Category: ಸುದ್ದಿ

  • ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ವಾರ್ಷಿಕೋತ್ಸವ ಸಂಭ್ರಮ

    ಕುಂದಾಪುರ :ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ ವಾರ್ಷಿಕೋತ್ಸವ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಬದುಕಿನಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ವಿದ್ಯಾರ್ಥಿ ದೆಸೆಯಲ್ಲೇ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕವಾದುದು ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಮ್. ಬಾಲಕೃಷ್ಣ ಶೆಟ್ಟಿಯವರು ಹೇಳಿದರು.

    ಅವರು ಕಾಲೇಜಿನ 2022-23ನೇ ಸಾಲಿನ ವಾರ್ಷಿಕೋತ್ಸವದ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.

    ಮುಖ್ಯ ಅತಿಥಿ ಬೆಂಗಳೂರಿನ ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್‍ನ ಗ್ರೂಪ್ ಡಿಪಾರ್ಟ್‍ಮೆಂಟ್ ಮುಖ್ಯಸ್ಥರಾದ ದೀಪಕ್ ಶೆಟ್ಟಿ ಬಾರ್ಕೂರು ಅತಿಥಿ ನೆಲೆಯಲ್ಲಿ ಮಾತನಾಡಿ, ಯುವ ಸಮುದಾಯ ಸ್ವಾಮಿ ವಿವೇಕಾನಂದರ ತತ್ವ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಆಯ್ಕೆ, ಬದಲಾವಣೆಗೆ ಒಗ್ಗಿಕೊಳ್ಳುವುದು ಹಾಗೂ ನಿರಂತರ ಪರಿಶ್ರಮ ವಹಿಸಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.

    ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ಪ್ರೀತಿ ಹೆಗ್ಡೆ, ವಿದ್ಯಾರ್ಥಿ ಪ್ರತಿನಿಧಿ ವಿಘ್ನೇಶ್ ಶೆಟ್ಟಿ ಉಪಸ್ಥಿತರಿದ್ದರು.

    ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ನಿರ್ಮಲ ಬಿಲ್ಲವ ಅತಿಥಿಗಳನ್ನು ಪರಿಚಯಿಸಿದರು.

    ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ರ್ಯಾಂಕ್ ವಿಜೇತರನ್ನು ಪರಿಚಯಿಸಿದರು. ವಾಣಿಜ್ಯ ಉಪನ್ಯಾಸಕ ಸುಧೀರ್ ಕುಮಾರ್ ವಿಶೇಷ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ವಂದಿಸಿದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಮೋನಿಕಾ ಡಿಸೋಜಾ ನಿರೂಪಿಸಿದರು.

     

  • ಕೋಡಿ ಕನ್ಯಾಣ – ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಆರ್ಥಿಕ ಸಹಾಯ

    ಕೋಡಿ ಕನ್ಯಾಣ – ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಆರ್ಥಿಕ ಸಹಾಯ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೋಡಿ ಕನ್ಯಾಣ ಇವರ ವತಿಯಿಂದ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಸಹನಾ ಪೂಜಾರಿ ಇವರಿಗೆ ಮುಂದಿನ ಶೈಕ್ಷಣಿಕ ಕಾರ್ಯಕ್ಕೆ ಆರ್ಥಿಕ ಸಹಾಯ ನೀಡಲಾಯಿತು.

    ಇದೇ ವೇಳೆ ಕೋಡಿ ಬೇಂಗ್ರೆ ನಿವಾಸಿ ಕಾವೇರಿ ಪುತ್ರಿಯ ವಿವಾಹಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

    ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಕೃಷ್ಣಪೂಜಾರಿ.ಪಿ, ವಿಶ್ವನಾಥ ಪೂಜಾರಿ,ತಿಮ್ಮ ಪೂಜಾರಿ,ಪ್ರಶಾಂತ್ ಪೂಜಾರಿ, ಸುದಿನಾ, ವಾಸು, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.

