ಕುಂದಾಪುರ ಯುಜಿಡಿ ಕಾಮಗಾರಿ ಸಚಿವ ಎಚ್.ಸಿ ಬಾಲಕೃಷ್ಣ ಕೆಂಡಮಂಡಲ: ಸರ್ಕಾರದ ಹಣ ಹುಡುಗಾಟಿಕೆಯಾ? ಅಂದಿನ ಮುಖ್ಯಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು, ಅಧಿಕಾರಿಗಳಿಗೆ ಸಚಿವರ ಖಡಕ್ ವಾರ್ನಿಂಗ್

0
28

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: 2017ರಲ್ಲಿ ಮುಗಿಯಬೇಕಾದ ಯೋಜನೆ ಇನ್ನೂ ಮುಗಿದಿಲ್ಲ. ಈ ವೈಫಲ್ಯಕ್ಕೆ ಕಾರಣವೇನು? ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ನಿರ್ಧಾರ ಕೈಗೊಳ್ಳಲಿಲ್ಲ ಏಕೆ? 11 ವರ್ಷಗಳ ಹಿಂದೆ ಯೋಜನೆ ಆರಂಭಗೊಂಡು ಇನ್ನೂ ಕೂಡಾ ಹಾಗೆಯೇ ಇದೆ ಎಂದರೆ ಏನರ್ಥ? ಭೂಸ್ವಾದೀನ ಮಾಡಿಕೊಳ್ಳದೆ ಯೋಜನೆ ಆರಂಭಿಸಿದ್ದೀರಾ? ಅಂದಿನ ಮುಖ್ಯಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡ್ತಾ ಇದ್ದರು? ಸರಕಾರದ ಹಣ, ಹುಡುಗಾಟ ಆಡ್ತಾ ಇದ್ದೀರಾ ಎಂದು ಪೌರಾಡಳಿತ ಸಚಿವ ಹೆಚ್.ಸಿ ಬಾಲಕೃಷ್ಣ ಕುಂದಾಪುರ ಪುರಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು
ಅವರು ಅ.13ರಂದು ಕುಂದಾಪುರ ಪುರಸಭೆಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ನಗರಾಭಿವೃದ್ಧಿ ಕೋಶ ಉಡುಪಿ ಜಿಲ್ಲೆ ಹಾಗೂ ಪುರಸಭೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಪೌರಾಡಳಿತ ಇಲಾಖೆ ಕುಂದಾಪುರ ಪುರಸಭೆಯ ಯುಜಿಡಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 56.54 ಕೋಟಿ ರೂ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ಸರಕಾರದಿಂದ ಅನುಮೋದನೆ ದೊರಕಿದ್ದು, ಸುಮಾರು 11 ವರ್ಷಗಳು ಕಳೆದರೂ ಅನುದಾನದ ಕೊರತೆ, ಭೂಸ್ವಾಧೀನ ಸೇರಿದಂತೆ ಮತ್ತಿತರ ಕಾರಣಗಳಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಸಹಾಯಕ ಕಮಿಷನರ್ ಅವರು ಸಂಬಂಧಪಟ್ಟ ಅಧಿಕಾರಿಗಳು, ಅಭಿಯಂತರುಗಳೊಂದಿಗೆ ಸ್ಥಳ ಭೇಟಿ ಮಾಡಿ, ಕಾಮಗಾರಿ ವಿಳಂಬಕ್ಕೆ ಕಾರಣರಾದವರ ವಿವರ, ಕಾಮಗಾರಿ ಕೈಗೊಳ್ಳಲು ಉಂಟಾದ ಅಡಚಣೆಯ ಮಾಹಿತಿ, ಕಾಮಗಾರಿ ಮುಂದುವರೆಸಲು ಅವಶ್ಯವಿರುವ ಅನುದಾನ ಸೇರಿದಂತೆ ಮತ್ತಿತರ ಸಮರ್ಪಕ ವಿವರಗಳನ್ನು ಸಲ್ಲಿಸುವಂತೆ ತಿಳಿಸಿದ ಅವರು, ಯೋಜನೆಯ ವಿಳಂಬಕ್ಕೆ ಉಂಟಾಗಿರುವ ವರದಿಗಳ ಬಗ್ಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ಕರೆದು ಸರಕಾರದ ಹಂತದಲ್ಲಿ ಕೂಲಂಕುಷವಾಗಿ ಚರ್ಚಿಸಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಪೌರ ಕಾರ್ಮಿಕರುಗಳಿಗೆ ಖಾಯಂ ವಸತಿಗೃಹ ನಿರ್ಮಾಣಕ್ಕೆ 2 ಎಕರೆ ಜಾಗವನ್ನು ನಗರ ಪ್ರದೇಶದಲ್ಲಿ ಗುರುತಿಸಿ ಅವರುಗಳಿಗೆ ನೀಡುವುದರೊಂದಿಗೆ ಸಕ್ರೀಯ ಪೌರಕಾರ್ಮಿಕರು ನಗರದಲ್ಲೇ ವಾಸವಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ನಗರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.
ತೆರಿಗೆ ಪಾವತಿ, ನಳ್ಳಿ ನೀರಿನ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ನಿಗಧಿತ ಗುರಿ ಸಾಧನೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮುಂದಾಗಬೇಕು. ನಗರದ ಸ್ವಚ್ಛತೆಗೆ ಸ್ಥಳೀಯಾಡಳಿತಗಳು ಮೊದಲ ಆದ್ಯತೆ ನೀಡಬೇಕು. ದಾರಿದೀಪ ಅಳವಡಿಕೆ ಅವುಗಳ ನಿರ್ವಹಣೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದರು.
ಪುರಸಭೆಗಳ ಮುಖ್ಯಾಧಿಕಾರಿಗಳು ಬೆಳಗ್ಗೆ 6ಕ್ಕೆ ಕಚೇರಿಯಲ್ಲಿ ಹಾಜರಿದ್ದು, ಹಾಜರಾತಿ ದಾಖಲಿಸಬೇಕು. 6 ರಿಂದ 9 ರ ವರೆಗೆ ಸ್ಪಾಟ್ ಇನ್ಸ್ಪೆಕ್ಷನ್ ಕೈಗೊಳ್ಳಬೇಕು. ಅಧಿಕಾರಿಗಳು ಮಧ್ಯಾಹ್ನ 3.30 ರಿಂದ 5.30 ರ ವರೆಗೆ ಕಚೇರಿಗಳಲ್ಲಿ ಹಾಜರಿದ್ದು, ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಬೇಕು. ತಿಂಗಳಲ್ಲಿ ಒಂದು ಬಾರಿ ಸ್ಥಳೀಯ ಸಂಸ್ಥೆಗಳಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಭೇಟಿ ನೀಡಿ, ಅಲ್ಲಿನ ಕೆಲಸ ಕಾರ್ಯಗಳನ್ನು, ಸಮಸ್ಯೆಗಳನ್ನು ಪರಿಶೀಲಿಸಬೇಕು ಎಂದ ಅವರು ಮಧ್ಯಾಹ್ನದ ಅವಧಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅಹವಾಲು / ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ತಿಂಗಳಿಗೊಮ್ಮೆ ಪಿ.ಡಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಯಾವ ದಿನ ಭೇಟಿ ನೀಡುತ್ತಾರೆ ಎನ್ನುವುದನ್ನು ಮುಂಚಿತವಾಗಿ ತಿಳಿಸಬೇಕು, ಆ ದಿನ ಸಾರ್ವಜನಿಕರ ಭೇಟಿಗೂ ಅವಕಾಶ ನೀಡಬೇಕು ಎಂದರು.
24 ಗಂಟೆ ಕುಡಿಯುವ ನೀರಿನ ವಿಚಾರದಲ್ಲಿಯೂ ಕೂಡಾ ಅಧಿಕಾರಿಗಳು ನೀಡಿದ ಉತ್ತರಕ್ಕೆ ತೃಪ್ತರಾಗದ ಸಚಿವರು ಜನಸ್ನೇಹಿಯಾಗಿ ವರ್ತಿಸಿ ಎಂದು ಹೇಳಿದರು. ತೆರಿಗೆ ವಸೂಲಾತಿಯಲ್ಲಿ ಹಿನ್ನೆಡೆಗೆ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತಗೆದುಕೊಂಡರು. ನೋಟೀಸು ನೀಡುವುದೆಂದರೆ ಲವ್ ಲೆಟರ್ ಅಲ್ಲ, ನೋಟಿಸ್ ಬಂದಿದೆ ಎಂದರೆ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದೇವಕಿ ಸಣ್ಣಯ್ಯ, ಗಣೇಶ ಶೇರುಗಾರ್, ಶ್ರೀಧರ ಶೇರುಗಾರ ಮಾತನಾಡಿದರು.
ಸಭೆಯಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್, ಜಿಲ್ಲಾ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ನಗರಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here