Category: ಸುದ್ದಿ

  • ಕುಂದಾಪುರ :ಪಿಡಿಓ ಪಾಂಡುರಂಗ ಶೇಟ್ ನಿಧನ

    ಕುಂದಾಪುರ :ಪಿಡಿಓ ಪಾಂಡುರಂಗ ಶೇಟ್ ನಿಧನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಕಾಳಾವರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಾಂಡುರಂಗ ಶೇಟ್ (58ವ) ಅನಾರೋಗ್ಯ ಕಾರಣದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಜು.27ರಂದು ನಿಧನರಾದರು.

    ಇವರು ಈ ಹಿಂದೆ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾಗಿದ್ದ ಕೆ.ಗೋಪಾಲ ಪೂಜಾರಿ ಅವರ ಆಪ್ತ ಸಹಾಯಕರಾಗಿಯೂ ಸೇವೆ ಸಲ್ಲಿಸಿದ್ದರು.
    ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಕಾರ್ಗಿಲ್ ವಿಜಯ ದಿವಸ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ – ಕಾರ್ಗಿಲ್ ವಿಜಯ ದಿವಸ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ : ವೀರ ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುವುದರ ಜೊತೆಗೆ ದೇಶದ ಐತಿಹಾಸಿಕ ಗೆಲುವಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ. ಘಟಕದ ಅಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ಅಪ್ರತಿಮ ಯಶಸ್ಸಿನ ವಿಜಯ ಪತಾಕೆ ಹಾರಿಸಿದ ದಿನವನ್ನು ನೆನಪಿಸಿಕೊಳ್ಳುವುದು, ಸಂಭ್ರಮಿಸುವುದು ಮತ್ತು ಭಾರತೀಯ ಸೈನ್ಯದ ಶೌರ್ಯ ಸಾಹಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಗ್ರಂಥಪಾಲಕರಾದ ಮಹೇಶ್ ನಾಯ್ಕ್ ಪ್ರಾರ್ಥಿಸಿದರು. ವಾಣಿಜ್ಯ ಉಪನ್ಯಾಸಕ ಹಾಗೂ ಎನ್.ಸಿ.ಸಿ. ಕೇರ್ ಟೇಕರ್ ಶರತ್ ಕುಮಾರ್ ವಂದಿಸಿದರು. ನಿರ್ವಹಣಾ ವಿಭಾಗದ ಉಪನ್ಯಾಸಕಿ ಅವಿತಾ ಕೊರೆಯಾ ನಿರೂಪಿಸಿದರು.

  • ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿದ್ಯಾರ್ಥಿಯಾಗಿ ಪ್ರಣಮ್ಯ ತೆಕ್ಕಟ್ಟೆ ಆಯ್ಕೆ

    ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿದ್ಯಾರ್ಥಿಯಾಗಿ ಪ್ರಣಮ್ಯ ತೆಕ್ಕಟ್ಟೆ ಆಯ್ಕೆ

    ಬಾಹ್ಯಾಕಾಶ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಸಾಧಕಿಯಾಗುವ ಹಂಬಲ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಕೇಂದ್ರ ಸರಕಾರದ ಶಿಕ್ಷಣ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‍ಪುರ ಪಶ್ಚಿಮ ಬಂಗಾಳದ ವಿದ್ಯಾ ಸಂಸ್ಥೆಗೆ 2023-24ನೇ ಸಾಲಿನ ಬಾಹ್ಯಾಕಾಶ ಸಂಶೋಧನಾ ಶಿಕ್ಷಣದ ವಿಭಾಗದ ಇಂಜಿನಿಯರ್ ಪದವಿ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆಯಿಂದ ಪ್ರಣಮ್ಯ ಜಿ. ಹೆಚ್. ಆಯ್ಕೆಯಾಗಿರುತ್ತಾಳೆ.

