ಕುಂದಾಪುರ :ಇಂದು ನಾವು ನಡೆಸುವ ಪರಿಸರಸ್ನೇಹಿ ಜೀವನ ಮುಂದಿನ ತಲೆಮಾರಿಗೆ ನೀಡುವ ಅಮೂಲ್ಯ ಕೊಡುಗೆ -ರುಥ್ರನ್ ಪಿ.

0
65

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಇಂದು ನಾವು ನಡೆಸುವ ಪರಿಸರಸ್ನೇಹಿ ಜೀವನ ಮುಂದಿನ ತಲೆಮಾರಿಗೆ ನೀಡುವ ಅಮೂಲ್ಯ ಕೊಡುಗೆಯಾಗುತ್ತದೆ. ನಿತ್ಯ ನಾವು ಪ್ಲಾಸ್ಟಿಕ್ ಬಳಕೆ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬಂದಾಗ ಪರಿಸರದ ಸಮಾತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಪರಿಸರದ ಧನಾತ್ಮಕ ಅಂಶ, ಅದರ ಮೇಲಾಗುವ ಪರಿಣಾಮ, ಬಳಿಕ ಉಂಟಾಗುವ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರನ್ ಪಿ. ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅರಣ್ಯ ಇಲಾಖೆ ಕುಂದಾಪುರ ಹಾಗೂ ಬಸ್ರೂರು ಶ್ರೀ ಶಾರದಾ ಕಾಲೇಜು ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಕ್ರಿಯೆ ಪರಿಸರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಅರಿತುಕೊಂಡಾಗ ಜಾಗೃತಿಯೂ ಉಂಟಾಗುತ್ತದೆ. ಇವತ್ತು ನಾವು ಪ್ರಕೃತಿಯನ್ನು ಸಂರಕ್ಷಣೆ ಮಾಡದಿದ್ದರೆ ಮುಂದಿನ ಜನಾಂಗ ಇನ್ನೂ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಪರಿಸರದ ಮೇಲೆ ಎಲ್ಲರಿಗೂ ಹಕ್ಕಿದೆ. ಅದನ್ನು ರಕ್ಷಿಸುವುದು ಕೂಡಾ ನಮ್ಮೆಲ್ಲರ ಜವಬ್ದಾರಿಯಾಗಿದೆ. ಆ ಜವಬ್ದಾರಿಯಿಂದ ನುಣುಚಿಕೊಂಡರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಸರ ಸಂರಕ್ಷಣೆಯ ವಿಷಯದಲ್ಲಿ ನಾವು ನಮ್ಮ ಹಕ್ಕು ಮತ್ತು ಜವಬ್ದಾರಿಯನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾನ್ ಡಿಸೋಜ ಅವರಿಗೆ ಗಿಡವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಆರ್.ಎಫ್.ಓ ರಾಘವೇಂದ್ರ ನಾಯಕ್ ಅವರು, ಪ್ರಕೃತಿಯಲ್ಲಿ ಪ್ರತಿಯೊಂದು ಕೂಡಾ ತನ್ನದೇಯಾದ ಮಹತ್ವ ಪಡೆದುಕೊಂಡಿದೆ. ಸಸ್ಯ, ಜೀವಜಂತುಗಳ ಅನುಬಂಧದಿಂದ ಪ್ರಕೃತಿಯ ಸಮಾತೋಲನವಿದೆ. ಅರಣ್ಯ ನಾಶದಿಂದಾಗಿಯೇ ಪ್ರಾಕೃತಿಕ ಸಮಾತೋಲನ ತಪ್ಪುತ್ತಿವೆ. ಅನೇಕ ಜೀವ ಸಂತತಿಗಳ ಅವನತಿಯ ಪರಿಣಾಮ ಮನುಷ್ಯ ಜೀವನದ ಮೇಲೆ ಆಗುತ್ತಿದೆ. ಹಾಗಾಗಿ ಈ ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗಳು, ಸಸ್ಯಗಳು ಬಹಳ ಮುಖ್ಯವಾಗುತ್ತದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಾ, ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನಮಠ ವಹಿಸಿದ್ದರು. ಶ್ರೀ ಶಾರದಾ ಕಾಲೇಜಿನ ಸಂಚಾಲಕಿ ಅನುಪಮಾ ಎಸ್. ಶೆಟ್ಟಿ, ಕಾಲೇಜು ಆಡಳಿತ ಮಂಡಳಿ ಸದಸ್ಯ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಎನ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ), ಕಾರ್ಯದರ್ಶಿ ಟಿ. ಲೋಕೇಶ್ ಆಚಾರ್ಯ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ ಹೆಮ್ಮಾಡಿ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ರಾಜ್ಯ, ಜಿಲ್ಲಾ ಸಂಘದ ನಿರ್ದೇಶನದಂತೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸ್ಥಾಪನೆಗೊಂಡು 33 ವರ್ಷ ಕಳೆದ ಹಿನ್ನೆಲೆಯಲ್ಲಿ 33 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಕಾಲೇಜಿನ ಕ್ರೀಡಾಂಗಣದ ಸುತ್ತ ನಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.

Click Here

LEAVE A REPLY

Please enter your comment!
Please enter your name here