Category: ರಾಜಕೀಯ

  • ಕುಂದಾಪುರ : ಕಾಂಗ್ರೆಸ್ ಕಚೇರಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪ್ರಥಮ ಪುಣ್ಯತಿಥಿ ಆಚರಣೆ

    ಕುಂದಾಪುರ : ಕಾಂಗ್ರೆಸ್ ಕಚೇರಿಯಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರ ಪ್ರಥಮ ಪುಣ್ಯತಿಥಿ ಆಚರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನೇತಾರ, ಕೇಂದ್ರ ಸರಕಾರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರ ಪ್ರಥಮ ಪುಣ್ಯತಿಥಿಯನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು.

    ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಆಸ್ಕರ್ ಫೆರ್ನಾಂಡೀಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಆಸ್ಕರ್ ಫೆರ್ನಾಂಡೀಸ್ ಅವರ ಸೇವೆ, ಪಕ್ಷಕ್ಕೆ ಅವರು ನೀಡಿದ ಕೊಡುಗೆ, ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಅಳವಡಿಸಿಕೊಂಡ ಮೌಲ್ಯಗಳನ್ನು ಪಾಲಿಸಬೇಕಾಗಿದೆ. ನಾಡಿಗೆ ಅವರು ನೀಡಿದ ಸೇವೆಯನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಕಾಂಗ್ರೆಸ್ ಪಕ್ಷದ ವಿವಿಧ ಮಜಲುಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನ ರಾಜಕಾರಣಿಯಾಗಿ ಸಾಮಾನ್ಯ ಕಾರ್ಯಕರ್ತನ ಜೊತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದ ಅವರು ಮಾದರಿ ರಾಜಕಾರಣಿಯಾಗಿದ್ದರು. ಅವರ ಆದರ್ಶ, ಆಡಳಿತ ವೈಖರಿ, ಉದಾತ್ತ ಮೌಲ್ಯಗಳನ್ನು ಹೊಂದಿದ್ದ ಅವರು ಧೀಮಂತ ವ್ಯಕ್ತಿಯಾಗಿದ್ದರು. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.

    ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಶ್ಯಾಮಲ ಭಂಡಾರಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಾಕೋಬ್ ಡಿಸೋಜ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಅಲ್ಪಸಂಖ್ಯಾತ ಘಟಕದ ಮುನಾಫ್, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರೆಗಾರ್, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಶ್ರೀಧರ ಶೇರೆಗಾರ್, ಆಶ್ಪಕ್ ಕೋಡಿ, ಪ್ರಭಾವತಿ ಶೆಟ್ಟಿ, ಹಾಗೂ ಜಾನಕಿ ಬಿಲ್ಲವ, ಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

    ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿ, ಕೋಣಿ ನಾರಾಯಣ ಆಚಾರ್ ಸ್ವಾಗತಿಸಿದರು. ಸುನಿಲ್ ಪೂಜಾರಿ ವಂದಿಸಿದರು.

  • 172 ಕಾಲುಸಂಕಗಳ ನಿರ್ಮಾಣಕ್ಕೆ ಪ್ರಸ್ತಾವನೆ, ಸಿದ್ಧಾಪುರ ಏತನೀರಾವರಿ ಯೋಜನೆಗೆ ಮಂಜೂರಾತಿ, ರೂ 1,531 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕಾರ್ಯ -ಸಂಸದ ಬಿ.ವೈ ರಾಘವೇಂದ್ರ

    172 ಕಾಲುಸಂಕಗಳ ನಿರ್ಮಾಣಕ್ಕೆ ಪ್ರಸ್ತಾವನೆ, ಸಿದ್ಧಾಪುರ ಏತನೀರಾವರಿ ಯೋಜನೆಗೆ ಮಂಜೂರಾತಿ, ರೂ 1,531 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕಾರ್ಯ -ಸಂಸದ ಬಿ.ವೈ ರಾಘವೇಂದ್ರ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು : ಬೈಂದೂರು ಕ್ಷೇತ್ರಕ್ಕೆ ಈಗಾಗಲೇ ರೂ 1,531 ಕೋಟಿ ಅನುದಾನ ಮಂಜೂರಾಗಿದೆ. ಬಹುತೇಕ ಕಾಮಗಾರಿ ಪ್ರಗತಿಯಲ್ಲಿವೆ. ಇತ್ತೀಚೆಗೆ ಪ್ರಕೃತಿ ವಿಕೋಪದಡಿ ರೂ 41,68,200 ಪರಿಹಾರ ನೀಡಲಾಗಿದೆ. ಕ್ಷೇತ್ರದಲ್ಲಿ 250 ಕಾಲುಸಂಕಗಳನ್ನು ಪಟ್ಟಿ ಮಾಡಲಾಗಿದ್ದು ಶಾಸಕರು ಈಗಾಗಲೇ 10 ಕೋಟಿ ಹಣವನ್ನು ಲೋಕಪಯೋಗಿ ಇಲಾಖೆಯ ಮೂಲಕ ಕೊಡಿಸಲಾಗಿದ್ದು, 100 ಕಾಲುಸಂಕಗಳಿಗೆ 5 ಕೋಟಿ ಹಣವನ್ನು ಮಂಜೂರು ಮಾಡಿದೆ. 172 ಕಾಲುಸಂಕಗಳ ನಿರ್ಮಾಣಕ್ಕೆ ರೂ 20 ಕೋಟಿ ರೂಪಾಯಿಯ ಅವಶ್ಯಕತೆ ಇದ್ದು ಮಂಜೂರಾತಿಗೆ ವಿನಂತಿ ಮಾಡಲಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

