Category: Crime news

  • ನಾವುಂದ :ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ

    ನಾವುಂದ :ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು: ರಸ್ತೆ ಬದಿ ನಿಂತಿದ್ದ ಕಂಟೈನರ್‌ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬೈಂದೂರು ತಾಲೂಕಿನ ನಾವುಂದದ ರಾಷ್ಡ್ರೀಯ ಹೆದ್ದಾರಿಯಲ್ಲಿ ಮಾ. 28ರಂದು ನಡೆದಿದೆ.

    ಅಪಘಾತದಲ್ಲಿ ಬೆಂಗಳೂರು ಮೂಲದ ತಾಯಿ ಮಮತಾ(36) ಹಾಗೂ ಮಗಳು ಧೃತಿಕಾ (14) ಮೃತಪಟ್ಟಿದ್ದಾರೆ. ರಾಘು(40), ಜಾಹ್ನವಿ(12), ಚಾರ್ವಿ(10) ಕಿರಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಪ್ರವಾಸಕ್ಕೆ ಬಂದಿದ್ದ ಈ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳ ಭೇಟಿ ನೀಡಿ ಗೋಕರ್ಣ- ಮುರುಡೇಶ್ವರಕ್ಕೆ ತೆರಳುತ್ತಿತ್ತು. ಈ ವೇಳೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಕಾರು ನಿಂತಿದ್ದ ಕಂಟೈನರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

    ಘಟನಾ ಸ್ಥಳಕ್ಕೆ ಕೂಡಲೇ ಆಗಮಿಸಿದ ಗಂಗೊಳ್ಳಿ ಎಂ ಎಚ್ ಐ ತುರ್ತು ಸ್ಪಂದನ ತಂಡದ ಎರಡು ಅಂಬುಲೆನ್ಸ್ ಗಳಲ್ಲಿ ಗಾಯಾಳುಗಳಾದ ರಾಘು, ಜಾಹ್ನವಿ ಹಾಗೂ ಚಾರ್ವಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೋರ್ವ ಗಾಯಾಳು ಕಿರಣ್ ಗೆ ಮಣಿಪಾಲದ ಆಸ್ಪತ್ರೆಯಲ್ಲಿ ಸಾಗಿಸಲಾಗಿದೆ. ತುರ್ತುಸ್ಪಂದನಾ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಕಾಸ್ ಮೊಗವೀರ ಹಾಗೂ ಪ್ರಶಾಂತ ನಾಯಕವಾಡಿ ಇವರು ಗಾಯಾಳುಗಳನ್ನು ಸಾಗಿಸಲು ಸಹಕರಿಸಿದರು..

  • ಕುಂದಾಪುರ :ಟ್ರಕ್ಕಿಂಗ್ ಗೆ ತೆರಳಿದ ಮಯೂರ ಮೆಡಿಕಲ್ ಮಾಲಕಿ ಶುಭಶ್ರೀ ದುರಂತ ಅಂತ್ಯ!

    ಕುಂದಾಪುರ :ಟ್ರಕ್ಕಿಂಗ್ ಗೆ ತೆರಳಿದ ಮಯೂರ ಮೆಡಿಕಲ್ ಮಾಲಕಿ ಶುಭಶ್ರೀ ದುರಂತ ಅಂತ್ಯ!

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನಗರದ ಮುಖ್ಯ ರಸ್ತೆಯಲ್ಲಿರುವ ಮಯೂರ ಮೆಡಿಕಲ್ಸ್ ನ ಮಾಲಕಿ ಶುಭಶ್ರೀ ಕಾರಂತ್ (53) ದುರಂತ ಅಂತ್ಯ ಕಂಡಿದ್ದಾರೆ.

    8-10 ಸ್ನೇಹಿತರ ತಂಡದೊಂದಿಗೆ ಹೊಸಂಗಡಿಯ ಭಾಗಿಮನೆ ಬಳಿ ಇರುವ ಮೆಟ್ಕಲ್ ಗುಡ್ಡಕ್ಕೆ ಟ್ರಕ್ಕಿಂಗ್ ತೆರಳಿದ ಇವರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆನ್ನಲಾಗಿದೆ. ಮೃತದೇಹವನ್ನು‌ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇವರ ಪುತ್ರ ಅಮೇರಿಕಾದಲ್ಲಿದ್ದು ಇದೀಗ ಮದ್ಯಪ್ರಾಚ್ಯದೇಶಗಳಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಅವನ ಆಗಮನದ ಬಗ್ಗೆ ಖಚಿತ ವಾಗಿಲ್ಲ ಎನ್ನಲಾಗಿದೆ.

    ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

  • ಕೋಟ :ತೂಪನ್ ವಾಹನ ಪಲ್ಟಿ: ಟೈಯರ್ ಸ್ಫೋಟದಿಂದ ಭಾರೀ ಅಪಘಾತ, ಪ್ರಾಣಾಪಾಯದಿಂದ ಪಾರು!

    ಕೋಟ :ತೂಪನ್ ವಾಹನ ಪಲ್ಟಿ: ಟೈಯರ್ ಸ್ಫೋಟದಿಂದ ಭಾರೀ ಅಪಘಾತ, ಪ್ರಾಣಾಪಾಯದಿಂದ ಪಾರು!

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಪ್ರವಾಸಕ್ಕೆ ಹೊರಟಿದ್ದ ಯುವಕರ ತಂಡ ಸಾಗುತ್ತಿದ್ದ ತೂಪನ್ ವಾಹನದ ಟೈಯರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದು ವಾಹನ ಪಲ್ಟಿ ಹೊಡೆದ ಘಟನೆ ಮಂಗಳವಾರ ಸಂಜೆ ಕೋಟ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

    ಬೀದರ್‌ನಿಂದ ಪ್ರವಾಸಕ್ಕೆ ಹೊರಟಿದ್ದ 13 ಮಂದಿ ಯುವಕರ ತಂಡ ದಾವಣಗೆರೆ ಹಾಗೂ ಮುರ್ಡೇಶ್ವರ ಪ್ರವಾಸ ಮುಗಿಸಿ, ಮಂಗಳವಾರ ಮಧ್ಯಾಹ್ನ ಉಡುಪಿ ಶ್ರೀಕೃಷ್ಣ ಮಠದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ಬ್ರಹ್ಮಾವರ ತಾಲೂಕಿನ ಕೋಟ ಬಸ್ ನಿಲ್ದಾಣ ಸಮೀಪ ತೂಪನ್ ವಾಹನದ ಟೈಯರ್ ಏಕಾಏಕಿ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ವಾಹನ ಡಿವೈಡರ್ ಹಾರಿ, ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ಕಾರಿನ ಮೇಲೆಯೇ ಪಲ್ಟಿ ಹೊಡೆದಿದೆ.

    ಅಪಘಾತದಲ್ಲಿ ತೂಪನ್ ವಾಹನ ಹಾಗೂ ಎರಡು ಕಾರುಗಳು ನಜ್ಜುಗುಜ್ಜಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಾಹನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜು ದೇವಾಡಿಗರಿಗೆ ನುಡಿ ನಮನ

    ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜು ದೇವಾಡಿಗರಿಗೆ ನುಡಿ ನಮನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜು ದೇವಾಡಿಗರು, ಓರ್ವ ಸಜ್ಜನ ರಾಜಕಾರಣಿ ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು. ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ, ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾದವರು. ಓರ್ವ ಶಾಸಕನಾಗುವ ಎಲ್ಲಾ ಗುಣಗಳನ್ನು ಹೊಂದಿದವರು. ಅವರ ಅಗಲುವಿಕೆ ಸಮಾಜಕ್ಕೆ ಆದ ನಷ್ಟವೆಂದು , ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಹಿರಿಯ ಕಾಂಗ್ರೆಸ್ಸಿಗ ಕೆದೂರು ಸದಾನಂದ ಶೆಟ್ಟಿ ಹೇಳಿದರು.

    ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜು ದೇವಾಡಿಗ ರವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.

