Category: ಸುದ್ದಿ

  • ವಂಡ್ಸೆ :ನಿವೃತ್ತರಾಗುತ್ತಿರುವ ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ರಘುರಾಮ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನೆ

    ವಂಡ್ಸೆ :ನಿವೃತ್ತರಾಗುತ್ತಿರುವ ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ.ರಘುರಾಮ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಹಿಂದೆ ಗ್ರಾಮ ಮಟ್ಟದಲ್ಲಿ ಗ್ರಾಮ ಸಹಾಯಕರು ಇರುತ್ತಿದ್ದರು. ಮುಂದುವರಿದಂತೆ ಪ್ರಸ್ತುತ ಹೋಬಳಿಗೊಬ್ಬರು ಕೃಷಿ ಅಧಿಕಾರಿಯನ್ನು ಕಾಣಬಹುದು. ಬೇರೆ ಬೇರೆ ಇಲಾಖೆಗಳಲ್ಲಿ ಹುದ್ದೆಗಳು ಹೆಚ್ಚಳವಾಗುತ್ತಿದೆ. ಆದರೆ ಕೃಷಿ ಇಲಾಖೆಯಲ್ಲಿ ಮಾತ್ರ ಹುದ್ದೆಗಳು ಕುಂಠಿತವಾಗುತ್ತಿದೆ. ಆಧ್ಯತಾ ವಲಯವಾಗಿದ್ದ ಕೃಷಿವಲಯವೇ ಇವತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ರೈತರ ನಿರಾಸಕ್ತಿ, ಬೇಡಿಕೆ ಕುಸಿದಂತೆ ಅಧಿಕಾರಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಅವರು ವಂಡ್ಸೆ ಶ್ರೀಯಾ ಕನ್ವನ್‍ಷನ್ ಹಾಲ್‍ನಲ್ಲಿ ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅ.31ರಂದು ನಿವೃತ್ತರಾದ ಸಿ. ಅಧಿಕಾರಿ ರಘುರಾಮ ಶೆಟ್ಟಿ ಚಿತ್ತೂರು ಇವರನ್ನು ಸಾರ್ವಜನಿಕರ ಅಭಿನಂದನಾ ಸಮಿತಿ ವಂಡ್ಸೆ ಹೋಬಳಿಯ ವತಿಯಿಂದ ಜರುಗಿದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ರೈತ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ರೈತರ ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾರೆ. ರಘುರಾಮ ಶೆಟ್ಟರು ನಿವೃತ್ತಿಯ ಬಳಿಕವೂ ಕೃಷಿ, ಸೇವಾ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಬೇಕು. ರೈತ ಪರವಾಗಿರಬೇಕು ಎಂದರು.

    ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳ ಆಸಕ್ತಿಯಿಂದ ಅಭಿವೃದ್ದಿಯ ವೇಗ ಹೆಚ್ಚಾಗುತ್ತದೆ. ಶ್ರದ್ದೆಯಿಂದ ತಮ್ಮ ಜವಬ್ದಾರಿ ನಿಭಾಯಿಸುವ ಅಧಿಕಾರಿ ವರ್ಗ ಜನಮೆಚ್ಚುಗೆ ಪಡೆಯುವ ಮೂಲಕ ಶ್ಲಾಘನಾರ್ಯ ಸೇವೆಗೆ ಕಾರಣರಾಗುತ್ತಾರೆ. ನಿವೃತ್ತಿಯ ಸಮಯದಲ್ಲಿ ಪುನಾರವಲೋಕನವಾಗುತ್ತದೆ. ರಘುರಾಮ ಶೆಟ್ಟರು 36 ವರ್ಷ 9 ತಿಂಗಳು ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕವೂ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮೃದ್ಧ ಬೈಂದೂರು ಕಲ್ಪನೆಗೂ ಕೊಡುಗೆ ಇರಲಿ ಎಂದರು.

    ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಿ.ಸದಾಶಿವ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ್, ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕರಾದ ಚಂದ್ರಶೇಖರ ನಾಯಕ್, ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರೂಪಾ ಮಾಡ ಉಪಸ್ಥಿತರಿದ್ದರು.

    ಕೃಷಿ ಸಹಾಯಕರಾಗಿ, ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ, ಸಹಾಯಕ ಕೃಷಿ ಅಧಿಕಾರಿಯಾಗಿ, ತಾಲೂಕು ಜಲನಯನ ಅಧಿಕಾರಿಯಾಗಿ, ಸೌಕೂರು ದೇವಸ್ಥಾನದ ಆಡಳಿತಾಧಿಕಾರಿಯಾಗಿ, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾಗಿ, ವಂಡ್ಸೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಘುರಾಮ ಶೆಟ್ಟಿ ಅವರನ್ನುಸಾರ್ವಜನಿಕ ಅಭಿನಂದನಾ ಸಮಿತಿಯ ವತಿಯಿಂದ ರಘುರಾಮ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಗಣ್ಯರು ಗೌರವಿಸಿದರು.

