿದ್ದ ಕಾರಣ ಚಾಲಕನಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕ್ಲೀನರ್‌ಗೆ ಕೂಡ ಗಂಭೀರ ಗಾಯಗಳಾಗಿದ್ದು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಕೋ ವಾಹನವೂ  ಉರುಳಿ ಬಿದ್ದಿರುತ್ತದೆ. ಪರಿಣಾಮ ಇಕೋ ವಾಹನ ಚಾಲಕನಿಗೆ ಕುತ್ತಿಗೆಗೆ ಒಳಜಖಂ ಆಗಿದ್ದು, ಕಾರಿನಲ್ಲಿದ್ದ ಹೆಂಗಸಿಗೆ ತಲೆಯ ಹಿಂಭಾಗಕ್ಕೆ ಹಾಗೂ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ

    ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ‘ಸಪ್ತಪದಿ’ ಉಚಿತ ಸಾಮೂಹಿಕ ವಿವಾಹ ನಡೆಯಿತು.
    ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ವತಿಯಿಂದ ಸರಳವಾಗಿ ವಿವಾಹ ನಡೆಯಿತು. ಒಟ್ಟು ನಾಲ್ಕು ಜೋಡಿ ನವ ದಂಪತಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಪದಾರ್ಪಣೆ ಮಾಡಿದರು.
    ಸರಕಾರದ ವತಿಯಿಂದ  ವರನಿಗೆ ಐದು ಸಾವಿರ ರೂ. ಮತ್ತು ವಧುವಿಗೆ 10 ಸಾವಿರ ರೂ., ಚಿನ್ನದ ತಾಳಿಯನ್ನು ನೀಡಲಾಯಿತು.  ಕೊಲ್ಲೂರು ದೇವಳದ ವತಿಯಿಂದ  ವಧುವಿಗೆ ಸೀರೆ, ವರನಿಗೆ ಪಂಚೆ ಮತ್ತು ಕೊಲ್ಲೂರು ದೇವಿಯ ಪೋಟೊವನ್ನು ನೀಡಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀ ರವಿಶಂಕರ್ ಗುರೂಜಿ ಆಗಮಿಸಿ ವಧು ವರರನ್ನು ಆಶೀರ್ವದಿಸಿದರು.
    ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ,  ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿವಾಹವಾಗುವುದು ಯೋಗ. ಈ ಕ್ಷೇತ್ರದಲ್ಲಿ ವಿವಾಹವಾಗಲು ದೇವಿಯ ಅನುಗ್ರಹ ಬೇಕು. ವಿವಾಹಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ದೇವಾಲಯದ ಶಾಸ್ತ್ರೋಕ್ತವಾಗಿ ಸರಳ ವಿವಾಹವಾಗುವುದು ಉತ್ತಮ ಎಂದರು.
    ಕ್ಷೇತ್ರ ಪುರೋಹಿತರಾದ ಗಜಾನನ ಜೋಶಿಯವರ  ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ದೇವಳದ ಕಾರ್ಯನಿರ್ವಹಣಾಧಿಕಾರಿ, ವ್ಯವಸ್ಥಾಪನಾ ಸಮಿತಿಯವರು ಉಪಸ್ಥಿತರಿದ್ದರು.
  • ಕೋಟೇಶ್ವರದಲ್ಲಿ ಭಾರತ್ ಸಿನೆಮಾಸ್ ಉದ್ಘಾಟನೆ

    ಕೋಟೇಶ್ವರದಲ್ಲಿ ಭಾರತ್ ಸಿನೆಮಾಸ್ ಉದ್ಘಾಟನೆ

    ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ನಿರ್ಮಾಣಗೊಂಡ ಕೋಸ್ಟಲ್ ಕ್ರೌನ್ ಮಾಲ್ ನಲ್ಲಿ ಭಾರತ್ ಸಿನೆಮಾಸ್ ಶಾಖೆಯನ್ನು ಖ್ಯಾತ ಸಂಗೀತ ನಿರ್ದೇಶಕ ರವಿಬಸ್ರೂರು ಉದ್ಘಾಟಿಸಿದರು.
    ಬಳಿಕ ಮಾತನಾಡಿದ ಅವರು, ಕುಂದಾಪುರಕ್ಕೊಂದು ಗುಣಮಟ್ಟದ ಚಿತ್ರಮಂದಿರ ಬೇಕೆನ್ನುವ ಜನರ ಕನಸು ಈಡೇರಿದೆ‌. ಉತ್ತಮ ಸಿನೆಮಾ ಮಾಡಿದಾಗ ಅದರ ಪ್ರದರ್ಶನಕ್ಕೆ ಚಿತ್ರಮಂದಿರದ ಅವಶ್ಯಕತೆಯೂ ಇದ್ದು ಈ ಹಿಂದೆ ಕುಂದಾಪುರದಲ್ಲಿ ಕೊರತೆಯಿತ್ತು‌. ಭಾರತ್ ಸಿನೆಮಾಸ್ ಶಾಖೆಗಳು ಹಳ್ಳಿಹಳ್ಳಿಯಲ್ಲೂ ನಿರ್ಮಾಣಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದರು‌.
    ಭಾರತ್ ಗ್ರೂಫ್ ನಿರ್ದೇಶಕರಾದ ಸುಧೀರ್ ಎಂ ಪೈ ದೀಪ ಬೆಳಗಿಸಿ ಮಾತನಾಡಿ, ಭಾರತ್ ಸಿನೆಮಾಸ್ ಅನ್ನು ದಕ್ಷಿಣ ಭಾರತದಲ್ಲಿ ಪ್ರಥಮವಾಗಿ 2006ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಕೋಟೇಶ್ವರದಲ್ಲಿ ನಾಲ್ಕನೇ ಶಾಖೆ ಲೋಕಾರ್ಪಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲೂ ಭಾರತ್ ಸಿನೆಮಾಸ್ ಆರಂಭಿಸುವ ಚಿಂತನೆಯಿದೆ ಎಂದರು.
    ಉದ್ಯಮಿ ಪ್ರಕಾಶ್ ಲೋಬೊ, ಶಿವಾನಂದ ಪೂಜಾರಿ, ಶಾಲೆಟ್ ಲೋಬೋ, ಭಾರತ್ ಸಿನೆಮಾ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಇದ್ದರು.
  • ತೆಕ್ಕಟ್ಟೆ: ಬಸ್ ಢಿಕ್ಕಿ ಪಾದಚಾರಿ ಸಾವು

    ತೆಕ್ಕಟ್ಟೆ: ಬಸ್ ಢಿಕ್ಕಿ ಪಾದಚಾರಿ ಸಾವು

    ತೆಕ್ಕಟ್ಟೆಯಲ್ಲಿ ಡಿ.18 ರಾತ್ರಿ 11 ಗಂಟೆಯ ಸುಮಾರಿಗೆ ಅತೀ ವೇಗದಿಂದ ಬಂದ ಬಸ್ಸು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ತೆಕ್ಕಟ್ಟೆಯ ರೈಸ್‍ಮಿಲ್ ಹತ್ತಿರ ಕೊಮೆ ನಿವಾಸಿ ಪ್ರಮೋದ ಮೊಗವೀರ (25) ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಸಂದರ್ಭ ಮಂಗಳೂರಿನಿಂದ ಗೋವಾದ ಕಡೆಗೆ ಕ್ರಮಿಸುತ್ತಿದ್ದ ಖಾಸಗಿ ಬಸ್ ಅತೀ ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಯುವಕನ ದೇಹ ನುಜ್ಜುಗೊಜ್ಜಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಂದಾಪುರ: ಕಾರು ಮತ್ತು ರಿಕ್ಷಾ ನಡುವೆ ಅಪಘಾತ

    ಕುಂದಾಪುರ: ಕಾರು ಮತ್ತು ರಿಕ್ಷಾ ನಡುವೆ ಅಪಘಾತ

    ಕುಂದಾಪುರ :ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತ್ರಾಸಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ಸಂಭವಿಸಿದೆ.

