Category: ರಾಜಕೀಯ

  • ಕುಂದಾಪುರ: ‘ಜ 22ಕ್ಕೆ ಉಡುಪಿಯಲ್ಲಿ ಪ್ರಜಾಧ್ವನಿ, 40 ಅಗ್ರಮಾನ್ಯ ನಾಯಕರು ಭಾಗಿ’-ಸೊರಕೆ

    ಕುಂದಾಪುರ: ‘ಜ 22ಕ್ಕೆ ಉಡುಪಿಯಲ್ಲಿ ಪ್ರಜಾಧ್ವನಿ, 40 ಅಗ್ರಮಾನ್ಯ ನಾಯಕರು ಭಾಗಿ’-ಸೊರಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಉಡುಪಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಜ.22ರಂದು ನಡೆಯಲಿದ್ದು ಪಕ್ಷದ 40 ಅಗ್ರಮಾನ್ಯ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚುನಾವಣೆಗೆ ಪೂರ್ವಭಾವಿಯಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.


    ಅವರು ಹೆಮ್ಮಾಡಿ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
    ಕೋಮು ಭಾವನೆಯನ್ನು ಕೆರಳಿಸುವುದು, ಬೆಲೆಏರಿಕೆ, ಭ್ರಷ್ಟಾಚಾರ, ಬಡವರ ಬದುಕಿನಲ್ಲಿ ಆಟವಾಡುತ್ತಲೇ ಇರುವ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳಿಂದ ರಾಜ್ಯದ ಜನ ಬೇಸೆತ್ತು ಹೋಗಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ಸ್ಪಂದಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಯಿತು. ಕೇರಳದಲ್ಲಿ ಫ್ಯಾಕೆಜ್ ನೀಡಲಾಗುತ್ತದೆ. ಅದೇ ಕರ್ನಾಟಕದಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಕರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದರೂ ಕೂಡಾ ಪರಿಹಾರ ನೀಡಲಿಲ್ಲ. ಬಂಡವಾಳಶಾಹಿಗಳನ್ನು ಶ್ರೀಮಂತ ಮಾಡುವುದರಲ್ಲಿಯೇ ಸರ್ಕಾರಗಳು ನಿರತವಾಗಿವೆ ಎಂದ ಅವರು, ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಅಲ್ಲಿನ ಆಡಳಿತ ಮಂಡಳಿ ಗುಜರಿಗೆ ಹಾಕಿತು. ಸಕ್ಕರೆ ಕಾರ್ಖಾನೆಯ ಅವಶೇಷವೂ ಉಳಿಯದಂತೆ ಮಾಡಿತು ಇದು ಬಿಜೆಪಿ ಆಡಳಿತದ ಕೊಡುಗೆ. ಕಸ್ತೂರಿ ರಂಗನ್ ವರದಿಯ ಆತಂಕ ಇನ್ನೂ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರದ ಬಳಿ ಪರಿಹಾರವಿಲ್ಲ. ಕರಾವಳಿಯಲ್ಲಿ ನಡೆದ ಕೊಲೆಗಳಲ್ಲಿ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ, ಯಡಮೊಗೆಯ ಉದಯ ಗಾಣಿಗ ಕೊಲೆಯಲ್ಲಿ ಆರೋಪಿಗಳು ಬಿಜೆಪಿಯ ಪ್ರಭಾವಿಗಳೇ ಆಗಿದ್ದಾರೆ ಎಂದರು.
    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಬೈಂದೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್‍ನಲ್ಲಿ ಯಾವುದೇ ಬಣಗಳಿಲ್ಲ. ಭೂತ್ ಮಟ್ಟದಿಂದಲೇ ಪಕ್ಷ ಸದೃಢವಾಗಿದೆ. ಬೈಂದೂರು ಬ್ಲಾಕ್‍ನಲ್ಲಿ ಈಗಾಗಲೇ ಬೂತ್ ಮಟ್ಟದ ಸಭೆಗಳು ಪೂರ್ಣಗೊಳ್ಳುವ ಹಂತ ತಲುಪಿವೆ. ಮುಂದೆ 30 ಮನೆಗೊಂದು ಗ್ರಾಮೀಣ ಸಭೆ ನಡೆಸಿ, ಪರಿಣಾಮಕಾರಿಯಾಗಿ ಪಕ್ಷ ಮತದಾರರ ಹತ್ತಿರ ಹೋಗುವ ಕೆಲಸ ಮಾಡಲಿದೆ ಎಂದರು.
    ಉಡುಪಿಯಲ್ಲಿ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಬೈಂದೂರು, ವಂಡ್ಸೆ ಬ್ಲಾಕ್‍ನಿಂದ ದೊಡ್ಡ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ತಲ್ಲೂರಿನಿಂದ ರ್ಯಾಲಿಯ ಮೂಲಕ ಉಡುಪಿಯನ್ನು ತಲುಪಲಿದ್ದೇವೆ ಎಂದರು.
    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಬಿರುಕಿಲ್ಲ. ಎಲ್ಲ ನಾಯಕರು ಒಟ್ಟಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ರಾಜ್ಯದ್ಯಂತ ಪ್ರಜಾಧ್ವನಿ ಯಾತ್ರೆ ಸಂಚಾರ ಮಾಡಲಿದೆ. ಉಡುಪಿಯ ಕಾರ್ಯಕ್ರಮದಲ್ಲಿ 25 ಸಾವಿರ ಜನ ಭಾಗವಹಿಸಲಿದ್ದಾರೆ. ಈ ಹಿಂದೆ ಸಿದ್ಧರಾಮಯ್ಯ ಚುನಾವಣೆಯ ಪೂರ್ವದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಶೇ.99ರಷ್ಟನ್ನು ಕಾರ್ಯರೂಪಕ್ಕೆ ತಂದಿದ್ದರು. ಬಿಜೆಪಿ ಸರ್ಕಾರ ಚುನಾವಣಾ ಪೂರ್ವ ನೀಡಿದ 600 ಆಶ್ವಾಸನೆಗಳಲ್ಲಿ 100ನ್ನೂ ಈಡೇರಿಸಿಲ್ಲ. ಬಿಜೆಪಿ ಇವತ್ತು ಸುಳ್ಳು ಹೇಳಿಯೇ ರಾಜಕೀಯ ಮಾಡುತ್ತಿದೆ ಎಂದರು.
    ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ರಘುರಾಮ ಶೆಟ್ಟಿ, ರಾಜು ಪೂಜಾರಿ, ದೇವಾನಂದ ಶೆಟ್ಟಿ, ಡಾ.ಯಾದವ್, ಐಟಿ ಸೆಲ್‍ನ ರೋಶನ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಪಾಂಡು, ಜಯರಾಮ, ನಾಗಪ್ಪ ಕೊಠಾರಿ, ವಂಡಬಳ್ಳಿ ಜಯರಾಮ ಶೆಟ್ಟಿ, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್‍ನ ಪದಾಧಿಕಾರಿಗಳು, ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.
    ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಅನಂತ ಮೊವಾಡಿ ಸ್ವಾಗತಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ ವಂದಿಸಿದರು.