    ವಂಡ್ಸೆ ಗ್ರಾಮ ಪಂಚಾಯತ್ ಸದಸ್ಯ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಶ್ರೀನಿವಾಸ ಪೂಜಾರಿ ಕಲ್ಮಾಡಿ, ನಿರ್ಮಲ ವಂಡ್ಸೆ, ಸುಧೀರ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

    ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸ್ಮೀತಾ ಮತ್ತು ಬಳಗದವರು ಪ್ರಾರ್ಥನೆ ಮಾಡಿದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಪ್ರಭಾಕರ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು. ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ರವಿರಾಜ ಶೆಟ್ಟಿ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಶಿಧರ ಶೆಟ್ಟಿ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿದರು.

  • ಕಾರ್ಕಳ: ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರ್ ಹೃದಯಾಘಾತದಿಂದ ನಿಧನ

    ಕಾರ್ಕಳ: ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರ್ ಹೃದಯಾಘಾತದಿಂದ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ : ಹಿರಿಯ ಪತ್ರಕರ್ತ,ಸಾಹಿತಿ ,ಸಂಘಟಕ ಶೇಖರ್ ಅಜೆಕಾರ್ (54) ಅವರು ಮಂಗಳವಾರ ಅಕ್ಟೋಬರ್ 31 ರಂದು ಹೃದಯಾಘಾತದಿಂದ ನಿಧನರಾದರು. ಅವರು ದಾಯ್ಜಿವಲ್ಡ್ ನಲ್ಲಿ ಬಹಳಷ್ಟು ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.

    ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ನಾಡಿನ ಗಮನ ಸೆಳೆದ ಅಜೆಕಾರು ಕವಿಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಕರಾವಳಿಯ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಜವಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದ ಇವರು, ಲೇಖಕರಾಗಿ ಹೊಸ ಹಾದಿಯ ಅನ್ವೇಷಕರಾಗಿ, ಸಂಶೋಧಕರಾಗಿ, ಛಾಯಾಗ್ರಾಹಕರಾಗಿ, ಸಂಘಟಕರಾಗಿ, ಶಿಕ್ಷಣ ತಜ್ಞರಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

    ಅವರ ಜೀವನ ಚರಿತ್ರೆ “ಅಜೆಕಾರಿನ ಅಜೆಕಾರು ” ಸಹಿತ 27 ಪುಸ್ತಕಗಳನ್ನು ಪ್ರಕಟಿಸಿರುವ ಅವರಿಗೆ ತುಳುವ ಮಾಧ್ಯಮ ರತ್ನ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾ ರತ್ನ, ಕೃಷಿಕ ಬಂಧು ಸೇರಿದಂತೆ ೧೦೦ ಕ್ಕೂ ಹೆಚ್ಚು ರಾಜ್ಯ- ರಾಷ್ಟ್ರಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.

    ಕನ್ನಡ- ತುಳು ಭಾಷೆಯ ಸಾಹಿತಿಯಾಗಿ, ನಾಡು ನುಡಿಯ ಸೇವಕರಾಗಿ ಖ್ಯಾತರಾಗಿದ್ದ ಇವರು ತುಳುನಾಡಿನ ವಿಶೇಷ ಕಂಬಳ ಕ್ರೀಡೆಯ ಕುರಿತ 5 ಕೃತಿಗಳನ್ನು ಪ್ರಕಟಿಸಿದ್ದಾರೆ. 3 ವ್ಯಕ್ತಿ ಚಿತ್ರಗಳು ಹತ್ತಾರು ಊರುಗಳ ಕುರಿತ ಅವರ ಕೃತಿಗಳು ಪ್ರಕಟಗೊಂಡಿವೆ.

    ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

  • ಕೊಂಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈತೊಳೆಯುವ ಘಟಕ ಹಾಗೂ ಅಂಗನವಾಡಿಗೆ ನೀರಿನ ಪಂಪ್ ಹಸ್ತಾಂತರ

    ಕೊಂಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈತೊಳೆಯುವ ಘಟಕ ಹಾಗೂ ಅಂಗನವಾಡಿಗೆ ನೀರಿನ ಪಂಪ್ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ರೋಟರಿ ಕ್ಲಬ್ ಶಂಕರನಾರಾಯಣದ ವತಿಯಿಂದ ಕೊಂಡಳ್ಳಿ ಶಾಲೆಗೆ ಕೈ ತೊಳೆಯುವ ಘಟಕ ಹಾಗೂ ಅಂಗನವಾಡಿಗೆ ನೀರಿನ ಪಂಪ್ ಹಸ್ತಾಂತರ ಕಾರ್ಯಕ್ರಮ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ನೆರವೇರಿತು.

