ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಅವರ ಭವಿಷ್ಯಕ್ಕೆ ದಾರಿದೀಪವಾಗುವ ನಿಕಟಪೂರ್ವ ತರಬೇತಿಗಳನ್ನು ಆಯೋಜಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಹೇಳಿದರು.
ಇಲ್ಲಿನ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ನಾಟಾ’ (NATA – National Aptitude Test in Architecture) ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದು ಮಾತನಾಡಿದ ಡಾ. ರಮೇಶ್ ಶೆಟ್ಟಿ, “ಶಿಕ್ಷಣ ಎಂಬುದು ಮುಗಿಯದ ಪಯಣ. ನಾವು ಎಷ್ಟೇ ಕಲಿತರೂ ಕಲಿಯುವುದು ಇನ್ನೂ ಇರುತ್ತದೆ. ಇಂದು ಡಿಸೈನ್, ವಾಸ್ತುಶಿಲ್ಪ ಮತ್ತು ಫ್ಯಾಷನ್ ರಂಗಗಳಲ್ಲಿ ಅಪಾರ ಅವಕಾಶಗಳಿವೆ. ವಿದ್ಯಾರ್ಥಿಗಳು ಇಂತಹ ತರಬೇತಿಗಳ ಮೂಲಕ ಸರ್ವತೋಮುಖವಾಗಿ ಸುಸಜ್ಜಿತರಾಗಬೇಕು. ಪಿಯುಸಿ ಹಂತದಲ್ಲೇ ಸಿಗುವ ಈ ರೀತಿಯ ವಿಶೇಷ ತರಬೇತಿಗಳು ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಯಾಗುತ್ತದೆ. ಕಾಲೇಜು ಒದಗಿಸುತ್ತಿರುವ ಈ ಅವಕಾಶವನ್ನು ವಿದ್ಯಾರ್ಥಿಗಳು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಂಡು ತಮ್ಮ ನೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಚಂದ್ರಶೇಖರ್ ಶ್ರೀನಿವಾಸ್ ಅವರು, NATA ಪರೀಕ್ಷೆಯ ಸ್ವರೂಪ, ತರಬೇತಿಯ ಅಗತ್ಯತೆ ಹಾಗೂ ವಾಸ್ತುಶಿಲ್ಪ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸುದೀರ್ಘ ಹಾಗೂ ಉಪಯುಕ್ತ ಮಾಹಿತಿ ನೀಡಿದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, “ಪಿಯುಸಿಯ ಈ ಎರಡು ವರ್ಷಗಳು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ನಿರ್ಣಾಯಕ ಘಟ್ಟ. ಚೆನ್ನಾಗಿ ಅಭ್ಯಾಸ ಮಾಡುವ ಜೊತೆಗೆ, ಸಂಸ್ಥೆ ಆಯೋಜಿಸುವ ಇಂತಹ ಮೌಲ್ಯಯುತ ತರಬೇತಿಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ. ಕೈಗೆ ಸಿಕ್ಕ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ರಸಾಯನ ಶಾಸ್ತ್ರದ ಉಪನ್ಯಾಸಕ ನಿತಿನ್ ಶೆಟ್ಟಿ ಸ್ವಾಗತಿಸಿದರೆ,ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಶೆಟ್ಟಿ ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿ, ತರಬೇತಿಯ ಪ್ರಯೋಜನ ಪಡೆದುಕೊಂಡರು.












