ಮನುಷ್ಯನಿಗೆ ವಿದ್ಯಾಭ್ಯಾಸದ ಜೊತೆ ಉತ್ತಮವಾದ ಸಂಸ್ಕಾರವೂ ಅತ್ಯಗತ್ಯ -ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮನುಷ್ಯನಿಗೆ ವಿದ್ಯಾಭ್ಯಾಸದ ಜೊತೆ ಉತ್ತಮವಾದ ಸಂಸ್ಕಾರವೂ ಅತ್ಯಗತ್ಯ. ವಿದ್ಯೆಯ ಜೊತೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡಾಗ ಉತ್ತಮ ವ್ಯಕ್ತಿತ್ವ ಉಂಟಾಗಿ ಉತ್ತಮವಾದ ಕೆಲಸಗಳು ನಮ್ಮಿಂದ ನಡೆದು ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಎಲ್ಲರನ್ನು ಗೌರವಿಸುವ ಭಾವನೆಯನ್ನು ಬೆಳೆಸಬೇಕು. ಶ್ರೇಷ್ಠವಾದ ಪರಂಪರೆಯನ್ನು ಹೊಂದಿರುವ ನಾವು ಉತ್ತಮವಾದ ವಿದ್ಯಾಭ್ಯಾಸ, ಸಂಸ್ಕಾರವನ್ನು ಬೆಳೆಸಿಕೊಂಡು ಉತ್ತಮವಾದ ರೀತಿಯಲ್ಲಿ ದೇಶವನ್ನು ಕಟ್ಟುವುದರಲ್ಲಿ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಪ್ರತಿಯೊಬ್ಬರೂ ಸಹ ಶ್ರಮಿಸಬೇಕು. ನಮ್ಮ ದೇಶವನ್ನು ಸರ್ವೋತ್ಟ್ರಷ್ಟವಾದ ದೇಶವನ್ನಾಗಿ ಮಾಡುತ್ತೇವೆ ಎಂಬುದು ಎಲ್ಲರ ಲಕ್ಷ್ಯವಾಗಬೇಕು ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಹೆಮ್ಮಾಡಿ ಗ್ರಾಮದ ಸುಳ್ಸೆಯಲ್ಲಿ ನಿರ್ಮಿಸಲಾಗಿರುವ ಜನತಾ ಪದವಿಪೂರ್ವ ಕಾಲೇಜಿನ ಬಾಲಕ- ಬಾಲಕಿಯರ ನೂತನ ವಸತಿ ನಿಲಯ ಜನತಾ ‘ಶ್ಲಾಘನ ಶನಯ’ವನ್ನು ಗುರುವಾರ ಅವರು ಲೋಕಾರ್ಪಣೆಗೊಳಿಸಿ, ಆಶೀರ್ವಚನ ನೀಡಿದರು.
ವಿದ್ಯಾಭ್ಯಾಸದಿಂದ ಬುದ್ಧಿ ವಿಕಾಸವಾಗುತ್ತದೆ. ಈ ವಿದ್ಯಾಭ್ಯಾಸ ಸಾರ್ಥಕ ಆಗಬೇಕು, ಅದರ ವಿಯೋಗ ಸರಿಯಾಗ ಆಗಬೇಕು ಅಂದರೆ ಅದಕ್ಕೆ ಸಂಸ್ಕಾರ ಬೇಕು. ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಚೆನ್ನಾಗಿ ಬೆಳೆಸಿಕೊಳ್ಳಬೇಕು. ನಮ್ಮ ಸನಾತನ ಪರಂಪರೆ, ಭಾರತೀಯ ಸಂಸ್ಕøತಿ, ಸನಾತನ ಸಂಸ್ಕøತಿ ನೀಡುವ ಪರಂಪರೆ ಅದು ನಮಗೆ ಬಹಳ ಮುಖ್ಯವಾದುದು. ಅದು ಉತ್ಕøಷ್ಟವಾದ ಪರಂಪರೆ ಎಂದು ಅವರು ನುಡಿದರು.
ವಿದ್ಯಾರ್ಜನೆಗೆ ಪೂರಕವಾದ ವಾತಾವರಣದಲ್ಲಿ ಪ್ರಶಾಂತವಾಗಿ ಅವರ ಅಧ್ಯಯನವನ್ನು, ವಸತಿಯನ್ನು ಮಾಡುತ್ತಾ ಅವರ ಅಧ್ಯಯನವನ್ನು ಉತ್ತಮವಾದ ರೀತಿಯಲ್ಲಿ ಮುಂದುವರಿಸಲು ಬೇಕಾದ ರೀತಿಯಲ್ಲಿ ಜನತಾ ಶಿಕ್ಷಣ ಸಂಸ್ಥೆ ವಸತಿ ಗೃಹವನ್ನು ನಿರ್ಮಾಣ ಮಾಡಿದೆ. ಈ ಸಂಸ್ಥೆಯು ಅನೇಕ ವರ್ಷಗಳಿಂದ ವಿಶೇಷವಾದ ಪರಿಶ್ರಮದ ಮೂಲಕ ಪ್ರತಿವರ್ಷವೂ ಒಂದೊಂದು ಅಭಿವೃದ್ಧಿ ಹೆಜ್ಜೆಯನ್ನು ಹಾಕುತ್ತಾ ಮುಂದೆ ಹೋಗುತ್ತಿದೆ. ಚಿಕ್ಕದಾಗಿ ಪ್ರಾರಂಭವಾದ ಈ ಸಂಸ್ಥೆಯು ಬಹಳಷ್ಟು ಅಭಿವೃದ್ಧಿಯನ್ನು ಹೊಂದಿರುವುದು ಸಂತೋಷಕರ ವಿಷಯ. ಗಣೇಶ ಮೊಗವೀರ ಹಾಗೂ ಅವರ ತಂಡ ಪರಿಶ್ರಮದ ಮೂಲಕ ಸಂಸ್ಥೆಯು ಬೃಹದಾಕಾರವಾಗಿ ಬೆಳೆದಿರುವುದು ಪ್ರಶಂಸನೀಯ ಎಂದು ಅವರು ಆಶೀರ್ವದಿಸಿದರು.
ಸಂಸ್ಥೆಯ ಅಧ್ಯಕ್ಷ ಗಣೇಶ್ ಮೊಗವೀರ ಮತ್ತು ಶ್ಯಾಮಲಾ ಗಣೇಶ ದಂಪತಿ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ, ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷೆ ಅನಿತಾ ಆರ್.ಕೆ., ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ರಾಜೀವ ಶ್ರೀಯಾನ್, ಉದಯ ಕುಮಾರ್ ಹಟ್ಟಿಯಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಉದಯ ನಾಯ್ಕ್ ಸ್ವಾಗತಿಸಿ, ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.