  • ಬೈಂದೂರು : ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಚಾಲನೆ

    ಬೈಂದೂರು : ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಕರ್ನಾಟಕ ರಾಜ್ಯಾದ್ಯಂತ ಜ.2ರಿಂದ-12 ರವರೆಗೆ ನಡೆಯುತ್ತಿರುವ ಬೂತ್ ವಿಜಯ ಅಭಿಯಾನವನ್ನು ಬೈಂದೂರು ಮಂಡಲದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೂತ್ ಗೆಲ್ಲಿಸುವ ಮೂಲಕ ಕ್ಷೇತ್ರ ಗೆಲ್ಲುವ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

    ವೇದಿಕೆಯಲ್ಲಿ ಶಾಸಕರಾದ ಬಿಎಮ್ ಸುಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಕಿಶೋರ್ ಕುಮಾರ್, ಉಪ್ಪುಂದ ಆನಂದ ಖಾರ್ವಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನ ಕುದ್ರು ಹಾಗೂ ಬೂತ್ ಅಧ್ಯಕ್ಷರಾದ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.

    ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು ಹಾಗೂ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಧನ್ಯವಾದ ಅರ್ಪಿಸಿದರು

  • ಕುಂದಾಪುರ :ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಚಾಲನೆ

    ಕುಂದಾಪುರ :ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಚಾಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೋಟೇಶ್ವರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಮಾರ್ಕೊಡು 38ನೇ ಬೂತ್ ಅಧ್ಯಕ್ಷ ರಾಮಚಂದ್ರ ಶೇರಿಗಾರ್ ಅವರ ನಿವಾಸದಲ್ಲಿ ಕೇಂದ್ರ ಸಚಿವೆ ಉಡುಪಿ ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನೂರ ಐವತ್ತಕ್ಕೂ ಅಧಿಕ ಸೀಟ್ ನೊಂದಿಗೆ ಸರ್ಕಾರ ರಚಿಸಬೇಕು, ಆ ನಿಟ್ಟಿನಲ್ಲಿ ಬೂತ್ ಮಟ್ಟದ ಪ್ರತಿ ಕಾರ್ಯಕರ್ತರು ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಪ್ರತಿ ಮನೆಮನೆಗೂ ತಲುಪಿಸಬೇಕು ಆ ಮೂಲಕ ಅಭ್ಯರ್ಥಿಗಳು ಅತೀ ಹೆಚ್ಚಿನ ಮತಗಳ ಅಂತರದೊಂದಿಗೆ ವಿಜಯ ಸಾಧಿಸಲು ಸಹಾಕಾರಿಯಾಗಬೇಕು ಎನ್ನುತ್ತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತಾಗಿ ಮಾತನಾಡಿದರು.

    ಬೂತ್ ಅಧ್ಯಕ್ಷರಾದ ರಾಮಚಂದ್ರ ಶೇರಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯ್ಲಾಡಿ, ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ರಾಜ್ಯ ಆಹಾರ ನಿಗಮ ಮಂಡಳಿಯ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುತ್ಯಾರ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣ ಗೊಲ್ಲ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಆಚಾರ್ ಉಪಸ್ಥಿತರಿದ್ದರು.

    ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ ವಂದಿಸಿದರು, ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಸುರೇಂದ್ರ ಕಾಂಚನ್ ವಂದೇ ಮಾತರಂ ಗೀತೆ ಹಾಡಿದರು.

  • ಕೊಲ್ಲೂರು : ಬಿಜೆಪಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡಲಾಗುತ್ತಿಲ್ಲ ; ಅದಕ್ಕಾಗಿ ಸಾವರ್ಕರ್ ಹೆಸರು ಬಳಸುತ್ತಿದೆ – ಧ್ರುವನಾರಾಯಣ್

    ಕೊಲ್ಲೂರು : ಬಿಜೆಪಿಗೆ ಅಭಿವೃದ್ಧಿಯ ಬಗ್ಗೆ ಮಾತನಾಡಲಾಗುತ್ತಿಲ್ಲ ; ಅದಕ್ಕಾಗಿ ಸಾವರ್ಕರ್ ಹೆಸರು ಬಳಸುತ್ತಿದೆ – ಧ್ರುವನಾರಾಯಣ್

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ ಧರ್ಮರಾಜಕಾರಂಕ್ಕೆ ಮುಂದಾಗಿದೆ. ಅಭಿವೃದ್ಧಿ ಕೆಲಸಗಳನ್ನೇ ಮಾಡದ ಬಿಜೆಪಿಗೆ ಸಾವರ್ಕರ್ ಹೆಸರೇ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಧ್ರುವನಾರಾಯಣ ಆಕ್ರೋಶ ಹೊರಹಾಕಿದ್ದಾರೆ.