    ನಾಯಕರಾದ ಮೊಳಹಳ್ಳಿ ದಿನೇಶ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುಮನ, ಸಾಮಾಜಿಕ ಕಾರ್ಯಕರ್ತ ಗುಲ್ವಾಡಿ ಪ್ರಭಾಕರ ಶೆಟ್ಟಿ ಶ್ರದ್ಧಾಂಜಲಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಮಹಿಳಾ ಬ್ಲಾಕ್ ಅಧ್ಯಕ್ಷ ದೇವಕಿ ಸಣ್ಣಯ್ಯ , ಅನಗಳ್ಳಿ ಪಂಚಾಯತ್ ಅಧ್ಯಕ್ಷೆ ಸವಿತಾ, ಕೆ ಡಿ ಪಿ ಸದಸ್ಯರಾದ ರಮೇಶ ಶೆಟ್ಟಿ, ಪಂಚಾಯತ್ ಸದಸ್ಯರಾದ ವಿಜಯಾದರ್ ಕೆವಿ , ಗೀತಾ, ಪುರಸಭಾ ಸದಸ್ಯರಾದ ಶ್ರೀಧರ್ ಶೇರೀಗಾರ್, ಪ್ರಭಾವತಿ ಶೆಟ್ಟಿ, ಶಶಿ ರಾಜ್ ಪೂಜಾರಿ, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿಧರ ನಂದಿಬೆಟ್ಟು, ಗ್ಯಾರಂಟಿ ಸಮಿತಿಯ ಸದಸ್ಯರಾದ ಗಣೇಶ್ ವಿ, ಆಶಾ ಕರ್ವಾಲೊ, ಪ್ರಮುಖರಾದ ರೇವತಿ ಶೆಟ್ಟಿ, ರೋಶನ್ ಶೆಟ್ಟಿ, ಸೀಮಾ ಪೂಜಾರಿ, ಅರುಣ್ ಪಟೇಲ್, ಕೇಶವ ಭಟ್, ಸುನಿಲ್ ಪೂಜಾರಿ, ಜೋಸೆಫ್ ರೆಬೆಲ್ಲೊ, ರಿಯಾಜ್ ಕೋಡಿ, ಅಶ್ವತ್ ಕುಮಾರ್,ಕೆ ರಾಧಾ ಶೆಟ್ಟಿಗಾರ್, ವಿವೇಕಾನಂದ, ಜೋಯ್ ರೆಬೆಲ್ಲೊ, ಕಾರ್ತಿಕ್ , ವಿನಯ, ಎಡಾಲ್ಫ್ ಡಿಕೊಸ್ಟಾ , ನಿತಿನ್ ಡಿಸೋಜಾ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

  • ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫಾರ್ಚುನರ್ ಕಾರು ಪಲ್ಟಿ – ಆರು ಮಂದಿಗೆ ಗಂಭೀರ ಗಾಯ

    ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫಾರ್ಚುನರ್ ಕಾರು ಪಲ್ಟಿ – ಆರು ಮಂದಿಗೆ ಗಂಭೀರ ಗಾಯ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಫಾರ್ಚೂನರ್ ಕಾರೊಂದು ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಪಲ್ಟಿ ಹೊಡೆದು ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ–66ರ ಕನ್ನುಕೆರೆ ಬಳಿ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಲಾ ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

    ಒಟ್ಟು 12 ಮಂದಿ ವಿದ್ಯಾರ್ಥಿಗಳು ಜ.31ರಂದು ಎರಡು ಕಾರುಗಳಲ್ಲಿ ದೇಶ ಸುತ್ತುವ ಪ್ರವಾಸಕ್ಕೆ ಹೊರಟಿದ್ದರು. ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

    ಮಧ್ಯಾಹ್ನದ ವೇಳೆ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಪ್ರದೇಶದಲ್ಲಿ ಕಾರು ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಕಾರು ಪಲ್ಟಿ ಹೊಡೆದು ಬಿದ್ದಿದೆ. ಅಪಘಾತದ ವೇಳೆಗೆ ಕಾರಿನಲ್ಲಿ ಚಾಲಕ ಸೇರಿ ಆರು ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.

    ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.

    ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಕುಮಾರ್ ಆರ್. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗುಜ್ಜಾಡಿ :ಗೇರು ಪ್ಲಾಂಟೇಶನ್‍ನಲ್ಲಿ ಆಕಸ್ಮಿಕ ಬೆಂಕಿ

    ಗುಜ್ಜಾಡಿ :ಗೇರು ಪ್ಲಾಂಟೇಶನ್‍ನಲ್ಲಿ ಆಕಸ್ಮಿಕ ಬೆಂಕಿ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ : ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ಗೇರು ಪ್ಲಾಂಟೇಶನ್‍ನಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡದಂತೆ ಸ್ಥಳೀಯರು, ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಗುಜ್ಜಾಡಿ ಗ್ರಾಮದ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯ ಬದಿಯಲ್ಲಿರುವ ಗೇರು ಪ್ಲಾಂಟೇಶನ್‍ನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನೋಡ ನೋಡುತ್ತಿದ್ದಂತೆಯೇ ವ್ಯಾಪಕವಾಗಿ ಹಬ್ಬತೊಡಗಿತು. ಗೇರು ಪ್ಲಾಂಟೇಶನ್‍ನಲ್ಲಿ ಒಣಗಿದ ಗಿಡಗಂಟಿಗಳಿದ್ದು ಇದರಿಂದ ಬೆಂಕಿ ಬೀಸುತ್ತಿರುವ ಗಾಳಿಗೆ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸಿಕೊಳ್ಳುತ್ತಿದೆ. ಸುದ್ಧಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸರು, ಗುಜ್ಜಾಡಿ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು, ಮೆಸ್ಕಾಂ ಸಿಬ್ಬಂದಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕೆಸಿಡಿಸಿ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯ ತನಕ ಬೆಂಕಿ ವ್ಯಾಪಿಸಿಕೊಳ್ಳುತ್ತಿದೆ. ಬೆಳಿಗ್ಗೆಯಿಂದ ಸಂಜೆ ತನಕ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರೂ ಬೆಂಕಿ ಕಾಡ್ಗಿಚ್ಚಿನಂತೆ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಅವಘಡಕ್ಕೆ ಸುಮಾರು 10 ಎಕ್ರೆಗೂ ಮಿಕ್ಕಿ ಗೇರು ಪ್ಲಾಂಟೇಶನ್‍ನಲ್ಲಿರುವ ಗೇರು ಮರಗಳು ಸೇರಿದಂತೆ ನೂರಾರು ಮರಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣವಾಗಿ ಹಾನಿಯಾಗಿದೆ. ಅನೇಕ ಮರಗಳು ಸಂಪೂರ್ಣ ಸುಟ್ಟು ಹೋಗಿದೆ.
    ಬೆಂಕಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪ್ರತಿವರ್ಷ ಇದೇ ರೀತಿಯಾಗಿ ಗೇರು ಪ್ಲಾಂಟೇಶನ್‍ನಲ್ಲಿ ಬೆಂಕಿ ಅವಘಡ ಸಂಭವಿಸುತ್ತಿದ್ದು ಕಾರಣ ಇನ್ನೂ ನಿಗೂಢವಾಗಿದೆ.

  • ಗುಲ್ವಾಡಿ :ಶೆಟ್ರಕಟ್ಟೆ ತಿರುವಿನ ಬಳಿ ಖಾಸಗಿ ಬಸ್ಸಿಗೆ ವೇಗವಾಗಿ ಬಂದ ಬೈಕ್ ಮುಖಾಮುಖಿ ಡಿಕ್ಕಿ -ಬೈಕ್ ಸವಾರ ಸಾವು

    ಗುಲ್ವಾಡಿ :ಶೆಟ್ರಕಟ್ಟೆ ತಿರುವಿನ ಬಳಿ ಖಾಸಗಿ ಬಸ್ಸಿಗೆ ವೇಗವಾಗಿ ಬಂದ ಬೈಕ್ ಮುಖಾಮುಖಿ ಡಿಕ್ಕಿ -ಬೈಕ್ ಸವಾರ ಸಾವು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಟ್ರಕಟ್ಟೆ ತಿರುವಿನ ಬಳಿ ಖಾಸಗಿ ಬಸ್ಸಿಗೆ ವೇಗವಾಗಿ ಬಂದ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

