ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗ್ಯಾರಂಟಿ ಯೋಜನೆಯ ದುರ್ಬಳಕೆ ತಡೆಗಟ್ಟುವುದು, ಆರ್ಹ ಫಲಾನುಭವಿಗೆ ಯೋಜನೆಯ ಪ್ರಯೋಜನ ತಲುಪಿಸುವುದು ಪರಿಷ್ಕರಣೆಯ ಉದ್ದೇಶವಾಗಿದ್ದು, ನಿಜವಾದ ಫಲಾನುಭವಿ ಸೌಲಭ್ಯದಿಂದ ವಂಚಿತವಾಗಬಾರದು ಎನ್ನುವುದು ಸರಕಾರ ಉದ್ದೇಶವಾಗಿದೆ. ಪರಿಷ್ಕರಣೆಯಲ್ಲಿ ಇದರಲ್ಲಿ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರ ಜವಬ್ದಾರಿಯೂ ಇದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಹೆಚ್.ಹರಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ.25ರಂದು ನಡೆದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಈ ತನಕ ತಾಲೂಕಿಗೆ 287,24,44,,000, ಗೃಹ ಜ್ಯೋತಿ ಯೋಜನೆಯಲ್ಲಿ ಮೇ ತಿಂಗಳಲ್ಲಿ 4,48,80,698, ಒಟ್ಟು 141,57,76,520, ಅನ್ನಭಾಗ್ಯ ಈ ತನಕ 63,73,39,224, ಯುವನಿಧಿ ಮೇ ತಿಂಗಳಲ್ಲಿ 31,59,000, ಒಟ್ಟು 3,54,84,000, ಶಕ್ತಿ ಯೋಜನೆ ಮೇ ತಿಂಗಳಲ್ಲಿ 3,43,96,060, ಒಟ್ಟು ಈ ತನಕ 86,39,98,271 ಬಿಡುಗಡೆಯಾಗಿದೆ. ಮೇ ತಿಂಗಳಲ್ಲಿ ಒಟ್ಟು 8,24,35,758, ಇಲ್ಲಿನ ತನಕ ಒಟ್ಟು 582,50,42,015 ಬಿಡುಗಡೆಯಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಫೆಬ್ರವರಿ ತಿಂಗಳ ತನಕ ಹಣ ಪಾವತಿಯಾಗಿದೆ. 2756 ಫಲಾನುಭವಿಗಳ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಹಣ ಪಾವತಿಯಾಗುವ ಮಾಹಿತಿ ಸಿಕ್ಕಿದೆ. ಫಲಾನುಭವಿಗಳು ಬೇರೆ ಬೇರೆ ಬ್ಯಾಂಕುಗಳಲ್ಲಿ ಆಧಾರ್ ಸಿಡಿಂಗ್ ಮಾಡಿರುವುದರಿಂದ ಈ ರೀತಿ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಆಧಾರ್ ಸಿಡಿಂಗ್ ಸಮಸ್ಯೆಯಿಂದ ಈ ಸಮಸ್ಯೆ ಕಂಡು ಬಂದಿದೆ ಹೊರತು ಹಣ ದುರುಪಯೋಗವಾಗಿಲ್ಲ ಎಂದು ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಗೆ ಪುನಃ ಅರ್ಜಿ ಸಲ್ಲಿಸುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಗೊಂದಲ ಬೇಡ ಎಂದು ಅಧಿಕಾರಿಗಳು ತಿಳಿಸಿದರು.
ವಿದ್ಯುತ್ ತಂತಿಯ ಮೇಲ್ಬಾಗದಲ್ಲಿ ಆಕೇಶಿಯಾ ಮರಗಳ ರೆಂಬೆ ಕೊಂಬೆಗಳು ಬಾಗಿಕೊಂಡಿದ್ದು ಅನಾಹುತ ಸಂಭವಿಸುವ ಸಾಧ್ಯತೆಗಳು ಇದ್ದು ಅರಣ್ಯ ಇಲಾಖೆಯ ಸಮನ್ವಯತೆಯ ಕೊರತೆಯಿಂದ ಅಪಾಯಕಾರಿ ಮರಗಳ ಗೆಲ್ಲುಗಳನ್ನು ತೆರವು ಮಾಡುವ ಕಾರ್ಯವಾಗದ ಬಗ್ಗೆ ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ ಹಾಗೂ ಚಂದ್ರ ಅಮೀನ್ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದರು.
ಹಾಲಾಡಿ-ಹುಣ್ಸೆಮಕ್ಕಿ ರಸ್ತೆಯಲ್ಲಿ ಎರಡು ಕಡೆ ಅಕೇಶಿಯ ಮರಗಳು ವಿದ್ಯುತ್ ತಂತಿಗೆ ತಾಗಿಕೊಂಡಿವೆ. ಮಳೆಗಾಲದಲ್ಲಿ ಈ ಮರಗಳು ಬಿದ್ದರೆ ವಿದ್ಯುತ್ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಕಂಬಗಳು ಮುರಿದು ಹೋಗುತ್ತವೆ. ಕೂಡಲೇ ತೆರವು ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಅದಕ್ಕೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ ಮುಂದಿನ ಸಭೆಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸುವುದಾಗಿ ತಿಳಿಸಿದರು. ಮೆಸ್ಕಾಂ ಅಧಿಕಾರಿಗಳು ಮಾತನಾಡಿ ಈಗಾಗಲೇ ಅಪಾಯಕಾರಿ ಮರಗಳು ಇರುವ ಸ್ಥಳಗಳ ಪಟ್ಟಿ ಮಾಡಿದ್ದೇವೆ. ಲಿಖಿತವಾಗಿ ಆರ್.ಎಫ್.ಓ ಗಮನಕ್ಕೂ ತಂದಿದ್ದೇವೆ ಎಂದರು.
