Category: ಸುದ್ದಿ

  • ಕುಂದಾಪುರ :ಸರ್ಜಿಯವರನ್ನು ಈಶ್ವರಪ್ಪನವರೇ ಸೂಚಿಸಿದ್ದರು – ಕುಂಭಾಸಿಯಲ್ಲಿ ವಿಜಯೇಂದ್ರ ಹೇಳಿಕೆ

    ಕುಂದಾಪುರ :ಸರ್ಜಿಯವರನ್ನು ಈಶ್ವರಪ್ಪನವರೇ ಸೂಚಿಸಿದ್ದರು – ಕುಂಭಾಸಿಯಲ್ಲಿ ವಿಜಯೇಂದ್ರ ಹೇಳಿಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿಯವರ ಹೆಸರನ್ನು ಹಿಂದೆ ಕೆ.ಎಸ್.ಈಶ್ವರಪ್ಪನವರೇ ಸೂಚಿಸಿದ್ದರು. ಪಾಪ ಈಗ ಅವರು ಅದನ್ನು ಮರೆತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ಅವರು ಕುಂದಾಪುರದ ಕುಮಭಾಸಇ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಾಸನದ ಉದ್ಯಮಿ ಜಿ. ರಾಘವೇಂದ್ರ ಉಪಾಧ್ಯಾಯ ಕುಟುಂಬಸ್ಥರು ನಡೆಸಿದ ಸಹಸ್ರ ನಾರಿಕೇಳ ಗಣ ಯಾಗದಲ್ಲಿ ಪತ್ನಿ ಪ್ರೇಮ ವಿಜಯೇಂದ್ರ ಸಹಿತ ಭಾಗಿಯಾಗಿ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.
    ರಾಜ್ಯದಲ್ಲಿ 6 ಕ್ಷೇತ್ರದ ಚುನಾವಣೆಗಳಿಗೆ ವಿಧಾನಪರಿಷತ್ ಚುನಾವಣೆ ನಡೆಯುತ್ತಿದ್ದು, ಈ ಭಾಗದ ಎಲ್ಲಾ ನಮ್ಮ ಶಾಸಕರು, ವಿಧಾನಪರಿಷತ್ ಸದಸ್ಯರು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ಗೊಂದಲ ಇಲ್ಲದೇ. ವ್ಯತ್ಯಾಸವಿಲ್ಲದೇ ಒಗ್ಗಟ್ಟಾಗಿ, ಡಾ. ಧನಂಜಯ ಸರ್ಜಿಯವರ ಪರವಾಗಿ ಅದೇ ರೀತಿ ಭೋಜೇಗೌಡರ ಪರವಾಗಿ ಶ್ರಮ ಹಾಕುತ್ತಿದ್ದಾರೆ. ಮಾನ್ಯ ಈಶ್ವರಪ್ಪನವರು ನಮ್ಮ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಬಗ್ಗೆ ಅನೇಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ, ಈ ದೇವಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ಪದವೀಧರ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡ್ಬೇಕು ಅಂತ ಚರ್ಚೆ ಆದಾಗ ಈಶ್ವರಪ್ಪನವರೇ ಡಾ. ಧನಂಜಯ ಸರ್ಜಿಯವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಬಹುಷ ಈಗ ಅವರು ಮರೆತಿದ್ದಾರೆ ಅನ್ನಿಸುತ್ತಿದೆ. ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ನಮ್ಮದಾಗಲಿದೆ ಎಂದರು.
    ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಷ್ಟೇ ಅಥವಾ ಅದಕ್ಕಿಂತ ಒಂದು ಹೆಚ್ಚು ಸ್ಥಾನವನ್ನು ನಾವು ಗೆಲ್ತೇವೆ. ಕಾಂಗ್ರೆಸ್ ಪಕ್ಷ, ಮಾನ್ಯ ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜಿಯವರ ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಬಹಳ ವಿಶ್ವಾಸದಲ್ಲಿದ್ದಾರೆ, ಅವರಿಗೆ ದೊಡ್ಡ ನಿರಾಸೆ ಕಾದಿದೆ. ಜೂನ್ 4ನೇ ತಾರೀಖಿಗೆ ಮತ ಎಣಿಕೆ ಆದಾಗ ಕಾಂಗ್ರೆಸ್ ಮುಖಭಂಗ ಅನುಭವಿಸುತ್ತದೆ ಎಂದು ಭವಿಷ್ಯ ನುಡಿದರು. ನಮ್ಮ ಗೆಲುವನ್ನು ತಡೆಯುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದ ಅವರು, ನಿಸ್ಸಂಶಯವಾಗಿ ಬಿಜೆಪಿ ಹಾಗೂ ಜೆಡಿಎಸ್ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದರು. ಅವರು ನಂಬಿದ ಗ್ಯಾರೆಂಟಿ ಅವರಿಗೆ ಕೈಕೊಡುತ್ತದೆ ಎಂದ ಅವರು, ಮತದಾರರು ದೇಶದ ಅಭಿವೃದ್ಧಿಯನ್ನು ಮೆಚ್ಚಿ, ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದರು.
    ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರ ಅಂತಿಮ ಹೆಸರುಗಳು ಇವತ್ತು ಘೋಷಣೆಯಾಗಬಹುದು ಎಂದ ಅವರು, ಈ ಬಗ್ಗೆ ರಾಷ್ಟ್ರಾಧ್ಯಕ್ಷರ ಜೊತೆ ಚರ್ಚೆ, ಸಮಾಲೋಚನೆ ಮಾಡಿದ್ದೇನೆ. ಅನೇಕ ಹೆಸರುಗಳ ಬಗ್ಗೆ ಪ್ರಸ್ಥಾಪ ಆಗಿದೆ. ನಾವು ಇವತ್ತು ನಿರ್ಧಾರವನ್ನು ಘೋಷಣೆ ಮಾಡ್ತೇವೆ. ಕಾಂಗ್ರೆಸ್ಸು ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡ್ತಿದೆ. ಬಹಳ ದಿನ ಅವರ ಆಟಗಳು ನಡೆಯೋದಿಲ್ಲ. ರಾಹುಲ್ ಗಾಂಧಿ ಏನು, ಅವರ ವ್ಯಕ್ತಿತ್ವ ಏನು, ಅವರ ನಾಯಕತ್ವ ಏನು ಎಷ್ಟರ ಮಟ್ಟಿಗೆ ಎಲ್ಲಾ ಕೂಡಾ ದೇಶದ ಜನ, ರಾಜ್ಯದ ಜನ ನೋಡಿದ್ದಾರೆ. ಯಾವುದೇ ಬೂಟಾಟಿಕೆ ಜನರ ಮನಸ್ಸನ್ನು ಗೆಲ್ಲೋದಿಕ್ಕ ಸಾಧ್ಯವಿಲ್ಲ ಎಂದರು.
    ಈ ಸಂದರ್ಭ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ ಶೆಟ್ಟಿ, ಮಂಗಳೂರು ಪ್ರಭಾರಿ ರಾಜೇಶ್ ಕಾವೇರಿ ಹಾಜರಿದ್ದರು.

  • ಶಿರೂರು : ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ವಿನಾಯಿತಿ ಕಡಿತ : ಗ್ರಾಮಸ್ಥರಿಂದ ಮನವಿ

    ಶಿರೂರು : ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ವಿನಾಯಿತಿ ಕಡಿತ : ಗ್ರಾಮಸ್ಥರಿಂದ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಶಿರೂರು ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ಟೋಲ್ ರಿಯಾಯತಿ ಮುಂದುವರಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ನೀಡಲಾಯಿತು. ಟೋಲ್ ಆರಂಭಿಸುವ ವೇಳೆ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆ ಸಭೆ ನಡೆಸಿ ಶಿರೂರಿನ 5 ಕಿ.ಮೀ ವ್ಯಾಪ್ತಿಯ ವಾಹನಗಳಿಗೆ ಟೋಲ್ ರಿಯಾಯತಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಕಳೆದೊಂದು ವಾರದಿಂದ ಶಿರೂರಿನ ಸ್ಥಳೀಯ ವಾಹನಗಳಿಗೆ ತಿಂಗಳ ಪಾಸ್ ಮಾಡಿಸಿಕೊಳ್ಳಲು ಟೋಲ್ ಸಿಬ್ಬಂದಿಗಳು ತಿಳಿಸಿದ್ದಾರೆ. ಈಗಾಗಲೆ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಈ ಕುರಿತು ಹೋರಾಟ ಆರಂಭವಾಗಿದ್ದು ಶಿರೂರಿನಲ್ಲಿ ಯಾವುದೇ ಕಾರಣಕ್ಕೂ ಟೋಲ್ ರಿಯಾಯತಿ ಹಿಂಪಡೆಯಬಾರದು ಮತ್ತು ಈ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿ ನಿರ್ಧಾರ ತೆಗೆದುಕೊಳ್ಳಬೇಕು. ಒಂದೊಮ್ಮೆ ಏಕಾಎಕಿ ನಿರ್ಣಯ ಕೈಗೊಂಡರೆ ಸಾರ್ವಜನಿಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

    ಇದಲ್ಲದೇ ಮಳೆಗಾಲ ಸಮೀಪಿಸುತ್ತಿದ್ದು ಕಾಮಗಾರಿ ನಡೆಸುತ್ತಿರುವ ಕಂಪೆನಿ ಯಾವುದೇ ಮುಂಜಾಗೃತೆ ಕೈಗೊಂಡಿಲ್ಲ. ಕಳೆದ ವರ್ಷ ಹೆದ್ದಾರಿ ಪಕ್ಕದ ಹೊಲ ಗದ್ದೆಗಳು ಮತ್ತು ಮನೆಗಳಿಗೆ ನೀರು ನುಗ್ಗಿತ್ತು. ಹೆದ್ದಾರಿಯಲ್ಲಿ ಮಳೆ ನೀರು ನಿಲ್ಲುವುದರಿಂದ ಅಪಘಾತಗಳು ಹೆಚ್ಚುತ್ತಿದೆ. ಇವುಗಳನ್ನು ಶೀಘ್ರವಾಗಿ ಸರಿಪಡಿಸಬೇಕು. ಶಿರೂರು ಟೋಲ್‌ಗೇಟ್‌ನಲ್ಲಿ ಉದ್ಯೋಗ ಹಾಗೂ ಇತರ ಅವಕಾಶಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಬೀದಿ ದೀಪ, ಸರ್ವಿಸ್ ರಸ್ತೆ, ಸೂಚನಾ ಫಲಕ, ಬಸ್ ನಿಲ್ದಾಣ ಬೇಡಿಕೆ, ಬಪ್ಪನಬೈಲು ಭಾಗದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು, ಸಾರ್ವಜನಿಕರು ಮತ್ತು ಸ್ಥಳೀಯರ ಜೊತೆ ಟೋಲ್ ಸಿಬಂಧಿಗಳು ಸೌಜನ್ಯದಿಂದ ವರ್ತಿಸುವುದು, ಪಂಚಾಯತ್ ಮನವಿಗಳಿಗೆ ಸ್ಪಂದಿಸಬೇಕು. ಒಂದು ತಿಂಗಳೊಳಗೆ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬುದಾಗಿ ಮನವಿಯಲ್ಲಿ ಆಗ್ರಹಿಸಲಾಗಿದೆ.

    ಐ.ಆರ್.ಬಿ ಟೋಲ್ ವ್ಯವಸ್ಥಾಪಕ ರಾಜನ್ ನಾಯರ್ ರವರಿಗೆ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರೂರಿನ ವಿವಿಧ ಪ್ರಮುಖರು, ಗ್ರಾ.ಪಂ ಉಪಾಧ್ಯಕ್ಷರು, ಗ್ರಾ.ಪಂ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಆರಕ್ಷಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಹಾಜರಿದ್ದರು.

  • ಯಡಮೊಗೆ ರಾಂಪೈಜೆಡ್ಡುವಿಗೆ ಕಾಲುಸಂಕ ನಿರ್ಮಾಣ ಬಹುತೇಕ ಪೂರ್ಣ

    ಯಡಮೊಗೆ ರಾಂಪೈಜೆಡ್ಡುವಿಗೆ ಕಾಲುಸಂಕ ನಿರ್ಮಾಣ ಬಹುತೇಕ ಪೂರ್ಣ

    ಹಳೆಯ ಚಾಸಿಸ್ ಬಳಕೆಯ ಮೊದಲ ಕಾಲುಸಂಕ ಎನ್ನುವ ಹೆಗ್ಗಳಿಕೆ

    ಶಾಸಕ ಗುರುರಾಜ ಗಂಟಿಹೊಳೆ ಅವರ ಹೊಸದೊಂದು ಪರಿಕಲ್ಪನೆಯ ಕಾಲುಸಂಕ ನಿರ್ಮಾಣ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರ ಹೊಸದೊಂದು ಪರಿಕಲ್ಪನೆಯ ಕಾಲುಸಂಕ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿದೆ. ಲಾರಿ, ಬಸ್ಸಿನ ಹಳೆಯ ಚಾಸಿಸ್ ಗಳನ್ನು ಪ್ರಮುಖ ಆಧಾರವನ್ನಾಗಿ ಬಳಿಸಿ ಕಾಲುಸಂಕ ನಿರ್ಮಾಣ ಮಾಡುವ ಹೊಸ ಯೋಜನೆ ಇದೀಗ ಹೊಸಂಗಡಿ ಸಮೀಪದ ಯಡಮೊಗೆಯ ರಾಂಪೈಜೆಡ್ಡು ಎಂಬಲ್ಲಿ ಮೊದಲ ಕಾಲುಸಂಕ ನಿರ್ಮಾಣವಾಗುತ್ತಿದೆ.

    ಯಡಮೊಗೆ ಗ್ರಾಮಪಂಚಾಯತ್ ನಲ್ಲಿ ರಾಂಪೈಜೆಡ್ಡು ಎನ್ನುವ ಗ್ರಾಮಾಂತರ ಪ್ರದೇಶವಿದೆ. ಇಲ್ಲಿಗೆ ಯಡಮೊಗೆ ಕುಮ್ಟೆಬೇರುವಿನಿಂದ ಬರಲು ಹೊಳೆ ಅಡ್ಡ ಬರುತ್ತದೆ. ಶತಶತಮಾನಗಳಿಂದಲೂ ರಾಂಪೈಜೆಡ್ಡುವಿಗೆ ಹೋಗಲು ಅಲ್ಲಿನ ಜನ ಕಾಲುಸಂಕ ನಿರ್ಮಾಣ ಮಾಡಿಕೊಂಡು ನದಿ ದಾಟುತ್ತಿದ್ದರು. ಅತ್ಯಂತ ವೇಗವಾಗಿ ಹರಿಯುವ ನದಿಗೆ ಸುಮಾರು 30 ಅಡಿ ಎತ್ತರದಲ್ಲಿ ಮರದ ದಿಮ್ಮಿಗಳನ್ನು ಬಳಸಿ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಅಪಾಯಕಾರಿಯಾದ ಈ ಕಾಲುಸಂಕದಲ್ಲಿ ಮಳೆಗಾಲದಲ್ಲಿ ಹೋಗುವುದೇ ಒಂದು ಸವಾಲು. ಅತ್ಯಂತ ಕಷ್ಟದಲ್ಲಿ ರಾಂಪೈಜೆಡ್ಡುವಿನ ಜನ ನದಿ ದಾಟುತ್ತಿದ್ದರು. ಅನಾರೋಗ್ಯ ಪೀಡಿತರು, ಶಾಲೆಗೆ ಹೋಗುವ ಮಕ್ಕಳು ಈ ಅಪಾಯಕಾರಿ ಕಾಲುಸಂಕದಲ್ಲಿಯೇ ಕಾಲುಸಂಕ ದಾಟಿ ಬರಬೇಕಿತ್ತು.

