ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅತ್ತಿಗೆಯೊಂದಿಗೆ ಹುಲ್ಲು ತರಲು ಹೋದ ಯುವತಿಯೊಬ್ಬಳು ವಾಪಾಸು ಮನೆಗೆ ಬರುವ ಸಂದರ್ಭ ಕಿಂಡಿ ಅಣೆಕಟ್ಟಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಅಮಾಸೆ ಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬೆಹಾಡಿ ಎಂಬಲ್ಲಿ ನಡೆದಿದೆ. ಇಲ್ಲಿನ ನರ್ಸಿ(60) ಎಂಬುವರ ಮಗಳು ಮೂಕಾಂಬಿಕಾ(24) ಸಾವನ್ನಪ್ಪಿದ ಯುವತಿ.
ಗುರುವಾರ ಮಧ್ಯಾಹ್ನ ಮೂಕಾಂಬಿಕಾ ತನ್ನ ಅತ್ತಿಗೆ ಅಶ್ವಿನಿಯೊಂದಿಗೆ ಮನೆ ಸಮೀಪದ ತೋಟಕ್ಕೆ ಹುಲ್ಲು ಕೊಯ್ಯಲು ಹೋಗಿದ್ದಳು. ಜೊತೆಯಾಗಿ ಹುಲ್ಲು ಕೊಯ್ದು ಹುಲ್ಲಿನ ಹೊರೆಯನ್ನು ಅಶ್ವಿನಿಯವರಿಗೆ ಹೊರಿಸಿ ಹಿಂದಿನಿಂದ ಬರುತ್ತಿದ್ದಳು. ಆದರೆ ಅಶ್ವಿನಿ ಮನೆಗೆ ಬಂದು ಹಿಂತಿರುಗಿ ನೋಡಿದಾಗ ಮೂಕಾಂಬಿಕ ಕಾಣಿಸಲಿಲ್ಲ. ಕರೆದರೂ ಸ್ಪಂದಿಸದೇ ಇದ್ದಾಗ ಮತ್ತೆ ತೋಟಕ್ಕೆ ಹೋಗಿ ಹುಡುಕಾಡಿದ್ದಾರೆ. ಬಳಿಕ ಮಹೇಶ್ ಎಂಬುವರು ಜಂಬೆಹಾಡಿ ಕಿಂಡಿ ಅಣೆಕಟ್ಟು ಇದರ ದಂಡೆಯ ಮೇಲೆ ಹುಡುಕಾಡಿದಾಗ ಮೂಕಾಂಬಿಕೆಯ ತಲೆ ಕೂದಲು ಮೇಲಕ್ಕೆ ತೇಲಿದ್ದು ದೋಟಿಯ ಕತ್ತಿಯ ಸಹಾಯದಿಂದ ಕೂದಲಿಗೆ ತಾಗಿಸಿ ದೇಹ ಮೇಲಕ್ಕೆ ಬಂದಿದ್ದು ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











