ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಅಂಪಾರು: ಕೃಷಿ ಸಂಸ್ಕೃತಿಯ ಸೊಗಡಿನಲ್ಲಿ ಸಂಜಯ ಗಾಂಧಿ ಶಾಲೆಯ ದೀಪಾವಳಿ ಸಂಭ್ರಮ!

0
163

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಅಂಪಾರು: ಹಬ್ಬಗಳ ಆಚರಣೆಯ ಮೂಲಕ ನಮ್ಮ ನೆಲದ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅಂಪಾರಿನ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕೃಷಿ ಪ್ರಧಾನ ಕುಟುಂಬಗಳ ಸಾಂಪ್ರದಾಯಿಕ ಬದುಕನ್ನು ಪ್ರತಿಬಿಂಬಿಸುವಂತೆ ಗದ್ದೆಯಿಂದ ಬೆಳೆ ಮನೆಗೆ ತರುವುದು, ತೆನೆಗಳಿಂದ ಭತ್ತ ಬೇರ್ಪಡಿಸುವುದು, ಭತ್ತ ಸಂಗ್ರಹಿಸುವುದು, ಅಕ್ಕಿ ತಯಾರಿಸುವುದು ಹಾಗೂ ಹೊಸ ಬೆಳೆಯನ್ನು ಭಗವಂತನಿಗೆ ಸಮರ್ಪಿಸುವವರೆಗಿನ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳ ಮುಂದೆ ಜೀವಂತವಾಗಿ ಪ್ರದರ್ಶಿಸಲಾಯಿತು. ಅನ್ನದ ಹಿಂದಿರುವ ರೈತನ ಪರಿಶ್ರಮ ಹಾಗೂ ಪ್ರಕೃತಿ ಮತ್ತು ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸುವ ಪರಂಪರೆಯನ್ನು ಪರಿಚಯಿಸಲಾಯಿತು. ಗೋ ಪೂಜೆ, ತುಳಸಿ ಪೂಜೆ, ಲಕ್ಷ್ಮೀ ಪೂಜೆ ಹಾಗೂ ಆಯುಧ ಪೂಜೆಗಳು ಸಾಂಪ್ರದಾಯಿಕವಾಗಿ ನೆರವೇರಿದವು. ಪೋಷಕರು ಹಾಗೂ ಹಿತೈಷಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಕುಣಿತ ಭಜನೆ ಕಾರ್ಯಕ್ರಮಕ್ಕೆ ಭಕ್ತಿಯ ಮೆರುಗು ನೀಡಿತು. ಕೊನೆಯಲ್ಲಿ ಹೋಳಿಗೆಯ ಸಹಿತ ವಿಶೇಷ ಹಬ್ಬದ ಭೋಜನ ಏರ್ಪಡಿಸಲಾಗಿತ್ತು.
ಟ್ರಸ್ಟ್ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಬಾಳಾಡಿ, ಕಾರ್ಯದರ್ಶಿ ಶ್ರೀ ನವೀನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಹಾಗೂ ಶೈಕ್ಷಣಿಕ ನಿರ್ದೇಶಕ ಶ್ರೀ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, ನಿರ್ದೇಶಕ ಶ್ರೀ ಉಮೇಶ್ ಕೋಟಾರಿ ಹಾಗೂ ಆಡಳಿತಾಧಿಕಾರಿ ಶ್ರೀಮತಿ ಚೈತ್ರಾ ಯಡಿಯಾಳ ಅವರು ಭಾಗವಹಿಸಿ ಪ್ರತಿಯೊಂದು ಆಚರಣೆಯ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಸಹಕಾರ ನೀಡಿದ ಸಕ್ರಿಯ ಪೋಷಕರಾದ ಶ್ರೀ ಕೇಶವ ಕಿಣಿ ಹಾಗೂ ಶ್ರೀ ಆನಂದ ಶೆಟ್ಟಿ ಅವರನ್ನು ಶಾಲೆಯು ಕೃತಜ್ಞತೆಯಿಂದ ಸ್ಮರಿಸಿತು. ಸ್ಥಳೀಯ ಹಿತೈಷಿಗಳಾದ ಶ್ರೀ ಜಗನ್ನಾಥ ಶೆಟ್ಟಿ, ಶ್ರೀ ಚಂದ್ರಶೇಖರ ಶೆಟ್ಟಿ, ಅಂಪಾರು ಪಂಚಾಯತ್ ನಾ ಮಾಜಿ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕಿಣಿ, ಸೇರಿದಂತೆ ಹಲವು ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಮೆಚ್ಚಿಕೊಂಡರು. ಪೋಷಕರ ಸಹಕಾರ ಮತ್ತು ಪ್ರೋತ್ಸಾಹವನ್ನು ಆಡಳಿತ ಮಂಡಳಿ ಅಭಿನಂದಿಸಿತು. ಶಿಕ್ಷಕರು, ಸಿಬ್ಬಂದಿ, ವಾಹನ ಚಾಲಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಹಿಂದಿನ ದಿನ ಆಯೋಜಿಸಿದ್ದ ಲ್ಯಾಂಟರ್ನ್ ತಯಾರಿಕೆ ಹಾಗೂ ಮಣ್ಣಿನ ಹಣತೆ ತಯಾರಿಕೆ ಮತ್ತು ಅಲಂಕಾರ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ನೂರಾರು ಆಕರ್ಷಕ ಕಲಾಕೃತಿಗಳು ಪ್ರದರ್ಶನಗೊಂಡವು. ಮೂಡುಬಾಗೆಯ ನಿವೃತ್ತ ಶಿಕ್ಷಕ ಶ್ರೀ ನರಸಿಂಹ ನಾಯ್ಕ ರು ಹಾಗೂ ಮುಖ್ಯೋಪಾಧ್ಯಾಯ ಶ್ರೀ ಉದಯ ಕುಮಾರ್ ಬಿ. ಅವರು ತೀರ್ಪುಗಾರರಾಗಿ ಆಗಮಿಸಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಶ್ಲಾಘಿಸಿ ಪ್ರೋತ್ಸಾಹಿಸಿದರು.
ಹಬ್ಬವೆಂದರೆ ಕೇವಲ ದೀಪ ಬೆಳಗಿಸುವುದಲ್ಲ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬೆಳಕನ್ನು ಮುಂದಿನ ಪೀಳಿಗೆಯ ಮನದಲ್ಲಿ ಬೆಳಗಿಸುವುದು ಎಂಬ ಸಂದೇಶ ಸಾರಿದ ಈ ವಿನೂತನ ದೀಪಾವಳಿ ಆಚರಣೆಯು ಪೋಷಕರು, ಗ್ರಾಮಸ್ಥರು ಹಾಗೂ ಹಿತೈಷಿಗಳ ಮೆಚ್ಚುಗೆಗೆ ಪಾತ್ರವಾಯಿತು.

Click Here

LEAVE A REPLY

Please enter your comment!
Please enter your name here