ಕೆ ಪಿ ಎಸ್ ಕೋಟೇಶ್ವರ :ಪ್ರತಿಭೆಗೆ ಪ್ರೋತ್ಸಾಹದ ಹಸ್ತ – 34 ಸಾಧಕರಿಗೆ ರೂ.1.02 ಲಕ್ಷ ದತ್ತಿ ನಿಧಿ ಪುರಸ್ಕಾರ

0
128

Click Here

Click Here

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೊಟೇಶ್ವರದಲ್ಲಿ ಅದ್ದೂರಿ ಪ್ರತಿಭಾ ಪುರಸ್ಕಾರ ಸಮಾರಂಭ

Click Here

ಕೊಟೇಶ್ವರ :ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದೇ ಉತ್ತಮ ಸಮಾಜ ನಿರ್ಮಾಣದ ಭದ್ರ ಅಡಿಪಾಯ ಎಂದು ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕರೂ, ಎನ್.ಆರ್. ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ. ಭಾಸ್ಕರ ಆಚಾರ್ಯ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ, ಕೊಟೇಶ್ವರ ಹಾಗೂ ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಗುರಿನಿಷ್ಠೆ ಜೀವನದ ಯಶಸ್ಸಿನ ಮೂಲಮಂತ್ರಗಳಾಗಿದ್ದು, ಶಿಕ್ಷಣದ ಮೂಲಕ ಸಮಾಜಮುಖಿ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಪ್ರತಿಭಾವಂತರಿಗೆ ನೀಡುವ ಪ್ರೋತ್ಸಾಹ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ವಹಿಸಿ ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಉನ್ನತ ಗುರಿಗಳನ್ನು ಸಾಧಿಸುವಂತೆ ಪ್ರೇರೇಪಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ಗೌರವ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 29 ವಿದ್ಯಾರ್ಥಿಗಳಿಗೆ ತಲಾ ರೂ.3,000 ರಂತೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಅಲ್ಲದೆ, ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿ ದ್ವಿತೀಯ ಪಿಯುಸಿ ರಾಜ್ಯಮಟ್ಟದ ರ್ಯಾಂಕ್ ಗಳಿಸಿದ ರಶ್ಮಿ, ಶ್ರಾವ್ಯ ಜಿ. ದೇವಾಡಿಗ, ಸಾನಿಕ, ಕೃತಿ ದೇವಾಡಿಗ ಹಾಗೂ ಕೃತಿ ಪುತ್ರನ್ ಅವರಿಗೆ ಸಹ ತಲಾ ₹3,000 ರಂತೆ ಗೌರವಧನ ನೀಡಿ ಸನ್ಮಾನಿಸಲಾಯಿತು.
ಒಟ್ಟಾರೆ 34 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು ರೂ.1,02,000 ಮೊತ್ತದ ದತ್ತಿ ನಿಧಿ ಪುರಸ್ಕಾರ ವಿತರಿಸಿ ಅವರ ಸಾಧನೆಯನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಚಾರ್ಟೆಡ್ ಅಕೌಂಟೆಂಟ್ (ಸಿ.ಎ.) ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕಿರಣ್ ಕಾಮತ್ ಹಾಗೂ ಲೋಹಿತ್ ಅವರನ್ನು ಶಾಲೆಯ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿಯನ್ನು ದಿವ್ಯ ಪ್ರಭಾ ಹಾಗೂ ರೇಷ್ಮಾ ವಾಚಿಸಿದರು. ದ್ವಿತೀಯ ಪಿಯುಸಿ ರಾಜ್ಯಮಟ್ಟದ ರ್ಯಾಂಕ್ ವಿಜೇತ ಹಳೆಯ ವಿದ್ಯಾರ್ಥಿಗಳ ಪರಿಚಯವನ್ನು ಪೂರ್ಣಿಮಾ ಮಾಡಿಕೊಟ್ಟರು. ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಳೆಯ ವಿದ್ಯಾರ್ಥಿಗಳ ಪರಿಚಯವನ್ನು ಸಂಧ್ಯಾ ಶ್ರೀ ರಮಾನಂದ್ ವಾಚಿಸಿದರು.
ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ನಾಗರತ್ನ ಎಂ. ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಧಾಬಾಯಿ ನಾಯಕ್ ಅಚ್ಚುಕಟ್ಟಾಗಿ ನಿರೂಪಿಸಿದರು.
ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವಾಭಾವ ಮತ್ತು ಸಾಮಾಜಿಕ ಬದ್ಧತೆಯನ್ನು ಮೆರೆದ ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಈ ಅಭಿನಂದನೀಯ ಕಾರ್ಯಕ್ಕೆ ಪೋಷಕರು, ಶಿಕ್ಷಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದ, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು

Click Here

LEAVE A REPLY

Please enter your comment!
Please enter your name here