    ಕೈತೊಳೆಯುವ ಘಟಕವನ್ನು ಉದ್ಫಾಟಿಸಿದ ಶಂಕರನಾರಾಯಣ ರೋಟರಿ ಕ್ಲಬ್ ಅಧ್ಯಕ್ಷರಾದ ಶರತ್ ಹೆಗ್ಡೆ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಅಭಿಪ್ರಾಯಪಟ್ಟರು.

    ಡಾ. ಸಚ್ಚಿದಾನಂದ ವೈದ್ಯರು ಪೋಷಕರನ್ನುದ್ದೇಶಿಸಿ ಮನೆಯಲ್ಲಿ ಮಕ್ಕಳ ಜೊತೆ ಪೋಷಕರ ವರ್ತನೆ ಹೇಗಿರಬೇಕು ಎಂಬ ಕುರಿತು ಉಪನ್ಯಾಸ ನೀಡಿದರು. ಮಮತಾ ಆರ್ ಶೆಟ್ಟಿಯವರು ಮಾತನಾಡಿ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಿ ಎಂಬ ಕಿವಿಮಾತನ್ನು ಹೇಳಿದರು.

    ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಉಷಾಲತಾ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭ ವೇದಿಕೆಯಲ್ಲಿ ದಯಾನಂದ ರಾವ್, ಸುಧಾಕರ ಹೆಗ್ಡೆ, ಅಂಗನವಾಡಿ ಕಾರ್ಯಕರ್ತೆ ವಿನೋದಾ ಉಪಸ್ಥಿತರಿದ್ದರು.

    ಮುಖ್ಯ ಶಿಕ್ಷಕ ರಾಮ ಮೊಗವೀರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಸುಜಾತ ಎಚ್ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಾಗೂ ಗೌರವ ಶಿಕ್ಷಕಿಯರು ಉಪಸ್ಥಿತರಿದ್ದರು.

  • ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ :ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆ, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜಿಲ್ಲೆಯಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿರುತ್ತದೆ.

    ಆದ್ದರಿಂದ ನವೆಂಬರ್ 1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯವನ್ನು ಬರೆಯಬೇಕು. ಅಂದು ಬೆಳಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೊ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುತ್ತಿದ್ದು, ಆ ಸಮಯದಲ್ಲಿ ಕನ್ನಡ ನಾಡಿನ ಎಲ್ಲಾ ನಾಗರಿಕರು ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡಗೀತೆಗೂ ಗೌರವ ಸಲ್ಲಿಸಬೇಕು.

    ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಸುವರ್ಣ ಸಂಭ್ರಮ ಗಾಳಿಪಟ ಉತ್ಸವ ಆಚರಿಸಬೇಕು. ಸಂಜೆ 7 ಗಂಟೆಗೆ ಎಲ್ಲಾ ಗ್ರಾಮಗಳ ಮನೆ, ಕಛೇರಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿಯನ್ನು ಬೆಳಗಿಸಬೇಕು.

    ಜಿಲ್ಲೆಯಲ್ಲಿ ನವಂಬರ್ 01 ರಂದು ಸಾರ್ವಜನಿಕರು ಮೇಲ್ಕಂಡ ಅಂಶಗಳನ್ನು ಅಳವಡಿಸಿಕೊಂಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೈಂದೂರು: ಡಿಗ್ರಿ ಕಾಲೇಜು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳಿಂದ ಶ್ಲಾಘನೆ