    ಶಾಸಕ ಗುರುರಾಜ ಗಂಟಿಹೊಳೆಯವರು ಚಾಸಿಸ್ ಬಳಿಸಿ ನಿರ್ಮಿಸುವ ಅಪರೂಪದ ಕಾಲುಸಂಕ ಉಡುಪಿ ಜಿಲ್ಲೆಗೆ ಮೊದಲನೇದಾಗಿ ಇದೇ ಯಡಮೊಗೆ ಗ್ರಾಮದ ರಾಂಪೈಜೆಡ್ಡುವಿನಲ್ಲಿ ನಿರ್ಮಾಣವಾಗುತ್ತಿದೆ. ಬಹುಶಃ ಇದು ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದು.

    ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರು ಮೂಲದ ಅರುಣಾಚಲಂ ಟ್ರಸ್ಟ್ ಸಹಯೋಗ, ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಳೆಯ ಲಾರಿ ಬಸ್ಸಸುಗಳ ಚಾಸಿಸ್ ಬಳಸಿ ಕಡಿಮೆ ಖರ್ಚಿನಲ್ಲಿ ಕಾಲು ಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೈಂದೂರು ಕ್ಷೇತ್ರದ 50 ಕಡೆ ಇಂತಹ ಕಾಲುಸಂಕ ನಿರ್ಮಾಣವಾಗುತ್ತಿದೆ. ಪ್ರಾರಂಭಿಕವಾಗಿ ಬೈಂದೂರು ಕ್ಷೇತ್ರದ ಮೂರು ಕಡೆ ಕಾಲುಸಂಕ ನಿರ್ಮಾಣಗೊಳ್ಳುತ್ತಿದೆ. ರಾಂಪೈಜೆಡ್ಡುವಿನಲ್ಲಿ ಈಗಾಗಲೇ ಮುಕ್ಕಾಲು ಭಾಗ ಕಾಲುಸಂಕ ನಿರ್ಮಾಣಗೊಂಡಿದೆ. ಮೂರು ಫಿಲ್ಲರ್‍ಗಳ ನಿರ್ಮಾಣ ಮಾಡಿ ನೇರವಾಗಿ ಚಾಸಿಸ್‍ಗಳನ್ನು ಅಳವಡಿಸಿ ಅದಕ್ಕೆ ಆಧಾರವಾಗಿ ಅಡ್ಡ ಪಟ್ಟಿ ಜೋಡಿಸುವ ಕೆಲಸ ಆಗಿದೆ. ಹ್ಯಾಂಗ್ಲರ್, ಫ್ಲೇಟ್ ಅಳವಡಿಕೆ ಕಾರ್ಯ ಶೀಘ್ರ ಮುಗಿಯಲಿದೆ. ಸೈಡ್ ಗಾರ್ಡ್ ಅಳವಡಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಸುಮಾರು 60 ಅಡಿಗೂ ಹೆಚ್ಚು ಉದ್ದವಾದ ಕಾಲುಸಂಕ ಇದಾಗಿದೆ. 20 ಅಡಿ ಎತ್ತರಕ್ಕೆ ಸೇತುವೆ ನಿರ್ಮಾಣ ಮಾಡಲಾಗಿದೆ.

    ಹೊಳೆಯಿಂದಲೇ ಮೂರು ಫಿಲ್ಲರ್ ಗಳ ನಿರ್ಮಾಣ ಮಾಡಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಚಾಸಿಸ್‍ಗಳು ಬಲಿಷ್ಟವಾಗಿದ್ದು ಸುಮಾರು 8ಕ್ವಿಂಟಾಲ್ ಗೂ ಅಧಿಕ ಭಾರವನ್ನು ಹೊರುವ ಸಾಮಾಥ್ರ್ಯವಿದೆ. ರಿಕ್ಷಾ, 810, ಸ್ಯಾಂಟ್ರೋ ಕಾರುಗಳು ಹೋಗುವಷ್ಟು ಅಗಲ ಇದ್ದರೂ ಕೂಡಾ ಕಾಲುಸಂಕದ ಸುರಕ್ಷತೆಯ ದೃಷ್ಟಿಯಿಂದ ಗ್ರಾಮಸ್ಥರು ಪಾದಚಾರಿಗಳು ಹಾಗು ದ್ವಿಚಕ್ರ ವಾಹನಗಳಿಗೆ ಅವಕಾಶ ಕೊಟ್ಟರೆ ಸಾಕು ಎನ್ನುತ್ತಾರೆ. ಅಂದರೆ ಸಂಪರ್ಕದ ಮಹತ್ವ ಇಲ್ಲಿನ ಜನ ಅರ್ಥ ಮಾಡಿಕೊಂಡಿದ್ದಾರೆ.

    ಇನ್ನೊಂದು ವಾರದಲ್ಲಿ ಈ ವಿನೂತನ ಕಾಲು ಸಂಕ ಸಂಚಾರಕ್ಕೆ ಮುಕ್ತವಾಗಲಿದೆ. ರಾಂಪೈಜೆಡ್ಡುವಿನ ಜನರಲ್ಲಿ ಖುಷಿ ಮನೆಮಾಡಿದೆ. ಶಾಶ್ವತ ವಲ್ಲದಿದ್ದರೂ ತತ್ಕಾಲಿಕವಾದರೂ ಕಾಲುಸಂಕ ನಿರ್ಮಾಣವಾಯಿತಲ್ಲ ಎನ್ನುವ ಸಂತೋಷವಿದೆ. ಈಗ ಅಕಾಲಿಕವಾಗಿ ಸುರಿಯುತ್ತಿರುವ ಮುಂಗಾರುಪೂರ್ವ ಮಳೆ ಬಿಟ್ಟರೆ ವಂಡ್ಸೆ ಹಾಗೂ ತೊಂಬಟ್ಟು-ಕಬ್ಬಿನಾಲೆಯ ಕಾಲುಸಂಕಗಳ ಕಾಮಗಾರಿ ಪೂರ್ಣವಾಗುತ್ತದೆ ಎನ್ನಲಾಗುತ್ತಿದೆ.

  • ಉಡುಪಿ :ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು

    ಉಡುಪಿ :ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ ರೇಜು

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಸರ್ಕಾರದ ಪ್ರಸಕ್ತ ಸಾಲಿಗೆ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕ್ರಿಯಾಯೋಜನೆಗಳ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವುದರೊಂದಿಗೆ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಸೂಚನೆ ನೀಡಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

    ಮಳೆ, ಗಾಳಿ, ಸಿಡಿಲು ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪಗಳಿಂದ ಜೀವಹಾನಿ ಉಂಟಾಗದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು. ವಿಕೋಪ ಸಂದರ್ಭದಲ್ಲಿ ಜನಸಾಮಾನ್ಯರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.