    ಇವರು ತೆಕ್ಕಟ್ಟೆ ಶಿಕ್ಷಕ ದಂಪತಿಗಳಾದ ಹೆರಿಯ ಮತ್ತು ಗುಲಾಭಿ ಇವರ ಸುಪುತ್ರಿಯಾಗಿರುತ್ತಾರೆ. ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಸಂಸ್ಥೆಯಲ್ಲಿ ಯಕ್ಷಗಾನ ಕಲಾವಿದರಾಗಿದ್ದು, ನೃತ್ಯ, ಗಾಯನ, ಚಿತ್ರಕಲೆ, ನಿರೂಪಣೆ, ಉಪನ್ಯಾಸ, ಚರ್ಚಾ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮ ನೀಡುತ್ತಾ ಗುರುತಿಸಿಕೊಂಡಿದ್ದಾರೆ. ಅಂತರ್ ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾಗಿ, ಯುವ ಸಂವಾದ ಕಾರ್ಯಕ್ರಮದಲ್ಲಿ ಬಹುಮಾನವನ್ನು ಮುಡಿಗೇರಿಸಿಕೊಂಡ ಪ್ರತಿಭಾ ಸಂಪನ್ನೆ ಪ್ರಣಮ್ಯ. ಪಠ್ಯೇತರ ಚಟುವಟಿಕೆಯನ್ನು ಹವ್ಯಾಸಿಯಾಗಿ ಬೆಳೆಸಿಕೊಂಡ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಶಾಲೆ ತೆಕ್ಕಟ್ಟೆಯಲ್ಲಿ ಪೂರೈಸಿಕೊಂಡು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ 2021ರಲ್ಲಿ ಉತ್ತೀರ್ಣರಾಗಿರುತ್ತಾಳೆ. ಪದವಿ ಪೂರ್ವ ಶಿಕ್ಷಣವನ್ನು ವೆಂಕಟರಮಣ ಶಿಕ್ಷಣ ಸಂಸ್ಥೆ ಕುಂದಾಪುರದಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿರುತ್ತಾಳೆ. ತಂದೆ-ತಾಯಿ ಪ್ರೋತ್ಸಾಹ, ಗುರು-ಹಿರಿಯರ ಮಾರ್ಗದರ್ಶನದಿಂದ ಜೆ.ಇ.ಇ. ಮೈನ್ಸ್ ಪರೀಕ್ಷೆಯನ್ನು ಬರೆದು 2ನೇ ಹಂತಕ್ಕೆ ಆಯ್ಕೆಯಾಗಿ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿರುತ್ತಾಳೆ. ಇವಳ ಶಿಕ್ಷಣ ಸಾಧನೆಗೆ ವೇದಾಂತು ಶಿಕ್ಷಣ ಸಂಸ್ಥೆಯು ಆನ್-ಲೈನ್ ಶಿಕ್ಷಣ ತರಬೇತಿ ಮತ್ತು ಅಧ್ಯಯನದ ಮೆಟೀರಿಯಲ್ಸ್ ನೀಡಿ ಅನುಕೂಲ ಮಾಡಿಕೊಟ್ಟಿದೆ. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ 2023-24ನೇ ಸಾಲಿನಲ್ಲಿ ಬಿ.ಟೆಕ್. ಇಂಜಿನಿಯರ್ ಪದವಿ ಶಿಕ್ಷಣವನ್ನು ಪಡೆಯಲು ಬಾಹ್ಯಾಕಾಶ ತಂತ್ರಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಬಾಲ್ಯದಿಂದಲೂ ಐ.ಐ.ಟಿ ವಿದ್ಯಾಸಂಸ್ಥೆಯ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಬೇಕೆಂಬ ಹಂಬಲದ ಕನಸ್ಸಿಗೆ ಅವಕಾಶ ದೊರೆತಂತಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‍ಪುರ ಪಶ್ಚಿಮ ಬಂಗಾಳ ಇಲ್ಲಿ ನಾಲ್ಕು ವರ್ಷದ ಬಿ.ಟೆಕ್ ಪದವಿ ಮತ್ತು ಎರಡು ವರ್ಷ ಎಂಟೆಕ್ ಪದವಿ ಶಿಕ್ಷಣ ಪಡೆಯಲಿದ್ದಾರೆ. ಇವರ ಶಿಕ್ಷಣ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಹಾಗೂ ಭವಿಷ್ಯದಲ್ಲಿ ಉತ್ತುಂಗದ ಕೀರ್ತಿಯನ್ನು ಪಡೆಯಲಿ ಎಂಬ ಶುಭದ ಹಾರೈಕೆ ಊರಿನ ವಿದ್ಯಾಭಿಮಾನಿಗಳಿಂದ ವ್ಯಕ್ತವಾಗಿದೆ.