    ಬೈಂದೂರು: ಡಿಗ್ರಿ ಕಾಲೇಜು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿದ್ಯಾರ್ಥಿಗಳಿಂದ ಶ್ಲಾಘನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ 40 ವರ್ಷಗಳ ಇತಿಹಾಸ ಹೊಂದಿದೆ ಪ್ರಸ್ತುತ 400 ವಿದ್ಯಾರ್ಥಿಗಳಿದ್ದಾರೆ. ಆದರೆ ಇದುವರೆಗೆ ಈ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಲಭ್ಯ ಇರಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಹಾಜರಾತಿ ಸಮಸ್ಯೆ ಉಂಟಾಗುತ್ತಿತ್ತು. ಪ್ರತಿ ದಿನವೂ ಇಲ್ಲಿನ ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಕಾಲೇಜಿನ ಬೋಧಕ ಮಂಡಳಿ ಹಾಗೂ ವಿದ್ಯಾರ್ಥಿಗಳು ಇತ್ತೀಚೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರ ಗಮನಕ್ಕೆ ಬಸ್ ಸೌಲಭ್ಯ ಇಲ್ಲದೇ ಉಂಟಾಗುತ್ತಿದ್ದ ಸಮಸ್ಯೆಯನ್ನು ಗಮನಕ್ಕೆ ತರುವ ಮೂಲಕ ಮನವಿ ಮಾಡಿದ್ದರು. ಮನವಿ ಆಲಿಸಿದ ಶಾಸಕ ಗಂಟಿಹೊಳೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಎಲ್ಲಾ ಜನಪ್ರತಿನಿಧಿಗಳಂತೆ ಇವರು ಕೇವಲ ಭರವಸೆ ನೀಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

    ಆದರೆ ಮನವಿ ಆಲಿಸಿದ ಶಾಸಕ ಗಂಟಿಹೊಳೆ ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗಾಗುತ್ತಿದ್ದ ಸಮಸ್ಯೆಗಳನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಸಾರಿಗೆ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದ್ದಾರೆ. ಪರಿಣಾಮವಾಗಿ ಮನವಿ ಸ್ವೀಕರಿಸಿ ಒಂದು ತಿಂಗಳೊಳಗಾಗಿ ಅಂದರೆ ಅಕಟ್ಓಬರ್ 30ರಂದು ಬೆಳಿಗ್ಗೆಯಿಂದ ಬೈಂದೂರು ಸರ್ಕಾರಿ ಪದವಿ ಕಾಲೇಜಿಗೆ ಬಸ್ ಸಂಚಾರ ಆರಂಭವಾಗಿದೆ.

    ಮಳೆಗಾಲದಲ್ಲಂತೂ ಬಸ್ಸಿನ ಸೌಕರ್ಯವಿಲ್ಲದೇ ಬಹಳ ಕಷ್ಟ ಅನುಭವಿಸಿದ್ದೇವೆ. ಬಸ್ ಸೌಲಭ್ಯದಿಂದ ಬಹಳಷ್ಟು ಸಂತೋಷವಾಗಿದೆ ಎಂದು ದ್ವಿತೀಯ ಬಿಎ ವಿದ್ಯಾರ್ಥಿನಿ ಅಕ್ಷಾತಾ ಹೇಳಿದ್ದಾರೆ

    40 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಸ್ ಸೌಕರ್ಯ ೊದಗಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಸಾರಿಗೆ ಇಲಾಖೆಗೆ ಕೃಜ್ಞತೆ ಸಲ್ಲಿಸಿದ್ದಾರೆ ತೃತೀಯ ಬಿಎ ವಿದ್ಯಾರ್ಥಿ ರೋಹನ್.

    ಬಸ್ ಸೌಲಭ್ಯದಿಂದ ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನಹರಿಸಲು ಸಾಧ್ಯವಾಗಿದೆ ಎಂದು ದ್ವಿತೀಯ ಬಿಎ ವಿದ್ಯಾರ್ಥಿನಿ ಸುಹರ್ಷಿಣಿ ಹೇಳಿದ್ದಾರೆ.

    ಗ್ರಾಮೀಣ ಭಾಗದ ಪದವಿ ಕಾಲೇಜಿಗೆ ಸಂಪರ್ಕ ಸಮಸ್ಯೆಯಿಂದ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಬಸ್ ಸೌಲಭ್ಯದಿಂದಾಗಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಲಿದೆ ಎಂದು ತೃತೀಯ ಬಿಬಿಎ ವಿದ್ಯಾರ್ಥಿ ಅಮೇಂದ್ರ ಹೇಳಿದ್ದಾರೆ. ಉಪನ್ಯಾಸಕ ಮೋಹನ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕೋಟ :ಪುನಿತ್‍ರಾಜ್ ಕುಮಾರ್ ಅಸಮಾನ್ಯ ಸಾಧಕ ಶಕ್ತಿ- ರಾಘವೇಂದ್ರ ಕುಂದರ್

    ಕೋಟ :ಪುನಿತ್‍ರಾಜ್ ಕುಮಾರ್ ಅಸಮಾನ್ಯ ಸಾಧಕ ಶಕ್ತಿ- ರಾಘವೇಂದ್ರ ಕುಂದರ್

    ಕೋಟ ಪಂಚವರ್ಣ ಕಛೇರಿಯಲ್ಲಿ ಪುನಿತ್‍ರಾಜ್ ಕುಮಾರ್ ಎರಡನೇ ವರ್ಷದ ಪುಣ್ಯ ಸ್ಮರಣೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪುನಿತ್ ರಾಜ್ ಕುಮಾರ್ ಓರ್ವ ನಟನಲ್ಲ ಬದಲಾಗಿ ಅವರೊಬ್ಬ ಅಸಮಾನ್ಯ ಸಾಧಕ ಶಕ್ತಿ ಎಂದು ಸಾಮಾಜಿಕ ಮುಖಂಡ ರಾಘವೇಂದ್ರ ಕುಂದರ್ ಅಭಿಪ್ರಾಯಪಟ್ಟರು.

