Category: ರಾಜಕೀಯ

  • ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್ ಅಪಾರ ಕೊಡುಗೆ ನೀಡಿದ್ದಾರೆ-ಗೋಪಾಲ ಪೂಜಾರಿ

    ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಆಸ್ಕರ್ ಅಪಾರ ಕೊಡುಗೆ ನೀಡಿದ್ದಾರೆ-ಗೋಪಾಲ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ:
    ಆಸ್ಕರ್ ಫೆರ್ನಾಂಡೀಸ್ ಅವರು ನನಗೆ ಶಾಸಕನಾಗಲು ಅವಕಾಶ ಮಾಡಿಕೊಟ್ಟಿದ್ದು, ನನ್ನೊಂದಿಗೆ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಬೈಂದೂರು ಕ್ಷೇತ್ರವನ್ನು ಮಾದರಿಯನ್ನಾಗಿಸುವಲ್ಲಿ ಆಸ್ಕರ್ ಅವರ ಶ್ರಮವೂ ಅಪಾರವಾದುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.


    ಅವರು ಸೋಮವಾರ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ದಿ| ಆಸ್ಕರ್ ಫೆರ್ನಾಂಡೀಸ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

    ಉಡುಪಿ ಜಿಲ್ಲೆ, ರಾಜ್ಯ, ರಾಷ್ಟ್ರಕ್ಕೆ ಅವರು ತನ್ನದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪಕ್ಷ ಕಟ್ಟುವ ಹಾಗೂ ಸಾಕಷ್ಟು ಯುವ ನಾಯಕರನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಜಾತ ಶತ್ರುವಿನಂತೆ ಬದುಕಿದ್ದು, ಅವರೋರ್ವ ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ನಾಯಕನಾಗಿದ್ದರು ಎಂದರು.

    ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಈ ನಾಡು ಕಂಡ ಅಪರೂಪದ ರಾಜಕಾರಣಿಯಾದ ಆಸ್ಕರ್ ಅವರು ಬೈಂದೂರಿನಲ್ಲಿ ಹಿಂದೆ ಉಡ್ಡಯನ ಕೇಂದ್ರವಾಗುತ್ತಿರುವುದಕ್ಕೆ ಜನರ ವಿರೋಧಕ್ಕೆ ಮನ್ನಣೆ ನೀಡಿ, ಅದನ್ನು ಬೇರೆಡೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

    ಆಸ್ಕರ್ ಅವರು ಪಕ್ಷಾತೀತ ವ್ಯಕ್ತಿ. ಶ್ರೇಷ್ಠ ಆಡಳಿಗಾರ, ಉತ್ತಮ ಸಹಕಾರಿ, ಎಲ್ಲರು ಮೆಚ್ಚಿಕೊಳ್ಳುವ ವ್ಯಕ್ತಿತ್ವ ಅವರದು ಎನ್ನುವುದಾಗಿ ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

    ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಪಕ್ಷದ ನಾಯಕರಾದ ಮಂಜುನಾಥ್ ಹೆಬ್ಬಾರ್, ಪಿ.ಎಲ್. ಜೋಸ್, ಅಶೋಕ್ ಶೆಟ್ಟಿ, ಎಸ್. ಕುಮಾರ್, ಲಿಂಗಪ್ಪ, ಲೋಕೇಶ್ ಖಾರ್ವಿ ಅವರಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಕಾಂಗ್ರೆಸ್ ಮುಖಂಡರಾದ ವಾಸುದೇವ ಯಡಿಯಾಳ್, ರಘುರಾಮ್ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಸಂತೋಷ್ ಶೆಟ್ಟಿ ಹಕ್ಲಾಡಿ, ನಾಗರಾಜ ಗಾಣಿಗ, ಶೇಖರ್ ಪೂಜಾರಿ, ಮತ್ತಿತರರು ನುಡಿನಮನ ಸಲ್ಲಿಸಿದರು.

    ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ ಕುಮಾರ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

  • ಭತ್ತದ ಬೆಂಬಲ ಬೆಲೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ – ಸಚಿವೆ ಶೋಭಾ ಕರಂದ್ಲಾಜೆ

    ಭತ್ತದ ಬೆಂಬಲ ಬೆಲೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ – ಸಚಿವೆ ಶೋಭಾ ಕರಂದ್ಲಾಜೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ:
    ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಶಿಬಿರ

    ಕೋವಿಡ್ ವಾಕ್ಸಿನ್‍ಗೆ ಅಮೇರಿಕಾ, ಯುರೋಪಿಯನ್ ದೇಶಗಳನ್ನು ನೋಡದೆ ಭಾರತದಲ್ಲಿಯೇ ಸ್ವದೇಶಿ ನಿರ್ಮಿತ ಲಸಿಕೆಯನ್ನು ಕಂಡು ಹಿಡಿದು ಸುಮಾರು 70 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದರ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ನವಂಬರ್ ಅಂತ್ಯದೊಳಗೆ ದೇಶದಲ್ಲಿ ಎಲ್ಲರಿಗೂ ವಾಕ್ಸಿನ್ ನೀಡುವ ಗುರಿ ಇದೆ. ಹೀಗೆ ನರೇಂದ್ರ ಮೋದಿಯವರು ತನಗಾಗಿ ಏನು ಮಾಡದೇ ಬಡ ಜನರ ಅಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಸೇವಾ ಕಾರ್ಯಗಳನ್ನು ಇಷ್ಟ ಪಡುವ ಪ್ರಧಾನಿಯವ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನಾರ್ಹ ಕಾರ್ಯವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.


    ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ, ಹಾಗೂ ಕುಂದಾಪುರ ಮಹಿಳಾ ಮೋರ್ಚಾ ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಮತ್ತು ಐಸ್ಸಿಲರ್ ವಿಷನ್ ಫೌಂಡೇಶನ್ ಇವರ ಸಹಯೋಗದಲ್ಲಿ ಕೋಟದ ಮಾಂಗಲ್ಯ ಸಭಾ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ದೇಶದ ಜನತೆಗಿಂದು ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಕಾರ್ಯ ನಡೆದಿದೆ. ಬಡ ಜನರಿಗೆ, ರೈತರಿಗೆ ಏನು ಅವಶ್ಯಕತೆ ಇದೆ ಎನ್ನುವುದನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಲಾಗುತ್ತಿದೆ. ಪಡಿತರ, ಅಡುಗೆ ಅನಿಲ, ಔಷಧ, ವಿದ್ಯುತ್ ಹೀಗೆ ವಿವಿಧ ಯೋಜನೆಯಡಿ ನೀಡಲಾಗುತ್ತಿದೆ. ಸೌಲಭ್ಯಗಳು ಇವತ್ತು ಆರ್ಹ ಫಲಾನುಭವಿಗಳಿಗೆ ಸುಲಭವಾಗಿ ತಲುಪುತ್ತಿದೆ. ಸೇವಾಕಾರ್ಯವನ್ನೇ ಇಷ್ಟಪಡುವ ಮಹಾನ್ ಪುರುಷರ ಜನ್ಮದಿನಾಚರಣೆಯಂದು ಇಂಥಹ ಕಾರ್ಯಕ್ರಮ ಆಯೋಜಿಸುವುದು ಅರ್ಥಪೂರ್ಣವಾಗಿದೆ ಎಂದರು.

    ಮಹಿಳೆಯರು ಇವತ್ತು ತಮಗೆ ಆರೋಗ್ಯ ಸಮಸ್ಯೆ ಕಾಡಿದಾಗ ಪ್ರಾರಂಭದಲ್ಲಿ ಹೇಳುವುದಿಲ್ಲ. ಮನೆಯ ಎಲ್ಲರ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಿ ಮಹಿಳೆ ತನ್ನ ಆರೋಗ್ಯದ ಬಗ್ಗೆ ಗಮನ ಹರಿಸದಿರುವುದು ಕೆಲವು ಸಂದರ್ಭದಲ್ಲಿ ಕಂಡು ಬರುತ್ತದೆ. ಸಮಸ್ಯೆ ಮತ್ತಷ್ಟು ಉಲ್ಭಣಿಸಿದ ಬಳಿಕ ಪಶ್ಚಾತ್ತಾಪ ಪಡುವುದಕ್ಕಿಂತ ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

    ಕುಂದಾಪುರ ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರಿನ ಪ್ರಭಾರಿ ಉದಯಕುಮಾರ್, ರಾಜ್ಯ ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಮಂಡಳದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಶೆಟ್ಟಿ, ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್. ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಅಜಿತ್, ರಾಘವೇಂದ್ರ, ಡಾ.ಶಮಂತ್ ಉಪಸ್ಥಿತರಿದ್ದರು.

    ರೂಪ ಪೈ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮೋರ್ಚದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಅನಿತಾ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು.