    ಕೊಲ್ಲೂರಿನ ಎ.ಎನ್.ಆರ್. ಅತಿಥಿ ಗೃಹದಲ್ಲ್ಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದರು. ಅಭಿವೃದ್ದಿ ಕೆಲಸಗಳ ಪಟ್ಟಿ ಮಾಡಲು ಬಿಜೆಪಿಗೆ ಹೆಸರೇ ಸಿಗುತ್ತಿಲ್ಲ. ಹಾಗಾಗಿ ಸಾವರ್ಕರ್ ಅದೂ ಇದು ಅಂತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಬಿಜೆಪಿ ಬಣ್ಣದ ಮಾತುಗಳನ್ನಾಡಿ ಜನರನ್ನು ಮರಳುಬಮಾಡಲು ಯತ್ನಿಸುತ್ತಿದೆ. ಆದರೆ ಇದೆಲ್ಲ ನಡೆಯುವುದಿಲ್ಲ. ಮುಮದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಧ್ರುವ ಹೇಳಿದರು.

    ನಾನೂ ಹಿಂದೂನೆ. ನಾನೂ ಪೂಜೆ ಮಾಡ್ತೇನೆ ಎಂದು ಹೇಳಿದ ಧ್ರುವನಾರಾಯಣ್, ಆದರೆ ಧರ್ಮವನ್ನು ರಾಜಕೀಯಗೊಳಿಸುವುದಿಲ್ಲ. ಧರ್ಮ, ಜಾತಿ ಬಳಸಿ ಒಂದು ಬಾರಿ ಮತಗಳಿಸಿ ಅಧಿಕಾರ ಪಡೆಯಬಹುದು. ಆದರೆ ಅದು ಶಾಶ್ವತ ಅಲ್ಲ. ಜನ ಅರ್ಥ ಮಾಡ್ಕೋತಾರೆ ಎಂದರು.

    ಪ್ರತಾಪಚಂದ್ರ ಶೆಟ್ಟಿ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ಅವರು, ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತವಿದೆ ಎಂದರು.

  • ಬೈಂದೂರು :ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಗೆಲುವು ನಮ್ಮದೇ : ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ರೋಝೀ ಜಾನ್

    ಬೈಂದೂರು :ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಗೆಲುವು ನಮ್ಮದೇ : ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ರೋಝೀ ಜಾನ್

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ಚುನಾವಣಾ ತಯಾರಿಗೆ ಇದು ಮಹತ್ವಪೂರ್ಣ ಸಮಯ. ಬೈಂದೂರು ವಿಧಾನಸಭಾ ಕ್ಷೇತ್ರದ 248 ಭೂತ್‍ಗಳಲ್ಲಿಯೂ ಕಾರ್ಯಕರ್ತರು ಪ್ರವೃತ್ತರಾಗಬೇಕು. ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಕಾರ್ಯದರ್ಶಿ, ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ ರೋಝಿ ಜಾನ್ ಹೇಳಿದರು.

    ಅವರು ಸೋಮವಾರ ಕೊಲ್ಲೂರಿನ ಎಎನ್‍ಆರ್ ಅತಿಥಿಗೃಹದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪಕ್ಷದ ನಾಯಕರ ಹಾಗು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ದಿ ಕೆಲಸಗಳ ಕುರಿತು ಮಾತನಾಡುತ್ತಿಲ್ಲ. ಕೇವಲ 40 ಪರ್ಸೆಂಟ್ ಕಮಿಶನ್ ಒಳಗೆ ಮುಳುಗಿ ಹೋಗಿರುವ ಸರ್ಕಾರವನ್ನು ಕಿತ್ತೆಸೆಯುವ ಕಾಲ ಬಂದಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಜನರಿಗೆ ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ ಗೊತ್ತಾಗಿದೆ. ಕಾಂಗ್ರೆಸ್‍ನಿಂದ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎನ್ನುವುದು ಜನರಿಗೆ ತಿಳಿದಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಬೈಂದೂರಿನಲ್ಲಿ ಕೆ.ಗೋಪಾಲ ಪೂಜಾರಿ ಒಬ್ಬರೇ ಚುನಾವಣೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಬೈಂದೂರಿನ ಕಾಂಗ್ರೆಸ್ ನಾಯಕರ ಒಗ್ಗಟ್ಟನ್ನು ತೋರಿಸುತ್ತದೆ. ಬೈಂದೂರಿನಲ್ಲಿ ಗೆದ್ದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಮಾತನಾಡಿ, ರಾಜ್ಯದಲ್ಲಿ 37ಲಕ್ಷ ಮತದಾರರ ಮತದಾನವನ್ನು ಕಸಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಈಗಾಗಲೇ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ವಜಾಗೊಳಿಸಿದೆ. ಬೆಂಗಳೂರು ನಗರದಲ್ಲೇ 7 ಲಕ್ಷ ಮತದಾರರ ಹಕ್ಕನ್ನು ಕಸಿಯಲಾಗಿದೆ. ಒಂದು ಮತದಿಂದ ಗೆದ್ದು ಶಾಸಕನಾದವನು ನಾನು. ಆ ಒಂದು ಮತದ ಪ್ರಾಮುಖ್ಯತೆ ಏನೆನ್ನುವುದು ನನಗೆ ತಿಳಿದಿದೆ. ಹೀಗಾಗಿ ಒಂದೊಂದು ಮತವೂ ನಮಗೆ ಅತ್ಯವಶ್ಯಕ. ಪ್ರತೀ ಮತವನ್ನೂ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರದ್ದು ಎಂದರು.