    ಭಾನುವಾರ ಪಂಚವರ್ಣ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಪುನಿತ್‍ರಾಜ್ ಕುಮಾರ್‍ರವರ ಎರಡನೆ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಭನಮನಗೈದು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅವರ ಪರಿಶ್ರಮ ಅಡಗಿರುತ್ತದೆ ಅದನ್ನು ಸದ್ವಿನಿಯೋಗ ಮಾಡಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತೋಡಗಿಸಿಕೊಳ್ಳುವುದೇ ನಿಜವಾದ ಜೀವನವಾಗಿದೆ. ಅಂತಹ ಶಕ್ತಿಗಳಲ್ಲಿ ಪುನಿತ್‍ರಾಜ್ ಕುಮಾರ್ ಒಬ್ಬರು ತನ್ನ ಜೀವಿತ ಅವಧಿಯಲ್ಲಿ ಅವರ ಸಾಮಾಜಿಕ ಕಳಕಳಿ ತೆರೆಯ ಮರೆಯಲ್ಲಿ ಅವರ ಜನಮನ ತುಡಿತ ನಿಜಕ್ಕೂ ಅರ್ಥಪೂರ್ಣ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ನುಡಿನಮನ ಗೈದರು.

    ಪಂಚವರ್ಣ ಯುವಕಮಂಡಲದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಸದಸ್ಯರಾದ ಶಕೀಲ ಎನ್ ಪೂಜಾರಿ,ಅಕ್ಷತಾ ಗಣೇಶ್ ,ಪಂಚವರ್ಣದ ಜೊತೆಕಾರ್ಯದರ್ಶಿ ಸಂದೇಶ್ ಆಚಾರ್,ಕೋಶಾಧಿಕಾರಿ ನಾಗರಾಜ್ ಪೂಜಾರಿ,ಸದಸ್ಯ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

  • ಕುಂದಾಪುರದಲ್ಲಿ ಸಮುದಾಯ ಸಂಘಟನೆಯ 8ನೇ ರಾಜ್ಯ ಸಮ್ಮೇಳನ

    ಕುಂದಾಪುರದಲ್ಲಿ ಸಮುದಾಯ ಸಂಘಟನೆಯ 8ನೇ ರಾಜ್ಯ ಸಮ್ಮೇಳನ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಐವತ್ತು ವರ್ಷಗಳ ಹಿಂದೆ ಕಾಣಿಸಿಕೊಂಡ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಅಂದಿನಿಂದ ಇಂದಿನವರೆಗೂ ತನ್ನ ಅಭಿವ್ಯಕ್ತಿಯ ಮಾಧ್ಯಮಗಳಾದ ಬೀದಿ ನಾಟಕಗಳು, ಜಾಥಾಗಳು, ವಿಚಾರ ಸಂಕಿರಣಗಳು, ಪ್ರದರ್ಶನಗಳು, ರಂಗ-ನಾಟಕಗಳು, ಸಿನೇಮಾ, ಚಿತ್ರಕಲಾ ಪ್ರದರ್ಶನ, ಸಂವಿಧಾನ ಓದು, ಇತ್ಯಾದಿಗಳ ಮೂಲಕ ಜೀವಪರವಾದ ಪರಿಸರವನ್ನು ಸೃಷ್ಟಿಸಲು ಶ್ರಮಿಸುತ್ತಿದೆ. ದೇಶದ ಸಂವಿಧಾನದ ಮೂಲ ಆಶಯಗಳಾದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ ಹಾಗೂ ಸಾರ್ವಭೌಮ ಜನತಂತ್ರದ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಸಮ್ಮೇಳನ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ರಾಜಾರಾಂ ತಲ್ಲೂರು ಹೇಳಿದರು.

