ರಾಜ್ಯ ಮಟ್ಟದ ಸಾಧಕಿ ಸ್ಪಂದನಾ ಆರ್ ಶೆಟ್ಟಿಗೆ ರೂ.50,000 ಬಹುಮಾನ ವಿತರಣೆ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜು ಆರಂಭಗೊಂಡು ಒಂದು ವರ್ಷದಲ್ಲೇ ಪ್ರಥಮ ಬ್ಯಾಚ್‍ನ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದ ರ್ಯಾಂಕ್ ಮತ್ತು ಶೇ.100 ಫಲಿತಾಂಶ ದಾಖಲಿಸಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ರಮೇಶ ಶೆಟ್ಟಿ ಹೇಳಿದರು.
ಸುಜ್ಞಾನ ಪಿಯು ಕಾಲೇಜಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025-2026ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಕುಂದಾಪುರ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‍ನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಕೇವಲ 11 ವಿದ್ಯಾರ್ಥಿಗಳಿಂದ 2024-2025ರಲ್ಲಿ ಆರಂಭವಾದ ಸುಜ್ಞಾನ ಪಿಯು ಕಾಲೇಜು ದ್ವಿತೀಯ ಪಿಯುಸಿಗೆ ಬೇರೆ ಕಾಲೇಜುಗಳಿಂದ ಸುಮಾರು 100 ವಿದ್ಯಾರ್ಥಿಗಳು ದಾಖಲಾತಿ ಪಡೆದು ಒಟ್ಟು 125 ವಿದ್ಯಾರ್ಥಿಗಳು ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ಸ್ಪಂದನಾ ಆರ್. ಶೆಟ್ಟಿ 592 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾರೆ. ವಿಶೇಷವೆಂದರೆ ಸ್ಪಂದನಾ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 84 ಅಂಕ ಪಡೆದರೂ ಕೂಡ ದ್ವಿತೀಯ ಪಿಯುಸಿಯಲ್ಲಿ ಶೇ.98.7 ಅಂಕ ಗಳಿಸುವುದರ ಮೂಲಕ ಶ್ರೇಷ್ಠ ಸಾಧನೆಯನ್ನು ಮೆರೆದಿದ್ದಾರೆ. 22 ವಿದ್ಯಾರ್ಥಿಗಳು ಶೇ. 95ಕ್ಕಿಂತ ಅಧಿಕ ಅಂಕ ಪಡೆದು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಉತ್ತಮ ಫಲಿತಾಂಶ ಪಡೆದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎರಡು ವರ್ಷಗಳ ಹಿಂದಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದಿದ್ದರು. ಎಸೆಸ್ಸೆಲ್ಸಿ ಫಲಿತಾಂಶಕ್ಕೆ ಹೋಲಿಸಿದರೆ ಈ ವಿದ್ಯಾರ್ಥಿಗಳ ಪಿಯುಸಿ ಫಲಿತಾಂಶದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರಥಮ ವರ್ಷದಲ್ಲೇ ಒಂದು ರ್ಯಾಂಕ್ ಹಾಗೂ ಶೇ.100 ಫಲಿತಾಂಶ ಪಡೆದಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ನಮ್ಮ ಆದ್ಯತೆಯಾಗಿದೆ. ಹೀಗಾಗಿ ಸಂಸ್ಥೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು, ಪರಂಪರೆಯನ್ನು ಪರಿಚಯಿಸುವ ಚಟುವಟಿಕೆಗಳು ಹಾಗೂ ಆಟೋಟಗಳಿಗೂ ಪ್ರಾಮುಖ ನೀಡಲಾಗುತ್ತಿದೆ. ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ನಮ್ಮ ಆದ್ಯತೆಯಾಗಿದೆ. ಉತ್ತಮ ಶೈಕ್ಷಣಿಕ ಪರಿಸರ ಕಾಯ್ದುಕೊಳ್ಳಲು ಹೆಚ್ಚು ಗಮನ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ, ಪೂಜಾ ಶೆಟ್ಟಿ, ಪ್ರಮತ್ ಶೆಟ್ಟಿ, ರಘುರಾಮ ಶೆಟ್ಟಿ, ಮಾಲತಿ ಆರ್. ಶೆಟ್ಟಿ, ರ್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಆರ್.ಶೆಟ್ಟಿ ಉಪಸ್ಥಿತರಿದ್ದರು.

Leave a Reply