    ಎಲ್ಲಾ ಕ್ಷೇತ್ರಗಳಲ್ಲಿಯೂ ಚುನಾವಣಾ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಬೈಂದೂರಿನಲ್ಲಿ ನಮಗೆ ಅಂತಹ ಸಮಸ್ಯೆ ಇಲ್ಲ. ಇದಕ್ಕಾಗಿ ಇಲ್ಲಿನ ಮುಖಂಡರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಷ್ಟಪಟ್ಟು ರಾಜಕಾರಣಕ್ಕೆ ಬಂದು ನಾಲ್ಕು ಬಾರಿ ಜಯ ಗಳಿಸಿದವರು ಗೋಪಾಲ ಪೂಜಾರಿಯವರು. ಕರಾವಳಿಯಲ್ಲಿ ಧಾರ್ಮಿಕವಾಗಿ ಪ್ರದೋದಿಸಿ ಮತ ಗಳಿಸಿಕೊಳ್ಳುವವರ ಮುಂದೆ ನಾಲ್ಕು ಬಾರಿ ಶಾಸಕರಾಗುವುದು ಸಾಮಾನ್ಯದ ಮಾತಲ್ಲ. ಗೋಪಾಲ ಪೂಜಾರಿಯವರ ಶಾಸಕತ್ವದ ಅವಧಿಯಲ್ಲಾದ ಅಭಿವೃದ್ದಿಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕು ಎಂದರು.

    ಬಿಜೆಪಿಗೆ ಇಂದು ಜನರೆದುದುರು ಬರುವ ಯಾವುದೇ ನೈತಿಕತೆ ಇಲ್ಲ. ಅಭಿವೃದ್ದಿ ವಿಚಾರಗಳ ಕುರಿತು ಮಾತನಾಡದೆ ಧಾರ್ಮಿಕ ಭಾವನೆ ಕೆರಳಿಸುವ, ಸಿದ್ರಾಮುಲ್ಲಾಖಾನ್ ಎಂಬುದರ ಮೂಲಕ ನಮ್ಮ ನಾಯಕರನ್ನು ನಿಂದನೆ ಮಾಡುವ ಕೆಲಸ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

    ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚಿಕಿತ್ಸೆಗೊಳಗಾಗಿ ಮನೆಯಲ್ಲೇ ಕೂತ ಮೂರು ತಿಂಗಳು ಪಕ್ಷಭೇದ ಮರೆತು ವಿವಿಧ ರಾಜಕೀಯ ಮುಖಂಡರುಗಳು ನನ್ನ ಮನೆಗೆ ಬಂದು ಆರೋಗ್ಯವನ್ನು ವಿಚಾರಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಕ್ಷೇತ್ರದ ಜನರು ನನ್ನನ್ನು ನೋಡಲು ಬಂದಿದ್ದಾರೆ. ಸೋತ ಸಂದರ್ಭದಲ್ಲಿಯೂ ನನ್ನ ನೋವಿನ ದಿನಗಳಲ್ಲಿ ಕ್ಷೇತ್ರದ ಜನರು ನನ್ನ ಆರೋಗ್ಯ ವಿಚಾರಿಸುವ ಮೂಲಕ ಅವರ ಹೃದಯದಲ್ಲಿ ನನಗೆ ಒಂದಿಂಚಾದರೂ ಜಾಗ ಕೊಟ್ಟಿದ್ದಾರೆ ಎನ್ನುವುದು ಸಂತಸದ ವಿಚಾರ ಎಂದರು.

    ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ. ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕೆಪಿಸಿಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, , ಮುಖಂಡರಾದ ರಮೇಶ್ ಗಾಣಿಗ, ಪ್ರಸನ್ನ ಕುಮಾರ್, ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

  • ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಕುಂದಾಪುರ ಮಿರರ್ ಸುದ್ದಿ…

    Video:

    ಕುಂದಾಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಲು ಸಿದ್ಧತೆ ನಡೆಸಿದೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಮಂಗಳವಾರ ವಿವಿಧ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಸಭೆ ನಡೆಸಲಾಯಿತು. ಬೀಜಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಭೆಯು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ತೆಕ್ಕಟ್ಟೆಯಲ್ಲಿ ನಡೆಯಿತು. ಕೋಟೆಶ್ವರ ಜಿಲ್ಲಾ ಪಂಚಾಯತ್ ಮತ್ತು ಕುಂದಾಪುರ ಪುರಸಭಾ ವ್ಯಾಪ್ತಿಯ ಸಭೆಯು ಆರ್.ಎನ್. ಶೆಟ್ಟಿ ಮಿನಿಹಾಲ್ ಕುಂದಾಪುರದಲ್ಲಿ, ಹಾಲಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಸಭೆಯು ಜನ್ನಾಡಿಯ ಫೇವರೆಟ್ ಹಾಲ್ ನಲ್ಲಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಭೆಯು ಕಾಂಗ್ರೆಸ್ ಪಕ್ಷದ ಕಚೇರಿ ಇಂದಿರಾ ಸಭಾಭವನದಲ್ಲಿ ನಡೆಯಿತು.

    ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ನಾಲ್ಕು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಯಾರನ್ನೇ ಪಕ್ಷ ಆಯ್ಕೆ ಮಾಡಿದರೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಂದರ್ ಹೇಳಿದರು.

  • ಹೆಮ್ಮಾಡಿ :ಮತದಾರರ ಪಟ್ಟಿಯ ಅವೈಜ್ಞಾನಿಕ ಪರಿಷ್ಕರಣೆ – ಸಮಗ್ರ ತನಿಖೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗ್ರಹ

    ಹೆಮ್ಮಾಡಿ :ಮತದಾರರ ಪಟ್ಟಿಯ ಅವೈಜ್ಞಾನಿಕ ಪರಿಷ್ಕರಣೆ – ಸಮಗ್ರ ತನಿಖೆಗೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕೆಪಿಸಿಸಿಗೆ ಬಂದ ಮಾಹಿತಿ ಪ್ರಕಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 2014ರಂತೆ ಸುಮಾರು 19 ಸಾವಿರ ಮತದಾರರನ್ನು ಮತದಾರರ ಪಟ್ಟಿಯಿಂದ ತಗೆದು ಹಾಕಲಾಗಿದೆ. ಮೃತಪಟ್ಟವರು, ಸ್ಥಳಾಂತರವಾದವರ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಒಂದೊಂದು ಬೂತ್‍ನಿಂದ 50-60 ಮತದಾರರನ್ನು ತಗೆದುಹಾಕಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಬೇಕು ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆರೋಪಿಸಿದ್ದಾರೆ.