    ಅವರು ಅ.28ರಂದು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಮುಂದಿನ ಮೂರು ವರ್ಷಗಳ ತನ್ನ ಧೋರಣೆ, ಮುನ್ನೋಟ ಮತ್ತು ಸಂಘಟನಾ ಸ್ವರೂಪವನ್ನು ಮರುಕಟ್ಟಿಕೊಳ್ಳುವ ಎರಡು ದಿನಗಳ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಇನ್ನೂರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ದೇಶದಪ್ರಮುಖ ಸಾಂಸ್ಕೃತಿಕ ಚಿಂತಕರು, ಕಲಾವಿದರನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸಮ್ಮೇಳನದ ಸಿದ್ಧತೆಗಾಗಿ ಕುಂದಾಪುರ ಸಮುದಾಯದ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದರು.

    ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಐವತ್ತು ವûರ್ಷಗಳ ಹಿಂದೆ ಕಾಣಿಸಿಕೊಂಡ ಸಮುದಾಯ ಸಾಂಸ್ಕೃತಿಕ ಸಂಘಟನೆಯು ತನ್ನ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯ ಭಾಗವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತದೆ. ಈ ಬಾರಿಯ 8ನೇ ರಾಜ್ಯ ಸಮ್ಮೇಳನವನ್ನು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 2023ರ ಡಿಸೆಂಬರ್ 16 ಮತ್ತು 17 ರಂದು ವಡೇರಹೋಬಳಿಯಲ್ಲಿರುವ ‘ಆಶೀರ್ವಾದ’ ಸಭಾಂಗಣದಲ್ಲಿ ನಡೆಸಲು ಉದ್ದೇಶಿದೆ ಎಂದರು.
    ಕುಂದಾಪುರ ಸಮುದಾಯದ ಕಾರ್ಯಾಧ್ಯಕ್ಷರಾದ ಉದಯ ಗಾಂವಕರ ಮಾತನಾಡಿ, ಈ ಬಾರಿಯ ರಾಜ್ಯ ಸಮ್ಮೇಳನದ ಕೇಂದ್ರ ಆಶಯವು ಸಮ್ಮೇಳನದ ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ ಎಂಬುದಾಗಿದೆ. ಮೊದಲ ದಿನವಾದ ಡಿಸೆಂಬರ್ 16 ರಂದು ಸಮ್ಮೇಳನದ ಉದ್ಘಾಟನಾ ಅಧಿವೇಶನವು ಜವಾಹರಲಾಲ ನೆಹರು ವಿಶ್ವವಿದ್ಯಾಲಯ, ದೆಹಲಿ ಇಲ್ಲಿನ ಕನ್ನಡ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪೆÇ್ರ ಪುರುಷೋತ್ತಮ ಬಿಳಿಮಲೆ ಯವರ ನೇತೃತ್ವದ ತಾಳಮದ್ದಳೆಯ ಮೂಲಕ ಆರಂಭವಾಗಲಿದೆ. ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋಮತ್ತು ಉದಯೋನ್ಮುಖ ಭಾಗವತರಾದ ಕುಮಾರಿ ಚಿಂತನಾ ಮಾಳ್ಕೋಡು ತಾಳಮದ್ದಳೆಯಲ್ಲಿ ಭಾಗವಹಿಸುವರು. ಸಮುದಾಯ ರಾಜ್ಯ ಸಮಿತಿಯ ಅಧ್ಯಕ್ಷರಾದ ಅಚ್ಯುತ ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ ಎರಡು ಘೋಷ್ಟಿಗಳು ನಡೆಯಲಿದ್ದು, ಘನತೆಯ ಬದುಕು: ಹೋರಾಟದ ಹಾದಿ ಎಂಬ ಮೊದಲ ಗೋಷ್ಟಿಯಲ್ಲಿ ನಾಡಿನ ಹಲವು ಚಳುವಳಿಗಳ ಪ್ರಮುಖರು ಶಾಂತಿ, ಸಹಬಾಳ್ವೆಯ ಕರ್ನಾಟಕವನ್ನು ಕಟ್ಟುವ ತಮ್ಮ ದಾರಿಯನ್ನು ವಿವರಿಸಲಿದ್ದಾರೆ. ಈ ಗೋಷ್ಟಿಯಲ್ಲಿ ಲಿಂಗತ್ವ ಸಮಾನತೆಯ ಹೋರಾಟಗಾರರಾದ ಅಕೈ ಪದ್ಮಶಾಲಿ, ರೈತ ಚಳುವಳಿಯರ ವಿಕಿರಣ ಪೂಣಚ್ಚ, ವಿಜ್ಞಾನ ಚಳುವಳಿಯ ಎಫ್.ಸಿ ಚೇಗರೆಡ್ಡಿ, ಆದಿವಾಸಿ ಹಕ್ಕುಗಳ ಹೋರಾಟಗಾರ ಶ್ರೀಧರ ನಾಡಾ, ಮಹಿಳಾ ಚಳುವಳಿಯ ಕೆ.ಎಸ್ ಲಕ್ಷ್ಮಿ ಭಾಗವಹಿಸಲಿದ್ದಾರೆ.