  • ಚಿತ್ರಪಾಡಿ ಗಿರಿಫ್ರೆಂಡ್ಸ್ ಅಧ್ಯಕ್ಷರಾಗಿ ಮಂಜುನಾಥ ಆಚಾರ್ ಆಯ್ಕೆ

    ಚಿತ್ರಪಾಡಿ ಗಿರಿಫ್ರೆಂಡ್ಸ್ ಅಧ್ಯಕ್ಷರಾಗಿ ಮಂಜುನಾಥ ಆಚಾರ್ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಲಿಗ್ರಾಮ ಚಿತ್ರಪಾಡಿಯ ಗಿರಿ ಫ್ರೆಂಡ್ಸ್ 2023-24ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಮಂಜುನಾಥ ಆಚಾರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ದಿನೇಶ ಆಚಾರ್, ಉಪಾಧ್ಯಕ್ಷ ರಘುರಾಮ ಆಚಾರ್, ಕಾರ್ಯದರ್ಶಿ ಸತೀಶ ಆಚಾರ್,
    ಜೊತೆ ಕಾರ್ಯದರ್ಶಿ ರಾಮ ನಾಯಿರಿ, ಖಜಾಂಚಿ ಗಜೇಂದ್ರ ಆಚಾರ್,ಗೌರವ ಸಲಹೆಗಾರರು ರವಿ ಪೂಜಾರಿ,ಜಾನ್ಸನ್ ನಾರೋನ್ಹ,ಮುಖ್ಯ ಸಲಹೆಗಾರರು ವಿಜಯ ಆಚಾರ್, ಲೆಕ್ಕ ಪರಿಶೋಧಕರು ಮಾಧವ ಪೈ,ಸಂಚಾಲಕರು ಸತ್ಯನಾರಾಯಣ ನಾಯಿರಿ, ವಿಶೇಷ ಪ್ರತಿನಿಧಿಯಾಗಿ ನಾಗೇಂದ್ರ ಆಚಾರ್ ಆಯ್ಕೆ ಯಾಗಿದ್ದಾರೆ.

     

  • ಪಂಚವರ್ಣ ಸಂಸ್ಥೆಯ ರಜತ ಗೌರವ ಪ್ರದಾನ ಸಮಾರಂಭ ಸೇವೆಯೇ ಉರಾಳರನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ದಿದೆ – ನರೇಂದ್ರ ಕುಮಾರ್ ಕೋಟ

