ಕುಂದಾಪುರ ಮಿರರ್ ಸುದ್ದಿ…

ಬೈಂದೂರು : ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಅರುಣಾಚಲಂ ಕಾಲುಸಂಕ ಯೋಜನೆಯ ಅಂಗವಾಗಿ, ಸಮ್ಯತ ಫೌಂಡೇಶನ್, ಬೆಂಗಳೂರು ಇವರ ಸಹಕಾರ ಹಾಗೂ ಚೆನ್ನೈನ ಇಂಡಸ್ 555 ಟಿಎಂಟಿ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕ್ಯಾಕೋಡು ಗ್ರಾಮದಲ್ಲಿ ನಿರ್ಮಿಸಲಾದ ಎಸ್.ಆರ್. ಸದಾನಂದಮ್ ಕಾಲುಸಂಕವನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಗ್ರಾಮೀಣ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಈ ಕಾಲುಸಂಕ ನಿರ್ಮಾಣದಿಂದ ಮಳೆಗಾಲದಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದ್ದು, ಸ್ಥಳೀಯ ನಿವಾಸಿಗಳ ದೈನಂದಿನ ಜೀವನಕ್ಕೆ ಮಹತ್ತರ ನೆರವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, “ಎಲ್ಲಿ ಚೆನ್ನೈ… ಎಲ್ಲಿಯ ಬೈಂದೂರು… ಆದರೆ ಅಭಿವೃದ್ಧಿಗೆ ದೂರ ಎಂಬುದಿಲ್ಲ. ಜನರ ಅಗತ್ಯಗಳನ್ನು ಮನಗಂಡು ಉತ್ತಮ ಕೆಲಸಗಳಿಗೆ ಕೈಜೋಡಿಸುವ ಸಂಸ್ಥೆಗಳ ಸಹಕಾರದಿಂದ ಗ್ರಾಮೀಣ ಅಭಿವೃದ್ಧಿಗೆ ಹೊಸ ವೇಗ ಸಿಗುತ್ತಿದೆ. ಜನಸೇವೆಯೇ ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಇಂತಹ ಸಹಭಾಗಿತ್ವದ ಮೂಲಕ ಇನ್ನಷ್ಟು ಜನಪರ ಯೋಜನೆಗಳನ್ನು ಕ್ಷೇತ್ರದಲ್ಲಿ ಜಾರಿಗೊಳಿಸಲಾಗುವುದು” ಎಂದು ಹೇಳಿದರು.
ಚೆನ್ನೈನ ಇಂಡಸ್ 555 ಟಿಎಂಟಿ ಸಂಸ್ಥೆಯು ಬೈಂದೂರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಿ ತನ್ನ ಸಿಎಸ್ಆರ್ ನಿಧಿಯ ಮೂಲಕ ಈ ಯೋಜನೆಗೆ ಕೈಜೋಡಿಸಿರುವುದು ಸಾಮಾಜಿಕ ಕಳಕಳಿ ಹಾಗೂ ಉತ್ತಮ ನಾಯಕತ್ವದ ಮೇಲಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಇಂಡಸ್ ಟಿಎಂಟಿ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಸ್. ಶ್ರೀಕಾಂತ್, ಸಮ್ಯತ ಫೌಂಡೇಶನ್ ಸಂಸ್ಥಾಪಕರಾದ ಮುರಳಿ ಎಂ., ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸಮೃದ್ಧ ಬೈಂದೂರಿನತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿರುವ ಈ ಯೋಜನೆಗೆ ಸಹಕರಿಸಿದ ಇಂಡಸ್ 555 ಟಿಎಂಟಿ ಸಂಸ್ಥೆ ಹಾಗೂ ಸಮ್ಯತ ಫೌಂಡೇಶನ್‌ಗೆ ಶಾಸಕ ಗುರುರಾಜ್ ಗಂಟಿಹೊಳೆ ಕೃತಜ್ಞತೆ ಸಲ್ಲಿಸಿದರು.












