ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಿರುವನಂತಪುರಂ ಅಮೃತಸರ್ ಎಕ್ಸ್ಪ್ರೆಸ್ ಮತ್ತು ತಿರುವನಂತಪುರಂ ಯೋಗನಗರ ರಿಷಿಕೇಶ್ ರೈಲುಗಳಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಿ ರೈಲ್ವೆ ಇಲಾಖೆ ಆದೇಶಿಸಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನಿರಂತರ ಹೋರಾಟದ ಫಲವಾಗಿ ಕುಂದಾಪುರ ಭಾಗದ ರೈಲು ಪ್ರಯಾಣಿಕರ ದಶಕದ ಬೇಡಿಕೆಯಾದ ಈ ಎಕ್ಸಪ್ರೆಸ್ ರೈಲುಗಳಿಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ದೊರಕಿದ್ದು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳುವ ಯಾತ್ರಿಗಳಿಗೆ ಮತ್ತು ಮುಂಬೈ, ಹರಿದ್ವಾರ್, ಬದರಿನಾಥ್ ಮೊದಲಾದೆಡೆಗಳಿಗೆ ತೆರಳುವ ಉತ್ತರ ಭಾರತದ ಪ್ರಯಾಣಿಕರಿಗೆ ಈ ನಿಲುಗಡೆ ಅನುಕೂಲವಾಗಲಿದೆ. ಈ ಎರಡು ಎಕ್ಸಪ್ರೆಸ್ ರೈಲುಗಳಿಗೆ ಕುಂದಾಪುರ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಿ ಸಹಕರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕೃತಜ್ಞತೆ ಸಲ್ಲಿಸಿದೆ ಎಂದು ಅಧ್ಯಕ್ಷ ಗಣೇಶ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












