Category: ಸುದ್ದಿ

  • ಕೋಟತಟ್ಟು- ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮ

    ಕೋಟತಟ್ಟು- ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‍ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

    ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ವಿ. ಇಬ್ರಾಹಿಂಪುರ್ ಅವರು ಉದ್ಯೋಗ ಖಾತರಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

    ಮನೆ ಮನೆಗೆ ತೆರಳಿ ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಕರ ಪತ್ರ ನೀಡಿದರು. ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ವಿದ್ಯಾ ಪಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಸ್ ಪಿ ಭೇಟಿ

    ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಎಸ್ ಪಿ ಭೇಟಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ನಿಯೋಗ ಶನಿವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು.

    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಇದೇ ತಿಂಗಳು ಕುಂದಾಪುರ ಕ್ಷೇತ್ರ ಶಿಕ್ಷಣ ವಲಯದ 27 ಕನ್ನಡ ಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ನಾ ಕಂಡಂತೆ ಪೊಲೀಸ್’ ಎಂಬ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

    ಪೊಲೀಸರೆಂದರೆ ಭಯವಲ್ಲ, ಭರವಸೆ ಎಂಬ ಉದ್ದೇಶದಡಿ ವಿದ್ಯಾರ್ಥಿಗಳಲ್ಲಿ ಪೊಲೀಸರ ಬಗೆಗಿನ ಸದಾಭಿಪ್ರಾಯವನ್ನು ಅಕ್ಷರ ರೂಪದಲ್ಲಿ ಸಂಗ್ರಹಿಸುವ ಮೂಲಕ ಅವರ ಬರವಣಿಗೆ ಹಾಗೂ ಕನ್ನಡಾಭಿಮಾನ ಪ್ರದರ್ಶಿಸಲು ಸಂಘ ಈ ಕಾರ್ಯಕ್ರಮ ಆಯೋಜಿಸಿದೆ ಎಂದು ಉದ್ದೇಶದ ಬಗ್ಗೆ ಎಸ್ಪಿ ಅವರ ಗಮನಕ್ಕೆ ತರಲಾಯಿತು.

    ಕಾರ್ಯಕ್ರಮದ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಅವರು, ಪೊಲೀಸರ ಬಗ್ಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಅರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ. ಇದೊಂದು ಉತ್ತಮ ಕಾರ್ಯಕ್ರಮ. ಇಲಾಖೆ ನಿಮ್ಮೊಂದಿಗೆ ಕೈಜೋಡಿಸುತ್ತದೆ ಎಂದರು.

    ಈ ಸಂದರ್ಭ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀಜಾಡಿ, ಕೋಶಾಧಿಕಾರಿ ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಜೊತೆ ಕಾರ್ಯದರ್ಶಿಗಳಾದ ರಾಘವೇಂದ್ರ ಬಳ್ಕೂರು, ಯೋಗೀಶ್ ಕುಂಭಾಸಿ, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಾಂತ್ ಹೆಮ್ಮಾಡಿ, ಪತ್ರಕರ್ತ ಸಿಲ್ವೆಸ್ಟರ್ ಡಿಸೋಜಾ ಇದ್ದರು.

  • ಕುಂದಾಪುರ :ಕನ್ನಡ ನನ್ನ ಇನ್ನೊಂದು ತಾಯಿ ಎಂದ ನೆದರ್‍ಲ್ಯಾಂಡ್‍ನ ಮಾರ್ಜೆ

    ಕುಂದಾಪುರ :ಕನ್ನಡ ನನ್ನ ಇನ್ನೊಂದು ತಾಯಿ ಎಂದ ನೆದರ್‍ಲ್ಯಾಂಡ್‍ನ ಮಾರ್ಜೆ

    ಕುಂದಾಪುರ ಮಿರರ್ ‌ಸುದ್ದಿ…

    ಕುಂದಾಪುರ: ಕನ್ನಡ ನನ್ನ ಇನ್ನೊಂದು ತಾಯಿ ಎಂದು ನೆದರ್ ಲ್ಯಾಂಡಿನಿಂದ ಬಂದು ಕುಂದಾಪುರದಲ್ಲಿ 15 ವರ್ಷಗಳಿಂದ ಸೇಚೆ ಸಲ್ಲಿಸುತ್ತಿರುವ ಮಾರ್ಜೆ ವ್ಯಾನ್ ಡೆನ್ ಬ್ರಾಂಡ್ ಹೇಳಿದ್ದಾರೆ.

