ಕುಂದಾಪುರ :ಉಳ್ಳೂರಿನ 14 ಕೊರಗ ಕುಟುಂಬಕ್ಕೆ ಹೊಸ ಬದುಕು ಕಟ್ಟಿಕೊಟ್ಟ ಉದ್ಯಮಿ, ದಾನಿ ಡಾ. ಹೆಚ್. ಎಸ್. ಶೆಟ್ಟಿ

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ :ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ಇನ್ನೂ ರಾಮ ರಾಜ್ಯ ಕಲ್ಪನೆ ಸಹಕಾರಗೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ಪ್ರಜೆಗಳು ಎಂದು ಕರೆಸಿಕೊಳ್ಳುವ, ತೀರ ಹಿಂದುಳಿದ ಕೊರಗ ಜನಾಂಗಕ್ಕೆ ಮನೆ ನಿರ್ಮಸಿ ಕೊಡುವ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಕೊರಗರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಸೇವೆಯನ್ನು ಅಯೋಧ್ಯ ರಾಮನ ಪದತಲಕ್ಕೆ ಅರ್ಪಿಸುತ್ತೇನೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಆಶೀರ್ವದಿಸಿದರು.

ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರವತಿಯಿಂದ 2.5 ಕೋಟಿ ರೂ.ವೆಚ್ಚದಲ್ಲಿ ಉಳ್ಳೂರು-74 ಗ್ರಾಮದ 14 ಕೊರಗರ ಮನೆಗಳನ್ನು ಡಿ.25ರಂದು ಗೃಹ ಪೂಜೆ ಮತ್ತು ಲೋಕಾರ್ಪಣೆ ಮಾಡಿ, ಆಶೀರ್ವದಿಸಿದರು.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಪ್ ಜಿ ಅವರು ಸಮಾರಂಭಗೊಂಡನೆ ಮತ್ತು ಗೃಹ ಹಸ್ತಾಂತರ ಮಾಡಿ ಮಾತನಾಡಿ, ಸರಕಾರ ಮತ್ತು ಸಂಘಟನೆ ಮಾಡಬೇಕಾದ ಕೆಲಸವನ್ನು ಎಚ್.ಎಸ್ ಶೆಟ್ಟಿ ಮಾಡಿದ್ದಾರೆ. ಸಮಾಜದ ಸೇವಾ ಕಾರ್ಯಕ್ಕೆ ಧನ್ಯವಾದ ಸಮರ್ಪಣೆ ಇಲ್ಲ. ಸಮಾಜ ಸೇವಾ ಕಾರ್ಯ ಮಾಡುತ್ತಾ ಇರುತ್ತಾರೆ. ಎಚ್.ಎಸ್ ಶೆಟ್ಟಿ ಅವರದ್ದು ಹೆಂಗರಳು. ಅದರಿಂದಾಗಿಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಮನೆ ನಿರ್ಮಿಸಿಕೊಡುತ್ತಿದ್ದಾರೆ. ಮನೆ ನಿರ್ಮಾಣದಲ್ಲಿ ಕಂಜೂಸ್ ಮಾಡದೇ ಒಳ್ಳೆಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೊರಗರಿಗಾಗಿ ನೇರ ನೇಮಕಾತಿಯ ಮತ್ತು ಆರೋಗ್ಯ ಸಂಶೋಧನೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರುತ್ತೇನೆ ಎಂದರು.

ಚಿತ್ರದುರ್ಗಾ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಡಾ| ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಲೋಕಾರ್ಪಣೆ ಮತ್ತು ಆಶಯ ಭಾಷಣ ಮಾಡಿ, ಬಸವಣ್ಣನವರ ಪರಿಕಲ್ಪನೆಯಂತೆ ಎಚ್.ಎಸ್ ಶೆಟ್ಟಿ ಅವರು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಕೊರಗರು ಸ್ವಾಭಿಮಾನದಿಂದ ಬದುಕಬೇಕು ಎನ್ನುವ ನೆಲೆಯಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸಮಾನತೆ ಸಾರಿದ್ದಾರೆ ಎಂದು ಆಶೀರ್ವದಿಸಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಎಚ್.ಎಸ್ ಶೆಟ್ಟಿ ಅವರು ಮಾತನಾಡಿ, ಸಮಾಜದಲ್ಲಿ ನೊಂದ ಹಾಗೂ ಆತ್ಯಂತ ಹಿಂದುಳಿದವರು ಕೊರಗರು. ಕೊರಗ ಜನಾಂಗ ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಠಿಯಲ್ಲಿ 100 ಮನೆ ನಿರ್ಮಾಣ ಮಾಡಿ ಕೊಡುತ್ತಿದ್ದೇವೆ. ಕೊರಗರ ಮನೆ ನಿರ್ಮಾಣ ಕಾರ್ಯಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಪ್ರೇರಣೆ ಎಂದು ಹೇಳಿದರು.

ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಆತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್‍ಕುಮಾರ ಕೊಡ್ಗಿ, ಯಶಪಾಲ್ ಸವರ್ಣ, ಗುರ್ಮೆ ಸುರೇಶ ಶೆಟ್ಟಿ, ಭರತ್ ಶೆಟ್ಟಿ ಮಂಗಳೂರು, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲ ನಾಡ, ಉಳ್ಳೂರು-74 ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಶೆಟ್ಟಿ, ಉಳ್ಳೂರು-74 ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಹಾಲಾಡಿ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರವಾರ ಪಹರೆ ವೇದಿಕೆ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು.

Comments

Leave a Reply

Your email address will not be published. Required fields are marked *

More posts