Category: ಸುದ್ದಿ

  • ಉಡುಪಿ :ಸಾರ್ವಜನಿಕರಿಗೆ ಪಾರದರ್ಶಕ ಮತ್ತು ತ್ವರಿತ ಸೇವೆ ನೀಡಿ: ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ.

    ಉಡುಪಿ :ಸಾರ್ವಜನಿಕರಿಗೆ ಪಾರದರ್ಶಕ ಮತ್ತು ತ್ವರಿತ ಸೇವೆ ನೀಡಿ: ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಕೆ.

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಅವುಗಳನ್ನು ನಿಯಮಾನುಸಾರವಾಗಿ, ಪಾರದರ್ಶಕವಾಗಿ, ತ್ವರಿತವಾಗಿ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಸೂಚನೆ ನೀಡಿದರು.

    ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿ ಉಪಸ್ಥಿತರಿದ್ದು, ಕಾಲಮಿತಿಯೊಳಗೆ ಕಡತಗಳ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅವುಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ , ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

    ಈಗಾಗಲೇ ಡೀಮ್ಡ್ ಫಾರೆಸ್ಟ್ ನಿಂದ ವಿನಾಯಿತಿಗೊಂಡ ಜಮೀನುಗಳನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ಜಂಟಿ ಸರ್ವೇಯನ್ನು ಮಾಡುವುದರೊಂದಿಗೆ ಅರಣ್ಯದಿಂದ ಬೇರ್ಪಡಿಸಿ, ಸಾರ್ವಜನಿಕ ಉಪಯೋಗಿ ಸರಕಾರಿ ಕಟ್ಟಡಗಳ ನಿರ್ಮಾಣ ಸೇರಿದಂತೆ ಮತ್ತಿತರ ಜನೋಪಯೋಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಡೀಮ್ಡ್ ಪಾರೆಸ್ಟ್ನಿಂದ ವಿನಾಯಿತಿ ಹೊಂದಿದ ಜಾಗಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈ ಬಾರಿಯ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿತ್ತು. ಉತ್ತಮ ಮಳೆಯಿಂದಾಗಿ ಸದ್ಯ ಸಮಸ್ಯೆ ನಿವಾರಣೆಯಾಗಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಮಳೆ ನೀರನ್ನು ಇಂಗಿಸುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದು, ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಭಿತ್ತನೆ ಬೀಜ ಲಭ್ಯವಿರುವಂತೆ ನೋಡಿಕೊಳ್ಳಬೇಕು. ರಸಗೊಬ್ಬರದ ದಾಸ್ತಾನು ಸಾಕಷ್ಟು ಇಟ್ಟುಕೊಳ್ಳುವುದರೊಂದಿಗೆ ಯಾವುದೇ ಗೊಂದಲಗಳು ಉಂಟಾಗದಂತೆ ವಿತರಣೆ ಕೈಗೊಳ್ಳಬೇಕು. ಪರಿಸರದಲ್ಲಿನ ಹೆಚ್ಚಿನ ತೇವಾಂಶದಿಂದ ಅಡಿಕೆ ಬೆಳೆಯಲ್ಲಿ ಕಂಡುಬರುವ ಕೊಳೆರೋಗ ಹಾಗೂ ಹಳದಿ ಎಲೆ ಚುಕ್ಕಿ ರೋಗಗಳಿಗೆ ಅಗತ್ಯ ಔಷದೋಪಚಾರಗಳನ್ನು ವಿತರಿಸಬೇಕು ಎಂದರು .

    ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವು ಹಿಂದಿರುಗಿ ಹೋಗದಂತೆ ಎಚ್ಚರವಹಿಸಿ, ಪ್ರತಿಶತ 100 ರಷ್ಟು ಅನುಷ್ಠಾನಗೊಳಿಸುವ ಕಾರ್ಯವನ್ನು ಅನುಷ್ಠಾನಾಧಿಕಾರಿಗಳು ಮಾಡಬೇಕು ಎಂದರು.

    ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಿ.ಆರ್.ಝಡ್ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಿ ಎಂದರು.

    ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿ ಸೇರಿದಂತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿನ ಅಪಾಯಕಾರಿ ಮರಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಲು ಮುಂದಾಗಬೇಕು. ಪ್ರಸ್ತುತ ಸಾಲಿನಲ್ಲಿ ಗಿಡಮರಗಳನ್ನು ಬೆಳಸಲು ನಿಗಧಿಪಡಿಸಿರುವ ಗುರಿಯನ್ನು ಸಾಧಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆ ಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಳಗಾದಲ್ಲಿ ಕೂಡಲೇ ಮರು ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದ ಅವರು, ವಿದ್ಯುತ್ ಮಾರ್ಗಗಳಿಗೆ ಅಡಚಣೆ ಉಂಟು ಮಾಡುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ 27 ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳಿಗೆ ಜಾಗದ ಕೊರತೆಯಿಂದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಾಧ್ಯವಾಗಿರುವುದಿಲ್ಲ. ಸ್ಥಳೀಯವಾಗಿ ದಾನಿಗಳನ್ನು ಸಂಪರ್ಕಿಸಿ, ಅವರಿಂದ ಅಗತ್ಯ ಜಾಗವನ್ನು ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

    ಚೆಕ್ ಡ್ಯಾಂ ಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗದ ಕಾರಣ ನೀರು ಸರಾಗವಾಗಿ ಹರಿದು ಹೋಗದೇ ತಗ್ಗು ಪ್ರದೇಶಗಳಿಗೆ ನುಗ್ಗಿ ಕೃತಕ ನೆರೆ ಉಂಟಾಗುತ್ತಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳುವಂತೆ ಸೂಚಿಸಿದರು.

    ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುವ ಬಗ್ಗೆ ಎಚ್ಚರವಹಿಸಿ ಅವುಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು, ಗೋವಾದ ಮೂಲಕ ಜಿಲ್ಲೆಗೆ ಅಕ್ರಮ ಮದ್ಯ ಸರಬರಾಜು ಆಗದಂತೆ ನೋಡಿಕೊಂಡಾಗ ಮಾತ್ರ ಅಬಕಾರಿ ಆದಾಯವನ್ನು ಹೆಚ್ಚಿಸಲು ಸಾಧ್ಯ ಎಂದರು

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

  • ಕುಂದಾಪುರ :ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪುರ ಕನ್ನಡ ಸಂಭ್ರಮ

    ಕುಂದಾಪುರ :ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪುರ ಕನ್ನಡ ಸಂಭ್ರಮ

    “ಅಬ್ಬಿ ಭಾಷೆ ಮಾತಾಡುಕೆ ಚಂದ, ಅದನ್ನು ಮರೆತ್ರೆ ನಾವು ನಮ್ಮನ್ನ ಮರೆತಂತೆ ” – ಪ್ರೋ . ಎಂ.ಬಾಲಕೃಷ್ಣ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ನಮ್ಮ ಬದುಕಿನಲ್ಲಿ ಜ್ಞಾನ, ಮೌಲ್ಯ, ಶಿಸ್ತು-ಸಂಯಮದ ಭಾಗವಾಗಿ ಕುಂದಾಪುರ ಕನ್ನಡ ಭಾಷೆಯಿದೆ. ಹಳ್ಳಿಯ ಭಾಷೆ ಜನಪದ ಸೊಗಡಿನಿಂದ ಕೂಡಿದೆ. ಹಾದಿ ಮೇಲೆ ಹೋಪರ್ ಹಾಡೆಂದು ಕಾಣ್ಬೇಡಿ.. ಹಾಡಲ್ಲ ನನ್ನ ಒಡಲೂರಿ.. ಎಂದು ಹೇಳಿದ ಮಾತಿನ ಶೈಲಿಯನ್ನು ವರ್ಣಿಸಿದರು.

    ಅವರು ಜುಲೈ 17 ರಂದು ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಿರಿಗೆ ಭತ್ತವನ್ನು ತುಂಬುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರಮೇಶ್ ಶೆಟ್ಟಿ ಅವರು ಮಾತನಾಡಿ “ಮಕ್ಕಳಿಗೆ ತಮ್ಮ ನೆಲದ ಸಂಸ್ಕೃತಿ ‘ಮೌಲ್ಯ ಅರಿವಾಗಬೇಕು ಆ ನಿಟ್ಟಿನಲ್ಲಿ ಇಂತಹ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇವು ಮಕ್ಕಳ ಬದುಕಿಗೆ ಮಾರ್ಗದರ್ಶನವಾಗಬೇಕೆಂದರು.

    ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿಯಾದ ಭರತ್ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ “ಕುಂದಾಪುರ ಕನ್ನಡ ಕೆಂಬುಕ್ ಚಂದ . ಈ ಭಾಷೆ ಬಳಸುದರ ಮೂಲಕ ಇನ್ನಷ್ಟು ಬೆಳೆಸಬೇಕು. ಭಾಷೆ ನಶಿಸಿ ಹೋದರೆ ಒಂದು ಸಂತತಿ ನಾಶವಾದಂತೆ ” ಎಂದರು.