    ಘನತೆಯ ಬದುಕು: ಕಲೆಯ ಹಾದಿ ಎರಡನೆಯ ಗೋಷ್ಟಿಯಲ್ಲಿ ಹಾಡುಗಾರ್ತಿ ಎಮ್. ಡಿ ಪಲ್ಲವಿ, ರಂಗನಿರ್ದೇಶಕಿ ಮಂಗಳಾ ಎನ್, ಸಿನೇಮಾ ನಿರ್ದೇಶಕರಾದ ಮನ್ಸೋರೆ ಗವಹಿಸಿ ಕಲೆಯ ಮೂಲಕ ಸುಂದರ ಮತ್ತು ಶಾಂತಿಯ ನಾಡನ್ನು ಕಟ್ಟುವ ತಮ್ಮದಾರಿಯನ್ನು ತೆರೆದುಕೊಳ್ಳುವರು. ಎರಡನೆಯ ದಿನ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ಸಮುದಾಯ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಅವರು ಮಂಡಿಸಲಿರುವ ವರದಿಯ ಮೇಲೆ ಚರ್ಚೆಗಳು ನಡೆಯಲಿವೆ. ಹೊಸ ಸಮಿತಿಯ ಆಯ್ಕೆ ನಡೆಯಲಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಸದಾನಂದ ಬೈಂದೂರು, ಕೋಶಾಧಿಕಾರಿ ಬಾಲಕೃಷ್ಣ ಕೆ.ಎಂ.,ಕಾರ್ಯದರ್ಶಿ ವಾಸುದೇವ ಗಂಗೇರ, ಪ್ರಚಾರ ಸಮಿತಿ ಸಂಚಾಲಕ ಉದಯ ಶೆಟ್ಟಿ, ಉಪಾಧ್ಯಕ್ಷರಾದ ಜಿ.ವಿ ಕಾರಂತ ಉಪಸ್ಥಿತರಿದ್ದರು.

  • ಕೋಟ :ಕಾರ್ಕಡ ಶಾಲೆ ಸಂಚಾಲಕಿ ಲೀಲಾವತಿ ಕಾಮತ್ ನಿಧನ

    ಕೋಟ :ಕಾರ್ಕಡ ಶಾಲೆ ಸಂಚಾಲಕಿ ಲೀಲಾವತಿ ಕಾಮತ್ ನಿಧನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬಾರ್ಕೂರು ಸಮೀಪ ನಾಗರಮಠ ನಿವಾಸಿ, ಕಾರ್ಕಡ ಹೊಸ ಹಿ.ಪ್ರಾ.ಶಾಲೆ ಸಂಚಾಲಕಿ ಲೀಲಾವತಿ ಕಾಮತ್ (85) ಅನಾರೋಗ್ಯದಿಂದ ಅ.27 ರಂದು ನಿಧನ ಹೊಂದಿದರು.

    ಮೃತರು ಕಾರ್ಕಡ ಹೊಸ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

  • ಕೋಟ :ಕಾರಂತ ಬಾಲ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ಕೋಟ :ಕಾರಂತ ಬಾಲ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ 2023ನೇ ಸಾಲಿನ ಕಾರಂತ ಪುರಸ್ಕಾರಕ್ಕೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ನಮೂನೆಯನ್ನು ಕೋಟದ ಥೀಮ್ ಪಾರ್ಕ್‍ನಲ್ಲಿ ಪಡೆಯುವುದು ಅಥವಾ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ (7829729340) ಅವರನ್ನು ಸಂಪರ್ಕಿಸಿ ಪಡೆಯುವುದು. ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 13 ಸಂಜೆ 5 ಗಂಟೆ ಒಳಗೆ ಕೋಟದ ಥೀಮ್ ಪಾರ್ಕ್ ಕಛೇರಿಗೆ ತಲುಪಿಸುವುದು ಅಥವಾ ಕಾರ್ಯದರ್ಶಿ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರಿಗೆ ಅಂಚೆ ಮೂಲಕ ತಲುಪಿಸುವಂತೆ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

     

     

  • ಕೋಟ ಠಾಣೆಯ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದ.ಸಂ.ಸ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಕೋಟ ಠಾಣೆಯ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದ.ಸಂ.ಸ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಎಸ್.ಪಿ. ಕಚೇರಿ ಮುಂದೆ ಪ್ರತಿಭಟನೆ, ಉಸ್ತುವಾರಿಯವರ ಕಾರಿಗೆ ಮುತ್ತಿಗೆ ಎಚ್ಚರಿಕೆ

