ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ 29 ರೂ. ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ -ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ
ಕುಂದಾಪುರ :ಕಳೆದ ಮೂರು ತಿಂಗಳಲ್ಲೇ ಇದು ಎರಡನೇ ಬಾರಿ ಬೆಲೆ ಏರಿಕೆಯಾಗಿದ್ದು, ಮಾರ್ಚ್ ತಿಂಗಳಲ್ಲಿ 60 ರೂ. ಹೆಚ್ಚಿಸಲಾಗಿತ್ತು. ಈಗಿನ 29 ರೂ. ಏರಿಕೆಯೊಂದಿಗೆ ಕೇವಲ ಮೂರು ತಿಂಗಳಲ್ಲಿ ಒಟ್ಟು 89 ರೂ. ಹೆಚ್ಚಳವಾಗಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಮತ್ತೊಂದು ಕಡೆ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಮಧ್ಯಮ ವರ್ಗ, ಬಡವರು ಮತ್ತು ಗೃಹಿಣಿಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕಿದೆ.
ಅಡುಗೆ ಮನೆ ಎನ್ನುವುದು ಪ್ರತಿಯೊಂದು ಕುಟುಂಬದ ಜೀವನದ ಕೇಂದ್ರಬಿಂದು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ನೇರ ಪರಿಣಾಮ ಮಹಿಳೆಯರು ನಿರ್ವಹಿಸುವ ಮನೆಯ ಬಜೆಟ್ ಮೇಲೆ ಬೀಳುತ್ತದೆ. ದಿನನಿತ್ಯದ ಖರ್ಚು ನಿಭಾಯಿಸಲು ಸಾಮಾನ್ಯ ಕುಟುಂಬಗಳು ಪರದಾಡುತ್ತಿರುವ ಸಂದರ್ಭದಲ್ಲಿ ಇಂತಹ ನಿರ್ಧಾರಗಳು ಜನವಿರೋಧಿ ಕ್ರಮಗಳಾಗಿವೆ. ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ದರವನ್ನು ಏರಿಸಿದೆ. ಪರಿಣಾಮ ಹೋಟೆಲ್ ತಿಂಡಿ, ತಿನಿಸುಗಳು, ಟೀ-ಕಾಫಿ ದರ ಏರಿಕೆಯಾಗಿದೆ. ಈಗ ಅಡುಗೆ ಸಿಲಿಂಡರ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ. ಈ ರೀತಿ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಬದುಕು ಏನಾಗಬೇಕು .
2014ರಲ್ಲಿ ಅಡುಗೆ ಅನಿಲದ ಬೆಲೆ ಕೈಗೆಟಕದ ಮಟ್ಟದಲ್ಲಿತ್ತು ಎಂದು ಹೇಳಿ ಅಧಿಕಾರಕ್ಕೆ ಬಂದವರು, ಇಂದು ಸಾಮಾನ್ಯ ಜನರ ಬದುಕನ್ನೇ ದುಬಾರಿಯನ್ನಾಗಿ ಮಾಡಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಬದಲು ನಿರಂತರವಾಗಿ ಜನರ ಮೇಲೆ ಹೊರೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕಚ್ಚಾ ತೈಲದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇಳಿಕೆಯಾದರೂ ಮದ್ಯ ಪ್ರಾಚ್ಯದ ಯುದ್ದದ ನೆಪವನ್ನು ಮುಂದಿಟ್ಟುಕೊಂಡು ದೇಶದಲ್ಲಿ ದಿನನಿತ್ಯ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲದ ದರವನ್ನು ಏರಿಕೆ ಮಾಡಿ ಜನರನ್ನು ಲೂಟಿ ಹೊಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆದು, ಸಾಮಾನ್ಯ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಬದಲು, ಅವರ ಹಿತಾಸಕ್ತಿಯನ್ನು ಕಾಪಾಡುವ ನೀತಿಗಳನ್ನು ಜಾರಿಗೆ ತರಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.