  • ಚಿತ್ರಪಾಡಿ- ಪ್ರಮದಿತವ್ಯಮ್’ ಕಥಾ ಸಂಕಲನ ಬಿಡುಗಡೆ

    ಚಿತ್ರಪಾಡಿ- ಪ್ರಮದಿತವ್ಯಮ್’ ಕಥಾ ಸಂಕಲನ ಬಿಡುಗಡೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಬಾಲ್ಯದಲ್ಲಿ ಪರಿಸರದಿಂದ ಗಾಢವಾದ ಅನುಭವಗಳಿಗೆ ಸಮಕಾಲೀನ ಸಂದರ್ಭಗಳು ಅನುಕೂಲಕರವಾಗಿ ಮೇಳೈಸಿದಾಗ ಪರಿಣಾಮಕಾರಿಯಾದ ಕತೆಗಳು ಹುಟ್ಟುತ್ತವೆ ಎಂಬುದಕ್ಕೆ ಈ ಕೃತಿಗಳೆ ಸಾಕ್ಷಿ ಎಂದು ಬೆಂಗಳೂರಿನ ಶ್ರೀಲೋಲ ಸೋಮಯಾಜಿ ವಿರಚಿತ ಪ್ರಮದಿತವ್ಯಮ್’ ಕಥಾ ಸಂಕಲನವನ್ನು ಪರಿಚಯಿಸಿ ಡಾ. ಅನಿಲ ಕುಮಾರ ಶೆಟ್ಟಿ ಹೇಳಿದರು.

    ಕೃತಿಯನ್ನು ನಾಡೋಜ ಕೆ.ಪಿ.ರಾಯರು ಬಿಡುಗಡೆಗೊಳಿಸಿ ವಿವರಿಸಿದರು. ಈ ಸಂದರ್ಭದಲ್ಲಿ ಪುಸ್ತಕ ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯರನ್ನು ಗೌರವಿಸಲಾಯಿತು. ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗೋಡು ರಮೇಶ ಭಟ್ಟರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

    ಶಿಕ್ಷಕಿ ಮಹಾಲಕ್ಷ್ಮಿ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು, ಅಮೋಘ ಸೋಮಯಾಜಿ ಪ್ರಾರ್ಥನೆಗೈದರು, ಶ್ರೀಲೋಲ ಸೋಮಯಾಜಿ ವಂದನಾರ್ಪಣೆಗೈದರು.

  • ಕುಂದಾಪುರ :ಬ್ಯಾರೀಸ್ ನಲ್ಲಿ ಸ್ವಚ್ಛ ಕಡಲತೀರ – ಹಸಿರು ಕೋಡಿ ಅಭಿಯಾನ – 21

    ಕುಂದಾಪುರ :ಬ್ಯಾರೀಸ್ ನಲ್ಲಿ ಸ್ವಚ್ಛ ಕಡಲತೀರ – ಹಸಿರು ಕೋಡಿ ಅಭಿಯಾನ – 21

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಕುಂದಾಪುರ ಇದರ ಆಶ್ರಯದಲ್ಲಿ ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ “ಸ್ವಚ್ಛ ಕಡಲತೀರ – ಹಸಿರು ಕೋಡಿ ಅಭಿಯಾನ-21” ಮೇ 28 ರಂದು ಯಶಸ್ವಿಯಾಗಿ ಜರುಗಿತು.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪರಿಸರ ಪ್ರೇಮಿ ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಇವರು ಈ ಅರ್ಥಪೂರ್ಣ ಅಭಿಯಾನವನ್ನುದ್ದೇಶಿಸಿ “ಮಾನವ ಜನ್ಮ ದೊಡ್ಡದು, ಮೋಕ್ಷವೆಂಬುದು ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ದೊರಕಲಾಗದು , ನಾವು ಮಾಡುವ ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ನಿಜವಾದ ನೆಮ್ಮದಿ ಮೋಕ್ಷ ಪ್ರಾಪ್ತವಾಗುವುದು” ಎಂದು ನುಡಿಯುವುದರೊಂದಿಗೆ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸಮಾಜಮುಖಿ ಕಾರ್ಯದಲ್ಲಿ ನಿರಂತರ ಪಾಲ್ಗೊಳ್ಳುವುದನ್ನು ನೋಡಿ ಹರ್ಷ ವ್ಯಕ್ತಪಡಿಸಿದರು.

    ಅಭಿಯಾನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ರೆಹಮಾನ್, ಸಂಯೋಜಕರಾದ ಪ್ರೊ. ಆಕಾಶ್, ಸಲಹೆಗಾರರಾದ ಅಬುಶೇಕ್ ಸಾಹೇಬ್, ಕೋಡಿ ಚಕ್ರೇಶ್ವರಿ ದೇವಸ್ಥಾನ ಧರ್ಮದರ್ಶಿ ಗೋಪಾಲ ಪೂಜಾರಿ, ಡಾ. ಆಸೀಫ್ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಸಹಕಾರಿ ಹಾಗೂ ಕೃಷಿ ಕ್ಷೇತ್ರ, ಮೂರ್ತೇದಾರಿಕೆ ಹೋರಾಟಗಾರ ಕೋಡಿ ಕೊರಗ ಪೂಜಾರಿಯವರಿಗೆ ಪಂಚವರ್ಣ ರಜತ ಗೌರವಕ್ಕೆ ಆಯ್ಕೆ

    ಸಹಕಾರಿ ಹಾಗೂ ಕೃಷಿ ಕ್ಷೇತ್ರ, ಮೂರ್ತೇದಾರಿಕೆ ಹೋರಾಟಗಾರ ಕೋಡಿ ಕೊರಗ ಪೂಜಾರಿಯವರಿಗೆ ಪಂಚವರ್ಣ ರಜತ ಗೌರವಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಸಹಕಾರ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರ,ಮೂರ್ತೇದಾರಿಕೆ ಹೋರಾಟಗಾರ ಕೋಡಿ ಕೊರಗ ಪೂಜಾರಿ ಇವರನ್ನು ಆಯ್ಕೆಗೊಳಿಸಲಾಗಿದೆ.

    ಪಂಚವರ್ಣ ಸಂಸ್ಥೆ ನೀಡುತ್ತಿರುವ ಐದನೇ ಸಾಧಕ ಶಕ್ತಿಯಾಗಿದ್ದು ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ.ತಿಮ್ಮ ಪೂಜಾರಿ,ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ,ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ.ವಿಶ್ವೇಶ್ವರ ತುಂಗ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ. ಇದೇ ಮೇ.29ರಂದು ಕೋಡಿ ಅವರ ಸ್ವಗೃಹದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.

  • ಕುಂದಾಪುರ :ಬ್ಯಾರೀಸ್ ನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ

    ಕುಂದಾಪುರ :ಬ್ಯಾರೀಸ್ ನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ :ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಕೋಡಿ – ಕುಂದಾಪುರ ಇದರ ರಾಷ್ಟೀಯ ಸೇವಾ ಯೋಜನಾ ಘಟಕ, ಹಸ್ತ ಚಿತ್ತ ಫೌಂಡೇಶನ್ ಮತ್ತು ಜೆ.ಸಿ.ಐ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತರಬೇತುದಾರ ಜೆ.ಎಂ.ಎಫ್ ಪಾಂಡುರಂಗ ಆಳ್ವಿಗದ್ದೆ ಇವರು ಮಾತನಾಡಿ ” ಪ್ರತಿಯೊಬ್ಬ ವ್ಯಕ್ತಿಯಲ್ಲೂ ವ್ಯಕ್ತವಾಗದೆ ಧೀಶಕ್ತಿ ಅಡಕವಾಗಿರುತ್ತದೆ ಅದು ಹೊರಬರುವ ಸಂದರ್ಭಗಳಿಗೆ ದಾರಿಮಾಡಿಕೊಡಬೇಕು ” ಎಂದು ಕೆಲವೊಂದು ಚಟುವಟಿಕೆಗಳೊಂದಿಗೆ ಅರ್ಥಪೂರ್ಣ ತರಬೇತು ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ವಹಿಸಿಕೊಂಡಿದ್ದು, ವೇದಿಕೆಯಲ್ಲಿ ಹಸ್ತ ಚಿತ್ತ ಫೌಂಡೇಶನ್ ಅಧ್ಯಕ್ಷರಾದ ಶರ್ಮಿಳ ಎಸ್ ಕಾರಂತ್, ಜೆ.ಸಿ.ಐ ಕುಂದಾಪುರದ ಅಧ್ಯಕ್ಷರಾದ ಸುಧಾಕರ ಕಾಂಚನ್, ಸನ್ಮಾನಿತ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಮುಸ್ತಾಫ್, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.

    ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜಕರಾದ ಪ್ರೋ. ಆಕಾಶ್ ಪ್ರಾಸ್ತಾವಿಕವಾಗಿ ನುಡಿದರು. ರಾಷ್ಟೀಯ ಸೇವಾ ಯೋಜನಾಧಿಕಾರಿ ಸಂದೀಪ ಕುಮಾರ ಶೆಟ್ಟಿ ಸ್ವಾಗತಿಸಿ, ತೃತೀಯ ಬಿ.ಸಿ.ಎ ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿದರು.

  • ಸಾಹಿತ್ಯ ಹಾಗೂ ಭಾಷಾ ಚಟುವಟಿಗೆಗಳು ಹಳ್ಳಿ ಜನರಿಗೆ ತಲುಪುವಂತಾಗಲಿ- ಪ್ರೋ.ಉಪೇಂದ್ರ ಸೋಮಯಾಜಿ

    ಸಾಹಿತ್ಯ ಹಾಗೂ ಭಾಷಾ ಚಟುವಟಿಗೆಗಳು ಹಳ್ಳಿ ಜನರಿಗೆ ತಲುಪುವಂತಾಗಲಿ- ಪ್ರೋ.ಉಪೇಂದ್ರ ಸೋಮಯಾಜಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕದ ಆಶ್ರಯಲ್ಲಿ `ದತ್ತಿ ಉಪನ್ಯಾಸ’ ಕಾರ್ಯಕ್ರಮವು ಗುಂಡ್ಮಿ ಹಂಗಾರಕಟ್ಟೆ ಸದಾನಂದ ರಂಗ ಮಂಟಪದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಪ್ರೋ. ಉಪೇಂದ್ರ ಸೋಮಯಾಜಿ ಓದುಗರೆಲ್ಲ ವೀಕ್ಷಕರಾಗಿ ಬದಲಾದ ಈ ಕಾಲಘಟ್ಟದಲ್ಲಿ ದತ್ತಿ ಉಪನ್ಯಾಸಗಳು ಮಹತ್ವವನ್ನು ಪಡೆಯುತ್ತಿದೆ. ಕಾದಂಬರಿಗಳ ಮರು ಓದು ಮತ್ತು ವಿಮರ್ಶೆ ಮಹತ್ವವನ್ನು ಪಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗಳಲ್ಲಿ ನಡೆದರೆ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಜನರು ಇನ್ನಷ್ಟು ಸ್ಪಂದಿಸುತ್ತಾರೆ ಎಂದು ಹೇಳಿದರು.

    ಕ.ಸಾ.ಪ. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ಜಿಲ್ಲಾಧ್ಯಕ್ಷ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.

    ಮುಖ್ಯ ಅತಿಥಿಯಾಗಿ ದತ್ತಿ ದಾನಿಗಳಾದ ಸೂರಾಲು ನಾರಾಯಣ ಮಡಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆಯ ಕಾರ್ಯದರ್ಶಿಗಳಾದ ರಾಜಶೇಖರ ಹೆಬ್ಬಾರ್,ಸಾಹಿತಿ ನರೇಂದ್ರ ಕುಮಾರ್ ಕೋಟ ಭಾಗವಹಿಸಿದರು.

    ಸಭಾ ಕಾರ್ಯಕ್ರಮದ ಬಳಿಕ ನಿವೃತ್ತ ಮುಖ್ಯ ಶಿಕ್ಷಕರಾದ ಜಿ. ಗಣೇಶ್ ಮೂರ್ತಿ ಹೆಬ್ಬಾರ್ ಇವರು ಕಾರಂತ ಕಾದಂಬರಿ ವಿಮರ್ಶೆ, ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ. ಸಂಜೀವ ಇವರು `ಕುಂದಾಪ್ರ ಕನ್ನಡ ಅಂದು – ಇಂದು’ ಹಾಗೂ ಸಾಂಸ್ಕೃತಿಕ ಚಿಂತಕರಾದ ಡಾ. ಜಿ. ವೈಕುಂಠ ಹೇರ್ಳೆ ಇವರು ಯಕ್ಷಗಾನದಲ್ಲಿ ಕನ್ನಡ ಅಂದು – ಇಂದು ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕಸಾಪ ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ಜ್ಯೋತಿ ಕೃಷ್ಣ ಪೂಜಾರಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ವಂದಿಸಿದರು.

