ಆಹಾರವೇ ಔಷಧವೆಂದ ಆಯುರ್ವೇದ ವೈದ್ಯೆ ಡಾ.ವಾಣಿಶ್ರೀ ಐತಾಳ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮನೆಮದ್ದು ಸುಲಭವಾಗಿ ಸಿಗುತ್ತದೆ ಅಂದ ಮಾತ್ರಕ್ಕೆ ಅದನ್ನು ನಿರಂತರವಾಗಿ ಬಳಸುವುದು ಕೂಡ ಜೀವಕ್ಕೆ ಹಾನಿಕರ. ಆಧುನಿಕ ತಂತ್ರಜ್ಞಾನ ಹೆಚ್ಚಾಗುತ್ತಿರುವಾಗ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಮನುಷ್ಯನಿಗೆ ಆಹಾರವೇ ಔಷಧ. ಆಹಾರ ಶೈಲಿಯ ಬದಲಾವಣೆಯಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಆಹಾರ ಪದ್ಧತಿ ಹಿತ ಮಿತವಾಗಿರಬೇಕು. ಆಹಾರ ಪದ್ಧತಿಯ ಬಗ್ಗೆ ಅರಿತುಕೊಂಡು ವೈದ್ಯರ ಸಲಹೆಯಂತೆ ಆಹಾರ ಸೇವಿಸಿದರೆ ಆಹಾರವೇ ಔಷಧವಾಗುತ್ತದೆ ಎಂದು ಮಣಿಪಾಲದ ತಪೋವನ ಲೈಫ್ ಸ್ಪೇಸ್ ಪ್ರೈ.ಲಿ. ಇದರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ವಾಣಿಶ್ರೀ ಐತಾಳ್ ಹೇಳಿದರು.
ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ಮತ್ತು ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಕೋಟೇಶ್ವರ ಇದರ ಪ್ರಾಯೋಜಕತ್ವದಲ್ಲಿ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ಯಾಜ್ಞವಲ್ಕ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ‘ಸಸ್ಯಾಮೃತ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಪ್ರಕೃತಿಯೇ ನೀಡುವ ಆಹಾರ ಪದಾರ್ಥಗಳನ್ನು ಆಯಾ ಋತುಗಳಿಗೆ ಅನುಸಾರವಾಗಿ ಉಪಯೋಗಿಸಬೇಕು. ಮಳೆಗಾಲದ ಸಮಯದಲ್ಲಿ ಹಸಿವು ಹೆಚ್ಚಾಗಿದ್ದು, ಜೀರ್ಣಶಕ್ತಿ ಕಡಿಮೆ ಇರುತ್ತದೆ. ಇಂತಹ ದಿನಗಳಲ್ಲಿ ಪಾರಂಪರಿಕ ಆಹಾರ ಪದಾರ್ಥಗಳು ನಮ್ಮ ಬದುಕಿನಲ್ಲಿ ಸೇರಿದಾಗ ನಾವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‍ನ ಜಂಟಿ ಕಾರ್ಯನಿರ್ವಾಹಕ ಕೆ.ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‍ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿಯರಾದ ಸುಷ್ಮಾ ಅತಿಥಿಯನ್ನು ಪರಿಚಯಿಸಿದರು. ನಾಗರತ್ನ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲೆ ಡಾ.ರೂಪಾ ಶೆಣೈ ವಂದಿಸಿದರು.












