ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟಿಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅವರ ಮನವಿಯ ಮೇರೆಗೆ, ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕುಂದಾಪುರ, ಕೋಟೇಶ್ವರದ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ. ಅವರ ನಿರ್ದೇಶನದಲ್ಲಿ ಶಿಲಾಶಾಸನಗಳ ಸ್ವಚ್ಛತೆ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇತಿಹಾಸ ವಿಭಾಗದ ಮುಖ್ಯಸ್ಥರಾದ ವೈಶಾಲಿ ಜಿ. ಆರ್. ಅವರ ಮಾರ್ಗದರ್ಶನದಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿಗಳು ಕೋಟೇಶ್ವರದ ಶ್ರೀ ಮಹತೋಭಾರ ಕೋಟಿಲಿಂಗೇಶ್ವರ ದೇವಸ್ಥಾನದ ಹೊರಪ್ರಾಕಾರದಲ್ಲಿರುವ ಸುಮಾರು 30 ಶಿಲಾಶಾಸನಗಳನ್ನು ಸ್ವಚ್ಛಗೊಳಿಸಿದರು.
ಇದೇ ಸಂದರ್ಭದಲ್ಲಿ ವಿಜಯನಗರದ ಅರಸ ಸದಾಶಿವರಾಯನ ಕಾಲದ ಶಿಲಾಶಾಸನದ ಪ್ರತಿಯನ್ನು (ಎಸ್ಟಾಂಪೇಜ್) ಸಿದ್ಧಪಡಿಸಿ, ಶಾಸನ ಪ್ರತಿಗ್ರಹಣದ ಪ್ರಕ್ರಿಯೆಯನ್ನು ದೇವಸ್ಥಾನದ ಅಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ ಅವರಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಶಾಸನಗಳ ಸಂರಕ್ಷಣೆ, ಅಧ್ಯಯನ ಹಾಗೂ ಐತಿಹಾಸಿಕ ಮಹತ್ವವನ್ನು ಪ್ರಾಯೋಗಿಕವಾಗಿ ಅರಿತುಕೊಳ್ಳುವಲ್ಲಿ ಈ ಕಾರ್ಯಕ್ರಮವು ಮಹತ್ವದ ಅನುಭವವನ್ನು ನೀಡಿತು.