  • ಕಾರಂತ ಥೀಮ್ ಪಾರ್ಕ್ : ನಿರಂತರ 25 ಗಂಟೆ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್

    ಕಾರಂತ ಥೀಮ್ ಪಾರ್ಕ್ : ನಿರಂತರ 25 ಗಂಟೆ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ : ಜೆ.ಸಿ.ಐ ಕಲ್ಯಾಣಪುರ, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರ ಆಶ್ರಯದಲ್ಲಿ ಶಿಕ್ಷಕ -ಬರಹಗಾರ ಜೆ.ಸಿ ನರೇಂದ್ರಕುಮಾರ್ ಕೋಟ ಸಾರಥ್ಯದಲ್ಲಿ 25 ಗಂಟೆಗಳ ನಿರಂತರ ಆನ್ಲೈನ್ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ಇಂಡಿಯ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ರಾಷ್ಟ್ರೀಯ ತರಬೇತಿ ಗುಣಗಾನದೊಂದಿಗೆ ಮನ್ವಂತರ-2023(ಸಾಧನೆಯ ಮೈಲಿಗಲ್ಲು) ಕಾರ್ಯಕ್ರಮ ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಮೇ 27ರ ಸಂಜೆ 4 ಗಂಟೆಯಿಂದ ಮೇ 28 ಸಂಜೆ 5ರ ತನಕ ನಡೆಯಲಿದೆ, ಕಾರಂತ ಥೀಮ್ ಪಾರ್ಕ್‍ನ ಪೇಸ್ ಬುಕ್ ಹಾಗೂ ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕೋಡಿ ಕನ್ಯಾಣ – ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವಿಕೆ

    ಕೋಡಿ ಕನ್ಯಾಣ – ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವಿಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಡಿ ಗ್ರಾಮ ಪಂಚಾಯತ್ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೋಡಿ ಕನ್ಯಾನದ ನಾರಾಯಣ ನಾವಡರ ಮನೆ ಬಳಿಯಿರುವ ಸರಕಾರಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ನಡೆಯುತ್ತಿದ್ದು ಕಾಮಗಾರಿ ನಡೆಯುವ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್ ಭೇಟಿ ನೀಡಿ ಪರಿಶೀಲಿಸಿದರು.

    ಈಗಾಗಲೇ ಕೋಡಿ ಗ್ರಾಮ ಪಂಚಾಯತ್‍ನಿಂದ ಮಹಾತ್ಮ ಗಾಂಧೀ ಉದ್ಯೋಗ ಖಾತ್ರಿ ಯೋಜನೆಯಡಿ 2 ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ನಡೆಯುತ್ತಿದೆ. ಕಾಮಗಾರಿಯಲ್ಲಿ ಸುಮಾರು 32 ಫಲಾನುಭವಿಗಳು ಹೂಳೆತ್ತುವ ಕಾಮಗಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

  • ಸಾಲಿಗ್ರಾಮ : ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನ – ಜಿಲ್ಲಾಧಿಕಾರಿ ಭೇಟಿ

    ಸಾಲಿಗ್ರಾಮ : ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನ – ಜಿಲ್ಲಾಧಿಕಾರಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ, ಮೇ20 ರಿಂದ ಜೂ.5 ರ ವರೆಗೆ ನಡೆಯುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಎದುರು ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನದ ಆರ್. ಆರ್. ಆರ್ ಕೇಂದ್ರಕ್ಕೆ ಮೇ.24 ರಂದು ಉಡುಪಿಯ ಜಿಲ್ಲಾಧಿಕಾರಿ ಕೂರ್ಮ ರಾವ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂಧರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಇಂದುಶ್ರೀ, ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ, ಪಟ್ಟಣ ಪಂಚಾಯತ್‍ನ ಸದಸ್ಯರು, ಪಟ್ಟಣ ಪಂಚಾಯತ್‍ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.