    ಕುಂದಾಪುರ ಮಿರರ್ ಸುದ್ದಿ..
    ಕೋಟ: ಇತ್ತೀಚೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರಾದ ಆಶಾ ಮತ್ತು ಸುಜಾತ ಅವರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ದೌರ್ಜನ್ಯ ಎಸಗಿದವರಲ್ಲಿ ಪ್ರಮುಖ ಭಾಗಿ ಎನ್ನಲಾದ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಅ.28ರಂದು ಕೋಟ ಪೊಲೀಸ್ ಠಾಣೆ ಎದುರು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

    ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಮುಖ ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಕೋಟ ಠಾಣೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಅಮಾಯಕ ಮಹಿಳೆಯರ ಮೇಲಿನ ಈ ಪೊಲೀಸ್ ದೌರ್ಜನ್ಯವನ್ನು ಸಹಿಸಲು ಅಸಾಧ್ಯ. ಸಂತ್ರಸ್ತರಿಗೆ ನ್ಯಾಯ ಸಿಗದಿದ್ದರೆ ಮುಂದೆ ಎಸ್.ಪಿ. ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರ ಕಾರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಸಾಕ್ಷಿ ಕೇಳಿದ ಎಸ್.ಪಿ. ನಡೆಗೆ ಖಂಡನೆ:-
    ಪ್ರಕರಣವನ್ನು ಜಿಲ್ಲಾ ಎಸ್.ಪಿ. ಗಂಭೀರವಾಗಿ ಪರಿಗಣಿಸಿಲ್ಲ. ಇಲಾಖೆಯ ಸಿಬಂದಿಯನ್ನು ರಕ್ಷಿಸುವ ಸಲುವಾಗಿ ಹೋರಾಟಗಾರರಿಗೆ ನೋಟೀಸು ನೀಡುವ, ಬೆದರಿಸುವ ತಂತ್ರವನ್ನು ಮಾಡಿದ್ದಾರೆ. ಮುಂದಿನ ದಿನದಲ್ಲಿ ಎಸ್.ಪಿ.ಯವರ ವಿರುದ್ಧವೇ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಸಂಘಟನೆಯ ಪ್ರಮುಖರಾದ ಸುಂದರ ಮಾಸ್ತರ್ ತಿಳಿಸಿದರು.

    ಮುಖ್ಯ ಮಂತ್ರಿ, ಗೃಹ ಸಚಿವರ ಗಮನಕ್ಕೆ
    ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿಗಳು ಹಾಗೂ ಗೃಹಸಚಿವರ ಗಮನಕ್ಕೆ ಈ ಪ್ರಕರಣವನ್ನು ತಂದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

    ಈ ಸಂದರ್ಭ ಪ್ರತಿಭಟನಾ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಸ್ಥಳಕ್ಕಾಗಮಿಸಿದ ಬ್ರಹ್ಮಾವರ ವೃತ್ತನಿರೀಕ್ಷಕ ದಿವಾಕರ್ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಬ್ರಹ್ಮಾವರ ಪಿ.ಎಸ್.ಐ. ರಾಜಶೇಖರ್ ವಂಡಳ್ಳಿ ಮೊದಲಾದವರಿದ್ದರು.
    ಸಿ.ಐ.ಟಿ.ಯು. ಉಡುಪಿ ಜಿಲ್ಲೆ, ಜನವಾದಿ ಮಹಿಳಾ ಸಂಘಟನೆ ಉಡುಪಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದವು.

    ಸಂಘಟನೆಯ ಪ್ರಮುಖರಾದ ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ನಾಗರಾಜ್ ಬೈಂದೂರು, ಶ್ರೀನಿವಾಸ ವಡ್ಡರ್ಸೆ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಐತ ಕಾರ್ಕಡ, ವಸಂತಿ ಶಿವಾನಂದ, ಜನವಾದಿ ಮಹಿಳಾ ಸಂಘಟನೆಯ ಶೀಲವತಿ, ಪ್ರಗತಿಪರ ಚಿಂತಕ ಬಾಲಕೃಷ್ಣ ಶೆಟ್ಟಿ, ಅಜಿತ್ ಶೆಟ್ಟಿ ಯಾಳಕ್ಲು, ಸಿ.ಐ.ಟಿ.ಯು ಸಂಘಟನೆಯ ಚಂದ್ರಶೇಖರ್, ಸುರೇಶ್ ಅಂಪಾರು, ಗಣೇಶ್ ನೆಲ್ಲಿಬೆಟ್ಟು ಮೊದಲಾದವರಿದ್ದರು.