    ಅವರು ಕೊಲ್ಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಪ್ರಾಕೃತಿಕ ವಿಕೋಪದಲ್ಲಿ ಒಟ್ಟು ರೂ 41,68,200 ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿಯಾದ ಒಟ್ಟು 12 ಫಲಾನುಭವಿಗಳಿಗೆ ತಲಾ ರೂ 95,100ರಂತೆ ಒಟ್ಟು ರೂ 11,41,200, ಹಾನಿಯಾದ ಮನೆಗಳ ದುರಸ್ಥಿಗೆ ಒಟ್ಟು 8 ಫಲಾನುಭವಿಗಳಿಗೆ ತಲಾ ರೂ 95,100ರಂತೆ ಒಟ್ಟು ರೂ 7,60,800, ಭಾಗಶ: ಹಾನಿಯಾದ ಮನೆಗಳಿಗೆ ಒಟ್ಟು 43 ಫಲಾನುಭವಿಗಳಿಗೆ ತಲಾ ರೂ 5,200ರಂತೆ ಒಟ್ಟು ರೂ 2,23,600 ಕಾಲು ಸಂಕದಿಂದ ನೀರುಪಾಲಾದ ಸನ್ನಿಧಿ ಅವರ ಕುಟುಂಬಕ್ಕೆ ರೂ 5,00,000, ಸಂಪೂರ್ಣ ಹಾನಿಯಾದ ದೋಣಿಗೆ ರೂ 9,600, ಭಾಗಶ: ಹಾನಿಯಾದ ದೋಣಿಗಳ ಒಟ್ಟು 54 ಫಲಾನುಭವಿಗಳಿಗೆ ತಲಾ 4,100ರಂತೆ ಒಟ್ಟು ರೂ 2,21,400, ಸಂಪೂರ್ಣ ಬಲೆ ಹಾನಿಯಾದ ಒಟ್ಟು 66 ಫಲಾನುಭವಿಗಳಿಗೆ ತಲಾ ರೂ 2,600ರಂತೆ ಒಟ್ಟು ರೂ 1,71,600, ಮೇಘಸ್ಫೋಟದಲ್ಲಿ ಮನೆಗಳಿಗೆ ನೀರು ತುಂಬಿ ದಿನಬಳಕೆ ವಸ್ತುಗಳು ಹಾನಿಯಾದ ಒಟ್ಟು 92 ಫಲಾನುಭವಿಗಳಿಗೆ ತಲಾ ರೂ 10,000ರಂತೆ ಒಟ್ಟು ರೂ 9,20,000, ಜಾನುವಾರು ಹಾನಿಗೆ ಒಟ್ಟು 14 ಫಲಾನುಭವಿಗಳಿಗೆ ಒಟ್ಟು ರೂ 2,20,000 ಫಲಾನುಭವಿಗಳಿಗೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಬೆಳೆ ಹಾನಿಯಾದ 287 ಹೆಕ್ಟರ್ ಪ್ರದೇಶದ 349 ರೈತರ ಪ್ರಕರಣಗಳನ್ನು “ಪರಿಹಾರ” ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

    ಬೈಂದೂರು ಕ್ಷೇತ್ರಕ್ಕೆ . ಕ್ಷೇತ್ರದಲ್ಲಿ ಸಂಪೂರ್ಣವಾಗಿ ಶುದ್ದ ಕುಡಿಯುವ ನೀರಿನ ಯೋಜನೆ 596 ಕೋಟಿ ಮಂಜೂರಾಗಿದ್ದು 40 ಗ್ರಾ.ಪಂಗಳ ಹಾಗೂ ಬೈಂದೂರು ಪ. ಪಂ. ವ್ಯಾಪ್ತಿಯ ಒಟ್ಟು 848 ಮನೆಗಳಿಗೆ ನೀರು ತಲುಪಿಸುವ ಯೋಜನೆಗೆ ಟೆಂಡರ್ ಆಗಿದ್ದು ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿದ್ದು ಟೆಂಡರ್ ಆಗಿದೆ. ರೂ. 218 ಕೋಟಿ ವೆಚ್ಚದಲ್ಲಿ ಬೈಂದೂರು-ರಾಣೇಬೆನ್ನೂರು ರಾ.ಹೆ 766(ಸಿ) ರಸ್ತೆಯಲ್ಲಿ ಕೊಲ್ಲೂರು ಪೇಟೆ ಪರಿಸರದ 2.8 ಕಿ.ಮೀ ವ್ಯಾಪ್ತಿಯ ಕಾಮಗಾರಿಗೆ ಟೆಂಡರ್ ಆಗಿದೆ.
    15 ಕೋಟಿ ವೆಚ್ಚದಲ್ಲಿ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ, 3.48 ಕೋಟಿ ವೆಚ್ಚದಲ್ಲಿ ಹಳ್ಳಿಹೊಳೆ ಕಬ್ಬಿನಾಲೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು ಅತೀ ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದರು.

