ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಪ್ರಧಾನಿ ನರೇಂದ್ರ ಮೋದಿ ಅವರ 76ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ರಿಕ್ಷಾ ಚಾಲಕರೊಬ್ಬರು ಸಾರ್ವಜನಿಕರಿಗೆ ಗುರುವಾರ ದಿನವಿಡೀ ಉಚಿತ ಆಟೋ ಸೇವೆ ನೀಡುವ ಮೂಲಕ ಗಮನಸೆಳೆದಿದ್ದಾರೆ.
ತ್ರಾಸಿಯ ರಿಕ್ಷಾ ನಿಲ್ದಾಣದಲ್ಲಿ ಕಳೆದ ಹಲವು ವರ್ಷಗಳಿಂದ ರಿಕ್ಷಾ ಚಾಲಕರಾಗಿರುವ ಉದಯ ಖಾರ್ವಿ ಅವರು ತ್ರಾಸಿ ಹಾಗೂ ಸುತ್ತಮುತ್ತಲಿನ 15 ಕಿ.ಮೀ. ವ್ಯಾಪ್ತಿಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಈ ಸೇವೆ ನೀಡಿದರು. ಬೆಳಗ್ಗೆಯಿಂದ ಸಂಜೆಯವರೆಗೆ ಕುಂದಾಪುರ, ನಾವುಂದ, ಗುಜ್ಜಾಡಿ, ಗಂಗೊಳ್ಳಿ, ಗುಜ್ಜಾಡಿ, ಸಣ್ಣ ಕುಂಬ್ರಿ, ಮೊವಾಡಿ, ಕಂಚುಗೋಡು, ಹೊಸಪೇಟೆ, ಮಾವಿನಕಟ್ಟೆ ಹೀಗೆ ಅನೇಕ ಕಡೆಗಳಿಗೆ ಜನರನ್ನು ಉಚಿತವಾಗಿ ಕರೆದೊಯ್ಯುವ ಮೂಲಕ ನೆರವಾದರು. ಪ್ರಧಾನಿ ಮೋದಿಯವರ ಮೇಲಿನ ಅಭಿಮಾನದಿಂದ ಕಳೆದ 6 ವರ್ಷಗಳಿಂದ ಈ ಸೇವೆಯನ್ನು ನೀಡುತ್ತಿದ್ದು, ಇದು 7ನೇ ವರ್ಷವಾಗಿದೆ. ಇವರ ಈ ನಿಸ್ವಾರ್ಥ ಸೇವೆಗೆ ಸಾರ್ವಜನಿಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಇಡೀ ವಿಶ್ವವೇ ಮೆಚ್ಚುವ ನಾಯಕ, ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಸಲ್ಲಿಸುತ್ತಿರುವ ಸೇವೆ ಅವಿಸ್ಮರಣೀಯವಾದುದು. ಅವರ ಕಾರ್ಯವೈಖರಿಯಿಂದ ನಮ್ಮ ದೇಶ ಅನೇಕ ಸವಾಲುಗಳ ಮಧ್ಯೆಯೂ ಅಭಿವೃದ್ಧಿಯತ್ತ ಸಾಗುತ್ತಿದೆ. ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಆಟೋ ಸೇವೆ ನೀಡಿ ಅಳಿಲ ಸೇವೆ ಸಲ್ಲಿಸಿದ್ದೇನೆ. ರಾಷ್ಟ್ರ ಕಂಡ ಅಪ್ರತಿಮ ನಾಯಕನಿಗೆ ಮತ್ತಷ್ಟು ಕಾಲ ರಾಷ್ಟ್ರ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಉದಯ ಖಾರ್ವಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.