ಸಭೆಯಲ್ಲಿ ಸ್ಮಾರ್ಟ್‍ಮೀಟರ್ ಬಗ್ಗೆಯೂ ಚರ್ಚೆ ನಡೆಯಿತು. ಈಗಾಗಲೇ 413 ಸ್ಮಾರ್ಟ್ ಮೀಟರ್ ಅಳವಡಿಕೆಯಾಗಿದೆ. ಈಗ ಇರುವ ಮೀಟರ್ ಗಿಂತ ಸ್ಮಾರ್ಟ್ ಮೀಟರ್ ಅತ್ಮಾಧುನಿಕವಾಗಿದ್ದು 4800 ರೂ ಆಗುತ್ತದೆ ಎಂದರು. ಸದಸ್ಯರಾದ ನಾರಾಯಣ ಆಚಾರ್ ಕೋಣಿ ಮಾತನಾಡಿ, ಟಾಟಾ ಪವರ್ ಕಾಪೆರ್Çೀರೇಷನ್ ಲಿಮಿಟೆಡ್ ಸಲ್ಲಿಸಿರುವ ಖಾಸಗಿ ಅರ್ಜಿಯ ಬಗ್ಗೆ ಗಮನ ಸಳೆದರು. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಮೆಸ್ಕಾಂ ನೌಕರರು ಕೂಡಾ ಇದಕ್ಕೆ ವಿರೋಧ ಇದ್ದೇವೆ ಎಂದರು.
ಮಂಜು ಕೊಠಾರಿ, ವಾಣಿ ಆರ್.ಶೆಟ್ಟಿ, ನಾರಾಯಣ ಆಚಾರ್ ಧ್ವನಿಗೂಡಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ, ವಿಕಲಚೇತನರಿಗೆ ಬಿಪಿಎಲ್ ಕಾರ್ಡು ನೀಡುವ ಬಗ್ಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಯಿತು. ಮಾನವೀಯತೆಯೇ ಮಾನದಂಡವಾಗಲಿ ಎಂದು ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಸೂಚನೆ ನೀಡಿದರು.
ಸಾಕಷ್ಟು ಸಭೆಗಳಿಂದ ಮನವಿ ಮಾಡುತ್ತಾ ಇದ್ದರೂ ಹಕ್ಲಾಡಿ ಮಾರ್ಗಕ್ಕೆ ಬಸ್ ಕಲ್ಪಿಸಲಾಗಿಲ್ಲ. ಪರವಾನಿಗೆ ಇದ್ದರೂ ಬಸ್ ಓಡಿಸುತ್ತಿಲ್ಲ. ಶಾಲಾ ಕಾಲೇಜು ಸಮಯಕ್ಕಾದರೂ ಕನಿಷ್ಠ ನಾಲ್ಕು ಟ್ರಿಪ್ ಆದರೂ ಕೊಡಿ ಎಂದು ಸದಸ್ಯ ಅರುಣ ಮನವಿ ಮಾಡಿದರು. ಇದಕ್ಕೆ ಮಂಜು ಕೊಠಾರಿ ಧ್ವನಿಗೂಡಿಸಿ ಹಕ್ಲಾಡಿ ಮಾರ್ಗದಲ್ಲಿ ಬಸ್ ಸಂಪರ್ಕ ಕಲ್ಪಿಸಬೇಕು, ಇದು ಬಹುದಿನದ ಬೇಡಿಕೆ ಎಂದರು.
ಜಹೀರ್ ಆಹಮದ್ ಮಾತನಾಡಿ ಗಂಗೊಳ್ಳಿ-ಕುಂದಾಪುರ ಬಸ್ ಬೆಳಿಗ್ಗೆ 6.15ಕ್ಕೆ ಬಿಡುವಂತೆ ಆಗಬೇಕು, ಇಲ್ಲದಿದ್ದರೆ ಈ ಸಮಯಕ್ಕೆ ಖಾಸಗಿಯವರು ಬಸ್ ಓಡಿಸುತ್ತಾರೆ. ಅಷ್ಟರೊಳಗೆ ಸರ್ಕಾರಿ ಬಸ್ ಪ್ರಾರಂಭವಾಗಲಿ. ಹಾಗೆಯೇ ಗಂಗೊಳ್ಳಿ-ಬೈಂದೂರು ಬಸ್ ಓಡಾಟದ ಬಗ್ಗೆ ಯಾವುದೇ ಬೆಳವಣಿಗೆ ಆಗಿಲ್ಲ. ಈ ಬಗ್ಗೆ ನಾನು ಎರಡು ಕಾಲೇಜು ವಿದ್ಯಾರ್ಥಿಗಳ ಸಹಿಯನ್ನು ನೀಡಿದ್ದೆ ಎಂದರು.
ಹೆರಿಕುದ್ರು ಬಸ್ ತಂಗುದಾಣದಲ್ಲಿ ಕೆಎಸ್.ಆರ್.ಟಿಸಿ ಲೋಕಲ್ ಬಸ್ ನಿಲ್ಲಿಸುತ್ತಿಲ್ಲ ಎಂದು ಅಭಿಜಿತ್ ಹೇಳಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ ಜಿ ಸ್ವಾಗತಿಸಿ, ವಂದಿಸಿದರು.