    ಪಂಚವರ್ಣ ಸಂಸ್ಥೆಯ ರಜತ ಗೌರವ ಪ್ರದಾನ ಸಮಾರಂಭ ಸೇವೆಯೇ ಉರಾಳರನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ದಿದೆ – ನರೇಂದ್ರ ಕುಮಾರ್ ಕೋಟ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಉರಾಳರ ವ್ಯಕ್ತಿತವೇ ಸಾಧಕರಿಗೆ ದಾರಿ ದೀಪ ಎಂದು ಸಾಹಿತಿ ,ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.
    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ಬೆಳ್ಳಿ ಹಬ್ಬದ ಅಂಗವಾಗಿ ರಜತ ಗೌರವಾರ್ಪಣೆ ಎಂಟನೇ ಸಾಧಕ ಶಕ್ತಿ ರಾಜ್ಯದ ಪ್ರಸಿದ್ಧ ಆಯುರ್ವೇದ ವೈದ್ಯ ವೆರಿಕೋಸ್ ತಜ್ಞ ಡಾ.ಎಂ.ವಿ ಉರಾಳರಿಗೆ ಪಂಚವರ್ಣ ರಜತ ಗೌರವ ಕಾರ್ಯಕ್ರಮದಲ್ಲಿ ಅಭಿನಂದನಾ ಮಾತುಗಳನ್ನಾಡಿ ವೆರಿಕೋಸ್ ಎನ್ನುವ ರೋಗವನ್ನು ಗುಣಪಡಿಸುವ ಜೊತೆಗೆ ರಾಜ್ಯಾದ್ಯಂತ ತನ್ನ ಶಾಖೆಗಳನ್ನು ತೆರೆದು ಅದೆಷ್ಟೊ ಬಡ ರೋಗಿಗಳ ಕಣ್ಣಿರೊರೆಸುವ ಕಾಯಕ ಮಾಡುತ್ತಿದ್ದಾರೆ. ಇದು ಉರಾಳರನ್ನು ಬಹು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗಿದೆ. ಜೀವನದಲ್ಲಿ ಭರವಸೆ ಇಟ್ಟುಕೊಂಡು ಜೀವನ ಸಾಗಿಸಬೇಕು ಅದು ನಮ್ಮ ಬದುಕಿಗೆ ದಿಕ್ಸೂಚಿಯಾಗಿ ಕಾಣಬೇಕು ಎಂದರಲ್ಲದೆ ಗ್ರಾಮೀಣ ಭಾಗದಲ್ಲಿ ಹುಟ್ಟಿ ವೈದ್ಯಕೀಯ ಲೋಕದಲ್ಲಿ ಹೊಸ ಭಾಷ್ಯ ಬರೆಯುವ ಉರಾಳರ ಬದುಕಿನ ಆಯಾಮ ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ.ಇಂಥಹ ಸಾಧಕರಿಗೆ ಒಂದು ಶ್ರೇಷ್ಠ ಸಂಸ್ಥೆ ರಜತ ಗೌರವ ನೀಡುವುದು ಅರ್ಥಪೂರ್ಣ ವ್ಯವಸ್ಥೆಗೆ ಹಿಡಿದಕೈಗನ್ನಡಿ ಎಂದು ಅಭಿಪ್ರಾಯಪಟ್ಟರು.

    ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥರು ಡಾ.ಎಂ ವಿ ಉರಾಳರಿಗೆ ಪಂಚವರ್ಣ ರಜತ ಗೌರವ ಪ್ರದಾನಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಕೊಯ್ಕೂರು, ಸ್ನೇಹಕೂಟ ಮಣೂರು ಅಧ್ಯಕ್ಷೆ ಭಾರತಿ ವಿ ಮಯ್ಯ,ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.ಪಂಚವರ್ಣ ಯುವಕ ಮಂಡಲದ ಕಾರ್ಯದರ್ಶಿ ಸುಧೀಂದ್ರ ಜೋಗಿ ಸ್ವಾಗತಿಸಿದರು.ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು.ಶಶಿಧರ ತಿಂಗಳಾಯ ಸಹಕರಿಸಿದರು.ಈ ಸಂದರ್ಭದಲ್ಲಿ ಉರಾಳಸ್ ವತಿಂದ ಅಶ್ವಥ ಗೀಡ ನಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

  • ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 28 ಕೋಟಿ ನಷ್ಟ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ 28 ಕೋಟಿ ನಷ್ಟ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು: ಉಡುಪಿ ಜಿಲ್ಲೆಯಾದ್ಯಂತ ಮಳೆ‌ ಆರ್ಭಟದಿಂದ ಇದುವರೆಗೂ 9 ಮಂದಿ ಸಾವನ್ನಪ್ಪಿದ್ದು, ಸುಮಾರು 28 ಕೋಟಿ ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣ ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದದಲ್ಲಿ ಸಚಿವರು ಪಾಲ್ಗೊಂಡರು. ಬಳಿಕ ಮಾತನಾಡಿದ ಸಚಿವರು, ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಮಳೆಯಿಂದ ಅನಾಹುತಗಳು ಸಂಭವಿಸುತ್ತಿವೆ. ಇನ್ಮುಂದೆ ಇಂಥ ಯಾವುದೇ ಅನಾಹುತ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು ಎಂದು ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು, ಶೀಘ್ರವೇ ಉಡುಪಿ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಸಚಿವರು ಹೇಳಿದರು.