    ಅವರು ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ನಡೆಸಿದ ಕನ್ನಡ ರಾಜೋತ್ಸವದಲ್ಲಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ನಾನು ಕುಂದಾಪುರಕ್ಕೆ ಬಂದ ಮೊದಲಲ್ಲಿ ಹಿಂದಿ ಭಾಷೆ ಕಲಿಯಬೇಕೆಂದು ಬಯಸಿದ್ದೆ. ಆದರೆ ಇಲ್ಲಿ ಹಿಂದಿಗಿಂತ ಕನ್ನಡದ ಅಗತ್ಯತೆ ಹೆಚ್ಚಿದ್ದ ಕಾರಣ ಕನ್ನಡವನ್ನು ಕಲಿಯಲು ಮನಸ್ಸು ಮಾಡಿದೆ. ಅರ್ಥವಾಗದ ಮತ್ತು ಕಷ್ಟದ ಪದಗಳನ್ನು ಬರೆದಿಟ್ಟುಕೊಂಡು ಅದರ ಬಗ್ಗೆ ತಿಳಿದುಕೊಳ್ಳುತ್ತಿದ್ದೆ. ವ್ಯಾಕರಣಬದ್ದವಾಗಿ ಮಾತನಾಡಲು ಆಗದಿದ್ದರೂ ಇನ್ನೊಬ್ಬರಿಗೆ ಅರ್ಥವಾಗುವಷ್ಟರ ಮಟ್ಟಿಗೆ ಮಾತನಾಡಲು ಕಲಿತಿದ್ದೇನೆ ಎಂಬ ಹೆಮ್ಮೆ ನನಗಿದೆ. ಇದೊಂದು ಸುಂದರವಾದ ಮತ್ತು ಸುಲಭವಾದ ಭಾಷೆ ಆದ ಕಾರಣ ಕಲಿಯಲು ನನಗೇನು ಕಷ್ಟ ಅನಿಸಲಿಲ್ಲ ಎಂದ ಮಾರ್ಜೆ, ಕಳೆದ 15 ವರ್ಷಗಳಿಂದ ಕುಂದಾಪುರದ ಮಾನಸಜ್ಯೋತಿ ವಿಶೇಷ ಚೇತನ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಮಾತನಾಡಿ, ಮಾರ್ಜೆಯವರು ಕನ್ನಡ ಕಲಿತದ್ದು ಅವರಿಗಷ್ಟೇ ಹೆಮ್ಮೆಯಲ್ಲ ನಮಗೂ ಕೂಡ ಹೆಮ್ಮೆ ತರುವಂತದ್ದು. ಇದೊಂದು ಅರ್ಥಪೂರ್ಣವಾದ ಕನ್ನಡದ ಕಾರ್ಯಕ್ರಮ ಎಂದರು.

    ಈ ಸಂದರ್ಭ ಗೀತಗಾಯನ ತಂಡದ ಸದಸ್ಯರಿಂದ ನಾಡಗೀತೆ ಹಾಗೂ ಕನ್ನಡ ನುಡಿಯ ಬಗೆಗಿನ ಗೌರವವನ್ನು ಹೆಚ್ಚಿಸುವ ಹಿರಿಯ ಸಾಹಿತಿಗಳು ಬರೆದ ಗೀತೆಗಳನ್ನು ಹಾಡಲಾಯಿತು. ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್, ರೋ. ರವಿರಾಜ್ ಶೆಟ್ಟಿ, ಶೋಭಾ ಮದ್ಯಸ್ಥ, ಹೆಮ್ಮಾಡಿ ಜನತಾ ಪಿ.ಯು ಕಾಲೇಜಿನ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಉಪಸ್ಥಿತರಿದ್ದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರೂಪಿಸಿದರು. ತ್ರಿವಿಕ್ರಮ ಪೈ ವಂದಿಸಿದರು.