    ಬೈಂದೂರು ಕಡೆಯಿಂದ ಬರುತ್ತಿದ್ದ ಕಾರು ತ್ರಾಸಿಯಿಂದ ಮೊವಾಡಿ ಕಡೆಗೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕನಿಗೆ ಗಂಭೀರ ಗಾಯಗೊಂಡಿದ್ದು. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಾಗಳಾಗಿವೆ.

    ಗಾಯಾಳುಗಳು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .

     

  • ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ

    ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ

    ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ
    ಕುಂದಾಪುರ: ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳಿಗೆ ಎರಡನೇ ಹಂತದಲ್ಲಿ ರವಿವಾರ ಮತದಾನ ನಡೆದಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದಲೇ ಬಂದು ಮತ ಚಲಾಯಿಸುತ್ತಿರುವುದು ಕಂಡು ಬಂತು.
    ಕುಂದಾಪುರದ 43 ಗ್ರಾ.ಪಂ.ಗಳ ಒಟ್ಟು ಇರುವ 554 ಸ್ಥಾನಗಳ ಪೈಕಿ 24 ಕಡೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸ್ಪರ್ದೀಸಿರುವ 1,262 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
    ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 9 ಗಂಟೆಯ ಸುಮಾರಿಗೆ ಒಟ್ಟಾರೆ 43 ಗ್ರಾ.ಪಂ.ಗಳಲ್ಲಿ ಶೇ. 12.41 ಪ್ರತಿಶತ ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ. 30.17 ಮಂದಿ ಮತದಾನ ಮಾಡಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಒಟ್ಟಾರೆ ಶೇ. 49.49 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ. 61.32 ರಷ್ಟು ಮತದಾನವಾಗಿತ್ತು. ಸಂಜೆ 5ಗಂಟೆಗೆ ಶೇ. 76.09 ರಷ್ಟು ಮತದಾನ ನಡೆಯಿತು.
    43 ಗ್ರಾ.ಪಂ.ಗಳ ಪೈಕಿ ಒಟ್ಟಾರೆ 20 ನಕ್ಸಲ್ ಭಾಗದ ಮತಗಟ್ಟೆಗಳಿದ್ದು, ಈ ಪೈಕಿ ಮಚ್ಚಟ್ಟುವಿನ 2 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆದಿಲ್ಲ. ಇನ್ನುಳಿದ 18 ಮತಗಟ್ಟೆಗಳಾದ ಕೆರಾಡಿ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಕೆರಾಡಿ ಗ್ರಾ.ಪಂ., ಹೊಸಂಗಡಿ ಗ್ರಾಮದ ಸರಕಾರಿ ಕಿ.ಪ್ರಾ. ಶಾಲೆ, ಹಿ.ಪ್ರಾ. ಶಾಲೆ, ಅಮಾಸೆಬೈಲು ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಜಡ್ಡಿನಗದ್ದೆ ಶಾಲೆ, ರಟ್ಟಾಡಿ ಶಾಲೆ, ನಡಂಬೂರು ಶಾಲೆ, ಮಚ್ಚಟ್ಟುವಿನ ತೊಂಬಟ್ಟು, ಯಡಮೊಗೆ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿರುವ ನಕ್ಸಲ್ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗಾಗಿ ಸಶಸ್ತ್ರ ಮೀಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.
    ಎರಡನೇ ಹಂತದ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ,ಬೈಂದೂರಿನ ಬಿ.ಎಂ. ಸುಕುಮಾರ್, ಮಾಜಿ ಶಾಸಕರಾದ ಎ.ಜಿ. ಕೊಡ್ಗಿ, ಬಿ. ಅಪ್ಪಣ್ಣ ಹೆಗ್ಡೆ, ಕೆ. ಗೋಪಾಲ ಪೂಜಾರಿ, ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮತ ಚಲಾಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.