    Video:


    ಸಾಕಷ್ಟು ಗೊಂದಲಗಳು ಈ ಪಟ್ಟಿಯಲ್ಲಿದೆ. ಉದಾಹರಣೆಗೆನ ಗುಲ್ವಾಡಿ ಗ್ರಾಮದ ಮುಸ್ಲಿಂ ಮತಗಳನ್ನು ದೇವಲ್ಕುಂದ ವಾರ್ಡ್‍ನಲ್ಲಿ ಹಾಕಲಾಗಿದೆ. ದೇವಲ್ಕುಂದ ಬೂತ್‍ನ ಬಿಲ್ಲವ ಮತಗಳನ್ನು ಗುಲ್ವಾಡಿ ಬೂತ್‍ನಲ್ಲಿ ಸೇರಿಸಲಾಗಿದೆ. ವಿಪರ್ಯಾಸವೆಂದರೆ ದೇವಲ್ಕುಂದ ಗ್ರಾಮದಲ್ಲಿ ಮುಸ್ಲಿಂ ಮತಗಳೆ ಇಲ್ಲ. ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಅಡಗಿದೆ. ಈ ರೀತಿಯ ಗೊಂದಲಗಳಿಗೆ ಯಾರು ಕಾರಣರು ಎನ್ನುವ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದರು.
    ಮತದಾರರ ಪಟ್ಟಿ ಪರಿಷ್ಕರಣೆ, ಸೇರ್ಪಡೆಗೆ ಡಿ.8 ಒಂದು ದಿನವನ್ನು ನಿಗಧಿ ಪಡಿಸಿದ್ದು ಸರಿಯಲ್ಲ. ಮತದಾರರು ಪಟ್ಟಿ ಪರಿಶೀಲನೆ ಮಾಡಿ, ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಲು ಇನ್ನೂ ಕಾಲವಕಾಶ ನೀಡಬೇಕು. 19 ಸಾವಿರ ಮತದಾರರ ಪುನಃ ಸೇರ್ಪಡೆಯಾಗಲು ಸಮಯ ಬೇಕು ಎಂದರು.
    ಮತದಾರರ ಪಟ್ಟಿ ಗೊಂದಲ, ಸರಿಪಡಿಸುವಿಕೆಯ ಬಗ್ಗೆ ಎಲ್ಲಾ ಬೂತ್ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ. ನ್ಯಾಯ ಸಿಗದೇ ಇದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.

    ವಿಧಾನಸಭಾ ಕ್ಷೇತ್ರದಲ್ಲಿ ಪೊಲೀಸ್ ಠಾಣೆಗಳನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳು ಇದ್ದರೂ ಅವರಿಗೆ ರಾಜಕೀಯ ಪ್ರಭಾವ ಬಳಸಿ ಒತ್ತಡ ತರಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲೋಪದೋಷಗಳ ಪ್ರಕಟಿಸಿದರೆ ಅವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದರು.

    ಮೀನುಗಾರರಿಗೆ ಸೀಮೆ ಎಣ್ಣೆ ಸಿಗದಿರುವುದರಿಂದ ಮೀನುಗಾರರು ಡಿ.3ರಂದು ಪಾದಯಾತ್ರೆಯ ಮೂಲಕ ಜಿಲ್ಳಾಧಿಕಾರಿಗಳ ಕಛೇರಿಗೆ ತೆರಳಲಿದ್ದಾರೆ. ಅದರಲ್ಲಿ ನಾನು ಭಾಗವಹಿಸಲಿದ್ದೇನೆ. ಕಳೆದ 5 ತಿಂಗಳಿಂದ ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆಯಾಗಿಲ್ಲ. ಮೀನುಗಾರರ ಪ್ರತಿಭಟನೆಗೆ ಹೆದರಿ ಸಿ.ಎಂ.ಭೇಟಿ ಹಿನ್ನೆಲೆಯಲ್ಲಿ ಸ್ವಲ್ಪ ಸೀಮೆಎಣ್ಣೆ ಒದಗಿಸಿದರು. ಈಗ ನಾಡದೋಣಿ ಮೀನುಗಾರರು ಅತಂತ್ರರಾಗಿದ್ದಾರೆ. ಈ ಸರಕಾರ ಸಂಪೂರ್ಣವಾಗಿ ಮೀನುಗಾರಿಕೆಯನ್ನು ಕಡೆಗಣಿಸಿದೆ. ಸಂಕಷ್ಟ ಪರಿಹಾರ ನಿಧಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.
    ಸರ್ಕಾರ ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರ ಮಾಡುತ್ತಿದೆ. ಮುಂದೆ ಸಿದ್ಧರಾಮಯ್ಯ ಸರ್ಕಾರ ಬರುತ್ತದೆ. ಆಗ ಇಂದಿರಾ ಕ್ಯಾಂಟೀನ್ ಪುನಶ್ಚೇತನ ಮಾಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಬೈಂದೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಉಪಸ್ಥಿತರಿದ್ದರು.

  • ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ವಿಶೇಷ ಕಾರ್ಯಕಾರಿಣಿ ಸಭೆ

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ – ವಿಶೇಷ ಕಾರ್ಯಕಾರಿಣಿ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ ಮಂದಾರ್ತಿ ಶೇಡಿಕೊಡ್ಲು ಶ್ರೀ ದುರ್ಗಾ ಸನ್ನಿಧಿಯಲ್ಲಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಅವರ ಅಧ್ಯಕ್ಷತೆಯಲ್ಲಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು, ಕಾರ್ಯಕ್ರಮವನ್ನು ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.

