ಕುಂದಾಪುರ: ಧಾರಾಕಾರ ಮಳೆಗೆ ತಗ್ಗು ಪ್ರದೇಶ ಜಲ ದಿಗ್ಬಂಧನ

0
457

Click Here

Click Here

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ :ಕುಂದಾಪುರ ತಾಲೂಕಿನಾದ್ಯಂತ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಬುಧವಾರ ಸಂಜೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನಿರಂತರವಾಗಿ ಸುರಿಯುತ್ತಿರುವ ಭಾರಿ ಗಾಳಿ ಮಳೆಯಿಂದ ಸೌಪರ್ಣಿಕ, ಎಡಮಾವಿನಹೊಳೆ ನದಿಪಾತ್ರದ ಹಳಗೇರಿಯ ಕಂಬಳಗದ್ದೆ, ನಾವುಂದ ಗ್ರಾಮದ ಸಾಲ್ಬುಡ, ಬಡಾಕೆರೆ, ಪಡುಕೋಣೆ, ಚಿಕ್ಕಳ್ಳಿ ಸಹಿತ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ವಿಪರೀತ ನೆರೆ ಕಾಣಿಸಿಕೊಂಡಿದೆ. ನೆರೆ ಹಾವಳಿ ಉಲ್ಭಣಿಸಿದ ಪರಿಣಾಮ ವಾಸ್ತವ್ಯದ ಮನೆಗಳಿಗೆ ನೀರು ಮನೆ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಳಗೇರಿ ಗ್ರಾಮದಲ್ಲಿ ಒಂದೇ ಸಮನೆ ಎಡಮಾವಿನಹೊಳೆ ಉಕ್ಕಿ ಹರಿದ ಪರಿಣಾಮ ಈ ಭಾಗದ ಸುಮಾರು 8ಕ್ಕೂ ಮಿಕ್ಕಿ ಮನೆಗಳು ಸಂಪೂರ್ಣ ಜಲಾವೃತಗೊಂಡಿತು. ಸಂಪರ್ಕ ರಸ್ತೆ ಹಾಗೂ ಕಾಲುಸಂಕ ನೆರೆ ನೀರಿನಲ್ಲಿ ಮುಳಿದೆ. ಕಳೆದ ಸುಮಾರು 20 ವರ್ಷಗಳ ಹಿಂದೆ ಈ ಭಾಗದಲ್ಲಿ ನೆರೆ ಕಾಣಿಸಿಕೊಂಡಿದ್ದು, ಭಾನುವಾರ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಎಡಮಾವಿನಹೊಳೆ ನೀರಿನ ಪ್ರಮಾಣ ಒಂದೇ ಸಮನೆ ಏರಿಕೆಯಾಗಿ ನೆರೆ ಕಾಣಿಸಿಕೊಂಡಿದೆ.

Click Here

ಅಗ್ನಿಶಾಮಕ ದಳದ ದೋಣಿಯ ಇಂಜಿನ್ ಕೆಟ್ಟು ಹೋದ ಪರಿಣಾಮ ಅಪಾಯವನ್ನು ಲೆಕ್ಕಿಸದೆ ದೋಣಿಗೆ ಇಂಜಿನ್ ಇಲ್ಲದೆಯೂ ಹಾಳಾದ ದೋಣಿಯನ್ನು ತೆಗೆದುಕೊಂಡು ಹೋಗಿ ಅಪಾಯದಲ್ಲಿದ್ದ ಅಂಗವಿಕಲರ ಸಹಿತ ಎಲ್ಲರನ್ನು ಸ್ಥಳೀಯರಾದ ಮಾಧವ ಖಾರ್ವಿ, ಸಂಜೀವ ಖಾರ್ವಿ, ನಾಗೇಂದ್ರ ಗಾಣಿಗ ಅವರು ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಮೂಲಕ ಮಾನವೀಯತೆ ಮರೆದರು.