    ಮಳೆಗಾಲದಲ್ಲಿ ನೀರು ಹರಿಯುವ ಚರಂಡಿ ಹಾಗೂ ತೋಡುಗಳಲ್ಲಿ ಕಸದರಾಶಿಗಳು ತುಂಬಿ ಮಳೆಯ ನೀರು ಹರಿಯದೇ ಕೃತಕ ನೆರೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಕುಡಿಯುವ ನೀರಿನ ಸಂಪರ್ಕಗಳಲ್ಲಿಯೂ ಸಹ ಮಿಶ್ರಣವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದಾಗಿದ್ದು, ಇದನ್ನು ತಡೆಯಲು ಜಿಲ್ಲೆಯ ಎಲ್ಲಾ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯವಿರುವ ಕೆಲಸ ಕಾರ್ಯಗಳನ್ನು ಕೂಡಲೇ ಕೈಗೊಳ್ಳಬೇಕು ಎಂದ ಅವರು, ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ನಂತರ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದರು.

    ಸಾಮಾನ್ಯವಾಗಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಇವುಗಳ ತಡೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಇವುಗಳ ಚಿಕಿತ್ಸೆಗೆ ಬೇಕಾಗುವ ಔಷಧ, ಚುಚ್ಚುಮದ್ದು ಇತ್ಯಾದಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳು ಉತ್ಪತ್ತಿ, ಹರಡುವಿಕೆ, ಅವುಗಳ ಲಕ್ಷಣ, ಚಿಕಿತ್ಸೆ ಸೇರಿದಂತೆ ಮತ್ತಿತರ ಮಾಹಿತಿಗಳನ್ನು ನೀಡಬೇಕು ಎಂದರು.

    ಮಳೆಗಾಲದಲ್ಲಿ ಜೋರು ಗಾಳಿಗೆ ಮರಗಳು ರಸ್ತೆಯ ಮೇಲೆ ಉರುಳಿ ಬಿದ್ದು, ಅವಘಡಗಳು ಉಂಟಾಗುತ್ತವೆ. ರಸ್ತೆ ಬದಿಯ ಅಪಾಯಕಾರಿ ಆಗಿರುವಂತಹ ಮರಗಳನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಗುರುತಿಸಿ, ಅವುಗಳ ತೆರವುಗೊಳಿಸುವ ಕಾರ್ಯವನ್ನು ಶೀಘ್ರದಲ್ಲಿಯೇ ಕೈಗೊಳ್ಳಬೇಕು. ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೂಡಲೇ ಕೈಗೊಳ್ಳುವುದರೊಂದಿಗೆ ಸಾರ್ವಜನಿಕ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಳೆದ ಏಪ್ರಿಲ್ ನಿಂದ ಈವರೆಗೆ 876 ವಿದ್ಯುತ್ ಕಂಬಗಳು ಗಾಳಿ ಮಳೆಗೆ ಉರುಳಿ ಬಿದ್ದಿವೆ. ಇವುಗಳ ಪ್ರಮಾಣ ಹೆಚ್ಚು ಇದೆ. ಇಷ್ಟೊಂದು ಪ್ರಮಾಣದಲ್ಲಿ ಹಾನಿ ಉಂಟಾಗಲು ಕಾರಣವನ್ನು ಕಂಡುಕೊಳ್ಳಬೇಕು. ಒಂದೊಮ್ಮೆ ಗುಣಮಟ್ಟದ ಕೊರತೆಯಿಂದ ಆಗಿರುವ ಬಗ್ಗೆ ಪರಿಶೀಲಿಸಬೇಕು ಎಂದ ಅವರು, ಮಳೆ-ಗಾಳಿಯಿಂದಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡರೆ ತಕ್ಷಣವೇ ಪುನರ್ ಸಂಪರ್ಕ ಕಲ್ಪಿಸುವ , ನಿರ್ವಹಣೆ ಕಾರ್ಯ ತುರ್ತಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಶಾಲೆಗಳು ಪುನರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು. ಶಾಲಾ ಕಟ್ಟಡಗಳು ದುರಸ್ಥಿ ಕೈಗೊಳ್ಳುವುದು ಅಗತ್ಯವಿದ್ದಲ್ಲಿ ತಕ್ಷಣದಲ್ಲಿಯೇ ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದ್ದಕ್ಕೆ ಅಭಿನಂದನೆ ತಿಳಿಸಿದರು.

    ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಿಂಡಿ ಆಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆರುವುಗೊಳಿಸುವ ಕಾರ್ಯ ಈ ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

    ರಾಷ್ಟ್ರೀಯಯ ಹೆದ್ದಾರಿ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ನೀರು ನಿಂತು ರಸ್ತೆ ಅಪಘಾತಕ್ಕೆ ಕಾರಣವಾಗುತ್ತವೆ. ಹೀಗಾಗದಂತೆ ಅವಶ್ಯವಿರುವ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕು ಎಂದ ಅವರು, ರಸ್ತೆ ಹೆದ್ದಾರಿ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದರು.

    ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಕಾರ್ಯಗಳನ್ನು ಆದಷ್ಟು ಶೀಘ್ರದಲ್ಲಿಯೇ ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು. ವರಾಹಿ ಡ್ಯಾಂನಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾಮಗಾರಿಯನ್ನು ಸಹ ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸಲು ಸೂಚನೆ ನೀಡಿದರು.

    ಅನ್ನಭಾಗ್ಯ ಯೋಜನೆಯಡಿ ಕಳೆದ ಏಪ್ರಿಲ್, ಮೇ ಮಾಸಗಳಲ್ಲಿ ಅಕ್ಕಿ ವಿತರಣೆ ಮಾಡಿರುವ ಬಗ್ಗೆ ಹಾಗೂ ಫಲಾನುಭವಿಗಳ ಖಾತೆಗೆ ಹಣ ವಿತರಣೆ ಆಗದಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಡಿ.ಬಿ.ಟಿ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು. ಯುವನಿಧಿ ಯೋಜನೆಯಡಿ ಪದವೀಧರರಿಗೆ ಸ್ಟೆöÊಫಂಡ್ ನೀಡುತ್ತಿರುವ ಬಗ್ಗೆ ಹಾಗೂ ಹೊಸ ನೋಂದಣಿಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲು ಕ್ರಮ ವಹಿಸುವಂತೆ ತಿಳಿಸಿದರು.

    ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆಯಲ್ಲಿ ನೀಡುತ್ತಿರುವ ಆಹಾರ ಪದಾರ್ಥಗಳ ವಿವರಣೆ ಹಾಗೂ ಅವುಗಳ ಸೇವನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸ್ಥಳೀಯವಾಗಿ ಹೆಸರುಕಾಳು ಹಾಗೂ ಚಿಕ್ಕಿಯ ಬಗ್ಗೆ ಹೆಚ್ಚು ಬೇಡಿಕೆ ಇದೆ. ಮುಂದಿನ ದಿನಗಳನ್ನು ಇವುಗಳನ್ನು ಒದಗಿಸುವ ಬಗ್ಗೆ ಮುಂದಾಗಬೇಕು ಎಂದರು.

    ಜಿಲ್ಲೆಯಲ್ಲಿರುವ ತೋಟಗಾರಿಕೆ ಇಲಾಖೆಯ ಜಮೀನುಗಳು ಪಾಳು ಬಿದ್ದಿವೆ. ಅವುಗಳ ನಿರ್ವಹಣೆ ಮಾಡಲು ಸ್ಥಳೀಯವಾಗಿರುವ ಮಹಿಳಾ ಸಂಘಗಳ ಅಥವಾ ಸಂಜೀವಿನಿ ಸಂಘಗಳಿಗೆ ನಿರ್ವಹಣೆ ಮಾಡಿ, ಸೂಕ್ತ ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದರು.

    ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅವುಗಳ ಪ್ರಾರಂಭಕ್ಕೆ ಅಗತ್ಯವಿರುವ ಕಟ್ಟಡ ಸೇರಿದಂತೆ ಮತ್ತಿತರ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಪೂರ್ವ ತಯಾರಿ ಮಾಡಿಕೊಂಡು ಪ್ರಸಕ್ತ ಸಾಲಿನ ಆರಂಭದಿಂದಲೇ ಚಾಲ್ತಿ ಆಗುವಂತೆ ನಿಗಾವಹಿಸಬೇಕು ಎಂದರು.

    ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ, ಪ್ರಕೃತಿ ವಿಕೋಪ ನಿರ್ವಹಣೆಗೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳು, ಮುಂಗಾರು ಹಂಗಾಮಿಗೆ ರಸಗೊಬ್ಬರ ದಾಸ್ತಾನು, ಬಿತ್ತನೆ ಬೀಜ ರೈತರಿಗೆ ಸರಬರಾಜು ಮಾಡಲು ಕೈಗೊಂಡಿರುವ ಕ್ರಮಗಳು ಸೇರಿದಂತೆ ಮತ್ತಿತರ ವಿವರಗಳನ್ನು ಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಸಹಾಯಕ ಕಮೀಷನರ್ ರಶ್ಮಿ, ವನ್ಯಜೀವಿ ವಿಭಾಗದ ಡಿಎಫ್‌ಓ ಶಿವರಾಮ ಎಂ ಬಾಬು, ಡಿಎಫ್‌ಓ ಗಣಪತಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಇ.ಓ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕೋಟ ಪಂಚವರ್ಣ ಸಂಸ್ಥೆಯ ಹಸಿರು ಅಭಿಯಾನಕ್ಕೆ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರದಿಂದ ಗಿಡ ಹಸ್ತಾಂತರ

    ಕೋಟ ಪಂಚವರ್ಣ ಸಂಸ್ಥೆಯ ಹಸಿರು ಅಭಿಯಾನಕ್ಕೆ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರದಿಂದ ಗಿಡ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಸಮುದ್ಯತಾ ಗ್ರೂಪ್ಸ್ ಕೋಟ ಇವರುಗಳ ಸಹಯೋಗದೊಂದಿಗೆ ಪ್ರತಿವರ್ಷ ಜೂನ್‍ನಿಂದ ಅಗಸ್ಟ್‌ ವರೆಗೆ ನಡೆಯುವ ಪರಿಸರ ಸ್ನೇಹಿ ಹಸಿರು ಅಭಿಯಾನಕ್ಕೆ ಸುವರ್ಣ ಎಂಟರ್‌ಪ್ರೈಸಸ್ ಬ್ರಹ್ಮಾವರ, ಗೀತಾನಂದ ಫೌಂಡೇಶನ್ ಮಣೂರು ಉಚಿತ ಗಿಡ ವಿತರಿಸುತ್ತಿದ್ದು ಇದರ ಭಾಗವಾಗಿ ಬ್ರಹ್ಮಾವರ ಸುವರ್ಣ ಎಂಟರ್ಪ್ರೈಸ್ ಮಾಲಿಕ ಮಧುಸೂದನ್ ಹೇರೂರು ಒಂದು ಸಾವಿರ ಅಧಿಕ ಪಂಚವರ್ಣ ಸಂಸ್ಥೆಗೆ ನೀಡಲಿದ್ದು ಸಾಂಕೇತಿಕವಾಗಿ 150ಗಿಡಗಳನ್ನು ಮಂಗಳವಾರ ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟರವರಿಗೆ ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮಧುಸೂದನ್ ಹೇರೂರು ಪರಿರದ ಬಗ್ಗೆ ಅಪಾರ ಕಾಳಜಿ ಇರುವ ನಿಮ್ಮ ಸಂಸ್ಥೆ ಸಾಕಷ್ಟು ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಭಾಗಗಳಲ್ಲಿ ನೆಟ್ಟು ಪೂಷಿಸುವ ಕೆಲಸ ಮಾಡುತ್ತಿದ್ದಿರಿ ಅದೇ ರೀತಿ ನಮ್ಮ ಸಂಸ್ಥೆ ಉಚಿತವಾಗಿ 10ಸಾವಿರ ಅಧಿಕ ಗಿಡವನ್ನು ಜಯಂಟ್ಸ್ ಕ್ಲಬ್ ಬ್ರಹ್ಮಾವರ, ಭಾರತೀಯ ಜನೌಷಧ ಕೇಂದ್ರ ಬ್ರಹ್ಮಾವರ ಇವರಗಳ ಮೂಲ ಕಹಸ್ತಾಂತರಿಸಲಿದ್ದೇವೆ ಪರಿಸರ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು ಆಗಮಾತ್ರ ಸಮೃದ್ಧ ಪರಿಸರ ಕಟ್ಟಲು ಸಾಧ್ಯವಿದೆ ಎಂದರು.

    ಈ ವೇಳೆ ಪಂಚವರ್ಣ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಸುಧೀಂದ್ರ ಜೋಗಿ, ಸದಸ್ಯರಾದ ಕಾರ್ತಿಕ್ ಎನ್, ಮಹೇಶ್ ಬೆಳಗಾವಿ, ಸುಧೀರ್ ಪೂಜಾರಿ ಇದ್ದರು.

  • ಕೋಟ ಮೂರ್ತೆದಾರರ ಸಹಕಾರಿ ಸಂಘ ಮಹಾಸಭೆ – ರೂ.302 ಕೋಟಿ ವ್ಯವಹಾರ, ರೂ.1.06 ಕೋಟಿ ನಿವ್ವಳ ಲಾಭ

    ಕೋಟ ಮೂರ್ತೆದಾರರ ಸಹಕಾರಿ ಸಂಘ ಮಹಾಸಭೆ – ರೂ.302 ಕೋಟಿ ವ್ಯವಹಾರ, ರೂ.1.06 ಕೋಟಿ ನಿವ್ವಳ ಲಾಭ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮೂರ್ತೆದಾರರ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 302 ಕೋಟಿ ರೂ. ವ್ಯವಹಾರ ನಡೆಸಿ ರೂ.1.06 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. 12 ಡಿವಿಡೆಂಡ್‍ನ್ನು ಸಂಘದ ಕೋಟದ ಪ್ರಧಾನ ಕಛೇರಿಯ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿದ ಸಂಘದ 33ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಘೋಷಿಸಿದರು.

    ಸಂಘವು ಕೋಟ, ಬಾರ್ಕೂರು, ಸಾಸ್ತಾನ, ಕೊಕ್ಕರ್ಣೆ, ಉಡುಪಿ-ಪುತ್ತೂರು, ಹೂಡೆ ಸೇರಿದಂತೆ ಸಂಘದ ಕಾರ್ಯವ್ಯಾಪ್ತಿಯಲ್ಲಿ 6 ಬ್ಯಾಕಿಂಗ್ ಶಾಖೆಗಳನ್ನು ಹೊಂದಿದ್ದು, ಶೀಘ್ರ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ಸಂಘವು 13124 ಸದಸ್ಯರ ಬಲ ಹೊಂದಿದ್ದು ರೂ. 1.35 ಕೋಟಿ ಪಾಲು ಬಂಡವಾಳ, 71.32 ಕೋಟಿ ರೂ. ಠೇವಣಿ, 54.04 ಕೋಟಿ ರೂ. ಹೊರಬಾಕಿ ಸಾಲ ಇದ್ದು, ಸಂಘದಿಂದ ರೂ. 27.06 ಕೋಟಿ ವಿವಿಧ ಸಹಕಾರಿ ಸಂಘ ಹಾಗೂ ಬ್ಯಾಂಕ್‍ನಲ್ಲಿ ವಿನಿಯೋಗಿಸಿದೆ. ಹಾಗೂ ವಿವಿಧ ನಿಧಿಗಳು ರೂ. 10.09 ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 83.29 ಕೋಟಿಗೂ ಮೀರಿದೆ. ಸತತ 28 ವರ್ಷಗಳಿಂದ ‘ಎ’ ತರಗತಿ ಆಡಿಟ್ ವರ್ಗೀಕರಣ ಪಡೆದಿರುತ್ತದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರಲ್ಲದೆ. ಸಂಘದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್, ಆರ್.ಟಿ.ಜಿ.ಎಸ್, ನೆಫ್ಟ್, ಇ-ಸ್ಟ್ಯಾಂಪಿಂಗ್ ಸೌಲಭ್ಯ ಹಾಗೂ ಆರ್.ಟಿ.ಸಿ ವಿತರಿಸಲಾಗುತ್ತಿದೆ. ಸಂಘವು ಕೋಟದಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಛೇರಿ ಹಾಗೂ ವಾಣಿಜ್ಯ ಸಂಕೀರ್ಣ ಹೊಂದಿದ್ದು, ಸಂಘದ ಸಾಸ್ತಾನ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘವು ಮಹಿಳಾ ಸಶಕ್ತೀಕರಣಕ್ಕಾಗಿ 277 ಕಲ್ಪತರು ಮಹಿಳಾ ಸ್ವಸಹಾಯ ಗುಂಪುಗಳನ್ನು ಪ್ರಾಯೋಜಿಸಿದ್ದು ರೂ. 6.38 ಕೋಟಿ ಸಾಲ ಸೌಲಭ್ಯ ಒದಗಿಸಿದೆ ಎಂದರು.

    ವಾರ್ಷಿಕ ಮಹಾಸಭೆಯಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಮಾಹಿತಿ ನೀಡಿ ಸಂಘ ಕೇಂದ್ರ ಕಛೇರಿ ಕೋಟದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸಭಾಭವನ ನಿರ್ಮಿಸಿದ್ದು ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಶಿಫಾರಸ್ಸಿನಂತೆ ರೂ. 50 ಲಕ್ಷ ಅನುದಾನ ದೊರೆತಿದ್ದು ಸಭಾಭವನ ನಿರ್ಮಾಣ ಪೂರ್ಣಗೊಂಡ ಮಾಹಿತಿ ನೀಡಿದರು. ಸಂಘವು ರೂ. 8.50 ಕೋಟಿ ಸ್ಥಿರಾಸ್ತಿ ಮತ್ತು ಕಟ್ಟಡ, ರೂ. 5.10 ಕೋಟಿ ಚರಾಸ್ತಿ ಹೊಂದಿದ್ದು ಕೋಟದಲ್ಲಿ ಕೇಂದ್ರ ಕಛೇರಿಯ ಸ್ವಂತ ಕಟ್ಟಡ ರೂ. 4.00 ಕೋಟಿ ವೆಚ್ಚದಲ್ಲಿ ವಿಸ್ತರಣೆಗೊಂಡಿದ್ದು, ತಳಅಂತಸ್ತಿನ ಪಾರ್ಕಿಂಗ್, ವಾಣಿಜ್ಯ ಸಂಕೀರ್ಣ ಸದ್ಯದಲ್ಲಿ ಉಧ್ಘಾಟನೆಗೊಳ್ಳಲಿದೆ. ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸದಸ್ಯರ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕ ವಿತರಣೆ, ಉನ್ನತ ವ್ಯಾಸಂಗ ನಿಧಿಯಿಂದ ಧನ ಸಹಾಯ, ಸಂಘದ ಸದಸ್ಯರಿಗೆ ಸಾಮೂಹಿಕ ವಿಮೆ, ಮರಣ ನಿಧಿ, ಸದಸ್ಯರ ಸಹಾಯಕ ನಿಧಿ ಮೂಲಕ ಅನಾರೋಗ್ಯಕ್ಕೆ ಒಳಗಾದ ಸದಸ್ಯರಿಗೆ ಸಹಾಯಹಸ್ತ, ಸದಸ್ಯರ ಕ್ಷೇಮಾಭಿವೃದ್ಧಿ ನಿಧಿಯಿಂದ ರೂ. 1 ಲಕ್ಷ ವೈಯಕ್ತಿಕ ಸಾಲ ಹಾಗೂ ಸ್ವಸಹಾಯ ಗುಂಪಿನ ಸಾಲ ಪಡೆದ ಸದಸ್ಯರು ಮೃತರಾದಲ್ಲಿ ಬಾಕಿ ಸಾಲದ ಮೊತ್ತದ ಶೇಕಡಾ 25ರಷ್ಟನ್ನು ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲಾಗುತ್ತಿದೆ ಎಂದು ವಾರ್ಷಿಕ ಮಹಾಸಭೆಯ ವರದಿಯಲ್ಲಿ ಜಗದೀಶ್ ಕೆಮ್ಮಣ್ಣು ತಿಳಿಸಿದರು.

    ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಯರಾಮ ಪೂಜಾರಿ ಬಾರ್ಕೂರು, ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ, ಪಿ.ಕೃಷ್ಣ ಪೂಜಾರಿ ಪಾರಂಪಳ್ಳಿ, ನಿರ್ದೇಶಕರಾದ ಜಿ. ಸಂಜೀವ ಪೂಜಾರಿ ಕೋಡಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ ಬಾರ್ಕೂರು, ಕೃಷ್ಣ ಪೂಜಾರಿ ಪಿ ಕೋಡಿ ಕನ್ಯಾಣ, ಪ್ರಭಾವತಿ ಡಿ. ಬಿಲ್ಲವ ಕೋಟ, ಭಾರತಿ ಎಸ್. ಪೂಜಾರಿ ಕರಿಕಲ್ ಕಟ್ಟೆ, ಉಪಸ್ಥಿತರಿದ್ದರು. ಸಂಘದ ಬಾರ್ಕೂರು ಶಾಖಾ ವ್ಯವಸ್ಥಾಪಕಿ ಶ್ರೀದೇವಿ ಕಲ್ಕೂರು ಪ್ರಾರ್ಥಿಸಿದರು, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕೃಷ್ಣ ವೇದಿಕೆಗೆ ಆಹ್ವಾನಿಸಿದರು, ಕೋಟ ಶಾಖೆಯ ವ್ಯವಸ್ಥಾಪಕ ದಿನೇಶ್ ಪೂಜಾರಿ ಬಾರ್ಕೂರು ಸ್ವಾಗತಿಸಿ, ಲೋಹಿತ್ ಜಿ. ಬಿ ವಂದಿಸಿದರು, ಶಾಖಾ ವ್ಯವಸ್ಥಾಪಕರುಗಳಾದ ಉದಯ ಪೂಜಾರಿ ಕೋಡಿ, ರಮೇಶ್ ಪೂಜಾರಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು.

  • ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪಾರಂಪಳ್ಳಿ ನರಸಿಂಹ ಐತಾಳ್

    ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪಾರಂಪಳ್ಳಿ ನರಸಿಂಹ ಐತಾಳ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪಾರಂಪಳ್ಳಿ ನರಸಿಂಹ ಐತಾಳ್ ಆಯ್ಕೆಯಾಗಿದ್ದಾರೆ.

    ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೃತ್ತಿ ಬದುಕಿನಲ್ಲಿ,ಜೀವನ ಚರಿತ್ರೆ, ಶಿಶು ಸಾಹಿತ್ಯ, ದಾಸ ಸಾಹಿತ್ಯ ಖಂಡ ಕಾವ್ಯ ಮಹಾಕಾವ್ಯ, ಕಿರುಕಾವ್ಯ, ರಂಗ ಸಾಹಿತ್ಯ, ಯಕ್ಷಗಾನ ಪ್ರಸಂಗ, ಕಥಾ ಸಾಹಿತ್ಯ, ಅನುಭವಕಥನ, ಚುಟುಕು, ಕನ್ನಡದಲ್ಲಿ ಪೂಜಾ ವಿಧಾನಗಳು, ಕಿರು ಕಾದಂಬರಿ, ವೈದಿಕ ಸಾಹಿತ್ಯ, ವಿಜ್ಞಾನ ಸಾಹಿತ್ಯ ಚಿಂತನೆಗಳ ಸಂಕಲನ , ಶ್ರೀ ಮಹಾವಿಷ್ಣು ಸುಪ್ರಭಾತ, ಮೊದಲಾದ ವಿವಿಧ ಪ್ರಕಾರಗಳ ಸಾಹಿತ್ಯ ಸೃಷ್ಟಿಯಿಂದ ಸಾಹಿತ್ಯ ಲೋಕದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿರುವ,
    ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ , ರಂಗಭೂಮಿಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವ ತರಬೇತಿದಾರರಾಗಿ, ಯಕ್ಷಗಾನ ಕಲಾವಿದರಾಗಿ ಅಪ್ಪಟ ಕನ್ನಡಾಭಿಮಾನಿಯಾಗಿ, ನಾಡು ನುಡಿಗೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.

    ಪಾರಂಪಳ್ಳಿ ನರಸಿಂಹ ಐತಾಳ್ ಇದೇ ಜೂನ್ ತಿಂಗಳ 11ನೆಯ ಮಂಗಳವಾರ ಪಾರಂಪಳ್ಳಿಯ ಶ್ರೀ ವಿಷ್ಣುಮೂರ್ತಿ ಸಭಾಭವನದಲ್ಲಿ ನಡೆಯಲಿರುವ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತ್ಯಿಕ ಕ್ಷೇತ್ರಕ್ಕೆ ಮುನ್ನುಡಿ ಬರೆಯಲಿದ್ದಾರೆ.

    ಇವರು ಭಾರತ ಸೇವಾದಳದ ಶಾಖಾನಾಯಕರಾಗಿ, ರಜತ ಪದಕದೊಂದಿಗೆ ಎರಡು ನಕ್ಷತ್ರಗಳ ಗೌರವಕ್ಕೆ ಪಾತ್ರರಾಗಿರುತ್ತಾರೆ. ಸಂಗೀತ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಐತಾಳರು ಘಟ, ಮೃದಂಗ, ಕೊಳಲು ಪಿಟೀಲು ಮೊದಲಾದ ಸಂಗೀತ ವಾದ್ಯಗಳ ಪರಿಜ್ಞಾನ ಹೊಂದಿರುತ್ತಾರೆ. ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿರುವ ಐತಾಳರು ಇಂದಿಗೂ ಪ್ರತಿಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳಿಗೆ ರಂಗ ಚಟುವಟಿಕೆಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.

  • ಕೋಟತಟ್ಟು – ಶಿಥಿಲಾವಸ್ಥೆಯಲ್ಲಿರುವ ಹಳೆಯ ನೀರಿನ ಟ್ಯಾಂಕ್ ತೆರವು

    ಕೋಟತಟ್ಟು – ಶಿಥಿಲಾವಸ್ಥೆಯಲ್ಲಿರುವ ಹಳೆಯ ನೀರಿನ ಟ್ಯಾಂಕ್ ತೆರವು

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಡುಕರೆ ಭಾಗದ ಶಿಥಿಲಾವಸ್ಥೆಯಲ್ಲಿರುವ ಸುಮಾರು 30 ರಿಂದ 35 ವರ್ಷ ಹಳೆಯ ನೀರಿನ ಟ್ಯಾಂಕ್ ಅನ್ನು ಯಾವುದೇ ರೀತಿಯ ಅನಾಹುತ ಸಂಭವಿಸಿದಂತೆ ಮುಂಜಾಗ್ರತ ಕ್ರಮವಹಿಸಿ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ.

    ಈ ಕಾರ್ಯದಲ್ಲಿ ಪಂಚಾಯತ್ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ,ಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು ಅವರಿಗೆ ಕಾರ್ಯದರ್ಶಿ ಸುಮತಿ ಅಂಚನ್ , ಸಿಬ್ಬಂದಿ ನವೀನ್ ಮತ್ತು ಬಾಬು ಪಿದ್ದರು ಇದೇ ವೇಳೆ ಕಾರ್ಯನಿರ್ವಹಿಸಿದ ಗುತ್ತಿಗೆದಾರರಿಗೆ ಮತ್ತು ನೀರು ಸರಬರಾಜು ಇಲಾಖೆಯ ಇಂಜಿನಿಯರ್ ಆಕಾಶ್ ಶೆಟ್ಟಿ ಕೃತಜ್ಞತೆ ಪಂಚಾಯತ್ ಸಲ್ಲಿಸಿತು.

  • ವೈದ್ಯ ಲೋಕಕ್ಕೆ ಸವಾಲೆಸೆದ ಕುಂದಾಪುರ ಮೂಲದ ಡಾ. ಎ.ಕೆ. ಇಸ್ತಿಯಾಕ್ ಅಹ್ಮದ್ : ಕೊಂಡಾಡಿದ ಗಲ್ಫ್ ಮಾಧ್ಯಮಗಳು – ಭಿನ್ನರಕ್ತ ಮಾದರಿಯ ಕಿಡ್ನಿ ಜೋಡಣೆ ಯಶಸ್ವಿ

    ವೈದ್ಯ ಲೋಕಕ್ಕೆ ಸವಾಲೆಸೆದ ಕುಂದಾಪುರ ಮೂಲದ ಡಾ. ಎ.ಕೆ. ಇಸ್ತಿಯಾಕ್ ಅಹ್ಮದ್ : ಕೊಂಡಾಡಿದ ಗಲ್ಫ್ ಮಾಧ್ಯಮಗಳು – ಭಿನ್ನರಕ್ತ ಮಾದರಿಯ ಕಿಡ್ನಿ ಜೋಡಣೆ ಯಶಸ್ವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ವೈದ್ಯ ಲೋಕಕ್ಕೆ ಸವಾಲಾಗಿರುವ ಎರಡು ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಸೇರಿದ ಮೂತ್ರ ಪಿಂಡಗಳನ್ನು ಜೋಡಿಸುವಲ್ಲಿ ಕುಂದಾಪುರ ಮೂಲದ ಡಾ. ಇಸ್ತಿಯಾಕ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ವೈದ್ಯ ಲೋಕದಲ್ಲಿ ತೀರಾ ಅಪರೂಪದ್ದಾಗಿರುವ ಎಬಿಒ ಹೊಂದಾಣಿಕೆಯಾಗದ ಅತ್ಯಂತ ಸಂಕೀರ್ಣವಾದ ಈ ಶಸ್ತ್ರ ಚಿಕಿತ್ಸೆಯನ್ನು ಅಬುದಾಭಿಯ ಖ್ಯಾತ ಆಸ್ಪತ್ರೆ ಬುರ್ಜೀಲ್ ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ನಡೆಸಲು ವೈದ್ಯ ಡಾ.ಇಸ್ತಿಯಾಕ್ ಮತ್ತು ತಂಡ ತೀರ್ಮಾನಿಸಿದ್ದಲ್ಲದೇ ಯಶಸ್ವಿಯಾಗಿರುವುದನ್ನು ಗಲ್ಫ್ ಮಾಧ್ಯಮಗಳು ಹೆಡ್ ಲೈನ್ ನಲ್ಲಿ ಬಣ್ಣಿಸಿವೆ.

    ತಮ್ಮ ಎರಡು ಪುಟ್ಟ ಮಕ್ಕಳೊಂದಿಗೆ 2018ರಿಂದ ಅಬುಧಾಬಿಯಲ್ಲಿ ವಾಸ್ತವ್ಯವಿರುವ ಅನಿವಾಸಿ ಭಾರತಿಯರಾಗಿರುವ ರೇವತಿ ಹಾಗು ಕಾರ್ತಿಕೇಯನ್ ದಂಪತಿಗಳ ಪೈಕಿ 32ವರ್ಷ ಹರೆಯದ ರೇವತಿ ಅವರು ಮೂತ್ರ ಪಿಂಡಗಳಲ್ಲಿ ಸೋಂಕು ಕಂಡು ಬಂದಿತ್ತು. 2022ರ ನಂತರ ಹಿಮೋ ಡಯಾಲಿಸಿಸ್ ನಂತಹ ಹಲವು ಚಿಕಿತ್ಸೆಗಳ ನಂತರವೂ ಹೃದಯ ಸ್ತಂಭನದಿಂದ ಪ್ರಾಣಕ್ಕೆ ಕಂಟಕವಾಗಿ ನಿಷ್ಕ್ರಿಯ ಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇ ಬೇಕಾದ ಅನಿವಾರ್ಯತೆ ಬಂದೊದಗಿತ್ತು .ಹಾಗಾಗಿ ದಂಪತಿಗಳು ಮೃತ ದೇಹಗಳ ಸಹಿತ ಇನ್ನಿತರ ಜೀವಂತ ಕಿಡ್ನಿ ದಾನಿಗಳ ಮೊರೆ ಹೋದರೂ ಯಾವುದೇ ಫಲ ಸಿಗದೇ ದಿನೇ ದಿನೇ ರೇವತಿ ಸಾವಿನ ಮನೆಯತ್ತ ಸರಿಯಲಾರಂಭಿಸಿದರು. ಈ ಸಂದರ್ಭದಲ್ಲಿ ಮಗಳ ನೋವನ್ನು ಸಹಿಸಲಾಗದ ರೇವತಿ ತಂದೆ ತಮ್ಮ ಮೂತ್ರ ಪಿಂಡವನ್ನು ಮಗಳಿಗೆ ದಾನನೀಡಲು ಮುಂದಾದರು. ವಿಪರ್ಯಾಸವೆಂದರೆ ತಂದೆ ಮಗಳ ರಕ್ತಮಾದರಿ ಹೋಲಿಕೆಯಾದರೂ ಹೃದಯ ಸಮಸ್ಯೆ ಹಾಗೂ ಹೆಚ್ಚಿನ ಮಟ್ಟದ ರಕ್ತದೊತ್ತಡದ ಕಾರಣದಡಿ ರೇವತಿ ಅವರ ತಂದೆಯ ಮೂತ್ರಪಿಂಡಗಳ ಕಸಿ ಯನ್ನು ಕೊನೆ ಕ್ಷಣಗಳಲ್ಲಿ ಅನರ್ಹ ಗೊಳಿಸಲಾಗಿತ್ತು. ಇತ್ತ ಸಾವು ರೇವತಿಯ ನೆತ್ತಿಯ ಮೇಲೆ ತೂಗುಯ್ಯಾಲೆಯಾಡುತ್ತಿತ್ತು.

    ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇ ಬೇಕಿತ್ತು. ತನ್ನ ಮೂತ್ರ ಪಿಂಡ ವನ್ನು ನೀಡಲು ಪತಿ ಕಾರ್ತಿಕೇಯನ್ ತುದಿಗಾಲಿನಲ್ಲಿ ನಿಂತಿದ್ದರೂ ರಕ್ತ ಮಾದರಿ ಬೇರೆಯಾಗಿದ್ದರಿಂದ ಮೂತ್ರ ಪಿಂಡ ಕಸಿಯ ದುಸ್ಸಾಹಸಕ್ಕೆ ಮುಂದಾಗದ ವೈದ್ಯರು ಕೈಚೆಲ್ಲಿದ್ದರು.

    ಆದರೆ ರೇವತಿ ಪತಿ ಕಾರ್ತಿಕೇಯನ್ ದೃತಿಗೆಡಲಿಲ್ಲ. ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ರುವ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಡಾ. ಇಸ್ತಿಯಾಕ್ ಅಹ್ಮದ್ ಅವರನ್ನು ಸಂಪರ್ಕಿಸಿದ್ದಾರೆ. ಬುರ್ಜಿಲ್ ಆಸ್ಪತ್ರೆಯ ಡಾ.ಇಸ್ತಿಯಾಕ್ ನೇತೃತ್ವದ ಡಾ. ರೀಹಾನ್ ಸೈಫ್, ಡಾ.ವೆಂಕಟ್ ಸೈನರೇಶ್, ಡಾ.ರಾಮಮೂರ್ತಿ ಜಿ.ಭಾಸ್ಕರನ್, ಡಾ. ನಿಕೋಲಸ್ ವ್ಯೋನ್ ನೆಫ್ರಾಲಜಿಸ್ಟ್ ವೈದ್ಯ ತಂಡವು ರೇವತಿ ಅವರ ಮೂತ್ರ ಪಿಂಡ ಕಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಹಲವು ದಿನಗಳ ತುರ್ತು ನಿಗಾ ಘಟಕದ ನಂತರ ರೇವತಿ ಅವರ ದೇಹವು ಮೂತ್ರಪಿಂಡ ಕಸಿಗೆ ಹೊಂದಿಕೊಂಡಿದ್ದು ಅವರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ.

    ಕುಂದಾಪುರದ ಉದ್ಯಮಿ ಹಾಜಿ ಅಬ್ದುಲ್ ಖಾದರ್ ಯೂಸುಫ್ ಅವರ ಪುತ್ರರಾಗಿರುವ ಡಾ. ಇಸ್ತಿಯಾಕ್. ಕುಂದಾಪುರ ಗರ್ಲ್ಸ್ ಶಾಲೆ, ಬೋರ್ಡ್ ಹೈಸ್ಕೂಲ್, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನ ಕೆ.ಎಂ.ಸಿ. ಯಲ್ಲಿ ಎಂ.ಬಿ.ಬಿ.ಎಸ್. ಎಂ.ಡಿ ಪದವಿ ಪಡೆದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಡಿ.ಎಂ. ಪುರಸ್ಕೃತರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಸಹಿತ ಹಲವು ಖ್ಯಾತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ಅಬುದಾಭಿಯ ಬುರ್ಜಿಲ್ ಮೆಡಿಕಲ್ ಸಿಟಿಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.

  • ಕುಂದಾಪುರ ಬಿ. ಬಿ. ಹೆಗ್ಡೆ ಕಾಲೇಜಿಗೆ ಸಮಗ್ರ ಪುರಸ್ಕಾರ

    ಕುಂದಾಪುರ ಬಿ. ಬಿ. ಹೆಗ್ಡೆ ಕಾಲೇಜಿಗೆ ಸಮಗ್ರ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ತಂಡವು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆಯಲ್ಲಿ ನಡೆದ ಸಂಗೀತ ಸ್ಪರ್ಧೆಗಳಾದ ಚಿತ್ರಗೀತೆಯಲ್ಲಿ ಶ್ರೇಯಾ ಖಾರ್ವಿ ಪ್ರಥಮ, ಜಾನಪದ ಸಮೂಹ ಗೀತೆ ಪ್ರಥಮ ಹಾಗೂ ಪೂಜಾ ಆಚಾರ್ ಭಾಗವತಿಕೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮುಖೇನ ಸಮಗ್ರ ಪುರಸ್ಕಾರವನ್ನು ಪಡೆದ ಕಾಲೇಜಿನ ತಂಡವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ದೀಪಿಕಾ ಜಿ. ಅಭಿನಂದಿಸಿದ್ದಾರೆ.