    ಉದ್ಘಾಟಕರಾದ ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಅವರು ಪಕ್ಷ ಬೆಳೆದು ಬಂದ ರೀತಿ, ಪಕ್ಷದ ಸಿದ್ದಾಂತ, ಪಕ್ಷದ ಜವಾಬ್ದಾರಿಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

    ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ ಕುಮಾರ್ ಅವರು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜವಾಬ್ದಾರಿ, ಪಕ್ಷ ಸಂಘಟನೆ, ಕಾರ್ಯಕರ್ತರ, ಜನಪ್ರತಿನಿಧಿಗಳ ಸಾಮಾಜಿಕ ಜವಾಬ್ದಾರಿ ಕುರಿತು ಮಾತನಾಡಿದರು.

    ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ನಿಗಮ ಮಂಡಳಿ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ದಕ್ಷಿಣ ಕನ್ನಡ ಜಿಲ್ಲಾ ಸಹಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ನಿಕಟಪೂರ್ವ ಮಂಡಲ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ, ಸತೀಶ್ ಪೂಜಾರಿ, ಮಂದಾರ್ತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಹಾಗೂ ಮಂಡಲದ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮೋರ್ಚಾ ಮತ್ತು ಪ್ರಕೋಷ್ಠಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ನ ಮಾಜಿ ಸದಸ್ಯರು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

    ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿದರು.
    ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಸ್ವಾಗತಿಸಿದರು, ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಾ ಪೈ ವಂದೇ ಮಾತರಂ ಗೀತೆ ಹಾಡಿದರು, ಮಂಡಲ ಕಾರ್ಯದರ್ಶಿಗಳಾದ ನಿರ್ಮಲಾ ಶೆಟ್ಟಿ, ಸುರೇಂದ್ರ ಕಾಂಚನ್ ಧನ್ಯವಾದ ತಿಳಿಸಿದರು, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಧೀರೋದತ್ತ ಹೋರಾಟ-ತಪನ್ ಸೇನ್

    ಕುಂದಾಪುರ :ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಧೀರೋದತ್ತ ಹೋರಾಟ-ತಪನ್ ಸೇನ್

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ರಾಜ್ಯ, ಕೇಂದ್ರ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಿಐಟಿಯು ಹೋರಾಟ ನೀಡುತ್ತಿದೆ. ತುಳಿತಕ್ಕೊಳಗಾದ ಕಾರ್ಮಿಕರ ಪರವಾಗಿ  ಅವರ ಹಕ್ಕುಗಳಿಗೋಸ್ಕರ ಹೋರಾಟ ಮಾಡುತ್ತಿದೆ. ಕಾರ್ಮಿಕರ ಸೌಲಭ್ಯಗಳನ್ನು ಸರ್ಕಾರಗಳು ಕಸಿದುಕೊಳ್ಳುತ್ತಿದೆ. ಕಾರ್ಮಿಕರ ಸೌಲಭ್ಯ, ಸುರಕ್ಷತೆಗಳು ಇಲ್ಲವಾಗಿವೆ.  ಧೀರೋದತ್ತ ಹೋರಾಟಕ್ಕೆ ಸಾಕ್ಷಿಗಳಾಗಿದ್ದ ಬೀಡಿ ಕಾರ್ಮಿಕರ ಹಸಿವು ನೀಗಿಸುತ್ತಿದ್ದ ಬೀಡಿ ಕೈಗಾರಿಕೆಗಳನ್ನು ಸರ್ಕಾರದ ನೀತಿಗಳಿಂದ ನಶಿಸುತ್ತಿವೆ. ಪೆಟ್ರೋಲಿಂ ಬೆಲೆ ಏರಿಕೆ ಸಹಿತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಬೇಕಾಗಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.
    ಅವರು ಕುಂದಾಪುರದ ನೆಹರು ಮೈದಾನದಲ್ಲಿ  ನಡೆದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ 15ನೇ ಸಿಐಟಿಯು ರಾಜ್ಯ ಸಮ್ಮೇಳನ ದ ಬಹಿರಂಗ ಸಭೆಯಲ್ಲಿ  ಮಾತನಾಡಿದರು.
    ಇವತ್ತು ದೇಶದ ಸ್ಥಿತಿ ಸುಧಾರಿಸಿಲ್ಲ. ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕಾರ್ಮಿಕರು, ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದಾಳಿ ದಬ್ಬಾಳಿಕೆಗಳನ್ನು ಖಂಡಿಸಬೇಕಾಗಿದೆ. ದೇಶದ ಸ್ವತ್ತುಗಳು ಇವತ್ತು ಖಾಸಗಿಯವರ ಪಾಲಾಗುತ್ತಿದೆ. ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಬಂಡವಾಳದಾರರಿಗೆ ಪರವಾದ ಹೊಸ ಆರ್ಥಿಕ ನೀತಿಗಳ ವಿರುದ್ಧ ಸಿಐಟಿಯುವ ಹೋರಾಟ ಎನ್ನೂ ಎತ್ತರಕ್ಕೆರಬೇಕಾಗಿದೆ. ಸರ್ಕಾರದ ನಿರ್ಧಾರಗಳ ವಿರುದ್ಧ ಜನ ಐಕ್ಯತೆಯಿಂದ ಉತ್ತರಿಸಬೇಕಾಗಿದೆ  ಆ ನಿಟ್ಟಿನಲ್ಲಿ ಜನವರಿ 18ರಿಂದ 20ರ ತನಕ ನಡೆಯುವ ಅಖಿಲ ಭಾರತ ಸಿಐಟಿಯುವ ಸಮ್ಮೇಳನ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದರು.
    ಸಿಐಟಿಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಬಡವರಿಗೆ ಮತ್ತೆ ಮತ್ತೆ ತೆರಿಗೆ ಹೆಚ್ಚಳ, ಆಹಾರ ಪದಾರ್ಥ, ಶಾಲಾ ಶುಲ್ಕದ ಮೇಲೂ ಜಿಎಸ್‍ಟಿ, ಬ್ಯಾಂಕ್ ತೆರಿಗೆ, ಸರ್ಕಾರದ ಹತ್ತಿರ ದುಡ್ಡಿಲ್ಲ, ದುಡ್ಡಿಲ್ಲದ ಕಾರ್ಮಿಕ ಜನ ಸರ್ಕಾರಕ್ಕೆ ದುಡ್ಡು ಕೊಡಬೇಕು ಇದು ಇವತ್ತಿನ ವ್ಯವಸ್ಥೆಯಾಗಿದೆ ಎಂದರು.
    ಸಾರ್ವಜನಿಕ ಆಸ್ತಿ, ಸರ್ಕಾರಿ ಬ್ಯಾಂಕು, ವಿದ್ಯುತ್, ವಿಮಾನ ನಿಲ್ದಾಣ, ಸರ್ಕಾರಿ ಆಸ್ಪತ್ರೆಗಳು, ಶಾಲೆಗಳು ಖಾಸಗಿಯವರ ಪಾಲಾಗುತ್ತಿದೆ. ಬಡಜನರಿಂದ ತೆರಿಗೆ ಕಟ್ಟಿಸಿಕೊಂಡ ಶ್ರೀಮಂತ ಸಾಲ ಮನ್ನಾ ಮಾಡಲಾಗುತ್ತಿದೆ. ಜಾಗತಿಕ ಮಟ್ಟಕ್ಕೆ ಉತ್ಪಾದನಾ ಘಟಕ ಆರಂಭವಾಗಬೇಕು ಎಂಬ ಹಿನ್ನೆಲೆಯಲ್ಲಿ ಕಾರ್ಮಿಕ ವಿನಾಯಿತಿ ಕಾನೂನುಗಳನ್ನು ತರಲು ಸರ್ಕಾರ ಮುಂದಾಗಿದೆ. ದೇಶ್ ಎನ್ನುವ ಕಾನೂನು ಜ್ಯಾರಿಯಾದರೆ ಕಾರ್ಖಾನೆಗಳಲ್ಲಿ ಕಾರ್ಮಿಕ ಕಾನೂನು ಚಲಾವಣೆಯಲ್ಲಿ ಇರುವುದಿಲ್ಲ. ಕಾರ್ಮಿಕರ ಭವಿಷ್ಯ, ಕಾರ್ಮಿಕ ನಂಬಿಕೊಂಡ ಕುಟುಂಬ ಅತಂತ್ರವಾಗುತ್ತದೆ ಎಂದರು.
    ಶ್ರೀಮಂತರ ಮೇಲೆ ತೆರಿಗೆ ಹಾಕಿ, ಕಾರ್ಮಿಕರಿಗೆ ಕನಿಷ್ಠ ವೇತನ 36 ಸಾವಿರ ಜ್ಯಾರಿ ಮಾಡಿ, ಈಗ ಇರುವ ಉದ್ಯೋಗ ಉಳಿಸಿ, ಖಾಸಗೀಕರಣ ನಿಲ್ಲಿಸಿ ಎಂದರು.
    ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.  ರಾಷ್ಟ್ರೀಯ ಮುಖಂಡರಾದ  ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ  ವಿ.ಜೆ.ಕೆ ನಾಯರ್,  ಸಿಐಟಿಯು 15ನೇ ಸ್ವಾಗತ  ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ , ವೆಂಕಟೇಶ್ ಕೋಣಿ ಹಾಗು ಕಾರ್ಮಿಕರ ಮುಖಂಡರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರ್ವಹಿಸಿದರು.
    ಬಹಿರಂಗ ಸಭೆಗೂ ಮೊದಲು ಬೃಹತ್ ಜಾಥಾ ನಡೆಯಿತು. ಕೆಂಬಾವುಟ ಹಿಡಿದ ಸಾವಿರಾರು ಮಂದಿ ಕುಂದಾಪುರ ನಗರದಲ್ಲಿ ಸಾಗಿ ಬಂದರು.
  • ಕುಂದಾಪುರ :ಕಾರ್ಮಿಕರ ಐಕ್ಯತಾ ಹೋರಾಟವನ್ನು ಸರಕಾರದಿಂದ ದಮನಿಸುವ ಪ್ರಯತ್ನ- ಡಾ.ಕೆ.ಹೇಮಲತಾ