    ಸೌಕೂರು ನಿವಾಸಿ ವಿಜಯ (38ವರ್ಷ) ಮೃತ ದುರ್ದೈವಿ.
    ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದ ವಿಜಯ್ ಬೇರೆ ತಿನಿಸುಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಕುರುಕಲು ತಿಂಡಿಗಳನ್ನು ಅಂಗಡಿಗಳಿಂಗೆ ಕೊಟ್ಟು ಹೇರಿಕುದ್ರುವಿನಿಂದ ಸೌಕೂರಿನಲ್ಲಿರುವ ಮನೆಗೆ ಹೊರಟಿದ್ದರು. ಶೆಟ್ರಕಟ್ಟೆ ತಿರುವಿನಲ್ಲಿ ಓವರ್ ಟೆಕ್ ಮಾಡಿ ಮುನ್ನುಗ್ಗಿದಾಗ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು, ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ವಿಜಯ ಶ್ರಮಜೀವಿಯಾಗಿದ್ದು ಅವಿವಾಹಿತರಾಗಿದ್ದರು.

    ಅಪಘಾತದ ದೃಶ್ಯಗಳು ಬಸ್ಸಿನದಲ್ಲಿದ್ದ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.

  • ಹಂಗಳೂರು :ಟಿಪ್ಪರ್, ಹೊಂಡಾ ಆಕ್ಟಿವ್‌ಗೆ ಡಿಕ್ಕಿ – ಸವಾರ ಸ್ಥಳದಲ್ಲಿ ಸಾವು

    ಹಂಗಳೂರು :ಟಿಪ್ಪರ್, ಹೊಂಡಾ ಆಕ್ಟಿವ್‌ಗೆ ಡಿಕ್ಕಿ – ಸವಾರ ಸ್ಥಳದಲ್ಲಿ ಸಾವು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮರಳು ತುಂಬಿದ ಟಿಪ್ಪರ್ ಲಾರಿ ಹೊಂಡಾ ಅಕ್ಟಿವ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹಂಗಳೂರು ಯೂನಿಟಿ ಹಾಲ್ ಬಳಿ ಸಂಭವಿಸಿದೆ.

    ಕೋಟೇಶ್ವರ ಕಡೆ ತೆರಳುತ್ತಿದ್ದ ಕೃಷ್ಣಮೂರ್ತಿ ಅಡಿಗ ಬೀಜಾಡಿ ಮೃತ ದುರ್ದೈವಿ.

    ಮರಳು ತುಂಬಿದ ಟಿಪ್ಪರ್ ವಾಹನ ಕೂಡಾ ಕೋಟೇಶ್ವರ ಕಡೆ ಹೋಗುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆರ ಬೈಕ್ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

  • ಶೆಟ್ರಕಟ್ಟೆ :ಕೆಎಸ್.ಆರ್.ಟಿಸಿ ಬಸ್ಸಿಗೆ ಟಿಪ್ಪರ್ ಡಿಕ್ಕಿ – ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಗಂಭೀರ ಗಾಯ

    ಶೆಟ್ರಕಟ್ಟೆ :ಕೆಎಸ್.ಆರ್.ಟಿಸಿ ಬಸ್ಸಿಗೆ ಟಿಪ್ಪರ್ ಡಿಕ್ಕಿ – ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಗಂಭೀರ ಗಾಯ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಲ್ಲೂರು ನೇರಳಕಟ್ಟೆ ರಸ್ತೆಯ ಶೆಟ್ರಕಟ್ಟೆಯಲ್ಲಿ ಕೆಎಸ್.ಆರ್.ಟಿಸಿ ಬಸ್ಸಿಗೆ ಮಣ್ಣು ತುಂಬಿದ ಟಿಪ್ಪರ್ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

    ಕುಂದಾಪುರದಿಂದ ಸಿದ್ದಾಪುರಕ್ಕೆ ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸಿಗೆ ಶೆಟ್ರಕಟ್ಟೆ ತಿರುವಿನ ಬಳಿ ಎದುರಿನಿಂದ ಬಂದ ಟಿಪ್ಪರ್ ಬಸ್ಸಿನ ಚಾಲಕನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಶಾಲಾ ಕಾಲೇಜು ಬಿಡುವ ಸಮಯವಾದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದು ಅಪಘಾತದ ರಭಸಕ್ಕೆ ಹಲವಾರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.

    ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಿದರು.