ಸೌಪರ್ಣಿಕ, ವಾರಾಹಿ, ಕುಬ್ಜಾ, ಎಡಮಾವಿನಹೊಳೆ ಮೊದಲಾದ ನದಿಗಳು ತುಂಬಿ ಹರಿಯುತ್ತಿದೆ. ಸೌಪರ್ಣಿಕ ನದಿ ಪಾತ್ರದ ನಾವುಂದ, ಮರವಂತೆ, ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಸ್ತವ್ಯದ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮರವಂತೆ-ನಾಡ, ನಾವುಂದ-ಬಡಾಕೆರೆ, ನಾವುಂದ-ಸಾಲ್ಬುಡ ಸಂಪರ್ಕ ರಸ್ತೆಗಳಲ್ಲಿ ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದ್ದು, ಈ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೌಪರ್ಣಿಕ ನದಿ ನೀರು ಪುರಾಣ ಪ್ರಸಿದ್ಧ ಮಹಾರಾಜಸ್ವಾಮಿ ಶ್ರೀ ವರಾಹ ದೇವಸ್ಥಾನದವರೆಗೂ ಹರಿಯುತ್ತಿದೆ. ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಇತ್ತೀಚಿಗಷ್ಟೇ ನಾಟಿ ಮಾಡಲು ಸಿದ್ಧಪಡಿಸಿದ ನೇಜಿ, ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ತೆಂಗಿನ ತೋಟಗಳಲ್ಲಿ ನೀರು ಆವರಿಸಿಕೊಂಡಿದ್ದು, ನದಿ ಪಾತ್ರದ ಜನರಲ್ಲಿ ಭೀತಿ ಸೃಷ್ಟಿಸಿದೆ. ಪಂಚಗಂಗಾವಳಿ ನದಿ ನೀರಿನ ಮಟ್ಟದಲ್ಲಿ ಕೂಡ ಗಣನೀಯ ಏರಿಕೆಯಾಗಿದ್ದು, ನದಿ ಉಕ್ಕಿ ಹರಿಯಲಾರಂಭಿಸಿದೆ.

ಗಂಗೊಳ್ಳಿ, ಗುಜ್ಜಾಡಿ ಮತ್ತು ಹೊಸಾಡು ಗ್ರಾಮದ ಅನೇಕ ಕಡೆಗಳ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಆಸ್ತಿಪಾಸ್ತಿಗಳಿಗೆ ಹಾನಿಯಂಟು ಮಾಡಿದೆ. ಬುಧವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ಮುರಿದು ಬಿದ್ದು, ವಿದ್ಯುತ್ ಸಂಚಾರ ಕಡಿತಗೊಂಡಿದೆ.

ಮಳೆ ವ್ಯಾಪಾಕವಾಗುತ್ತಿರುವುದರಿಂದ ಕಡಲು ಕೂಡ ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಕಡಲಿನ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಕಡಲಿನ ಭಾರಿ ಅಲೆಗಳು ರಾಷ್ಟ್ರೀಯ ಹೆದ್ದಾರಿ 66ರ ತಡೆಗೋಡೆಗೆ ಅಪ್ಪಳಿಸುತ್ತಿದ್ದು, ಸಮುದ್ರ ನೀರು ರಾಷ್ಟ್ರೀಯ ಹೆದ್ದಾರಿಗೆ ಚಿಮ್ಮುತ್ತಿದೆ. ಗಂಗೊಳ್ಳಿಯ ಬೇಲಿಕೇರಿ, ಖಾರ್ವಿಕೇರಿ, ಗುಜ್ಜಾಡಿ ಗ್ರಾಮದ ಬೆಣ್ಗೆರೆ, ತ್ರಾಸಿ, ಹೊಸಾಡು ಗ್ರಾಮದ ಕಂಚುಗೋಡು ಮತ್ತು ಮರವಂತೆಯಲ್ಲಿ ಕಡಲ್ಕೊರೆತದ ತೀವ್ರತೆ ಇನ್ನಷ್ಟು ಹೆಚ್ಚಾಗಿದ್ದು, ಕಡಲ ತಡಿಯ ಜನರಲ್ಲಿ ಆತಂಕ ಹೆಚ್ಚಿಸಿದೆ.

ಬೈಂದೂರು ಕ್ಷೇತ್ರದ ಬೇರೆ ಬೇರೆ ಕಡೆಗಳಲ್ಲಿ ವಿಪರೀತ ನೆರೆ ಹಾವಳಿ ಕಾಣಿಸಿಕೊಂಡು ಮನೆಗಗಳಿಗೆ ನೀರು ನುಗ್ಗಿ ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಬಂದಿದೆ. ಅಪಾಯದ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಲ್ಲಿನ ಮೀನುಗಾರರು ದೋಣಿ ಮತ್ತು ಇಂಜಿನ್‍ಗಳನ್ನು ಒದಗಿಸಿದ್ದಾರೆ. ಜಿಲ್ಲಾಡಳಿತ ಸಹಾಯ ಮಾಡುತ್ತಿದೆ. ತಕ್ಷಣಕ್ಕೆ ನೆರೆಪೀಡಿತ ಜನರನ್ನು ಸ್ಥಳಾಂತರಿಸುವುದು ಮತ್ತು ಗಂಜಿ ಕೇಂದ್ರಗಳನ್ನು ತೆರೆಯುವ ಕಾರ್ಯ ನಡೆಯುತ್ತಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ – ಗುರುರಾಜ್ ಗಂಟಿಹೊಳೆ

Click Here

LEAVE A REPLY

Please enter your comment!
Please enter your name here