    ಕುಂದಾಪುರ :ಕಾರ್ಮಿಕರ ಐಕ್ಯತಾ ಹೋರಾಟವನ್ನು ಸರಕಾರದಿಂದ ದಮನಿಸುವ ಪ್ರಯತ್ನ- ಡಾ.ಕೆ.ಹೇಮಲತಾ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ:ಕಳೆದ ಮೂರು ವರ್ಷಗಳಿಂದ ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯಲ್ಲಿಯೇ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕ ವರ್ಗ ಅಸಹಾಯಕರಾಗಿದ್ದಾರೆ. ನಿರಂತರ ಬೆಲೆ ಏರಿಕೆ, ಕೈಗಾರಿಕೆಗಳು ಮುಚ್ಚುತ್ತಿರುವುದು, ಉದ್ಯೋಗವಕಾಶಗಳ ಕಡಿತ, ವೇತನ ತಾರತಮ್ಯ ಇತ್ಯಾದಿಗಳಿಂದ ಕಾರ್ಮಿಕರು, ದುಡಿಯುವ ವರ್ಗದ ಬದುಕು ದುರ್ಬರವಾಗಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಪ್ರತಿರೋಧ ಇನ್ನಷ್ಟು ಪ್ರಬಲವಾಗಬೇಕಾಗಿದೆ, ಐಕ್ಯತೆಯ ಹೋರಾಟಗಳು ನಡೆಯಬೇಕಿದೆ ಎಂದು ಸಿಐಟಿಯುವ ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಹೇಳಿದರು.

