ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬಾಂಡ್ಯ ಎಜುಕೇಶನ್ ಟ್ರಸ್ಟ್ ವತಿಯಿಂದ ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿಕ್ಷಕರ ಮೌಲ್ಯ ಮತ್ತು ನಿಸ್ವಾರ್ಥದ ಸೇವಾಗುಣವನ್ನು ಸಮಾಜಕ್ಕೆ ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯ ನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿಯವರು ಮಾತನಾಡುತ್ತಾ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು. ಗುರುವಿನ ಸ್ಥಾನವನ್ನು ತುಂಬುವ ಯಾವುದೇ ಉನ್ನತ ಹುದ್ದೆಯು ಸಮಾಜದಲ್ಲಿ ಇಲ್ಲ. ಶಿಷ್ಯನೊಬ್ಬನ ಪ್ರತಿಯೊಂದು ಸಾಧನೆಯಲ್ಲಿ ಗುರುವಿನ ಅನುಗ್ರಹ ಮತ್ತು ಸೂಕ್ತ ಮಾರ್ಗದರ್ಶನವಿರುತ್ತದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶಿಕ್ಷಕರು ಸ್ವಾರ್ಥ ರಹಿತರಾಗಿ ತಮ್ಮೊಳಗಿನ ಜ್ಞಾನ ಸಂಪತ್ತನ್ನು ಧಾರೆ ಎರೆಯಬೇಕು ಎನ್ನುತ್ತಾ, ಎಲ್ಲಾ ಶಿಕ್ಷಕ ಬಂಧುಗಳಿಗೂ ಶುಭ ಕೋರಿದರು.
ಸಭಾಧ್ಯಕ್ಷರಾದ ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಹಕರಾದ ಕೆ.ಸುಭಾಶ್ಚಂದ್ರ ಶೆಟ್ಟಿಯವರು ‘ ಶಿಕ್ಷಕ ವೃತ್ತಿಯ ಶ್ರೇಷ್ಠತೆಯನ್ನು ಪರಿಚಯಿಸುತ್ತ ಅರಿವಿನ ಗುರುವಾಗಿ, ವಿದ್ಯಾರ್ಥಿಗಳ ಬದುಕಿಗೆ ಭಾಗ್ಯ ಸಂಪನ್ನರಾದ ಶಿಕ್ಷಕರ ಸೇವೆಗೆ ಸಮಾಜದಲ್ಲಿ ಅತ್ಯುನ್ನತ ಸ್ಥಾನವಿದೆ. ಇದಕ್ಕೆ ನಿದರ್ಶನವೆಂಬಂತೆ ಸರ್ವೆಪಲ್ಲಿ ಡಾ. ರಾಧಾಕೃಷ್ಣರವರ ಜೀವನ ಕ್ರಮವೇ ನಮಗೆಲ್ಲರಿಗೂ ಆದರ್ಶವಾಗಿದೆ. ಅವರ ಜನ್ಮದಿನವನ್ನು ಸಮಾಜದ ನಿರ್ಮಾತರಾದ ಶಿಕ್ಷಕರ ದಿನವನ್ನಾಗಿ ನಾವು ಆಚರಿಸುತ್ತಾ ಬಂದಿದ್ದೇವೆ ಎಂದು ಎಲ್ಲಾ ಶಿಕ್ಷಕ್ಷರಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗುರುಕುಲ ವಿದ್ಯಾ ಸಂಸ್ಥೆಯ ಶಿಕ್ಷಕ ಸಮುದಾಯದಿಂದ ಮನೋರಂಜನ ಕಾರ್ಯಕ್ರಮವು ನಡೆಯಿತು. ಆಡಳಿತ ಮಂಡಳಿಯ ವತಿಯಿಂದ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ಕೊಡುಗೆಯನ್ನು ನೀಡಿ ಗೌರವಿಸಲಾಯಿತು.ಪ್ರಾಸ್ತಾವಿಕವಾಗಿ ಮಾತನಾಡಿದ ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು ಆಡಳಿತ ಮಂಡಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ – ವರ್ತಮಾನದ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಶಿಕ್ಷಕರು ಹೆಚ್ಚು ಹೆಚ್ಚು ಅಧ್ಯಯನ ಶೀಲ ಗುಣವನ್ನು ಹೊಂದಿ ಅಧ್ಯಾಪನದಲ್ಲಿ ತೊಡಗಿ ಕೊಳ್ಳಬೇಕು ಎಂದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕ್ ರವರು ಶಿಕ್ಷಕ ದಿನಾಚರಣೆಗೆ ಶುಭ ಕೋರಿದರು. ಈ ಸುಂದರ ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕ ಶಿಕ್ಷಕ್ಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಾಂಕರವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.












