ಕುಂದಾಪುರ :ತರಗತಿಯಲ್ಲಿ ಬೋಧನೆಗೆ ಎಐ ಶಿಕ್ಷಕಿ|ರಾಜ್ಯದ ಸರಕಾರಿ ಶಾಲೆಯಲ್ಲಿಯೇ ಪ್ರಪ್ರಥಮ ಪ್ರಯೋಗ|ದಿಟ್ಟ ಹೆಜ್ಜೆ ವಂಡ್ಸೆ ಸರಕಾರಿ ಶಾಲೆ|ಎ.ಐ. ರೋಬೊ ಟೀಚರ್ ಅನಾವರಣ

0
273

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ಹಣ ಇದ್ದ ಮಾತ್ರಕ್ಕೆ ಎಲ್ಲ ಕೆಲಸ ಮಾಡಲು ಸಾಧ್ಯವಿಲ್ಲ. ನಿರಂತರವಾಗಿ ಪ್ರಯತ್ನ ಮಾಡುವ ಮೂಲಕ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಇಂಗ್ಲೀಷ್ ವ್ಯಾಮೋಹದಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಕೆಲಸ ಆಗಬೇಕು ಎಂದು ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು ಹೇಳಿದರು.
ಬೈಂದೂರು ಶೈಕ್ಷಣಿಕ ವಲಯದ ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಚಯಿಸಲಾಗಿರುವ ಐರಿಸ್ ಎ.ಐ ರೋಬೊ ಟೀಚರ್, ಶೈಕ್ಷಣಿಕ ವಿಷಯಗಳ ಮಾದರಿಗಳ ಪ್ರದರ್ಶನ ‘ರೈನ್‍ಬೋ ಎಜ್ಯುಕೇಶನ್ ಫೆಸ್ಟ್’ ಹಾಗೂ ಶಾಲೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಾಲವನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸರಕಾರಿ ಶಾಲೆಯೊಂದರಲ್ಲಿ ಎ.ಐ ರೋಬೊ ಶಿಕ್ಷಕಿಯನ್ನು ಪರಿಚಯಿಸುವ ಮೂಲಕ ಚರಿತ್ರೆಯ ಪುಟಗಳಲ್ಲಿ ವಂಡ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಾಖಲಾಗಿದೆ. ಸದಾ ಹೊಸತನ, ಪ್ರಯೋಗಶೀಲತೆ ಹಾಗೂ ಸಾಧನೆಗಳ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಂಡ್ಸೆ ಸರಕಾರಿ ಶಾಲೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದುವ ಮೂಲಕ ನಂ.1 ಶಾಲೆಗೆ ಬೆಳೆದು ನಿಂತಿದೆ ಎಂದು ಅವರು ಶ್ಲಾಘಿಸಿದರು.
ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ ಕಾರಂತ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಕೆಡಿಪಿ ಸದಸ್ಯ ಶರತ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸದಸ್ಯ ಕುಸುಮಾಕರ ಶೆಟ್ಟಿ, ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ಕರ್ಕುಂಜೆ ಸಿಆರ್‍ಪಿ ರವಿಚಂದ್ರ, ಶಿಕ್ಷಕರ ಸಂಘದ ಪ್ರತಿನಿಧಿ ಪ್ರತಾಪ್ ಕುಮಾರ್ ಶೆಟ್ಟಿ, ಮುಖ್ಯೋಪಾಧ್ಯಾಯ ಶಂಕರ, ದಾನಿ ಅರಿಫಾ ಅಬುಬಕರ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಸೋಮರಾಯ ಜನ್ನು ಸ್ವಾಗತಿಸಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಸುಧಾಕರ ದಾನಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ಮತ್ತು ಶಿಕ್ಷಕಿ ಉಷಾ ಐ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here