    ವಿಶ್ವ ಕುಂದಾಪುರ ಕನ್ನಡ ದಿನದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪರ್ಣಿಕ ಸ್ವಾಗತಿಸಿ , ಶಾಧನ ದೇವಾಡಿಗ ನಿರೂಪಿಸಿ , ಪ್ರಾರ್ಥನ ವಂದಿಸಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅಗಸ್ಟಿನ್ ಕೆ. ಎ ಉಪಸ್ಥಿತರಿದ್ದರು. ಹಾಗೂ ಕಾಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

  • ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ :ಸಾಹಿತ್ಯದ ಅರಿವಿನಿಂದ ಬದುಕಿನ ದರ್ಶನ – ಡಾ.ರವಿರಾಜ್ ಶೆಟ್ಟಿ

    ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ :ಸಾಹಿತ್ಯದ ಅರಿವಿನಿಂದ ಬದುಕಿನ ದರ್ಶನ – ಡಾ.ರವಿರಾಜ್ ಶೆಟ್ಟಿ

    ಕುಂದಾಪುರ ಮಿರರ್ ‌ಸುದ್ದಿ…
    ಕುಂದಾಪುರ : ಸಾಹಿತ್ಯದ ಓದು ಅರಿವಾಗಿ ಅದು ಬೆಳಕಾದಾಗ ಮಾತ್ರ ಓದಿಗೆ ಬೆಲೆ. ಅದರೊಂದಿಗೆ ಬದುಕಿನ ವಾಸ್ತವವನ್ನು ಅರ್ಥೈಸಿಕೊಂಡು ನಮ್ಮ ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡುವ ಅರಿವು ಸಾಹಿತ್ಯದಿಂದ ಮೂಡಿದಾಗ ಬದುಕಿನ ಚಿರಂತನ ದರ್ಶನ ಸಾಧ್ಯ ಎಂದು ಡಾ| ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಕನ್ನಡ ಪ್ರಾಧ್ಯಾಪಕ ಡಾ| ರವಿರಾಜ್ ಶೆಟ್ಟಿ ಹೇಳಿದರು.

    ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಬೆಳದಿಂಗಳ ಚಿಂತನ ಮಾಲಿಕೆ-3ರಲ್ಲಿ “ಜೀವನ ದರ್ಶನ ಮತ್ತು ಸಾಹಿತ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

    ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.

    ಉಪಪ್ರಾಂಶುಪಾಲರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ವಾಣಿಜ್ಯ ಉಪನ್ಯಾಸಕಿ ದೀಪಾ ಪೂಜಾರಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಇಂಗ್ಲೀಷ್ ಉಪನ್ಯಾಸಕರಾದ ದೀಪಿಕಾ ಜಿ. ಹಾಗೂ ಮೋನಿಕಾ ಡಿಸೋಜ ಭಾವಗೀತೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.

  • ಹಂಗಾರಕಟ್ಟೆ- ವರ್ಗಾವಣೆಗೊಂಡ ಸೇಸು ಟೀಚರ್ ಇವರಿಗೆ ಬಿಳ್ಕೊಡುಗೆ ಸಮಾರಂಭ

    ಹಂಗಾರಕಟ್ಟೆ- ವರ್ಗಾವಣೆಗೊಂಡ ಸೇಸು ಟೀಚರ್ ಇವರಿಗೆ ಬಿಳ್ಕೊಡುಗೆ ಸಮಾರಂಭ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವರ್ಗಾವಣೆಗೊಂಡ ಸೇಸು ಟೀಚರ್ ಇವರಿಗೆ ಬಿಳ್ಕೊಡುಗೆ ಸಮಾರಂಭ ಹಂಗಾರಕಟ್ಟೆ ಶಾಲೆಯಲ್ಲಿ ಏರ್ಪಡಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸಹ ಶಿಕ್ಷಕರು ಹಾಗೂ ಪೋಷಕರು ಮತ್ತು ಎಸ್‍ಡಿಎಂಸಿ ಸದಸ್ಯರು ಹಳೆ ವಿದ್ಯಾರ್ಥಿಗಳು ಎಲ್ಲರೂ ಒಡಗೂಡಿ ಸೇಸು ಟೀಚರ್‍ಗೆ ಅಭಿನಂದನೆ ಸಲ್ಲಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‍ಡಿ ಎಂಸಿ ಅಧ್ಯಕ್ಷ ಡೆನಿಸ್ ಡಿಸೋಜ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಬ್ರಹ್ಮಾವರ ಕ್ಷೇತ್ರ ಸಮನ್ವಯ ಅಧಿಕಾರಿ ಅರ್ಚನಾ ಹೆಗಡೆ , ಹಂಗಾರಕಟ್ಟೆ ಸಿಆರ್‍ಪಿ ಅನುಪಮಾ, ಚೇತನಾ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಗಣೇಶ .ಜಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಜಯಂತಿ ಸ್ವಾಗತಿಸಿದರು.