    ರೂ 96 ಕೋಟಿ ವೆಚ್ಚದ ಗಂಗೊಳ್ಳಿ ಕೋಸ್ಟಲ್ ಬರ್ತ್ ಮಂಜೂರಾಗಿದೆ. ಪಿಪಿಪಿ ಮಾದರಿಯಲ್ಲಿ ರೂ 228 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. ರೂ 165.00 ಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಅನುಮೋದನೆಯಾಗಿದೆ. ರೂ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ರೂ. 35.00 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರೂ 3.00 ಕೋಟಿ ವೆಚ್ಚದ ಸಿದ್ದಾಪುರ ಪೇಟೆ ಸರ್ಕಲ್ ಕಾಮಗಾರಿ ಪೂರ್ಣಗೊಂಡಿದೆ. ರೂ 8 ಕೋಟಿ ವೆಚ್ಚದಲ್ಲಿ ಹೊಸ ತಾಲೂಕು ಆಡಳಿತ ಸೌಧ ಕಾಮಗಾರಿ ವೇಗವಾಗಿ ನೆಡೆಯುತ್ತಿದೆ ಎಂದರು.
    ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 20 ಎಕ್ರೆಯಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರ್ ಯೋಜನೆಗೆ ಡಿಪಿಆರ್ ಕಾರ್ಯ ಮುಗಿದಿದ್ದು ಟೆಂಡರ್‍ಗೆ ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ತಲ್ಲೂರು,ಹೆಮ್ಮಾಡಿ,ತ್ರಾಸಿ,ಯಡ್ತರೆ ಹಾಗೂ ಬೈಂದೂರು ತಾಲೂಕು ಕಛೇರಿ ಬಳಿ ಒಟ್ಟು ಪ್ರಮುಖ 5 ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರಾದ್ಯಂತ ಒಟ್ಟು 87 ರುದ್ರಭೂಮಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1.83 ಎಕ್ರೆ ಸ್ಥಳದಲ್ಲಿ ರೂ 3.24 ಕೋಟಿ ವೆಚ್ಚದ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು. ಬಿ.ಎಸ್.ಎನ್.ಎಲ್ ವತಿಯಿಂದ ಸರ್ವೆ ಕಾರ್ಯ ನೆಡೆಯುತ್ತಿದೆ ಎಂದರು.

    ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ., ತಾ.ಪಂ.ಮಾಜಿ ಸದಸ್ಯರು ಉಪಸ್ಥಿತರಿದ್ದರು.

  • ದಾಖಲೆ ತಿರುಚಿ ಬಡಜನರ ಭೂಕಬಳಿಕೆಗೆ ಯತ್ನ-ಭಯ ಪಡುವ ಅವಶ್ಯಕತೆ ಇಲ್ಲ – ದೀಪಕ್ ಕುಮಾರ್ ಶೆಟ್ಟಿ

    ದಾಖಲೆ ತಿರುಚಿ ಬಡಜನರ ಭೂಕಬಳಿಕೆಗೆ ಯತ್ನ-ಭಯ ಪಡುವ ಅವಶ್ಯಕತೆ ಇಲ್ಲ – ದೀಪಕ್ ಕುಮಾರ್ ಶೆಟ್ಟಿ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಬೈಂದೂರು ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಅಧಿಕಾರಕ್ಕೆ ಬಂದ ಬಳಿಕ ಸರ್ವತೋಮುಖ ಅಭಿವೃದ್ದಿ ಕಂಡಿದೆ. ದಾಖಲೆಯ ಅನುದಾನದ ಮೂಲಕ ಮಾದರಿ ಕ್ಷೇತ್ರವಾಗಿ ಮೂಡಿಬರುತ್ತಿದೆ. ಸುಸಜ್ಜಿತ ತಾಲೂಕು ಕಛೇರಿ ಕಟ್ಟಡ ಸೇರಿದಂತೆ ವಿವಿಧ ಮಹತ್ವಕಾಂಕ್ಷಿ ಯೋಜನೆಗಳು ಪ್ರಗತಿಯಲ್ಲಿವೆ. ಕ್ಷೇತ್ರದಲ್ಲಿ ಎಲ್ಲ ಇಲಾಖೆಗಳು ಪಾರದರ್ಶಕ ಸೇವೆ, ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸುವಲ್ಲಿ ಸರ್ಕಾರ ಹಾಗೂ ಪಕ್ಷ ನಿಗಾ ವಹಿಸುತ್ತಿದೆ ಬಿಜೆಪಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ
    ಅವರು ಆ.22ರಂದು ಬೈಂದೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

    ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಹಣಬಲ, ಅಧಿಕಾರ, ದಬ್ಬಾಳಿಕೆ ಮತ್ತು ನಕಲಿ ದಾಖಲೆ ಮೂಲಕ ಭೂಕಬಳಿಕೆ, ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಮಾಹಿತಿ ಬರುತ್ತಿದ್ದು, ಕೆಲವೊಂದು ವ್ಯಕ್ತಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿರುವ ಬಗ್ಗೆಯೂ ಮಾಹಿತಿ ಬಂದಿದೆ. ಇಂತಹ ವಿಚಾರಗಳನ್ನು ಶಾಸಕರು ಗಂಭೀರವಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಕೂಡಾ ಯಾವ ದಬ್ಬಾಳಿಕೆ, ವಂಚನೆಗಳಿಗೆ ಒಳಗಾಗಬಾರದು, ಈ ರೀತಿ ಗ್ರಾಮೀಣ ಭಾಗದಲ್ಲಿ ಜನಸಾಮನ್ಯರಿಗೆ ನಕಲಿ ದಾಖಲೆ ಅಥವಾ ಒತ್ತಡಗಳ ಮೂಲಕ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದರೆ ಪಕ್ಷ ಅದನ್ನು ಸಹಿಸುವುದಿಲ್ಲ. ಮತ್ತು ಭಾರತೀಯ ಜನತಾ ಪಕ್ಷ ಸದಾ ಜನರೊಂದಿಗೆ ಇರುತ್ತದೆ ಎಂದು ಹೇಳಿದರು.