    ಟಿಪ್ಪರ್ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಟ: ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ ಪ್ರಕರಣ: ನಾಲ್ವರ ಅರೆಸ್ಟ್

    ಕೋಟ: ಕ್ಷುಲ್ಲಕ ಕಾರಣಕ್ಕೆ ಯುವಕನ ಹತ್ಯೆ ಪ್ರಕರಣ: ನಾಲ್ವರ ಅರೆಸ್ಟ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕೆರೆ ಪುಂಡಣ್ಣನ ಹೊಟೇಲ್ ಸಮೀಪ ನಡೆದ ಸಂತೋಷ್ ಮೊಗವೀರ(30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪಾರಂಪಳ್ಳಿ ಪಡುಕೆರೆಯ ದರ್ಶನ್(21), ಸಾಸ್ತಾನ ಪಾಂಡೇಶ್ವರದ ನೀರಾಡಿ ಜೆಡ್ಡುವಿನ ಕೌಶಿಕ್(21), ಕೋಟತಟ್ಟುವಿನ ಪಡುಕೆರೆಯ ಅಂಕಿತ್(19) ಮತ್ತು ಸುಜನ್(21) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿದೆ.

    ಡಿ.14ರಂದು ರಾತ್ರಿ ವೇಳೆ ಸಂತೋಷ್ ಮೊಗವೀರ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್‍ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಪುಂಡಣ್ಣನ ಹೊಟೇಲ್ ಸಮೀಪ ಬಂದು ಅಲ್ಲಿ ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್, ಸಂತೋಷ್ ಅವರ ಕುಟುಂಬದ ವಿಚಾರದಲ್ಲಿ ಮತ್ತು ಮದ್ಯಪಾನದ ವಿಚಾರದಲ್ಲಿ ವಾಗ್ವಾದ ಆಗಿ ಅವಾಚ್ಯ ಶಬ್ದಗಳಿಂದ ಬೈದು, ಸಂತೋಷನಿಗೆ ನಾಲ್ಕು ಜನರು ಸೇರಿ ಹಲ್ಲೆ ನಡೆಸಿದರೆನ್ನಲಾಗಿದೆ.
    ಹೊಡೆದಾಟದ ವೇಳೆ ದರ್ಶನ್, ಸಂತೋಪ್ ಕುತ್ತಿಗೆ ಹಿಂಬದಿಗೆ ದರ್ಶನ್ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಕೌಶಿಕ್ ಕೂಡಾ ಕೈಯಿಂದ ಹೊಡೆದ್ದಿದ್ದಾನೆ. ರಜತ್ ಇವರ ಜಗಳವನ್ನು ನಿಲ್ಲಿಸಿದ್ದಾರೆ. ಆದರೆ ಅಷ್ಟರಲ್ಲಿ ಹಲ್ಲೆಗಳೊಗಾದ ಸಂತೋಷ್ ಅಲ್ಲಿಯೇ ಕುಸಿದು ಬಿದ್ದರೆಂದು ತಿಳಿದುಬಂದಿದೆ.
    ಬಳಿಕ ಸಂತೋಷನನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಸಂತೋಷ್ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸ್ಥಳಕ್ಕೆ ಸರ್ಕಲ್, ಎಸ್ ಪಿ ಭೇಟಿ
    ಘಟನೆಗೆ ಸಂಬಂಧಿಸಿದಂತೆ ಕೋಟ ಠಾಣಾಧಿಕಾರಿ ಪ್ರವೀಣ್ ನಾಯಕ್ ರಾತ್ರಿಯೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಘಟನೆಯ ಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದು ಈ ಸಂಬಂಧ ಬೆಳಿಗ್ಗೆ ಬ್ರಹ್ಮಾವರ ಸರ್ಕಲ್ ಗೋಪಿಕೃಷ್ಣ ಭೇಟಿ ಸೋಮವಾರ ನೀಡಿ ಸ್ಥಳ ಪರಿಶೀಲಿಸಿದರು.

    ಅಪರಾಹ್ನ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕೋಟತಟ್ಟು ಪಡುಕರೆಯ ಪುಂಡಣ್ಣನ ಹೋಟೆಲ್ ಹತ್ತಿರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಇನ್ನಷ್ಟು ಸಾಕ್ಷಾಧಾರಗಳನ್ನು ಕಲೆಹಾಕುವ ಸಂಬಂಧ ತಮ್ಮ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ.