ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಒಂದು ಕಾಲದಲ್ಲಿ ಶಿಕ್ಷಣ ಅನ್ನುವುದು ಸೀಮಿತ ಸಂಖ್ಯೆಯ ಜನರಿಗಷ್ಟೇ ಇತ್ತು. ಆದರೆ ಇವತ್ತು ಕಾಲ ಘಟ್ಟ ಬದಲಾಗಿದೆ. ಪ್ರತಿಭೆ ಇದ್ದರೆ, ಶಕ್ತಿ ಇದ್ದರೆ, ಸಾಮಥ್ರ್ಯ ಮತ್ತು ಓದಬೇಕೆಂಬ ಹಂಬಲ ಇದ್ದರೆ ಸಮಾಜದಲ್ಲಿ ಶ್ರೀಮಂತ ಮತ್ತು ಬಡವರೆನ್ನದೆ ಅವಕಾಶಗಳು ಇಂದು ಮುಕ್ತವಾಗಿದೆ. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದವರನ್ನು ಗೌರವಿಸಬೇಕಾದುದು, ಗುರುತಿಸಬೇಕಾದುದು, ಸಮರ್ಥಿಸಬೇಕಾದುದು ಸಮಾಜದ ಕರ್ತವ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಮತ್ತು ಶ್ರೀ ಕೃಷ್ಣಪ್ರಸಾದ ಫೌಂಡೇಶನ್ ವಂಡಾರು ಬ್ರಹ್ಮಾವರ ಇದರ ವತಿಯಿಂದ ಕೋಟೇಶ್ವರದ ಯುವ ಮೆರಿಡಿಯನ್ ಗ್ರಾಮ್ಮಿ ಬಾಲ್‍ರೂಮ್‍ನಲ್ಲಿ ಭಾನುವಾರ ಜರಗಿದ ‘ಸೇವಾ ಸಂಕಲ್ಪ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಟಿ.ಎ.ಪೈ, ಶ್ರೀನಿವಾಸ ಮಲ್ಯ, ಜಾರ್ಜ್ ಫೆರ್ನಾಂಡಿಸ್ ಅಂತಹ ಅನೇಕ ನಾಯಕರು ಅವರ ದೂರದೃಷ್ಟಿತ್ವದ ಫಲವಾಗಿ ಇಂದು ಬಹಳಷ್ಟು ಅಭಿವೃದ್ಧಿಯನ್ನು ಕಾಣುವಂತಾಗಿದೆ. ಹಿಂದಿನ ತಲೆಮಾರು ಮಾಡಿದ ಶ್ರಮವನ್ನು ನೆನಪಿಸಬೇಕಾದ ಅನಿವಾರ್ಯತೆ ಇದೆ. ಇತರ ರಾಜ್ಯ, ಜಿಲ್ಲೆಗಳಿಗೆ ಇತರ ವ್ಯವಸ್ಥೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಜನರು ಅತ್ಯಂತ ಪ್ರತಿಭಾವಂತರು ಎನ್ನುವ ಗೌರವ ಮತ್ತು ಸಾಮಥ್ರ್ಯಕ್ಕೆ ಸಾಕ್ಷಿಯಾಗಿ ಬೆಳೆದು ನಿಂತಿದ್ದೇವೆ ಎಂದು ಹೇಳಿದ ಅವರು, ಸಂಪತ್ ಶೆಟ್ಟಿ ಅವರು ಶಿಕ್ಷಣಕ್ಕೆ ಒತ್ತು ಕೊಟ್ಟು ಬಡ ವಿದ್ಯಾರ್ಥಿಗಳಿಗೆ ತಮ್ಮ ಆರ್ಥಿಕ ಶಕ್ತಿಯನ್ನು ನೀಡಿ ಸುಮಾರು ಒಂದು ಕೋಟಿ ರೂ. ತನಕ ವಿತರಣೆ ಮಾಡುತ್ತಿರುವುದು ಒಂದು ಅಪರೂಪದ ಕಾರ್ಯಕ್ರಮ. ಸಂಪತ್ ಕುಮಾರ್ ಅಂತಹ ವ್ಯಕ್ತಿಗಳು ಶಕ್ತಿಗಳಾಗಿ ನಿಮ್ಮ ಮುಂದೆ ನಿಂತು ನಮ್ಮ ಕೈಯಲ್ಲಾದ ಸಹಾಯವನ್ನು ಮಾಡುತ್ತೇವೆ ಎಂದರೆ ಅದೊಂದು ಬಹಳ ದೊಡ್ಡ ಕಲ್ಪನೆ, ಕನಸು ಮತ್ತು ನನಸಾಗಿರುವ ಒಂದು ಸಾರ್ಥಕ ಶ್ರಮದ ಸಂಕೇತ. ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸುಮಾರು 4 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ, ಜನರಿಗೆ ಉದ್ಯೋಗ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿದ್ದ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವನ್ನು ನೀಡಬೇಕು. ಆದರೆ ಅದು ನಾವೆಲ್ಲ ತಿಳಿದಿರುವ ಮಟ್ಟಿಗೆ ಸಿಗುತ್ತಿಲ್ಲ. ಸಂಪತ್ ಶೆಟ್ಟಿ ಅವರು ದುಡಿಮೆಯ ಒಂದು ಭಾಗವನ್ನು