ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದ್ವಿತೀಯ ಪಿಯುಸಿಯ ಫಲಿತಾಂಶ ಇಂದು ಹೊರಬಿದ್ದಿದ್ದು, ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನೇಹಾ ಜೆ ರಾವ್ ವಿಜ್ಞಾನ ವಿಭಾಗದ ಪಿಸಿಎಂಸಿಯಲ್ಲಿ 594 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ.
ಕುಂದಾಪುರ ತಾಲೂಕಿನ ಬಸ್ರೂರು ಮೂರುಕೈ ಸಮೀಪದ ಬ್ಯಾಂಕರ್ಸ್ ಕಾಲೊನಿ ನಿವಾಸಿಯಾಗಿರುವ, ಜಗದೀಶ್ ರಾವ್ ಹಾಗೂ ಸ್ಮಿತಾ ಜೆ ರಾವ್ ಅವರ ಪುತ್ರಿಯಾಗಿರುವ ನೇಹಾ, ಹಗಲು ರಾತ್ರಿ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿರುವ ನೇಹಾಳ ಸಹೋದರ ಯಜ್ಞೇಶ್ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ. ತಾತ ಎನ್.ಎನ್.ರಾವ್ ನಿವೃತ್ತ ಶಿಕ್ಷಕರಾಗಿದ್ದು ನನ್ನ ಓದಿಗೆ ಉತ್ತೇಜನ ನೀಡಿದ್ದರು. ತಂದೆ ತಾಯಿಯವರೂ ಹುರಿದುಂಬಿಸುತ್ತಿದ್ದರು ಎಂದಿರುವ ನೇಹಾ ಜೆ ರಾವ್, ಮುಂದೆ ಬಿ.ಟೆಕ್ ಮಾಡಿ ಇಂಜಿನಿಯರ್ ಆಗಬೇಕು ಎನ್ನುವ ಕನಸು ಕಂಡಿದ್ದಾರೆ. ನೇಹಾಳ ಸಾಧನೆಗೆ ಮನೆಯವರು ಸಂಭ್ರಮಿಸಿದ್ದು, ಸಿಹಿ ಹಂಚಿ ಖುಷಿಪಟ್ಟಿದ್ದಾರೆ.
ನೇಹಾಳ ಸಾಧನೆಗೆ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.