    ಅವರು ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆದ ಕಾರ್ಮಿಕರ ಐಕ್ಯತೆ-ಜನತೆಯ ಸೌಹಾರ್ದತೆಗಾಗಿ 15ನೇ ಸಿಐಟಿಯು ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

    ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವ ರಾಜಕೀಯ ಪಕ್ಷಗಳು ಕಾರ್ಮಿಕರ ಐಕ್ಯತೆಯ ಹೋರಾಟವನ್ನು ದಮಿನಿಸುವ ಸಲುವಾಗಿ ಜಾತಿ, ಧರ್ಮಗಳ ಮೂಲಕ ವಿಭಜನೆ ಮಾಡಲಾಗುತ್ತಿದೆ. ಆರ್.ಎಸ್.ಎಸ್ ಮೂಲಕ ಧರ್ಮಧಾರಿತವಾದ ರಾಜಕಾರಣ, ಹಿಂದೂತ್ವ, ಹಿಂದುರಾಷ್ಟ್ರ-ಹಿಂದೂಸ್ತಾನ ರೀತಿಯಲ್ಲಿ ಸಮಾಜದ ನಡುವೆ ಒಡಕು ಮೂಡಿಸುವ ವಿಭಜಿಸುವ ಕಾರ್ಯ ನೆಡೆಯುತ್ತಿದೆ. ಕಾರ್ಮಿಕರ ಪ್ರತಿರೋಧಕ್ಕೆ ಬೇರೆಯದ್ದೇ ಬಣ್ಣ ನೀಡಲಾಗುತ್ತಿದೆ. ಬಲಪಂಥಿಯ ಪಕ್ಷಗಳನ್ನು ಬಂಡವಾಳಶಾಹಿಗಳು ಬೆಂಬಲಿಸುತ್ತಿವೆ. ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿ, ಮಾಧ್ಯಮಗಳು ಬಂಡವಾಳಶಾಹಿಗಳ ಹಿಡಿತದಲ್ಲಿರುವುದು ಸತ್ಯ ಮರೆಮಾಚಿಸುತ್ತಿದೆ. ಹಾಗಾಗಿ ಸಿಐಟಿಯುವನಂತಹ ಪ್ರಬಲ ಸಂಘಟನೆಗಳನ್ನು ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

    ಕೋವಿಡ್ ಸಮಯದಲ್ಲಿ ಭಾಷಣ ಬೇಡ-ರೇಷನ್ ಬೇಕು ಎನ್ನುವ ಅಭಿಯಾನಕ್ಕೆ ವ್ಯಾಪಕ ಬೆಂಬಲ ಸಿಕ್ಕಿತು. ಜಮ್ಮು-ಕಾಶ್ಮೀರ, ಗುಜರಾತ್‍ನಂತಹ ರಾಜ್ಯಗಳಲ್ಲಿ ಜನ ಹೋರಾಟಕ್ಕೆ ಅಣಿಯಾದರು. ಕೋವಿಡ್ ಸಮಯದಲ್ಲಿನ ಆರ್ಥಿಕ ಬಿಕ್ಕಟ್ಟು, ವಿರೋಧ ಪಕ್ಷವನ್ನು ಅಮಾನತಿಲ್ಲಿಟ್ಟು ಅನುಮೋದನೆ ಪಡೆದ ಕಾರ್ಮಿಕ ವಿರೋಧಿ ಕಾಯ್ದೆಗಳು, ರೈತವಿರೋಧಿ ನೀತಿಗಳು ಇವತ್ತು ಜನಸಾಮಾನ್ಯರಿಗೆ ಸಂಕಷ್ಟವನ್ನೊಡ್ಡುತ್ತಿವೆ. ವರ್ಷಗಳ ಕಾಲ ನಡೆದ ರೈತರ ಹೋರಾಟದಿಂದ ರೈತವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆದರೂ ಕೂಡಾ ರೈತರು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಅವರು ದೂರಿದರು.

    ಕಾರ್ಮಿಕರ ಹಿತಾದೃಷ್ಟಿಯಿಂದ ಜನವರಿ 2023ರಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಯಲಿದೆ. ಅದರ ಮುಂಚಿತವಾಗಿ ರಾಜ್ಯ ಸಮ್ಮೇಳನಗಳು ನಡೆಯುತ್ತಿದೆ. ಅಖಿಲ ಭಾರತ ಸಮ್ಮೇಳನದಲ್ಲಿ ನಿರ್ಣಯಗಳ ಜ್ಯಾರಿಗೆ ಒತ್ತಾಯ ಮಾಡಲಾಗುವುದು. ರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರೀಯ , ಅಂತರಾಷ್ಟ್ರೀಯ ಮಟ್ಟದಲ್ಲಿ ದುಡಿಯುವ ವರ್ಗದ ಸ್ಥಿತಿಗತಿ, ಸವಾಲುಗಳು, ನಿರ್ಣಯಗಳ ಅನುಷ್ಟಾನ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

    ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು.

    ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರು, ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಸಿಐಟಿಯುವ ರಾಷ್ಟ್ರೀಯ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್, ರಾಷ್ಟ್ರೀಯ ಮುಖಂಡರಾದ ಕೆ.ಎನ್.ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ವಿ.ಜೆ.ಕೆ ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರೈತ ಸಂಘಟನೆಯ ಪ್ರಾಂತ ಉಪಾಧ್ಯಕ್ಷ ಬಸವರಾಜ, ಸಿಐಟಿಯು 15ನೇ ಸ್ವಾಗತ ರಾಜ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಕೆ.ಶಂಕರ್, ಕೋಶಾಧಿಕಾರಿ ಎಚ್.ನರಸಿಂಹ ಮೊದಲಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ ಕಿರುಚಿತ್ರ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಉದ್ಘಾಟನಾ ಭಾಷಣವನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಕನ್ನಡಕ್ಕೆ ಅನುವಾದಿಸಿದರು.
    ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಕಾರ್ಯಕ್ರಮ ನಿರ್ವಹಿಸಿದರು.
    ಸಮ್ಮೇಳನ ಪೂರ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ಸಿಐಟಿಯು ರಾಜ್ಯ 14ನೇ ಸಮ್ಮೇಳನದಿಂದ 15ನೇ ಸಮ್ಮೇಳನದವರಿಗೆ ಚಳವಳಿಗಾಗಿ ಹುತಾತ್ಮರಾದ ಗೌರವ ವಂದನೆ ಸಲ್ಲಿಸಲಾಯಿತು.