    ಭೂಕಬಳಕೆ, ದಾಖಲೆ ತಿರುಚುವುದು ಇತ್ಯಾದಿಗಳು ಗಮನಕ್ಕೆ ಬಂದರೆ ತಕ್ಷಣ ದಾಖಲೆಗಳೊಂದಿಗೆ ಭಾರತೀಯ ಜನತಾ ಪಕ್ಷದ ಬೈಂದೂರು ಕಛೇರಿಯನ್ನು ಸಂಪರ್ಕಿಸಬಹುದು. ಅಂತಹವರಿಗೆ ಯಾವುದೇ ಖರ್ಚು ಭರಿಸದೇ ಕಾನೂನು ನೆರವು ಒದಗಿಸಲಾಗುವುದು. ಭೂಮಾಲಕರ ಮೇಲೆ ಅಮಿಷವೊಡ್ಡಿ ಇವತ್ತು ಪಟ್ಟಭದ್ರ ಹಿತಾಸಕ್ತಿಗಳು ತಾಲೂಕು ಕಛೇರಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರುಗÀಳು ಬರುತ್ತಿವೆ. ಶೀಘ್ರ ಜಿಲ್ಲಾಧಿಕಾರಿಗಳು, ಶಾಸಕರ ಉಪಸ್ಥಿತಿಯಲ್ಲಿ ಇಲ್ಲಿ ವಿಶೇಷ ಸಭೆ ನಡೆಸಲು ಮನವಿ ಮಾಡಲಾಗುವುದು. ಜನರು ಯಾವುದೇ ಕಾರಣಕ್ಕೂ ಭಯಗೊಳ್ಳುವ ಅವಶ್ಯತೆಯಿಲ್ಲ ಎಂದರು.

    ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ, ಬೈಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ, ಕೊಲ್ಲೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ ಪೂಜಾರಿ ಉಪಸ್ಥಿತರಿದ್ದರು.

  • ಸಿದ್ದರಾಮಯ್ಯ ಕಾರಿನ ಮೇಲೆ ದಾಳಿ – ಕುಂದಾಪುರ ಬ್ಲಾಕ್ ಕಾಂಗ್ರೆಸ್ ಖಂಡನೆ

    ಸಿದ್ದರಾಮಯ್ಯ ಕಾರಿನ ಮೇಲೆ ದಾಳಿ – ಕುಂದಾಪುರ ಬ್ಲಾಕ್ ಕಾಂಗ್ರೆಸ್ ಖಂಡನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ಕೊಡಗು ಜಿಲ್ಲೆಗೆ ತೆರಳಿದ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಕೊಡಗಿನಲ್ಲಿ ಪದೇಪದೇ ಆಗುತ್ತಿರುವ ಭೂ ಕುಸಿತಕ್ಕೆ ಸೂಕ್ತ ಅನ್ವೇಷಣೆ ಮಾಡಿ ಕಾರಣ ಕಂಡು ಹಿಡಿಯಲು ವಿಫಲವಾಗಿರುವ ಸರಕಾರದ ನೀತಿಯಿಂದ ಅಲ್ಲಿನ ಜನ ರೋಸಿ ಹೋಗಿದ್ದು, ಪ್ರಾಕ್ರತಿಕ ವಿಕೋಪ ಮತ್ತು ಇತರ ಸರಕಾರಿ ಅನುದಾನದಿಂದ ಕಳಪೆ ಕಾಮಗಾರಿ ಮಾಡಿರುವುದನ್ನು ಮಾಜಿ ಮುಖ್ಯಮಂತ್ರಿ ಗಳು ರಾಜ್ಯದ ಜನತೆಯ ಮುಂದಿಡುತ್ತಾರೆಂದು ಹತಾಷೆಯಿಂದ ಬಿಜೆಪಿಯವರು ಈ ರೀತಿ ಹೇಡಿ ಮತ್ತು ನೀಚ ಕೃತ್ಯಕ್ಕೆ ಇಳಿದಿರುತ್ತಾರೆ ಎಂದರು.

    ಇದು ರಾಜ್ಯ ಸರಕಾರದ ಭದ್ರತಾ ವೈಫಲ್ಯ. ಗುಪ್ತಚರ ಮತ್ತು ಗ್ರಹ ಇಲಾಖೆ ನಿಷ್ಕ್ರೀಯವಾಗಿದೆ. ತಮ್ಮ ಕಳಪೆ ಮತ್ತುಕಮೀಷನ್ ಕಾಮಗಾರಿ ಮುಚ್ಚಿಹಾಕಲು ಈ ರೀತಿ ಬಾಡಿಗೆ ಗೂಂಡಾಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇರುವ ಮೂಲಭೂತ ಹಕ್ಕನ್ನು ರಾಜ್ಯ ಬಿಜೆಪಿ ಸರಕಾರ ಕಸಿದುಕೊಳ್ಳುತ್ತಿದೆ ಎಂದಿದ್ದಾರೆ.

    ಇನ್ನು ರಾಜ್ಯದ ಬಿಜೆಪಿ ಸರಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದ್ದು ದಾವಣಗೆರೆಯ ಸಿದ್ದರಾಮಯ್ಯ ಅಮೃತ ಮಹೋತ್ರವ ಕಾರ್ಯಕ್ರಮ ಮತ್ತು ಬೆಂಗಳೂರಿನಲ್ಲಿ ನೆಡೆದ ಸ್ವಾತಂತ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ನೋಡಿ ಹತಾಷರಾಗಿ ಬಿಜೆಪಿಯವರು ಈ ರೀತಿ ಕೃತ್ಯಕ್ಕೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೇಸಿದ್ದಾರೆ.

    ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮತ್ತು ಗ್ರಹ ಸಚಿವರಿಂದ ನ್ಯಾಯ ಸಿಗುವ ವಿಶ್ವಾಸ ನಮಗಿಲ್ಲ. ಆದ್ದರಿಂದ ಕೂಡಲೇ ರಾಜ್ಯಪಾಲರು ಮದ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಕೋಟ: ‘ಸ್ವಾತಂತ್ರ್ಯೋತ್ಸವದ ಕುರಿತಾಗಿ ಹಮ್ಮಿಕೊಂಡ ಹರ್ ಘರ್ ತಿರಂಗ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ’ – ಸೊರಕೆ

    ಕೋಟ: ‘ಸ್ವಾತಂತ್ರ್ಯೋತ್ಸವದ ಕುರಿತಾಗಿ ಹಮ್ಮಿಕೊಂಡ ಹರ್ ಘರ್ ತಿರಂಗ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ’ – ಸೊರಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ : ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸುವ ಹಾಗೂ ಪ್ರಜಾಪ್ರಭುತ್ವವನ್ನು ಸಾರುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

    ಕೋಟ ಹಾಗೂ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ 75 ನೇ ಸ್ವಾತಂತ್ರ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರ ಯೋಧರ ತ್ಯಾಗ ಬಲಿದಾನವನ್ನು ನೆನಪಿಸುವ ಹಾಗೂ ಶಾಂತಿ ಸಾಮರಸ್ಯದ ದೇಶಪ್ರೇಮದ ಸಂದೇಶವನ್ನು ಸಾರುವ ಸಲುವಾಗಿ ಸಾಲಿಗ್ರಾಮದಿಂದ ಕೋಟ ಮಾರ್ಗವಾಗಿ ತೆಕ್ಕಟ್ಟೆವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಕುರಿತಾಗಿ ಹಮ್ಮಿಕೊಂಡ ಹರ್ ಘರ್ ತಿರಂಗ ಘೋಷಿಸಲು ಬಿಜೆಪಿಗೆ ನೈತಿಕತೆ ಇಲ್ಲ ಜನಸಾಮಾನ್ಯರ ಸ್ವಾತಂತ್ರ್ಯವನ್ನೇ ಕಸಿದು ಆಡಳಿತ ನಡೆಸುವ ಪಕ್ಷ ಸ್ವಾತಂತ್ರದ ಬಗ್ಗೆ ಉಲ್ಲೇಖಿಸುವುದು ಅದರ ಕುರಿತು ಕಾರ್ಯಕ್ರಮ ಆಯೋಜಿಸುವುದು ಎಷ್ಟು ಸೂಕ್ತ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಅದರ ಜೊತೆಗೆ ಕಳೆದ 60ವರ್ಷಗಳಿಂದ ಸಂವಿಧಾನ ಬದ್ಧವಾದ ಆಡಳಿತ ನಡೆಸಿಕೊಂಡು ಬಂದಿದೆ. ಬಡವರ ಬಗ್ಗೆ ಕಾಳಜಿ ಕಾರ್ಯಕ್ರಮಗಳನ್ನು ಸದಾ ನೀಡಿದೆ. ಬಿಜೆಪಿ ಗಾಂಧಿ ಹತ್ಯೆಗೈದ ಗೋಡ್ಸೆ ದೇವಾಲಯ ಕಟ್ಟಲು ಶ್ರಮಿಸುತ್ತದೆ, ನೆಹರು,ಇಂದಿರಾ,ರಾಜೀವ್ ಗಾಂಧಿ ಹೀಗೆ ಹಲವು ನಾಯಕರುಗಳು ಈ ದೇಶಕ್ಕಾಗಿ ಸದಾ ಶ್ರಮಿಸಿದ ನಾಯಕರುಗಳು ಆದರೆ ಇಂಥಹ ಮಹಾನ್ ನಾಯಕರಗಳ ಬಗ್ಗೆ ಈಗಿನ ಆಡಳಿತ ಪಕ್ಷ ಗುಬೆ ಕುರಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದರು.

    ಇನ್ನು ಪ್ರಸ್ತುತ ವರ್ಷಗಳ ಆಡಳಿತಕ್ಕೆ ಜನಸೋತು ಹೋಗಿದ್ದಾರೆ. ಬಿಜೆಪಿ ಪಕ್ಷ ಕೊಲೆಗಡುಕರ ಪಕ್ಷವಾಗಿ ಜನಸಾಮಾನ್ಯರು ಭಯದ ನೆರಳಿನಲ್ಲಿ ಬದುಕುವಂತೆ ಮಾಡಿದ್ದಾರೆ. ಕರಾವಳಿಯಲ್ಲಿ ಶಾಂತಿ ಕದಡುವ ಕೆಲಸ ಮಾಡಿ ಅಲ್ಲಿ ಒಂದು ಸಮುದಾಯವನ್ನು ಒಲೈಸುವ ಕೆಲಸ ಮಾಡುತ್ತಿದೆ ಒರ್ವ ಮುಖ್ಯಮಂತ್ರಿಯಾಗಿ ಪ್ರವೀಣ್ ಮನೆಗೆ ಹೋಗುತ್ತಾರೆ ಆದರೆ ಮಸೂದ್, ಫೈಝಲ್ ಎನು ಮಾಡಿದ್ದಾರೆ. ಸಂವಿಧಾನ ಬದ್ಧವಾದ ನ್ಯಾಯ ಎಲ್ಲರಿಗೂ ಸಿಗಬೇಕು ಎಂದು ಮುಖ್ಯ ಮಂತ್ರಿಗಳ ಕಾರ್ಯವೈರಿಯನ್ನು ಛೇಡಿಸಿದರು. ಇಂಥವರಿಂದ ಸ್ವಾತಂತ್ರ್ಯ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಕಾಂಗ್ರೆಸ್‍ಗೆ ಇಲ್ಲ, ಇತ್ತೀಚಿಗೆ ನಮ್ಮ ಮಾಜಿಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹುಟ್ಟುಹಬ್ಬದ ಜನಸ್ತೋಮ ನೋಡಿ ಮಡುಗಟ್ಟಿ ಹೋಗಿದ್ದಾರೆ ಇದೊಂದು ಇತಿಹಾಸ ಸೃಷ್ಠಿ ಮಾಡಿದೆ ಬದಲಾವಣೆ ಪರ್ವ ಆರಂಭಗೊಂಡಿದೆ ಎಂದರಲ್ಲದೆ ಸ್ವಾತಂತ್ರ್ಯದ ನೈಜ ಪರಿಭಾಷೆಯನ್ನು ಅರ್ಥಪೂರ್ಣಗೊಳಿಸಲು ಕಾಂಗ್ರೆಸ್ ರಾಷ್ಟ್ರದಲ್ಲಿ ಹಮ್ಮಿಕೊಂಡ ಈ ಪಾದಯಾತ್ರೆ ಎಲ್ಲಾ ಭಾಗಗಳಿಂದ ಯಶಸ್ಸಿನ ಹಂತ ತಲುಪಿದೆ ಎಂದಿದ್ದಾರೆ.

    ಉಡುಪಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ, ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಎ ಗಫೂರ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರದಾನಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರುಗಳಾದ ದೇವಕಿ ಸಣ್ಣಯ್ಯ, ಮಮತಾ ದೇವಾಡಿಗ, ಹೆರಿಯಣ್ಣ ಚಾತ್ರಬೆಟ್ಟು, ರೋನಿ ಉಡುಪಿ, ರೋಶನಿ ಒಲೆವೇರ, ಇಚ್ಛಿತಾರ್ಥ ಶೆಟ್ಟಿ, ಉಸ್ತಾದ್ ಅಹಮದ್, ಸತೀಶ್ ಶೆಟ್ಟಿ, ದೇವಾನಂದ್ ಶೆಟ್ಟಿ, ವಿಕಾಸ್ ಹೆಗ್ಡೆ, ಅಜಿತ್ ಶೆಟ್ಟಿ, ರಾಜು ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಅಮೀನ್, ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಪೂಜಾರಿ, ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿನೋದ್ ಕ್ರಾಸ್ತಾ ನಿರೂಪಿಸಿದರು.

    ಈ ಮೊದಲು ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಕಚೇರಿಯಿಂದ ಹೊರಟು ಸಾಲಿಗ್ರಾಮದ ಪೇಟೆಯ ಆಂಜನೇಯ ದೇವಸ್ಥಾನದ ಮಾರ್ಗದ ಮೂಲಕ ಹಾದುಹೋಗಿ ಕೋಟತಟ್ಟು ಕೋಟಮಾರ್ಗವಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್‍ನ ತೆಕ್ಕಟ್ಟೆಯಲ್ಲಿ ಪಾದಯಾತ್ರೆ ಸಮಾಪನಗೊಂಡಿತು.ತನ್ನ ಕಾಲುನೋವಿನ ನಡುವೆಯಲ್ಲೂ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

  • ಕರಾವಳಿ, ಮಲೆನಾಡು ಪ್ರದೇಶಕ್ಕೆ ಸಿದ್ದರಾಮಯ್ಯ ಧ್ವನಿ ಹೆಚ್ವು ಪ್ರಸ್ತುತ- ವೈ.ಎಸ್.ವಿ.ದತ್ತ

    ಕರಾವಳಿ, ಮಲೆನಾಡು ಪ್ರದೇಶಕ್ಕೆ ಸಿದ್ದರಾಮಯ್ಯ ಧ್ವನಿ ಹೆಚ್ವು ಪ್ರಸ್ತುತ- ವೈ.ಎಸ್.ವಿ.ದತ್ತ

    ಕುಂದಾಪುರ ಮಿರರ್ ಸುದ್ದಿ…

    ಬ್ರಹ್ಮಾವರ: ಸಮಾಜದಲ್ಲಿ ಶಾಂತಿಯನ್ನು ಹಾಳುಗಡೆವಿ ಅವಾಂತರಗಳಿಗೆ ಕಾರಣವಾಗಿರುವ ಮೂಲಭೂತ ಶಕ್ತಿಗಳ ವಿರುದ್ಧ ಗಟ್ಟಿಯಾಗಿ ಮಾತನಾಡುವ ಏಕೈಕ ಧ್ವನಿ ಅಂದರೆ ಸಿದ್ಧರಾಮಯ್ಯ. ಆದ್ದರಿಂದ ಸಿದ್ಧರಾಮಯ್ಯ ಅವರ ಧ್ವನಿ ಬೇರೆ ಎಲ್ಲ ಕಡೆಗಳಿಗಿಂತ ಕರಾವಳಿ, ಮಲೆನಾಡು ಪ್ರದೇಶಗಳಿಗೆ ಹೆಚ್ಚು ಅಗತ್ಯವಾಗಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.

     

    ಅವರು ಭಾನುವಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಮೃತ ಮಹೋತ್ಸವದ ಪ್ರಯುಕ್ತ ಬ್ರಹ್ಮಾವರದ ಬಂಟರ ಭವನದಲ್ಲಿ ಆಯೋಜಿಸಲಾದ ಜನನಾಯಕ ಸಿದ್ಧರಾಮಯ್ಯ-75 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು

    ಮುಖ್ಯಮಂತ್ರಿಯಾಗಿದ್ದಾಗ ಸಿದ್ಧರಾಮಯ್ಯನವರು ಎಂದಿಗೂ ಸಣ್ಣತನದ ರಾಜಕಾರಣ ಮಾಡಿಲ್ಲ. ವಿರೋಧ ಪಕ್ಷದವರಿಗೂ ತಾರತಮ್ಯ ಎಸಗಿಲ್ಲ. ಎಲ್ಲಾ ಕ್ಷೇತ್ರದ ಶಾಸಕರಿಗೆ ಸಮಸ್ಯೆಗಳನ್ನು ಪರಿಹರಿಸಬೇಕೆಂಬ ರಾಜಕಾರಣ ಅವರಲ್ಲಿತ್ತು. ಅಧಿಕಾರಕ್ಕೆ ತನ್ನ ನಿಲುವುನಲ್ಲಿ ರಾಜಿಯಾಗಿಲ್ಲ, ಅದನ್ನು ಮಾರಿಕೊಂಡಿಲ್ಲ. ಸಿದ್ಧರಾಮಯ್ಯ ಎಲ್ಲ ರಾಜಕಾರಣಿಗಳಿಂದ ವಿಭಿನ್ನ ಹಾಗೂ ವಿಶೇಷವಾಗಿ ಕಾಣಲು ಅವರ ವೈಚಾರಿಕ ಸ್ಪಷ್ಟತೆ, ತಾತ್ವಿಕ ಬದ್ಧತೆ ಎಂದಿಗೂ ಬದಲಾಗದೆ ಇರುವುದು ಕಾರಣ ಎಂದರು.

    ಅಹಿಂದ ಸಮುದಾಯ ಇಂದಿಗೂ ಸಿದ್ಧರಾಮಯ್ಯ ಅವರಲ್ಲಿ ಆಸೆ ಭರವಸೆಯನ್ನು ಇಟ್ಟುಕೊಂಡಿದೆ. ಇವರು ಸಾಮಾಜಿಕ ನ್ಯಾಯದ ಪರಿರಕಲ್ಪನೆಯನ್ನು ಓಟು ಬ್ಯಾಂಕಿಗಾಗಿ, ಮತ ಸೆಳೆಯುವಾಗ ತಂತ್ರವಾಗಿ ಮಾಡಿಕೊಂಡಿಲ್ಲ ಎಂಬುದು ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಬಳಿಕ ಸಾಬೀತು ಪಡಿಸಿದ್ದಾರೆ ಎಂದರು.

    ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿದರು.

    ಅಧ್ಯಕ್ಷತೆಯನ್ನು ಶಿವಮೊಗ್ಗದ ಲೇಖಕ, ಪತ್ರಕರ್ತ ಬಿ.ಚಂದ್ರೇಗೌಡ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ನಿರಂಜನ್ ಹೆಗ್ಡೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕೆಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ವಲೇರಿಯನ್ ಮೆನೇಜಸ್, ಸಾಮಾಜಿಕ ಹೋರಾಟ ಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿಎ ಸೊಸೈಟಿ ಅಧ್ಯಕ್ಷ ಶ್ರೀಧರ್ ಪಿ.ಎಸ್., ಬೈಂದೂರು ಅಂಜಲಿ ಆಸ್ಪತ್ರೆಯ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

    ವಕೀಲ ಮಂಜುನಾಥ್ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಶಿಧರ್ ಹೆಮ್ಮಾಡಿ ವಂದಿಸಿದರು. ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ತಂಡದಿಂದ ದೇಶ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.

  • 75 ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆ ಮತ್ತು ಸಿದ್ಧರಾಮಯ್ಯ – 75 ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಾಪಚಂದ್ರ ಶೆಟ್ಟಿ ಕರೆ

    75 ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆ ಮತ್ತು ಸಿದ್ಧರಾಮಯ್ಯ – 75 ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಾಪಚಂದ್ರ ಶೆಟ್ಟಿ ಕರೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :75 ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆಯನ್ನು ಪಕ್ಷ ನೀಡಿರುವ ಸೂಚನೆಯಂತೆ ಯಶಸ್ವಿಗೊಳಿಸಬೇಕು ಮತ್ತು ರಾಜ್ಯದ ಬಡವರಿಗೆ ,ಹಿಂದುಳಿದವರಿಗೆ ಮತ್ತು ಧೀನ ದಲಿತರಿಗೆ ಸಾಮಾಚಿಕ ನ್ಯಾಯ ಒದಗಿಸಿ ಶೋಷಿತರ ಪರ ತನ್ನ ಅಧಿಕಾರ ಅವಧಿಯಲ್ಲಿ ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ,ಸಿದ್ಧರಾಮಯ್ಯ – 75 ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ.ಕೆ. ಪ್ರತಾಪಚಂದ್ರ ಶೆಟ್ಟಿ ಕರೆ ನೀಡಿದರು.

    ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಕ್ಷದ ಬೂತ್ ಸಮಿತಿ ಮತ್ತು ಗ್ರಾಮೀಣ ಸಮಿತಿಗಳನ್ನು ಮತ್ತು ಮೂಂಚೂಣಿ ಘಟಕಗಳನ್ನು ಬಲಿಷ್ಠಗೊಳಿಸಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಕುಂದರ್ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ , ಬೆಳ್ವೆ ಸತೀಶ ಕಿಣಿ, ಕೆ. ಸದಾನಂದ ಶೆಟ್ಟಿ ,ಬಿ. ಹಿರಿಯಣ್ಣ , ಬಾಲಕ್ರಷ್ಣ ಪೂಜಾರಿ,ರೋಶಿನಿ ಒಲಿವೆರಾ ,ಕ್ರಷ್ಣದೇವ ಕಾರಂತ, ದಿನೇಶ ಹೆಗ್ಡೆ ,ಇಚ್ಚಿತಾಥ೯ ಶೆಟ್ಟಿ, ವಿಕಾಸ ಹೆಗ್ಡೆ, ದೇವಕಿ ಸಣ್ಣಯ್ಯ ,ಉಪಸ್ಥಿತರಿದ್ದರು.

    ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ ನಾರಾಯಣ ಆಚಾರ್ ಕಾರ್ಯಕ್ರಮ ನಿರೂಪಿಸಿ ಕ್ರಷ್ಣ ಪೂಜಾರಿ ವಂದಿಸಿದರು.

  • ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಹಿನ್ನಲೆ – ಬ್ರಹ್ಮಾವರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

    ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಹಿನ್ನಲೆ – ಬ್ರಹ್ಮಾವರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

    ಕುಂದಾಪುರ ಮಿರರ್ ಸುದ್ದಿ…
    ಬ್ರಹ್ಮಾವರ: ನಿರುದ್ಯೋಗ, ಬೆಲೆ ಯಿಂದ ಬಿಜೆಪಿ ಆಡಳಿತದಲ್ಲಿ ಸಂಪೂರ್ಣ ವಿಫಲ ವಾಗಿದೆ. ಅದನ್ನು ಮರೆಮಾಚಲು ತನಿಖೆಯೆಂಬ ಅಸ್ತ್ರಗಳನ್ನು ಬಳಸುವ ಮೂಲಕ ವಿಪಕ್ಷದ ಧ್ವನಿಯನ್ನು ಅಡಗಿಸುವ ಕಾರ್ಯ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

    Video:

     

    ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಇಡಿ ವಿಚಾರಣೆಯನ್ನು ವಿರೋಧಿಸಿ ಶುಕ್ರವಾರ ಬ್ರಹ್ಮಾವರದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

    ಬಡವರ ಉದ್ಧಾರ ಮಾಡಿದ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಮುಗಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು. ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಮಾತನಾಡಿದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ವೆರೋನಿಕಾ ಕರ್ನೇಲಿಯೊ, ಪ್ರಖ್ಯಾತ್ ಶೆಟ್ಟಿ ದಿನಕರ ಹೇರೂರು, ರಮೇಶ್ ಕಾಂಚನ್, ಭುಜಂಗ ಶೆಟ್ಟಿ ದಿನೇಶ್ ಪುತ್ರನ್, ಕೃಷ್ಣಮೂರ್ತಿ ಆಚಾರ್ಯ, ನಿತ್ಯಾನಂದ ಶೆಟ್ಟಿ ಮೈರ್ಮಾಡಿ ಸುಧಾಕರ ಶೆಟ್ಟಿ, ಡಾ| ಸುನೀತಾ ಶೆಟ್ಟಿ ಗೀತಾ ವಾಗೈ ರೋಶನಿ ಒಲ್ವೇರಾ, ಕಿಶನ್ ಹೆಗ್ಡೆ ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ಯತೀಶ್ ಕರ್ಕೇರ, ಪ್ರಸಾದ್ ರಾಜ್ ಕಾಂಚನ್, ಗಣೇಶ್ ನೇರ್ಗಿ, ಸೂರ ಸಾಲ್ಯಾನ್, ಅಶೋಕ್ ನಾಯರಿ, ಎಂ.ಎ. ಗಪೂರ್‌ ಉಪಸ್ಥಿತರಿದ್ದರು.

  • ಕುಂದಾಪುರ ಮಂಡಲ ವತಿಯಿಂದ ದಿ.ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮಜಯಂತಿ ಅಚರಣೆ

    ಕುಂದಾಪುರ ಮಂಡಲ ವತಿಯಿಂದ ದಿ.ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮಜಯಂತಿ ಅಚರಣೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಕುಂದಾಪುರ ಮಂಡಲ ವತಿಯಿಂದ ಜನಸಂಘ ಸಂಸ್ಥಾಪಕರು, ಪಕ್ಷದ ಕಾರ್ಯಕರ್ತರ ಆದರ್ಶ ಪ್ರಾಯರಾದ ದಿವಂಗತ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮಜಯಂತಿಯ ಪ್ರಯುಕ್ತ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

    ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಗೋಪಾಡಿ, ಕಾರ್ಯದರ್ಶಿಗಳಾದ ಸುರೇಂದ್ರ ಸಂಗಮ್, ಸಂತೋಷ್ ಶೆಟ್ಟಿ ಹಾಲಾಡಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ,ಆಶಾಲತ ನಾಯ್ಕ್, ಕಾರ್ಯಕಾರಿಣಿ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ನಗರ ಪ್ರಾಧಿಕಾರ ಅಧ್ಯಕ್ಷರಾದ ವಿಜಯ್ ಎಸ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಶೆಟ್ಟಿ, ಪುರಸಭಾ ಸದಸ್ಯೆ ವನಿತಾ ಬಿಲ್ಲವ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೌರಭಿ ಪೈ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ಖಾರ್ವಿ, ಉಪಾಧ್ಯಕ್ಷ ಅಭಿಷೇಕ ಅಂಕದಕಟ್ಟೆ ಉಪಸ್ಥಿತರಿದ್ದರು.

  • ಬೈಂದೂರು ಮಂಡಲ: ಬಿಜೆಪಿ ಯುವಮೋರ್ಚಾದಿಂದ ಬೈಕ್ ರ್ಯಾಲಿ

    ಬೈಂದೂರು ಮಂಡಲ: ಬಿಜೆಪಿ ಯುವಮೋರ್ಚಾದಿಂದ ಬೈಕ್ ರ್ಯಾಲಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 8 ವರ್ಷದ ಯಶಸ್ವಿ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ವಿಕಾಸ್ ತೀರ್ಥ ಬೈಕ್ ರ್ಯಾಲಿ ಜೂ. 26ರಂದು ಅಪರಾಹ್ನ 3 ಗಂಟೆಗೆ ತಲ್ಲೂರು ವೃತ್ತದಿಂದ ಹೊರಟು ಬೈಂದೂರು ಪೇಟೆ ತನಕ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.