ಕುಂದಾಪುರ ಮಿರರ್ ಸುದ್ದಿ…
ಕಿರಿಮಂಜೇಶ್ವರ :ಜಿಲ್ಲಾಡಳಿತ-ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ, ಕಿರಿಮಂಜೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಮಿಷನ್ ವಾತ್ಸಲ್ಯ ಯೋಜನೆಯಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸೇವೆ ಹಾಗೂ ಮಕ್ಕಳ ಸಂಬಂಧಿ ಕಾಯ್ದೆಗಳ ಬಗ್ಗೆ ಮಾಹಿತಿ ಕಾರ್ಯಾಗಾರವು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಸಹಾಯಕ ಕಾನೂನು ಅಭಿರಕ್ಷಕರು ಹಾಗೂ ವಕೀಲರಾದ ಭಾನುಮತಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ” ಇಂದಿನ ಮಕ್ಕಳು ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಮಾದಕ ವಸ್ತುಗಳ ಸೇವನೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಂರಕ್ಷಣೆಗಾಗಿ ಇರುವ ಕಾಯ್ದೆಗಳ ಬಗ್ಗೆಯಾಗಲಿ, ಅವರಿಗಿರುವ ಕಾನೂನು ಸೇವೆಗಳ ಕುರಿತಾಗಲಿ ಅವರಿಗೆ ಅರಿವಿಲ್ಲ. ವಿಭಿನ್ನ ಬಗೆಯ ಮಾಹಿತಿ ಕಾರ್ಯಾಗಾರಗಳ ಮುಖೇನ ಅವರಲ್ಲಿ ಜಾಗೃತಿಯನ್ನು ಮೂಡಿಸಿದಾಗ ಮಕ್ಕಳ ಹಿತ ರಕ್ಷಣೆಯ ಕಾರ್ಯ ಸಾಧಿತವಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜ ಮತ್ತು ಸರಕಾರದ ವಿವಿಧ ಇಲಾಖೆಗಳು ಕಾರ್ಯಪ್ರವೃತ್ತರಾಗಬೇಕಾಗಿದೆ” ಎಂದು ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇದರ ರಕ್ಷಣಾಧಿಕಾರಿಗಳಾದ ಮಹೇಶ್ ದೇವಾಡಿಗ ಇವರು ಮಾತನಾಡಿ “ಮಾದಕ ದ್ರವ್ಯಗಳ ಸೇವನೆ ಇಂದು ವ್ಯಾಪಕವಾಗಿ ಹೆಚ್ಚುತ್ತಿದ್ದು, ಅನೇಕ ಕಾನೂನು ಬಾಹಿರ ಕೃತ್ಯಗಳಿಗೆ ಕಾರಣವಾಗುತ್ತಿದೆ. ಮಾದಕ ವಸ್ತುಗಳ ಸೇವನೆಯಿಂದ ನಮ್ಮ ದೇಹದ ಅಂಗಾಂಗಗಳು ದುರ್ಬಲ ಗೊಳ್ಳುತ್ತವೆ. ಮಕ್ಕಳು ಈ ಮಾದಕ ವಸ್ತುಗಳ ಸೇವನೆಗೆ ಬಲಿಯಾಗದಂತೆ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಕ್ಕಳ ಸಂರಕ್ಷಣೆಗಾಗಿ ಬಾಲ ನ್ಯಾಯ ಮಂಡಳಿಗಳು, ಮಕ್ಕಳ ಕಲ್ಯಾಣ ಸಮಿತಿಗಳು ರಚನೆಯಾಗಿದ್ದು, ಮಕ್ಕಳ ಸಂರಕ್ಷಣೆಯೇ ನಮ್ಮ ಪ್ರಥಮ ಆದ್ಯತೆಯಾಗಿದೆ” ಎಂದರು.
ಕುಂದಾಪುರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಭಾಗ್ಯಲಕ್ಷ್ಮಿಯವರು ” ನಮ್ಮ ಜಿಲ್ಲೆ ವಿದ್ಯಾವಂತರು ಮತ್ತು ಬುದ್ಧಿವಂತರ ನಾಡಾಗಿದೆ. ಇಲ್ಲಿನ ಸಂಸ್ಕಾರ – ಸಂಸ್ಕೃತಿಗೆ ವಿಶೇಷ ಪ್ರಾಮುಖ್ಯತೆಯಿದೆ. ಇಂದಿನ ಜೆನ್ -ಜಿ ಗಳು ಈ ನಾಡಿನ ಪರಂಪರೆಯನ್ನು ಅರಿತುಕೊಂಡು, ಅದನ್ನು ಮುನ್ನೆಡೆಸಿಕೊಂಡು ಹೋಗುವ ಸಂಕಲ್ಪ ಕೈಗೊಳ್ಳಬೇಕು. ಬಾಹ್ಯ ಆಕರ್ಷಣೆಗಳಗೆ ಒಳಗಾಗದೆ, ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಹಿತಕ್ಕಾಗಿ ದುಡಿಯಬೇಕು ” ಎಂದು ಕರೆಕೊಟ್ಟರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ವಿಜಯ್ ಕುಮಾರ್, ಬೈಂದೂರು ಆರಕ್ಷಕ ಠಾಣೆಯ ಸಿಬ್ಬಂದಿ ಮಂಜುನಾಥ್ ಪಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಆಚಾರ್ಯ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಯೋಜಕರಾದ ಸುಬ್ರಮಣ್ಯ ಮರಾಟಿ ಸ್ವಾಗತಿಸಿದರು. ಸಹಶಿಕ್ಷಕಿ ಯೋಗಿತಾ ವಂದಿಸಿದರು. ಸಹಶಿಕ್ಷಕ ಮಹಾದೇವ ಕಾರ್ಯಕ್ರಮ ನಿರೂಪಿಸಿದರು.












