ಮಳೆಗಾಲದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು -ಯು.ಟಿ ಖಾದರ್

0
79

Click Here

Click Here

ಕುಂದಾಪುರ ಮಿರರ್ ಸುದ್ದಿ…

ಉಡುಪಿ :ಮಳೆಗಾಲದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ನೆರೆಯಿಂದ ಸಮಸ್ಯೆ ಉಂಟಾದಾಗ ಕೂಡಲೇ ಸ್ಪಂದಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಫರೀದ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಕುಡಿಯುವ ನೀರಿನ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಂಬರುವ ಮಳೆ ದಿನಗಳಲ್ಲಿ ಹೆಚ್ಚಿನ ಮಳೆಯಾಗಿ ನೆರೆ , ಸಿಡಿಲು ಬಡಿತ ಸೇರಿದಂತೆ ಮತ್ತಿತರ ಅವಘಡಗಳು ಉಂಟಾದಾಗ, ಕೂಡಲೇ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ ಗಳು ಅವರಿಗೆ ಸಾಂತ್ವನ ನೀಡಿ ಮಾನಸಿಕವಾಗಿ ಆತ್ಮವಿಶ್ವಾಸ ಮೂಡಿಸಿ ನಿಯಮಾನುಸಾರ ಸರ್ಕಾರದಿಂದ ಸಿಗುವಂತಹ ಪರಿಹಾರ ವನ್ನು ಕೊಡಬೇಕು. ಅವರಲ್ಲಿ ಯಾರೂ ಬರಲಿಲ್ಲ ಎಂಬ ಭಾವನೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಮಳೆ ಸೇರಿದಂತೆ ಮತ್ತಿತರ ಪ್ರಕೃತಿ ವಿಕೋಪಗಳಿಂದ ತೊಂದರೆ ಉಂಟಾದಲ್ಲಿ ಅವರಿಗೆ ತುರ್ತಾಗಿ 5 ಸಾವಿರ ರೂ. ಗಳನ್ನು ಪರಿಹಾರ ನೀಡಬೇಕು. ಒಂದೊಮ್ಮೆ ಮರಣ ಸಂಭವಿಸಿದಲ್ಲಿ 5 ಲಕ್ಷ ಪರಿಹಾರ, ಸಂಪೂರ್ಣ ವಾಗಿ ಮನೆಗೆ ಹಾನಿ ಉಂಟಾದರೆ 1 ಲಕ್ಷ 20 ಸಾವಿರ ಇದರ ಜೊತೆ ಹೆಚ್ಚುವರಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ನಿಂದ 3 ಲಕ್ಷ 75 ಸಾವಿರ ಮನೆ ನಿರ್ಮಾಣ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.

ಜನ ಸಾಮಾನ್ಯರ ಒಳಿತಿಗಾಗಿ ಸರ್ಕಾರ ಅನೇಕ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಂತಹ ಯೋಜನೆಗಳನ್ನು ಆದಷ್ಟು ಬೇಗ ಅರ್ಹರಿಗೆ ನಿಯಮ ಬದ್ಧವಾಗಿ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದ ಅವರು ತಳ ಮಟ್ಟದ ಅಧಿಕಾರಿ ಗಳಿಗೆ ಗ್ರಾಮ ಗಳಲ್ಲಿ ಇರುವ ನಾನಾ ಸಮಸ್ಯೆಗ ಕಂಡು ಬರುತ್ತದೆ ಇವುಗಳನ್ನು ಮೇಲ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿ ಅದನ್ನು ಬಗೆ ಹರಿಸಬೇಕು ಎಂದರು.

ಕಾನೂನು ಅನುಷ್ಠಾನ ಮಾಡಲು ಕೆಲವು ತೊಡಕುಗಳು ಇರುತ್ತವೆ. ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾನವೀಯ ನೆಲೆಗಟ್ಟಿನಲ್ಲಿ ಅವುಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಉಪಯೋಗ ಮಾಡಿ ಕೊಡಬೇಕು ಎಂದರು.

ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ಕೊಠಡಿಗಳು ಸೋರುತ್ತಿದ್ದರೆ, ದುರಸ್ತಿಗೊಳಪಟ್ಟಿದ್ದರೆ ಅಂತಹ ಶಾಲಾ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದಂತೆ ಕಟ್ಟುನಿಟ್ಟಿನ ಸೂಚಿನೆ ನೀಡಿದ ಅವರು ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಬಗ್ಗೆ ಮಾಹಿತಿ ಪಡೆದರು. ಬಾಕಿ ಉಳಿದವು ಗಳನ್ನು ಕೂಡಲೇ ವಿತರಿಸಲು ಸೂಚನೆ ನೀಡಿದರು.

Click Here

ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮಳೆಯಿಂದಾಗಿ ಜನ, ಜಾನುವಾರುಗಳ ಪ್ರಾಣ ಹಾನಿಯಾದಲ್ಲಿ ತ್ವರಿತವಾಗಿ ಪರಿಹಾರ ಮೊತ್ತವನ್ನು ವಿತರಿಸಬೇಕು ಎಂದರು.

ಮಳೆಗಾಲದ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಂಭವವಿದ್ದು ಈ ಕುರಿತು ಆರೋಗ್ಯ ಇಲಾಖೆಯಿಂದ ಅಗತ್ಯದ ಸಿದ್ಧತೆ ಮಾಡಿಕೊಳ್ಳಬೇಕು. ಜೊತೆಗೆ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಬೇಕು. ಸೊಳ್ಳೆ ಉತ್ಪಾದನಾ ಸ್ಥಳಗಳನ್ನು ಉಂಟುಮಾಡುವ ವಾಣಿಜ್ಯ ಸಂಸ್ಥೆಗಳ ಲೈಸನ್ಸ್ ಗಳನ್ನು ರದ್ದು ಮಾಡಬೇಕು. ಡೆಂಗೆ, ಮಲೇರಿಯಾ, ಚಿಕನ್ ಗುನ್ಯಾ ಉಲ್ಬಣಗೊಂಡ ಸ್ಥಳಗಳಲ್ಲಿ ಫಾಗಿಂಗ್ ಮತ್ತಿತರ ನಿಯಂತ್ರಣ ಕ್ರಮಗಳನ್ನು ಮಾಡಿ ಹತೋಟಿಗೆ ಮುಂದಾಗಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು ಎಂದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ನಿಗಾವಹಿಸಬೇಕು. ತೋಟಗಾರಿಕಾ ಬೆಳೆಗಳ ಕೀಟ ಬಾಧೆಗಳಿಗೆ ರೈತರಿಗೆ ಅವುಗಳ ನಿಯಂತ್ರಣ ಕೈಗೊಳ್ಳುವ ಬಗ್ಗೆ ಅರಿವು ಮೂಡಿಸಿ ಹೆಚ್ಚು ರೈತರು ಬೆಳೆ ವಿಮೆ ಹೊಂದುವಂತೆ ಮಾಡಬೇಕು ಎಂದರು.

ಪ್ರಕೃತಿ ವಿಕೋಪ ಗಳಿಗೆ ಕೂಡಲೇ ಸ್ಪಂದಿಸಲು ಅರಣ್ಯ ಇಲಾಖೆ, ಮೆಸ್ಕಾಂ, ಗ್ರಾಮೀಣ ಅಭಿವೃದ್ಧಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆ ಗಳು ಸಮನ್ವಯ ಸಮಿತಿ ಗಳನ್ನು ಮುಂದಿನ ಮೂರು ತಿಂಗಳ ಮಳೆಗಾಲದಲ್ಲಿ ನಿರ್ವಹಿಸಲು ಮುಂದಾಗಬೇಕು. ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳ ತಂಡವು ರಕ್ಷಣಾ ಕಾರ್ಯಾಚರಣೆ ಮಾಡಲು ತಂಡವಾಗಿ ಸಿದ್ಧರಿ ದ್ದು ಜನರಿಗೆ ಸ್ಪಂದಿಸಬೇಕು ಎಂದರು.

ಮಳೆಯಿಂದಾಗಿ ರಸ್ತೆಗಳಲ್ಲಿ ಹೊಂಡ ಬಿದ್ದಲ್ಲಿ ತಕ್ಷಣಕ್ಕೆ ಸ್ಪಂದಿಸಬೇಕು. ಉದಾಸೀನ ಅಥವಾ ನಿರ್ಲಕ್ಷ್ಯದಿಂದ ತಡವಾದರೆ ಅನಾಹುತ ಉಂಟಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಜನರು ಜನ ಪ್ರತಿನಿಧಿಗಳನ್ನು ದೂಷಿಸುತ್ತಾರೆ ಇದಕ್ಕೆ ಆಸ್ಪದ ನೀಡಬಾರದು ಎಂದ ಅವರು ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ನೀರು ಸುವ್ಯವಸ್ಥಿತವಾಗಿ ಹರಿದು ಹೋಗುವಂತೆ ನೋಡಬೇಕು ಎಂದು ಲೋಕೋಪಯೋಗಿ ಅಭಿಯಂತರ ರಿಗೆ ಸೂಚನೆ ನೀಡಿದರು.

ಪೊಲೀಸ್ ಅಧಿಕಾರಿ ಗಳಿಗೆ ಕಳ್ಳತನ, ಮನೆಗಳ್ಳತನ ಮಾದಕವಸ್ತುಗಳ ನಿಯಂತ್ರಣ ಸೇರಿದಂತೆ ಮತ್ತಿತರ ಅಪರಾಧಗಳ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಮಾಹಿತಿ ಪಡೆದು ಮಾತನಾಡಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಸೂಚನೆ ನೀಡಿದರು.

ಸಭೆಯಲ್ಲಿ ಶಾಸಕರುಗಳಾದ ಯಶ್‌ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ. ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ ಎ ಗಫೂರ್, ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ರುಥೇನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here