  • ಉಡುಪಿಯಲ್ಲಿ ಕೈಗೊಂಡ ಮುಂಜಾಗೃತಾ ಕ್ರಮ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ; ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

    ಉಡುಪಿಯಲ್ಲಿ ಕೈಗೊಂಡ ಮುಂಜಾಗೃತಾ ಕ್ರಮ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ; ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು: ಮಳೆ ಅನಾಹುತದ ಬಗ್ಗೆ ಎಚ್ಚರಿಕೆ ವಹಿಸಿ ಉಡುಪಿ ಜಿಲ್ಲೆಯಲ್ಲಿ ಮೊದಲೇ ಮುಂಜಾಗೃತಾ ಕ್ರಮ ಕೈಗೊಂಡ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು.

    ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ವೀಡಿಯೊ ಸಂವಾದ ನಡೆಸಿದರು. ಉಡುಪಿ ಜಿಲ್ಲೆಯಲ್ಲಿ ಬಹಳ ಮೊದಲೇ ವಾರ್ ರೂಂಗಳನ್ನು ತೆರೆಯಲಾಗಿತ್ತು. ಇದರಿಂದ ಸಾಕಷ್ಟು ಅನಾಹುತಗಳನ್ನು ತಪ್ಪಿಸಿದ್ದೇವೆ. ಆದರೆ ಕೈ ಸಂಕದಿಂದ ಹಾಗೂ ಇತರೆ ಮಳೆ ಅಪಘಾತಗಳಿಂದ 9 ಸಾವು ಸಂಭವಿಸಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಂಜಾಗ್ರತಾ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಇದೇ ಕ್ರಮ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಎಂದರು.

    ಸಂಬಂಧಪಟ್ಟ ಅಧಿಕಾರಿಗಳು ಮಳೆ ಸಾಧ್ಯತೆ, ಮಳೆಯ ಬಿರುಸಿನ ಬಗ್ಗೆ ಪ್ರತಿದಿನ ಪತ್ರಿಕಾ ಗೋಷ್ಠಿ ನಡೆಸಬೇಕು. ಕಾಲು ಜಾರುವ ಕಡೆಗಳಲ್ಲಿ ಹೋಗಬಾರದು, ತುಂಬಿ ಹರಿವ ನದಿಗಳನ್ನು ಹಾಯಬಾರದು ಎಂದು ಸೂಚಿಸಬೇಕು. ಸಾವು ತಡೆಗಟ್ಟಲು ಹೆಚ್ಚಿನ ಶ್ರಮವಹಿಸಬೇಕು ಎಂದರು.

    ಭೂ ಕುಸಿತ ಆಗಬಹುದಾದ ಸ್ಥಳಗಳ ಬಗ್ಗೆ ಒಂದು ಹಂತಕ್ಕೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇರುತ್ತದೆ. ಪೊಲೀಸ್, ಕಂದಾಯ, ನೀರಾವರಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಮಧ್ಯೆ ಸಮನ್ವಯವಿದ್ದರೆ ಸಾಕಷ್ಟು ಜೀವಹಾನಿ ತಪ್ಪಿಸಬಹುದು. ಮಣ್ಣು ಕುಸಿತವಾಗುವ ಸ್ಥಳಗಳ ಬಗ್ಗೆ ಇಲಾಖೆಗಳಿಗೆ ಮಾಹಿತಿ ಇರುತ್ತದೆ. ಕಾಳಜಿಯಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

  • ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ (ಜು. 27) ರಜೆ

    ಉಡುಪಿ ಜಿಲ್ಲೆಯ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ (ಜು. 27) ರಜೆ

    ಕುಂದಾಪುರ ಮಿರರ್ ಸುದ್ದಿ..

    ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ:27.07.2023 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

  • ತೆಗ್ಗರ್ಸೆ: ಕೊಚ್ಚಿಹೋದ ಕಿರುಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ – ತತ್ಕಾಲಕ್ಕೆ ಸ್ಟೀಲ್ ಸೇತುವೆ ನಿರ್ಮಾಣದ ಭರವಸೆ

    ತೆಗ್ಗರ್ಸೆ: ಕೊಚ್ಚಿಹೋದ ಕಿರುಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ – ತತ್ಕಾಲಕ್ಕೆ ಸ್ಟೀಲ್ ಸೇತುವೆ ನಿರ್ಮಾಣದ ಭರವಸೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಎರಡು ದಿನಗಳ ಹಿಂದೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತೆಗ್ಗರ್ಸೆ ಸಮೀಪದ ನೀರೋಡಿ ಎಂಬಲ್ಲಿ ಕೊಚ್ಚಿ ಹೋದ ಕಿರುಸೇತುವೆ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಕಳೆದ ವರ್ಷ ಪಟ್ಟಣ ಪಂಚಾಯಿತಿ ವತಿಯಿಂದ 3 ಲಕ್ಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲಾಗಿತ್ತು. ಈ ವರ್ಷದ ಆರಂಭದ ಮಳೆಗೇ ಈ ಕಿರು ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಶಾಲಾ ವಿದ್ಯಾರ್ಥಿಗಳಿಗೆ ರೈತರಿಗೆ ಕೂಲಿ ಕಾರ್ಮಿಕರಿಗೆ ಈ ರಸ್ತೆಯೇ ಆಧಾರವಾಗಿತ್ತು.

    ಬಗ್ಗೆ ಪ್ರಕಟಗೊಂಡ ವರದಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬೈಂದೂರಿ ತಹಸೀಲ್ದಾರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಮೊದಲಾದವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

    ಬಳಿಕ ಇಲ್ಲಿ ತಕ್ಷಣದಿಂದ ಸ್ಟೀಲ್ ಸೇತುವೆ ನಿರ್ಮಿಸಿ ಸ್ಥಳೀಯರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆ ಕಡಿಮೆಯಾದ ಬಳಿಕ ಶಾಶ್ವತ ಸೇತುವೆ ನಿರ್ಮಿಸುವ ಭರವಸೆ ನೀಡಿದರು.

    ಈ ಸಂದರ್ಭ ಸಾಮಾಜಿಕ ಹೋರಾಟಗಾರ ವೀರಭದ್ರ ಗಾಣಿಗ, ಮಾಜೀ ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಯ್ಯ ಪೂಜಾರಿ, ವಾಸು ಮರಾಠಿ ಹಾಜರಿದ್ದರು.

  • ಕುಂದಾಪುರ :ಹಠಾತ್ ಪ್ರವಾಹ ಮುನ್ಸೂಚನೆ: ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ಕುಂದಾಪುರ :ಹಠಾತ್ ಪ್ರವಾಹ ಮುನ್ಸೂಚನೆ: ಎಚ್ಚರಿಕೆ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

    ಕುಂದಾಪುರ ಮಿರರ್ ಸುದ್ದಿ…

    ಬೆಂಗಳೂರು: ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದಿರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

    ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ.

    ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಸಾಧ್ಯತೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲಾಡಳಿತ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರೂ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಬೇಕು. ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

    ಇಂತಹ ಸಂದರ್ಭಗಳಲ್ಲಿ ಗುಡ್ಡ ಕುಸಿಯುವ ಸಂಭವ ಇರುತ್ತದೆ. ಆದ್ದರಿಂದ ಪ್ರವಾಸಿಗರು ಮತ್ತು ಗುಡ್ಡದ ಮೇಲೆ ವಾಸಿಸುವ ಗ್ರಾಮಸ್ಥರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜಲಪಾತ ವೀಕ್ಷಣೆ ಅಥವಾ ಚಾರಣ ಕೈಗೊಳ್ಳಬಾರದು. ಜಿಲ್ಲಾಡಳಿತ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಗಾ ಇಡಬೇಕು ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ.