ಅನ್ಯರಿಗೆ ಕೆಡುಕನ್ನು ಬಯಸದೆ ಸನ್ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು -ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕನ್ನಡ ರಾಜ್ಯೋತ್ಸವದ ದಿನದಂದು ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಗುರುಕುಲ ಕಾರ್ನಿವಲ್2.0 – ಮಕ್ಕಳ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನ್ನಡ ನಾಡಿನ ಭಾಷೆ ಸಂಸ್ಕೃತಿಯನ್ನು ಅನಾವರಣ ಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಮಕ್ಕಳ ಹಬ್ಬವನ್ನು ಕನ್ನಡ ಚಿತ್ರರಂಗದ ಹಿರಿಮೆಯ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರುರವರು ಉದ್ಘಾಟಿಸಿ ಮಾತನಾಡುತ್ತಾ ,– ಸಿಹಿಯನ್ನರಸುವ ಇರುವೆಯ ಹಾಗೆ ಮೌಲ್ಯಯುತವಾದ ಶಿಕ್ಷಣದತ್ತ ಮುಖ ಮಾಡಿ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸಬೇಕು. ಸ್ವಾವಲಂಬಿಯಾಗಿ ಬದುಕುವುದಕ್ಕೆ ಬೇಕಾದ ಕೌಶಲ್ಯಗಳನ್ನು ತನ್ನದಾಗಿಸಿಕೊಂಡು ತಾನು ಪಡೆದ ಶಿಕ್ಷಣವನ್ನು ಸಾರ್ಥಕ ಗೊಳಿಸಿಕೊಳ್ಳಬೇಕು. ಅನ್ಯರಿಗೆ ಕೆಡುಕನ್ನು ಬಯಸದೆ ಸನ್ಮಾರ್ಗದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ತಮ್ಮ ಸಿನಿಮಾಗಳ ಸುಂದರವಾದ ಹಾಡುಗಳನ್ನು ಹಾಡಿ ಮಕ್ಕಳನ್ನು ರಂಜಿಸಿದರು.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ – ಪ್ರತಿಯೊಂದು ಮಗುವಿನಲ್ಲೂ ಆತ್ಮವಿಶ್ವಾಸವನ್ನು ತುಂಬಿ ಉತ್ತಮ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ, ಕಳೆದ 20 ವರ್ಷಗಳಿಂದ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಯಶಸ್ಸನ್ನು ಸಾಧಿಸುತ್ತಾ ಬಂದಿದ್ದೇವೆ. ಕಾರ್ನಿವಲ್ ವಿದ್ಯಾರ್ಥಿ ಮತ್ತು ಪೋಷಕರ ಮನಸಂಕಲ್ಪದ ಮಕ್ಕಳ ಹಬ್ಬವಾಗಿದೆ. ರಚನಾತ್ಮಕ ವಿಚಾರಧಾರೆಗಳಿಂದ ವಿದ್ಯಾರ್ಥಿಗಳು ಹೆಚ್ಚು ಬಲಿಷ್ಠರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವೆಂದರು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭ ಸಂದೇಶವನ್ನು ನೀಡಿದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿಯವರು ಗೌರವ ಉಪಸ್ಥಿತಿಯಿಂದ ಕನ್ನಡ ರಾಜ್ಯೋತ್ಸವದ ಶುಭ ಕೋರಿದರು. ಸುಮಾರು 50ಕ್ಕೂ ಹೆಚ್ಚು ವಿವಿಧ ವ್ಯಾಪಾರಿ ಮಳಿಗೆಗಳು ಮಕ್ಕಳ ಹಬ್ಬಕ್ಕೆ ಮೆರುಗು ನೀಡಿದವು. ವಿದ್ಯಾರ್ಥಿಗಳು ಮತ್ತು ಪೋಷಕರು ಸೇರಿ ರುಚಿಕರವಾದ ಆಹಾರ ಮಳಿಗೆ, ಖಾದಿ ಮಳಿಗೆ, ಸೌಂದರ್ಯ ಸಾಧನಗಳು, ಆಯುರ್ವೇದ ಸಿದ್ಧ ಔಷಧಿಗಳು, ಬೌನ್ಸಿಂಗ್ ಕ್ಯಾಸ್ಟಲ್, ಜಂಪಿಂಗ್ ಜಾಕ್, ಗಾಳಿಪಟ ಸ್ಪರ್ಧೆ, ವಿವಿಧ ನೃತ್ಯಸ್ಪರ್ಧೆ, ಪುಟಾಣಿಗಳಿಗಾಗಿ ರಾಜ -ರಾಣಿ ಸ್ಪರ್ಧೆ ಕಾರ್ನಿವಲ್ ನ ಸಂಭ್ರಮಕ್ಕೆ ಕಾರಣವಾಗಿತ್ತು. ಬೆಳಿಗ್ಗೆ ಯಿಂದ ಸಂಜೆಯ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪೋಷಕರು ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು. ಸಂಜೆ 4ಕ್ಕೆ ಸರಿಯಾಗಿ ಕಾರ್ಯಕ್ರಮವು ಸಂಪನ್ನ ಗೊಂಡು, ಸಮಾರಂಭದ ವೇದಿಕೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಐಶ್ವರ್ಯ ಕಾರ್ಯಕ್ರಮವು ನಿರ್ವಹಿಸಿದ್ದು, ಪ್ರಾಂಶುಪಾಲರಾದ ಡಾ. ರೂಪ ಶೆಣೈರವರು ಸ್ವಾಗತಿಸಿದರು. ಅನುರಾಧಾ ಮಯ್ಯ ಪ್ರಾರ್ಥಿಸಿದರು. ಸುಷ್ಮಾ ರವರು ಅತಿಥಿಗಳನ್ನು ಪರಿಚಯಿಸಿದರೆ, ವಿಜಯಲಕ್ಷ್ಮಿ ವಂದಿಸಿದರು.












