ಕೋಟತಟ್ಟು ಪಂಚಾಯತ್ ನೇತೃತ್ವದಲ್ಲಿ ಚಿಟ್ಟಿಬೆಟ್ಟು ಕೊರಗ ಸಮುದಾಯಕ್ಕೆ ಎಂಟು‌ಮನೆ ಹಸ್ತಾಂತರ

ದುರ್ಬಲರಿಗೆ ಶ್ರೀರಕ್ಷೆ ಭಗವಂತನಿಗೆ ಸಲ್ಲಿಸುವಷ್ಟೇ ಶ್ರೇಷ್ಠ ಕಾಯಕ – ಉಡುಪಿ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದಂಗಳ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ದುರ್ಬಲರ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು ಎಂದು ಉಡುಪಿ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ಶ್ರೀಪಾದಂಗಳ ನುಡಿದರು.

ಅವರು ಶನಿವಾರ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ದಾನಿಗಳಿಂದ ನಿರ್ಮಾಣಗೊಂಡ ಕೋಟತಟ್ಟು ಚಿಟ್ಟಿಬೆಟ್ಟಿನ ಎಂಟು ಗೃಹಗಳ ಲೋಕಾರ್ಪಣಾ ಸಮಾರಂಭ ಆಸರೆ -2026 ಕಾರ್ಯಕ್ರಮದಲ್ಲಿ ಆಶ್ರೀವಚನ ನೀಡಿ ಮಾತನಾಡಿ ಕೊರಗ ಸಮುದಾಯ ಎಂಬ ಕುಲ ಕಸುಬು‌ ಮಾಡಿ ಜೀವನ ಸಾಗಿಸುವ ಪರಂಪರೆಯ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯತ್ ಅತೀ ಶ್ರೇಷ್ಠವಾದ ಕಾಯಕ ಮಾಡಿದೆ, ಅಲ್ಲದೆ ಈ ಕಾರ್ಯದಲ್ಲಿ ಕೈಜೋಡಿಸಿಕೊಂಡ ದಾನಿಗಳ ಸಹಕಾರಕ್ಕೆ ಗೌರವ ಸಲ್ಲಿಸಿದ ಸ್ವಾಮೀಜಿ ನಮ್ಮ ಮಠದ ವತಿಯಿಂದ ಐದು ಲಕ್ಷ ರೂಗಳ ದೇಣಿಗೆಯನ್ನು ಘೋಷಿಸಿ ಭಾರತ ವಿಶ್ವಗುರುವಾಗಿ ವಿಶ್ವಮಟ್ಟದಲ್ಲಿ ಆದರ್ಶ ನೀಡುವ ದೇಶವಾಗಲಿ ಎಂದರು.

ಸಮಾಜಸೇವಕ ಎಚ್ ಎಸ್ ಶೆಟ್ಟಿ ಮಾತನಾಡಿ ಬದುಕಿನಲ್ಲಿ‌ ಮಾನವೀಯ ಕಾರ್ಯ ಎಂದರೆ ಅದು ಈ ಸಮಾಜಕ್ಕೆ ನೀಡುವ ಕೊಡುಗೆಗಳು ಅದರಲ್ಲಿ ಕೊರಗ ಸಮುದಾಯಕ್ಕೆ ನೀಡಿದ ಕೊಡುಗೆ ಅತ್ಯಂತ ಶ್ರೇಷ್ಠವಾದ ಕಾಯಕವಾಗಿದೆ ಎಂದರು.

ಕೊರಗ ಸಮುದಾಯದ ಮನೆ ನಿರ್ಮಾಣ ಕಾರ್ಯದ ಮಾರ್ಗದರ್ಶಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿ ಚಿಟ್ಟಿಬೆಟ್ಟು ನನ್ನ ಸ್ವ ಗ್ರಾಮದಲ್ಲಿದೆ ಈ ಹಿಂದೆ ಇದ್ದ ಸ್ಥಿತಿಗೂ ಪ್ರಸ್ತುತ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಈ ಪರಿಸರ ಸ್ವರ್ಗದಂತೆ ಕಂಗೊಳಿಸುತ್ತಿದೆ ಎಂದು ತಮ್ಮ ಪಂಚಾಯತ್ ಸಾರ್ಥಕ್ಯ ಕಂಡ ಹೋರಾಟಗಳನ್ನು ಸಭೆಯಲ್ಲಿ ಗುಣಗಾನಗೈದರು.

ಈ ಮೊದಲು ಪುತ್ತಿಗೆ ಶ್ರೀಗಳು ಕೊರಗ ಕಾಲೋನಿಯ ಎಂಟು ಮನೆಗಳಿಗೆ ತೆರಳಿ ದೀಪ ಬೆಳಗಿಸಿ ಶುಭಹಾರೈಸಿದರು.