    ಕಾರ್ಯಕ್ರಮವನ್ನು ಶಾಲಾ ಸಹಶಿಕ್ಷಕಿ ಉಷಾರಾಣಿ ನಿರೂಪಿಸಿ ನಿರ್ವಹಿಸಿದರು. ಶಿಕ್ಷಕಿ ಪ್ರಸಿಲ್ಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸನ್ಮಾನ ಪತ್ರವನ್ನು ಶಿಕ್ಷಕಿ ರಮ್ಯ ವಾಚಿಸಿದರು. ಹಾಗೂ ಶಿಕ್ಷಕಿ ವೀಣಾ ಸನ್ಮಾನಿತರ ಬಗ್ಗೆ ಪರಿಚಯಿಸಿದರು.ಶಿಕ್ಷಕಿ ಯಶೋಧ ವಂದಿಸಿದರು.

  • ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಗಿಳಿಯಾರು ಯುವಕ ಮಂಡಲದ ಸದಸ್ಯ ಜೆ.ಪಿ ಗಿಳಿಯಾರು ಇವರು ಪೋರ್ ಅಂಡ್ ಪ್ಲೇ ಕ್ರಿಕೆಟರ್ಸ ಮೂಲಕ ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಉಚಿತವಾಗಿ ಬ್ಯಾಗ್ ವಿತರಿಸಲಾಯಿತು. ಸಮಾರಂಭ ಶಾಲಾ ಮುಖ್ಯ ಶಿಕ್ಷಕ ರಮೇಶ, ಗಿಳಿಯಾರು ಯುವಕ ಮಂಡಲ ಅಧ್ಯಕ್ಷ ಶೇಖರ್.ಜಿ,ಸ್ಥಾಪಾಕಾಧ್ಯಕ್ಷ ಸುರೇಶ್ ಗಿಳಿಯಾರು,ಕೋಟ ಗ್ರಾ.ಪಂ ಸದಸ್ಯ ಯೋಗೇಂದ್ರ ಪೂಜಾರಿ,ಸಹ ಶಿಕ್ಷಕರು,ಎಸ್ ಡಿ ಎಂ.ಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಇದ್ದರು.

  • ಸಾಲಿಗ್ರಾಮ – ಮಹಿಳಾ ವೇದಿಕೆ ಸಾಲಿಗ್ರಾಮ ಮಹಾಸಭೆ ಮತ್ತು ಸನ್ಮಾನ

    ಸಾಲಿಗ್ರಾಮ – ಮಹಿಳಾ ವೇದಿಕೆ ಸಾಲಿಗ್ರಾಮ ಮಹಾಸಭೆ ಮತ್ತು ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಮಹಿಳಾ ವೇದಿಕೆ ಸಾಲಿಗ್ರಾಮ ಅಂಗ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಜು. 16.ರಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು.

    ಮಹಾಸಭೆಯಲ್ಲಿ ಬಿಎಸ್‍ಎನ್‍ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಬ್ ಡಿವಿಷನಲ್ ಇಂಜಿನಿಯರ್ ವಾಗ್ದೇವಿ ಮಂಜುನಾಥ ಉಪಾಧ್ಯ ಹಾಗೂ ಪೆÇ್ರೀಲೇಕ್ ಟೆಕ್ನಾಲಜಿಸ್ ಪ್ರೈವೇಟ್ ಲಿ ,ಸಾಸ್ತಾನ .ಇದರ ಸಿಇಓ ಸುಮಂಗಲ ತುಂಗ ,ಬಿ.ಇ .ಇವರುಗಳನ್ನು ಸನ್ಮಾನಿಸಲಾಯಿತು .
    ಅಲ್ಲದೆ ಇತ್ತೀಚೆಗೆ ಮಾಹೆ ಮಣಿಪಾಲ ಇಲ್ಲಿ ಪಿಎಚ್‍ಡಿ ಪದವಿ ಪಡೆದ ಸಾಧನೆಗಾಗಿ ಕು. ದಿವ್ಯಾ ಅಡಿಗ ಕಾರ್ಕಡ ಇವರನ್ನು ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

    ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ. ಸಿ. ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

    ಮಹಾಸಭೆಗೆ ಪೂರ್ವಭಾವಿಯಾಗಿ ನಡೆಸಿದ ಆಷಾಢ ಹಿಗ್ಗು ಕಾರ್ಯಕ್ರಮದಂದು ಸ್ಪರ್ಧೆಗಳಲ್ಲಿ ಒಟ್ಟು 47 ಜನ ವಿಜೇತರಾಗಿದ್ದು ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ,ಅಶಕ್ತರಿಗೆ ನೆರವು ನೀಡಲಾಯಿತು.

    ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಎಸ್ ಕಾರಂತ್ ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್. ಸತೀಶ್ ಹಂದೆ, ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತು ಕೇಂದ್ರ ಸಂಸ್ಥೆಯ ಜೊತೆ ಕಾರ್ಯದರ್ಶಿ ಸುಮತಿ ಕೋರ್ಯ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು.

    ಮಹಿಳಾ ವೇದಿಕೆ ಉಪಾಧ್ಯಕ್ಷೆ ರೇವತಿ ಐತಾಳ ಸ್ವಾಗತಿಸಿದರು .ಕಾರ್ಯದರ್ಶಿ ಶಿವಪ್ರಭ ಅಲ್ಸೆ ವರದಿ ವಾಚಿಸಿದರು. ಕೋಶಾಧಿಕಾರಿ ಪೂರ್ಣಿಮಾ ಅಧಿಕಾರಿಯಿಂದ ಲೆಕ್ಕಪತ್ರ ಮಂಡನೆ, ಮಹಿಳಾ ವೇದಿಕೆ ಸದಸ್ಯರಾದ ಗೀತಾ ಅಧಿಕಾರಿ ,ಮಾಲತಿ ಎಸ್ ರಾವ್ ,ಲತಾ ಹೊಳ್ಳ ,ವನಿತಾ ಉಪಾಧ್ಯ , ಸನ್ಮಾನ ಪತ್ರ ಮತ್ತು ಪರಿಚಯ ವಾಚಿಸಿದರು. ಭಾರತಿ ಹೇರ್ಳೆ, ಶಿವಪ್ರಭ ಆಲ್ಸೆ ಸಹಕರಿಸಿದರು ಅಮೃತ ಉಪಾಧ್ಯ ತಂಡ ಮತ್ತು ಮಹಿಳಾ ವೇದಿಕೆ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ತುಂಗ ವಂದನಾರ್ಪಣೆಗೈದರು.

  • ತೆಕ್ಕಟ್ಟೆ: “ಪ್ರಸಾಧನ” ‘ನೂತನ ಯಕ್ಷಾಭರಣ ಅನಾವರಣ’

    ತೆಕ್ಕಟ್ಟೆ: “ಪ್ರಸಾಧನ” ‘ನೂತನ ಯಕ್ಷಾಭರಣ ಅನಾವರಣ’

    ಯಶಸ್ವಿ ಕಲಾವೃಂದಕ್ ಕೊಟ್ಟದ್ ಎಲ್ಲೂ ಹೋತಿಲ್ಲೆ, ಮೂರ್ ಪಟ್ ಆಯಿ ಸಮಾಜಕ್ ಸಲ್ಲತ್: ಆನಂದ ಸಿ. ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: “ಕಣ್ಣಂಗೆ ಕಾಂಬುಕೇ ಸಿಗ್ದಿದ್ ಅಟ್ಟಣಿಗೆ ಆಟ, ದೊಂದಿ ಬೆಳಕಿನ ಆಟ, ಹವ್ಯಾಸಿ ಜೋಡಾಟ ಹೀಗೆ ಹಲವ್ ಬಗಿ ಆಟ ಮಾಡಿ ದಶಮ ಸಂಭ್ರಮದಲ್ ದೂಳ್ ಎಬ್ಸಿ ಬಿಟ್ ಸಂಘ ಯಶಸ್ವಿ. ಹೂವಿನ್‍ಕೋಲ್ ಅಲ್ಲಲ್ ಮನಿ ಮನಿಗ್ ಹೋಯ್ ಮತ್ ಆ ಸಾಂಪ್ರದಾಯಿಕ ಕಲಿಗ್ ಜೀವ ಕೊಟ್ ಸಂಸ್ಥೆ ಯಶಸ್ವಿ. ಕರಾವಳಿ ಭಾಗದಲ್ ಬಾಳ ವರ್ಷದಿಂದ ಒಳ್ಳೆ ಗುರುಗಳನ್ ಸೇರ್ಸಕಂಡ್ ವರ್ಷದಲ್ ಆರ್ ತಿಂಗಳೂ ತರಗತಿ ಮಾಡಿ ಮೇಲ್ಪಂಕ್ತಿಯಲ್ ಇಪ್ ಸಂಘ ಯಶಸ್ವಿ. ಯಶಸ್ವಿ ಸಂಘಕ್ ಕೊಟ್ ಕೊಡುಗೆ ಹಾಳಾತಿಲ್ಲೆ. ಕೊಟ್ಟದ್ದ್‍ಕ್ಕೂ ಮೂರ್ ಪಟ್ ಜಾಸ್ತಿ ಆಯ್ ಸಮಾಜಕ್ ಪ್ರಯೋಜನಕ್ ಬತ್ತತ್” ಎಂದು ವೇಷಭೂಷಣ ಅನಾವರಣಗೊಳಿಸಿ ಆನಂದ ಸಿ. ಕುಂದರ್ ಮಾತನ್ನಾಡಿದರು.

    ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇವರ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ಜುಲೈ 16ರಂದು ‘ಕುಂದಾಪುರ ಕನ್ನಡ ದಿನಾಚರಣೆ’ ಪ್ರಯುಕ್ತ ‘ಗ್ವಲ್ ಗ್ವಲ್ಲಿ’ ಯಕ್ಷಗಾನದ ಸಂದರ್ಭ ಹೊಸ ವೇಷಭೂಷಣ ಹೊಂದಿದ ಬಾಲಗೋಪಾಲರಿಗೆ ತುರಾಯಿ ಸಿಕ್ಕಿಸುವುದರ ಮೂಲಕ “ಪ್ರಸಾಧನ” ನೂತನ ಯಕ್ಷಾಭರಣ ಅನಾವರಣಗೊಳಿಸಿ ಆನಂದ ಸಿ. ಕುಂದರ್ ಉದ್ಘಾಟಿಸಿ ಮಾತನ್ನಾಡಿದರು.

    ‘ಕುಂದಾಪ್ರ ಭಾಷಿಗ್ ಒಂದ್ ಸೆಳ್ತ ಇತ್. ಅದ್ರ್ ಅಧ್ಯಯನ ರಾಜ್ಯ ಮಟ್ಟದಲ್ ಆಯ್ಕ್. ಸದ್ಯದಲ್ಲೇ ಅಧ್ಯಯನ ಪೀಠದಲ್ ಕುಂದಾಪ್ರ ಕನ್ನಡಕ್ ಒಳ್ಳೆ ಜಾಗ ಸಿಕ್ಕತ್. ಯಕ್ಷಗಾನದಲ್ ಕುಂದಾಪ್ರ ಕನ್ನಡದ ಸಾಹಿತ್ಯ ಬಳ್ಸಕಂಡ್ ಪ್ರಾಸದಲ್ ಪದ ಬರೂದ್ ಅಸ್ಟ್ ಸುಲ್ಭ ಇಲ್ಲೆ. ಇಪ್ಪತ್ತೈದನೇ ವರ್ಷಕ್ ಕಾಲ್ ಇಡ್ತ ಇಪ್ ಯಶಸ್ವೀ ಕಲಾವೃಂದನ ಗೆಲ್ಸುಕ್ ಪ್ರಸಂಗ ಬರ್ದ್ ಮೊಗಿಬೆಟ್ ಇಪ್ ಹೊತ್ತಿಗ್ ಜಯ ಸಿಕ್ಕಿಯೇ ಸಿಕ್ಕತ್’ ಎಂದು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಮಾನ್ಯ ಜಯಪ್ರಕಾಶ ಹಗ್ಡೆ ಅಭಿಪ್ರಾಯಪಟ್ಟರು.

    ಯಕ್ಷಗಾನಕ್ಕೂ, ಕುಂದಾಪುರ ಕನ್ನಡಕ್ಕೂ ಬಹಳ ಹಿಂದಿನಿಂದಲೂ ಅವಿನಾಬಾವ ಸಂಬಂಧ. ಯಕ್ಷ ಕಲಾವಿದರು ದೇಶ ವಿದೇಶ ತಿರುಗುತ್ತ, ಕುಂದಾಪುರ ಕನ್ನಡದಲ್ಲಿ ಹರಟುತ್ತಾ, ಕುಂದಗನ್ನಡದ ಸೊಗಡನ್ನು ಪಸರಿಸಿದರು. ಯಕ್ಷಗಾನ ಇರುವಷ್ಟು ಕಾಲ ಕುಂದಗನ್ನಡಕ್ಕೆ ಅಳಿವಿಲ್ಲ. ಇಲ್ಲಿ ಆನಂದ ಕುಂದರ್ ಬಹುದೊಡ್ಡ ಮೊತ್ತದ ಯಕ್ಷಗಾನ ವೇಷಭೂಷಣವನ್ನು ಸಂಸ್ಥೆಗೆ ನೀಡಿದರು. ಈ ದಿನ ಉದ್ಘಾಟನೆ ಹೆಚ್ಚು ಸೂಕ್ತ. ಪ್ರಸಾದ್ ಮೊಗೆಬೆಟ್ಟು ಅವರು ಕುಂದಾಪುರ ಕನ್ನಡವನ್ನು ಯಕ್ಷ ಛಂದಸ್ಸಿನೊಳಗೆ ಬಂಧಿಸಿ ಯಕ್ಷ ಸಾಹಿತ್ಯಕ್ಕೆ ಮೆರುಗು ನೀಡಿ ಬೆಳಗುತ್ತಿರುವ ಕಲಾವಿದರು. ಸಂಸ್ಥೆಯ ಪೋಷಕ ಸುಧಾಕರ ಶೆಟ್ಟಿ ತೆಕ್ಕಟ್ಟೆ, ಹಾಗೂ ಯಕ್ಷಾಭರಣ ತಯಾರಕರಾದ ಗಣೇಶ ಬಳಗಾರ ಇವರ ಸಾಧನೆಯನ್ನು ಸ್ತುತಿಸಿ ಅಭಿನಂದಿಸಿ ಕುಂದಾಪುರದ ಖ್ಯಾತ ವಕೀಲರಾದ ಎ.ಎಸ್.ಎನ್. ಹೆಬ್ಬಾರ್ ಮಾತನ್ನಾಡಿದರು.

    ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್, ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕೆರೆ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ತೆಕ್ಕಟ್ಟೆ ಇದರ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಧನ್ಯವಾದಗೈದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕುಂದಾಪುರ ಕನ್ನಡದಲ್ಲಿ ರಾಮಾಯಣ ಪ್ರಸಂಗದ ಕೆಲವು ಭಾಗ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಗ್ವಲ್ ಗ್ವಲ್ಲಿ” ರಂಗದಲ್ಲಿ ಪ್ರಸ್ತುತಿಗೊಂಡಿತು.

  • ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳೊಂದಿಗೆ ವಿವಿಧ ರಾಜ್ಯಗಳ ಅಧಿಕಾರಿಗಳ ಭೇಟಿ

    ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನಬಾರ್ಡ್ ಅಧಿಕಾರಿಗಳೊಂದಿಗೆ ವಿವಿಧ ರಾಜ್ಯಗಳ ಅಧಿಕಾರಿಗಳ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ನಬಾರ್ಡ್‍ನ ಡಿಡಿಎಮ್ ಸಂಗೀತಾ ಎಸ್. ಕರ್ತಾ, ಇವರ ನೇತೃತ್ವದಲ್ಲಿ ಬ್ರಿಡ್‍ನಿಂದ ಹೊಸದಾಗಿ ನೇಮಕಗೊಂಡ ವಿವಿಧ ರಾಜ್ಯಗಳ 35 ಅಭಿವೃದ್ಧಿ ಸಹಾಯಕ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಇತ್ತೀಚಿಗೆ ಭೇಟಿ ನೀಡಿದರು.

    ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾತನಾಡಿ ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳು, ಸದಸ್ಯರ ಕಲ್ಯಾಣ ನಿಧಿ, ಜಾನುವಾರು ಮೃತ್ಯತ್ವ ನಿಧಿ ಜೋಡಣೆ ಮತ್ತು ಅನುಷ್ಠಾನದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಾಲ ಪಡೆದ ಗ್ರಾಹಕ ಸದಸ್ಯರು ಮೃತರಾದಲ್ಲಿ ಅವರ ಹೊರಬಾಕಿ ಸಾಲಕ್ಕೆ ಒಂದು ತಿಂಗಳ ಒಳಗೆ ಅವರ ಮನೆಯವರು ಮರುಪಾವತಿ ಮಾಡಿದಲ್ಲಿ ಹೊರಬಾಕಿ ಸಾಲದ ಶೇಕಡಾ 25 – ಗರಿಷ್ಠ ರೂ.2,00,000/-ದ ತನಕ ಸದಸ್ಯರ ಕಲ್ಯಾಣ ನಿಧಿಯಿಂದ ಪ್ರಯೋಜನ ಪಡೆಯುವ ಅವಕಾಶವಿರುವ ಬಗ್ಗೆ ತಿಳಿಸಿದರು. ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಬ್ರಿಡ್‍ನ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು.

    ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಅವರು ಭೇಟಿ ನೀಡಿದರು.

    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ ವಂದನಾರ್ಪಣೆಗೈದರು.

  • ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ – ಜು.21 ರಂದು ಪತ್ರಿಕಾ ದಿನಾಚರಣೆ

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ – ಜು.21 ರಂದು ಪತ್ರಿಕಾ ದಿನಾಚರಣೆ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ: ಇಲ್ಲಿನ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಂಡಾಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು ಪತ್ರಿಕೋಧ್ಯಮ ವಿಭಾಗ ಮತ್ತು ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಜು.21ರಂದು ಬೆಳಿಗ್ಗೆ 10.30ಕ್ಕೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಸಂಘದ ಸಾಮಾಜಿಕ ಜಾಲತಾಣಗಳನ್ನು ಅನಾವರಣಗೊಳಿಸಲಿದ್ದಾರೆ. ಮಂಗಳೂರಿನ ಹಿರಿಯ ಪತ್ರಕರ್ತರಾದ ಯು.ಕೆ.ಕುಮಾರ್ ನಾಥ್ ಮತ್ತು ಎಸ್.ಜನಾರ್ದನ ಮರವಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಭಂಡಾಕಾರ್ಸ್ ಕಾಲೇಜಿನ ಪ್ರಾಂಶುಪಾಲ ನಾರಾಯಣ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಮ್.ಗೊಂಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

  • ಸಿದ್ಧಾಪುರ :ಹೆನ್ನಾಬೈಲ್ ಸರ್ಕಾರಿ ಶಾಲೆಯಲ್ಲಿ ಆಷಾಡಾ ತಿಂಡಿ ಪ್ರದರ್ಶನ

    ಸಿದ್ಧಾಪುರ :ಹೆನ್ನಾಬೈಲ್ ಸರ್ಕಾರಿ ಶಾಲೆಯಲ್ಲಿ ಆಷಾಡಾ ತಿಂಡಿ ಪ್ರದರ್ಶನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಹೆನ್ನಾಬೈಲ್ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಪ್ರಾಯೋಜಕತ್ವದಲ್ಲಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ ಹತ್ತಾರು ಬಗೆಯ ಆಷಾಡಾ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಉಪನ್ಯಾಸಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಮಾತನಾಡಿ ಹಳೆ ಕಾಲದ ಸಂಸ್ಕೃತಿ ಆಚಾರ ವಿಚಾರ ನಡೆ ನುಡಿ ಜತೆಗೆ ಅಂದಿನ ಕಾಲದ ಆಹಾರ ಪದ್ಧತಿ ಆರೋಗ್ಯ ದ್ರಷ್ಟಿ ,ಜೀವನ ಶೈಲಿಯಲ್ಲಿ ನಂಟು ಹೊಂದಿದೆ. ಧೀರ್ಘ ಆಯುಷ್ಯಕ್ಕೂ ಅಂದಿನ ಕಾಲದ ಆಹಾರ ಪದ್ಧತಿ ದೊಡ್ಡ ನಂಬಿಕೆ ಇದೆ ಆದುನಿಕ ಬದುಕಿಗೆ ಹೊಂದಿಕೊಂಡು ಅವೆಲ್ಲವೂ ಮರೆಯಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇಂತಹ ತಿಂಡಿ ತಿನಿಸುಗಳನ್ನು ಯುವ ಪೀಳಿಗೆ ಜತೆಗೆ ಸಮುದಾಯಕ್ಕೂ ಪರಿಚಯಿಸುವ ಅಗತ್ಯವಿದೆ ಎಂದರು.

    ಶಾಲಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ಮುಖ್ಯ ಶಿಕ್ಷಕ ಪದ್ಮನಾಭ ಶೇಟ್, ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ, ಅಂಗನವಾಡಿ ಶಿಕ್ಷಕಿ ದಿವ್ಯ,ಸಹ ಶಿಕ್ಷಕಿ ಅಮೃತ, ಗೌರವ ಶಿಕ್ಷಕಿ ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.

    (ವಿಶೇಷವಾಗಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ 20 ಬಗೆಯ ಆಹಾರ ಪದಾರ್ಥ ಖಾದ್ಯವನ್ನು ಪ್ರದರ್ಶನ ಮಾಡುವ ಮೂಲಕ ಹಿರಿಯ ಅತಿಥಿಗಳಿಂದ ಕಿರಿಯ ಶಾಲಾ ವಿದ್ಯಾರ್ಥಿಗಳಿಗೆ ತಿನ್ನುಸುವ ಜತೆಗೆ ಪರಿಚಯಿಸಿ ಸರಳ ಭೋಜನ ವ್ಯವಸ್ಥೆ ನಡೆಯಿತು)