  • ಕುಂದಾಪುರ :ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ವಿದ್ಯಾರ್ಥಿನಿಲಯಗಳಿಗೆ ಭೇಟಿ, ಪರಿಶೀಲನೆ

    ಕುಂದಾಪುರ :ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ವಿದ್ಯಾರ್ಥಿನಿಲಯಗಳಿಗೆ ಭೇಟಿ, ಪರಿಶೀಲನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ, ಕ್ರೈಸ್ತ್ ಶಾಲೆಗಳು ಹಾಗೂ ಆಶ್ರಮ ಶಾಲೆಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

    ಅವರು ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಆಹಾರ ವಸ್ತುಗಳ ದಾಸ್ತಾನು ಕೇಂದ್ರ, ಸ್ನಾನಗೃಹ, ಶೌಚಾಲಯ, ವಿದ್ಯಾರ್ಥಿಗಳು ತಂಗುವ ಕೊಠಡಿ ಸೇರಿದಂತೆ ಅಲ್ಲಿನ ಸುತ್ತಮುತ್ತ ಪರಿಸರವನ್ನು ಪರಿಶೀಲಿಸಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ವಸತಿ ಗೃಹಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಪೂರಕ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಹಾಸ್ಟೆಲ್‌ನ ಸಿಬ್ಬಂದಿ ಕೊರತೆ, ಸ್ವಚ್ಛತಾಗಾರರಿಗೆ ನೀಡುತ್ತಿರುವ ಸೇವಾ ಹಣವು ಮಾಸಿಕ 1,000 ಹಾಗೂ ಮಕ್ಕಳಿಗೆ ಸಂಜೆಯ ವೇಳೆಯಲ್ಲಿ ಟ್ಯೂಷನ್ ನೀಡುತ್ತಿರುವ ಅಂಶಕಾಲಿಕ ಬೋಧಕರಿಗೆ ನೀಡುತ್ತಿರುವ ಗೌರವ ಧನವು 1000 ರೂ. ಇರುವ ಬಗ್ಗೆ ಮಾಹಿತಿ ಪಡೆದ ಅವರು, ಇವುಗಳನ್ನು ಸರಕಾರದ ಗಮನಕ್ಕೆ ತಂದು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

    ಇಂದು ಭೇಟಿ ನೀಡಿದ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ, ಊಟೋಪಚಾರದ ವ್ಯವಸ್ಥೆ ಉತ್ತಮ ರೀತಿಯಲ್ಲಿ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್‌ನಲ್ಲಿರುವ ನ್ಯೂನ್ಯತೆಗಳ ಬಗ್ಗೆ ಮಾಹಿತಿಯನ್ನು ಪಡೆದ ಅವರು, ಆಶ್ರಮ ಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆ ಹಾಗೂ ಗಣಿತದ ಲೆಕ್ಕಗಳನ್ನು ಮಾಡಲು ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರು, ಐ.ಟಿ.ಡಿ.ಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಾಕಪ್ಪ ಆರ್ ಲಮಾಣಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು

  • ಕನ್ನಡ ಶಾಲೆಯ ಮಹತ್ವ ಪಸರಿಸುವ ಕಾರ್ಯ ಶ್ಲಾಘನೀಯ – ಪುರುಷೋತ್ತಮ ದೇವಾಡಿಗ

    ಕನ್ನಡ ಶಾಲೆಯ ಮಹತ್ವ ಪಸರಿಸುವ ಕಾರ್ಯ ಶ್ಲಾಘನೀಯ – ಪುರುಷೋತ್ತಮ ದೇವಾಡಿಗ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಕನ್ನಡ ನಾಡು ನುಡಿ ಬಗ್ಗೆ ನಮ್ಮಲ್ಲಿ ಗೌರವ ಬೆಳೆಸಿಕೊಳ್ಳಬೇಕು ಅದರ ಜೊತೆಗೆ ನಾವು ಕಲಿತ ಕನ್ನಡ ಶಾಲೆಯ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಅಭಿವೃದ್ಧಿಗೆ ಜೊತೆಯಾಗಬೇಕು. ಕನ್ನಡ ಶಾಲೆಯ ಮಹತ್ವ ಸಾರುವ ವಿಡಿಯೋ ಸಾಕಷ್ಟು ಪ್ರಸಿದ್ಧಿ ಪಡೆದು ನಮ್ಮ ಶಾಲೆಯ ಹೆಸರಿನ ಕೀರ್ತಿ ಬೆಳಗಿಸಿದ ತಂಡಕ್ಕೆ ಅಭಿನಂದನೆಗಳು. ಇನ್ನಷ್ಟು ಕನ್ನಡ ಶಾಲೆಯ ಮಹತ್ವ ಸಾರುವ ಹೊಸ ಪ್ರಯತ್ನಗಳು ನಡೆಯುತ್ತಿರಲಿ ಎಂದು ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪುರುಷೋತ್ತಮ ದೇವಾಡಿಗ ಅವರು ಹೇಳಿದರು.

    ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶ್ರೀವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ-ಯಡ್ತಾಡಿ ವತಿಯಿಂದ ಇತ್ತೀಚಿಗೆ ಕನ್ನಡ ಶಾಲೆಯ ಮಹತ್ವ ಸಾರುವ “ನಾನು ಹರ್ಷಿಣಿ..” ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಾಂತಿ ಮೂಡಿಸಿದ ತಂಡದ ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸುರೇಂದ್ರ ಕೋಟ, ವಿದ್ಯಾರ್ಥಿಗಳಾದ ಕುಮಾರಿ ಪ್ರಣಿತಾ , ಪುನೀತಾ, ಅಧ್ವಿಕ್ ಎಸ್, ರೀತ್ವಿನ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

    ಈ ಸಂದರ್ಭದಲ್ಲಿ ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಜಯಂತಿ, ಹಾಗೂ ಶಿಕ್ಷಕ ವೃಂದ, ಶ್ರೀವಿನಾಯಕ ಯುವಕ ಮಂಡಲದ ಸದಸ್ಯರು, ಜನನಿ ಕನ್ನಡ ಸಂಘ ಸಾೈಬ್ರಕಟ್ಟೆಯ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿರಿದ್ದರು.

  • ಕೋಟ :ಸಂಜನಾ ಆಚಾರ್ಯ ಮೂಡುಗಿಳಿಯಾರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಕೋಟ :ಸಂಜನಾ ಆಚಾರ್ಯ ಮೂಡುಗಿಳಿಯಾರು ರಾಷ್ಟ್ರ ಮಟ್ಟಕ್ಕೆ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಚಿಕ್ಕೋಡಿಯ ಮೂಡಲಗಿಯಲ್ಲಿ ನಡೆದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ರಾಜ್ಯ ಮಟ್ಟದ 14ರ ವಯೋಮಾನದ ಒಳಗಿನವರ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮೈಸೂರು ವಿಭಾಗ ಮಟ್ಟವನ್ನು ಪ್ರತಿನಿಧಿಸಿದ ಕೋಟ ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆ 8ನೇ ತರಗತಿ ವಿದ್ಯಾರ್ಥಿನಿ ಸಂಜನಾ ಆಚಾರ್ಯ ಮೂಡುಗಿಳಿಯಾರು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಶಿಭೂಷಣ ಆಚಾರ್ಯ ಮತ್ತು ಯಶೋಧಾ ಆಚಾರ್ಯ ದಂಪತಿಗಳ ಪುತ್ರಿಯಾಗಿದ್ದು ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

  • ಕೋಟದಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಾಗಾರ

    ಕೋಟದಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಮತ್ತು ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ “ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಾಗಾರ ಇತ್ತೀಚಿಗೆ ಕೋಟ ಸಹಕಾರಿ ವ್ಯವಸಾಯಕ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು.

    ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ. ಸಿ. ಗೀತಾ ಇವರು ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಾಗಾರವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

    ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ಅಧ್ಯಕ್ಷ ದೇವಪ್ಪ ಪಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ರೋಟರಿ ಜಿಲ್ಲೆ 3182, ವಲಯ-2ರ ಸಹಾಯಕ ಗವರ್ನರ್ ಪಿಎಚ್‍ಎಫ್ ನರಸಿಂಹ ಪ್ರಭು, ಉಪಸ್ಥಿತರಿದ್ದರು.

    ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ಇದರ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿಗಳಾದ ಡಾ. ನವೀನ ಇವರು ಮಣ್ಣು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದರು.

    ಸಂಘದ ಕಾರ್ಯವ್ಯಾಪ್ತಿಯ ಕೃಷಿಕ ಭಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಧನ್ಯವಾದ ಸಮರ್ಪಿಸಿದರು. ಸಂಘದ ಸಿಬ್ಬಂದಿಗಳಾದ ಸಂಧ್ಯಾ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿ ಶಾಲಿನಿ ಹಂದೆ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ: ಆತ್ಮಸಾಕ್ಷಿಯನ್ನು ಅರ್ಥೈಸಿಕೊಂಡರೆ ಭ್ರಷ್ಟಾಚಾರ ನಿಗ್ರಹ ಸಾಧ್ಯ – ಅಬ್ದುಲ್ ರಹೀಮ್ ಹುಸೇನ್‌ ಶೇಖ್‌.