ಗಮನ ಸೆಳೆದ ಕಾಂತಾರ ರಿಷಭ್ ಶೆಟ್ಟಿ
ಕೊರಗ ಕಾಲೋನಿಗೆ ವಿಶೇಷವಾಗಿ ಖ್ಯಾತ ಚಿತ್ರನಟ ಕಾಂತಾರ ನಾಯಕನಟ ರಿಷಬ್ ಶೆಟ್ಟಿ ಆಗಮಿಸಿ ಮನೆಯನ್ನುವಿಕ್ಷೀಸಿ ಕೋಟತಟ್ಟು ಗ್ರಾಮಪಂಚಾಯತ್ ಈ ಮಹತ್ಕಾರ್ಯವನ್ನು ಶ್ಲಾಘಿಸಿದರು. ಕೊರಗ ಸಮುದಾಯವರೊಂದಿಗಿನ ನನ್ನ ಬಾಂಧವ್ಯವನ್ನು ಸ್ಮರಿಸಿ ಕಾಂತಾರ ಚಿತ್ರಕ್ಕೆ ಕೊರಗರ ಡೋಲಿನ ನಾದ ಹಾಗೂ ಆ ಸಮುದಾಯದಪಾತ್ರ ಕೊಡುಗೆಯನ್ನು ಸ್ಮರಿಸಿದ ಅವರು ಕಾಂತಾರದಲ್ಲಿ ನಮ್ಮ ನೆಲ ಜನ ಸಂಸ್ಕ್ರತಿಯ ಮೂಲ ನಿವಾಸಿಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಿದೆವು. ಕೊರಗ ಸಮುದಾಯದ ಬಗೆಗಿನ ಉಡುಪಿ ಪೇಜಾವರ ಶ್ರೀಗಳ ಪಾತ್ರವನ್ನು ಸಭೆಯಲ್ಲಿ ನೆನಪಿಸಿದ ರಿಷಭ್ ಸುಗುಣೇಂದ್ರ ಶ್ರೀಗಳು ಅದೇ ರೀತಿಯ ಕಾರ್ಯನಿರ್ವಹಣೆಯನ್ನು ಕೊಂಡಾಡಿದರು.

ವೈಭವದ ಮೆರವಣಿ
ಸಭೆಗೂ ಮೊದಲು ರಾಷ್ಟ್ರೀಯ ಹೆದ್ದಾರಿ ಚಿಟ್ಟಿಬೆಟ್ಟು ಸಂಪರ್ಕಿಸುವ ರಸ್ತೆಯಿಂದ ಡೋಲು ವಾದನದ ಮೂಲಕ ಸ್ವಾಮೀಜಿಯವರನ್ನು ಕರೆತರಲಾಯಿತು.
ಕೊರಗ ಸಮುದಾಯದ ಮಹಿಳೆಯರು ಬಣ್ಣ ಬಣ್ಣದ ಸೀರೆಯನ್ನುಟ್ಟು ಪುರುಷರು ಪಂಚೆಯಲ್ಲಿ ಭಾಗವಹಿಸಿ ಸಂಭ್ರಮದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ದಾನಿಗಳಿಗೆ ಕೃತಜ್ಞತೆ
ಕೋಟತಟ್ಟು ಪಂಚಾಯತ್ ಹಮ್ಮಿಕೊಂಡ ಕೊರಗ ಸಮಯದಾಯದ ಮನೆ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿದ ಹಲವಾರು ದಾನಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಅಲ್ಲದೆ ಸಭೆಯಲ್ಲಿ ನಾಡೋಜ ಡಾ.ಜಿ ಶಂಕರ್, ಶಾಸಕ ಕಿರಣ್ ಕೊಡ್ಗಿ ಸಹಿತ ಹಲವರು ತಮ್ಮ ಹೆಚ್ಚಿನ ದೇಣಿಗೆಯನ್ನು ಘೋಷಿಸಿದರು.

ಗೀತಾನಂದ ಫೌಂಡೇಶನ್ ಊಟೋಪಚಾರದ ವ್ಯವಸ್ಥೆಯನ್ನು ನೀಡಿತು.

ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ನಾಡೋಜ ಡಾ.ಜಿ ಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸಂಪತ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ‌ ಆನಂದ್ ಸಿ ಕುಂದರ್, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಐಟಿಡಿಪಿ ಇಲಾಖೆಯ ವಿಶ್ವನಾಥ್, ಕೋಟತಟ್ಟು ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ, ಕೋಟತಟ್ಟು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸ್ವಾಗತಿಸಿದರು. ವಿಜಯ ಭಟ್ ಕಡೆಕಾರ್ ವಂದೇ ಮಾತರಂ ಗೀತೆ ಹಾಡಿದರು. ಕಾರ್ಯಕ್ರಮವನ್ನು ಪಂಚಾಯತ್ ಪಿಡಿಒ ರವೀಂದ್ರ ರಾವ್ ನಿರೂಪಿಸಿದರು.

Comments

Leave a Reply

Your email address will not be published. Required fields are marked *

More posts