ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿ–2026 ಕಾರ್ಯಕ್ರಮವನ್ನು ಬೆಂಬಲಿಸಿ, ಯಶಸ್ವಿಗೊಳಿಸುವ ಉದ್ದೇಶದಿಂದ ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಇಂದು ಜನನುಡಿ ಬಳಗದ ವತಿಯಿಂದ ಸಿದ್ಧತಾ ಸಭೆ ನಡೆಸಿ, ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಜನನುಡಿ ಕಾರ್ಯಕ್ರಮದ ಸಂಘಟಕರಲ್ಲೊಬ್ಬರಾದ ಮುನೀರ್ ಕಾಟಿಪಳ್ಳ ಅವರು ಎರಡು ದಿನಗಳ ಕಾರ್ಯಕ್ರಮದ ರೂಪುರೇಷೆ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು.
ಜನನುಡಿ ಎಂಬುದು ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿ, ವೈಚಾರಿಕತೆ ಮತ್ತು ಜನಪರ ಚಿಂತನೆಗಳನ್ನು ಒಗ್ಗೂಡಿಸುವ ವಿಶಿಷ್ಟ ವೇದಿಕೆಯಾಗಿದೆ. ದೇಶದ ಯುವಜನರು ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಹಿರಿಯ ಸಾಹಿತಿಗಳು, ಚಿಂತಕರು, ಬರಹಗಾರರು, ಕಲಾವಿದರು, ಕವಿಗಳು ಹಾಗೂ ವಿವಿಧ ಜನಪರ ಹೋರಾಟಗಾರರು ಹಲವು ವೇದಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿಚಾರಗಳ ಕುರಿತು ಚರ್ಚೆ, ಸಂವಾದ ಮತ್ತು ಅಭಿವ್ಯಕ್ತಿಗೆ ಜನನುಡಿ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಜನನುಡಿ–2026ರ ಆಶಯ ಮತ್ತು ಉದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕುಂದಾಪುರ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಸಂಘಟಿತ ಪ್ರಯತ್ನ ನಡೆಸಲು ಸಭೆ ನಿರ್ಧರಿಸಿತು. ಅಲ್ಲದೆ, ಕಾರ್ಯಕ್ರಮದ ಯಶಸ್ಸಿಗೆ ಕುಂದಾಪುರದ ಕಾರ್ಯಕರ್ತರು ಸಂಘಟಕರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶಶಿಧರ ಹೆಮ್ಮಾಡಿ, ಗಣೇಶ್ ಮೆಂಡನ್, ರಾಮಕೃಷ್ಣ ಹೆರಳೆ, ಚಂದ್ರಶೇಖರ ವಿ., ಎಚ್. ನರಸಿಂಹ, ವಿನೋದ್ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಆಶಾ ಕರ್ವೆಲ್ಲೋ, ರವಿ ವಿ.ಎಂ. ಬಲ್ಕೀಸ್,ಸಚ್ಚಿದಾನಂದ, ತಿಮ್ಮಪ್ಪ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದು ಅಭಿಪ್ರಾಯ ನೀಡಿದರು.