ಶಿಕ್ಷಣಕ್ಕೆ ಮೀಸಲಿಟ್ಟು, ಮಕ್ಕಳನ್ನು ದತ್ತು ಸ್ವೀಕರಿಸಿ, ವಿದ್ಯಾರ್ಥಿವೇತನ ವಿತರಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಪ್ರಶಂಸನೀಯ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್‍ನ ಚೇರ್‍ಮನ್ ಸಂಪತ್ ಶೆಟ್ಟಿ ಮಾತನಾಡಿ, ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕನಸಿಗೆ ಮುನ್ನಡಿ ಬರೆಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ದಾನ ನೀಡುವ ಶೇ.80 ರಷ್ಟನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರ ಕನಸಿಗೆ ಜೀವ ಕೊಡುವ ಕಾರ್ಯಕ್ರಮಗಳಿಗೆ ವಿನಿಯೋಗ ಮಾಡಲಾಗುತ್ತಿದೆ. ಶೈಕ್ಷಣಿಕ ಪ್ರೋತ್ಸಾಹ ಪಡೆದ ಒಂದಷ್ಟು ಮಕ್ಕಳು ಐಎಎಸ್ ಅಥವಾ ಐಪಿಎಸ್ ಮಾಡಬೇಕು. ಈ ನಿಟ್ಟಿನಲ್ಲಿ ಓದುವವರಿದ್ದರೆ, ಅವರ ಕನಸಿಗೆ ನೆರವಾಗುತ್ತೇನೆ ಎಂದರು.
ಇದೇ ಸಂದರ್ಭ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ನೆರವು, ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿಗೆ 50 ಕಂಪ್ಯೂಟರ್ ವಿತರಣೆ, 6 ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಅದುರೋ ಫೌಂಡೇಶನ್ ಮೂಲಕ ಬಡ ಕುಟುಂಬದ ವಿದ್ಯಾಭ್ಯಾಸಕ್ಕೆ ಮತ್ತು ವೈದ್ಯಕೀಯ ಕ್ಯಾಂಪ್‍ಗೆ ಸಹಾಯಧನ, 2025-26ನೇ ಸಾಲಿಗೆ ಬಡ ಕುಟುಂಬದಿಂದ ಬಂದ 5 ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು 2026-27ನೇ ಸಾಲಿಗೆ 14 ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ, ವಂಡಾರು ಮತ್ತು ಸಾೈಬ್ರಕಟ್ಟೆ ಶಾಲೆಯ ಅತಿಥಿ ಶಿಕ್ಷಕರ ವೇತನ ಪಾವತಿ, ವೈದ್ಯಕೀಯ ಸಹಾಯಧನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತು ಕೊಡೆ ವಿತರಣೆ ಸೇರಿದಂತೆ ಸುಮಾರು 93.64 ಲಕ್ಷ ಮೌಲ್ಯದ ನೆರವನ್ನು ವಿತರಿಸಲಾಯಿತು.
ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ. ಕೊತ್ತಾಡಿ ಉಮೇಶ ಶೆಟ್ಟಿ, ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಯುವ ಮೆರಿಡಿಯನ್‍ನ ಆಡಳಿತ ನಿರ್ದೇಶಕರಾದ ಬಿ.ಉದಯಕುಮಾರ್ ಶೆಟ್ಟಿ ಮತ್ತು ಬಿ.ವಿನಯ ಕುಮಾರ್ ಶೆಟ್ಟಿ, ಕುಂದಾಪುರದ ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪತ್ರಕರ್ತ ರಾಜೇಶ ಕೆ.ಸಿ., ಸೋನಾಲಿ ಎಸ್.ಶೆಟ್ಟಿ ಉಪಸ್ಥಿತರಿದ್ದರು.
ಎಳ್ಳಂಪಳ್ಳಿ ಸಂತೋಷ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀನಿವಾಸ ಶೆಟ್ಟಿ ವಂದಿಸಿದರು.