    ಕುಂದಾಪುರ: ಆತ್ಮಸಾಕ್ಷಿಯನ್ನು ಅರ್ಥೈಸಿಕೊಂಡರೆ ಭ್ರಷ್ಟಾಚಾರ ನಿಗ್ರಹ ಸಾಧ್ಯ – ಅಬ್ದುಲ್ ರಹೀಮ್ ಹುಸೇನ್‌ ಶೇಖ್‌.

    ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023 – ಕಾನೂನು ಮಾಹಿತಿ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಭ್ರಷ್ಟಾಚಾರದ ಬೇರು ಎಲ್ಲೆಡೆಯಲ್ಲಿಯೂ ಪಸರಿಸಿದೆ. ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯನ್ನು ಅರ್ಥ ಮಾಡಿಕೊಂಡರೆ ಭ್ರಷ್ಟಾಚಾರ ನಿಗ್ರಹ ಸಾಧ್ಯ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್‌ ಶೇಖ್‌ ಹೇಳಿದರು.

    ಅವರು ಶುಕ್ರವಾರ ಬೆಳಿಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ (ಲ) ಕುಂದಾಪುರ ಅಭಿಯೋಗ ಇಲಾಖೆ ಹಾಗೂ ತಾಲೂಕು ಆಡಳಿತ ಕುಂದಾಪುರ ಇವರ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ 2023 ಅಂಗವಾಗಿ ಹಮ್ಮಿಕೊಂಡಿರುವ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ರಾಜು ಎನ್ ಮಾತನಾಡಿ, ಸಮಾಜದ ಪ್ರತಿಯೊಬ್ಬ ನಾಗರೀಕನೂ ಕಾನೂನು ಮಾಹಿತಿಗಳ ಅರಿವು ಹೊಂದಬೇಕು. ಲಂಚ ಸ್ವೀಕರಿಸುವಷ್ಟೇ ಕೊಡುವವನೂ ಅಪರಾಧಿಯಾಗುತ್ತಾನೆ. ಭ್ರಷ್ಟಾಚಾರ ನಿರ್ಮೂಲನೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದರು.

    ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ರೋಹಿಣಿ ಡಿ.,
    ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ತಹಸೀಲ್ದಾರ್ ಶೋಭಾ ಲಕ್ಷ್ಮಿ, ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ತಾ.ಪಂ. ಕಾರ್ಯನಿರತವಹಣಾಧಿಕಾರಿ ಶಶಿಧರ ಕೆ.ಜಿ., ಸಹಾಯಕ ಸರ್ಕಾರೀ ಅಭಿಯೋಜಕ ಉದಯ್‌ ಕುಮಾರ್ ಬಿ.ಎ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ, ಶ್ರೀನಾಥ ರಾವ್‌ ಉಪಸ್ಥಿತರಿದ್ದರು.

    ವಂಡ್ಸೆ ಕಂದಾಯ ಅಧಿಕಾರಿ‌ ರಾಘವೇಂದ್ರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರ :ನಿರೀಕ್ಷಾ ದಿನಕರ ಶೆಟ್ಟಿ ಮುಂಬಾರು ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ

    ಕುಂದಾಪುರ :ನಿರೀಕ್ಷಾ ದಿನಕರ ಶೆಟ್ಟಿ ಮುಂಬಾರು ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಕಾವ್ರಾಡಿ ಗ್ರಾಮದ ಪಡುವಾಲ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಿರೀಕ್ಷಾ ದಿನಕರ ಶೆಟ್ಟಿ ಅವರಿಗೆ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಲಭಿಸಿದೆ.

    ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ನಿರೀಕ್ಷಾ ಮನೆಯಲ್ಲಿಯೇ ಗುರುವಿಲ್ಲದೆ ಯೋಗ ಶಿಕ್ಷಣವನ್ನು ಸ್ವ-ಪ್ರಯತ್ನದಿಂದ ಕಲಿತು ಕುಂದಾಪುರ ಭಾಗದಲ್ಲಿ ಹಲವು ಯೋಗ ಪ್ರದರ್ಶನ ನೀಡಿ, ರಾಜಧಾನಿ ಬೆಂಗಳೂರಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದವರು.

    ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ನಡೆದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ನಿರೀಕ್ಷಾ, ದಿನಕರ ಶೆಟ್ಟಿ ಮುಂಬಾರು, ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ನಿರೀಕ್ಷಾ ಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿ ಅವರಪುತ್ರಿ.

  • ಕೋಟ :ಮನುಜ ಮತ ವಿಶ್ವಪಥ ನಮ್ಮ ಧ್ಯೇಯವಾಗಬೇಕು : ಕೆ. ಜಯಪ್ರಕಾಶ್ ಹೆಗ್ಡೆ

    ಕೋಟ :ಮನುಜ ಮತ ವಿಶ್ವಪಥ ನಮ್ಮ ಧ್ಯೇಯವಾಗಬೇಕು : ಕೆ. ಜಯಪ್ರಕಾಶ್ ಹೆಗ್ಡೆ

    ವರುಣತೀರ್ಥ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ, ರಾಜ್ಯೋತ್ಸವ ಪುರಸ್ಕಾರ ಪ್ರದಾನ, ಸಾಧಕರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಧ್ಯೇಯ ಕುವೆಂಪು ಸಾರಿದ “ಮನುಜ ಮತ ವಿಶ್ವ ಪಥ”ವಾಗಬೇಕಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

    ಅವರು ಕನ್ಮಡ ರಾಜ್ಯೋತ್ಸವ ಪ್ರಯುಕ್ತ ಕೋಟ ವರುಣತೀರ್ಥ ವೇದಿಕೆ ಇವರ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದ “ನಿರಂತರ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದ್ದು ಎಂದ ಅವರು, ಉದ್ಯೋಗಕ್ಕಾಗಿ ಹೊರರಾಜ್ಯ, ವಿದೇಶಗಳಿಗೆ ಹೋದಾಗಲೂ ಮಾತೃಭಾಷೆ ಕನ್ನಡವನ್ನು ಮರೆಯದೇ ಇರುವ ಸಂಪ್ರದಾಯವನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದವರು ಹೇಳಿದರು.

    ಮಣೂರು ಪೆಡುಕೆರೆ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಗಂಗೊಳ್ಳಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಸುಜಯೀಂದ್ರ ಹಂದೆಯವರನ್ನು ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

    ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಚಲನ ಚಿತ್ರ ನಟ ರಾಘವೇಂದ್ರ ಡಿ.ಜಿ.ತೀರ್ಥಳ್ಳಿ, ಈಜು ಪಟು ಮಾಸ್ಟರ್ ದಿಗಂತ್ ಆರ್. ಪೂಜಾರಿ ಕೋಟತಟ್ಟು, ಕನ್ಮಡದ ಕಟ್ಟಾಭಿಮಾನಿ ಪಾರಂಪಳ್ಳಿ ರಾಮಣ್ಣ, ಕೋಟ ಶ್ರೀ ಹಿರೇಮಹಾಲಿಂಗೆಶ್ವರ ದೇವಸ್ಥಾನ ಆನಂದ ದೇವಾಡಿಗ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಸತೀಶ್ ಕುಂದರ್, ಕೋಟೇಶ್ವರ ವರದರಾಜ ಶೆಟ್ಟಿ ಪದವಿ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್, ವರುಣ ತೀರ್ಥ ವೇದಿಕೆಯ ಅಧ್ಯಕ್ಷ ಉದಯ ದೇವಾಡಿಗ, ಲತಾ ಹೋಟೆಲ್ ಮಾಲಕ ವೆಂಕಟೇಶ ಪ್ರಭು, ಜಿ.ಎಸ್.ಬಿ.ಹಿತರಕ್ಷಣಾ ವೇದಿಕೆಯ ಕೋಟ ಸತೀಶ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.

    ವರುಣತೀರ್ಥ ವೇದಿಕೆಯ ಗೌರವಾಧ್ಯಕ್ಷ ಉದಯ ದೇವಾಡಿಗ ಪ್ರಾಸ್ತಾವಿಕ ಮಾತುಗಳ್ನಾಡಿದರು. ಚಂದ್ರ ಆಚಾರ್ ಕೋಟ‌ ಸ್ವಾಗತಿಸಿದರು. ರವಿ ಬನ್ನಾಡಿ ಪ್ರಾರ್ಥಿಸಿದರು.ಮಂಜುನಾಥ್ ಕಾರ್ತಟ್ಟು ಕಾರ್ಯಕ್ರಮ ನಿರೂಪಿಸಿದರು.