    ಭತ್ತದ ಬೆಂಬಲ ಬೆಲೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ
    ಭತ್ತದ ಬೆಂಬಲ ಬೆಲೆಯ ಗೊಂದಲ ಬಗ್ಗೆ ಪತ್ರಕರ್ತರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡುತ್ತದೆ. ಆದರೆ ಅದನ್ನು ಯಾವ ಅವಧಿಯಿಂದ ಯಾವ ಅವಧಿಯ ತನಕ ನೀಡಬೇಕು ಎನ್ನುವುದನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡುತ್ತದೆ. ಈ ಬಗ್ಗೆ ನಾನು ಇವತ್ತೆ ರಾಜ್ಯದ ಕೃಷಿ ಸಚಿವರಲ್ಲಿ ಮಾತನಾಡುತ್ತೇನೆ. ಕೂಡಲೇ ಘೋಷಣೆಯಾದರೆ ಈ ಭಾಗದ ಕೃಷಿಕರಿಗೆ ಅನುಕೂಲವಾಗುತ್ತದೆ ಎಂದರು.

  • ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ನೀಡುವುದು ಬಿಜೆಪಿಯ ಹಿರಿಮೆ- ಸಚಿವ ಸುನಿಲ್ ಕುಮಾರ್

    ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ನೀಡುವುದು ಬಿಜೆಪಿಯ ಹಿರಿಮೆ- ಸಚಿವ ಸುನಿಲ್ ಕುಮಾರ್

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು:
    ಪೋಸ್ಟರ್ ಹಚ್ಚುವ, ಬ್ಯಾನರ್ ಕಟ್ಟಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಮೂರು ಬಾರಿ ಶಾಸಕನಾಗಿಯೂ ಹಾಗೂ ಇದೀಗ ಸಚಿವ ಸ್ಥಾನ ನೀಡಿರುವುದು ಬಿಜೆಪಿ ಪಕ್ಷದಲ್ಲಿ ಮಾತ್ರವೇ ಸಾಧ್ಯ. ಮುಖ್ಯಮಂತ್ರಿಗಳು ಎರಡು ದೊಡ್ಡ ಇಲಾಖೆ ನೀಡಿದ್ದು ಈ‌ ಮೂಲಕ ರಾಜ್ಯ, ಜಿಲ್ಲೆಗೆ ಒಳಿತು ಮಾಡುವ ಜೊತೆಗೆ ಇಲಾಖೆಯಲ್ಲಿ ಜನಪರವಾದ ಹೊಸತನದ ಆಡಳಿತ ನೀಡುವ ಗುರಿ ಇದೆ ಒಂದು ಎಂದು ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು.

    ಅವರು ಸೋಮವಾರದಂದು ಬೈಂದೂರು ಬಿಜೆಪಿ ಮಂಡಲ ಕಛೇರಿ ಭೇಟಿ ಮಾಡಿದ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.


    ಬೈಂದೂರು ಹಾಗೂ ಕಾರ್ಕಳ ಭಾಗದ ಜನರ ಭಾವನೆ ಒಂದೇ ಆಗಿದೆ. ಜನಸಾಮನ್ಯರ ನಾಡಿಮಿಡಿತ ಅರಿತು ಕೆಲಸ ಮಾಡಲಾಗುತ್ತದೆ. ಕಾರ್ಕಳ ಕ್ಷೇತ್ರದ ಅಭಿವೃದ್ಧಿ ಮೂರು ಅವಧಿಯಿಂದಲೂ ನಡೆಯುತ್ತಿದ್ದು ಬೈಂದೂರು ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಬಹುತೇಕ ಅಭಿವೃದ್ದಿ ಕಾರ್ಯ ನಡೆಯುತ್ತಿರುವುದು ಶಾಸಕರ ತುಡಿತ ತೋರಿಸುತ್ತದೆ. ಜಿಲ್ಲೆಯಲ್ಲಿ ಮೂವರು ಸಚಿವರಿದ್ದು ಕಾಲಮಿತಿಯೊಳಗೆ ಜಿಲ್ಲೆಯ ಶಾಶ್ವತ ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.

    ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ವಿದ್ಯುತ್ ಪಡೆಯುವಲ್ಲಿ ಸ್ಥಳೀಯ ಸಂಸ್ಥೆಗಳ ನಿರಪೇಕ್ಷಣಾ ಪತ್ರ ಬೇಕಿತ್ತು.ಆದರೆ ಇನ್ನು ಮುಂದೆ ವಿದ್ಯುತ್ ಪಡೆಯಲು ಯಾವುದೇ ಸ್ಥಳೀಯ ಸಂಸ್ಥೆಯ ನಿರಪೇಕ್ಷಣಾ ಪತ್ರ ಬೇಡ. ಈ ಬಗ್ಗೆ ವಾರದೊಳಗೆ ಹೊಸ ಸುತ್ತೋಲೆ ಸದ್ಯದಲ್ಲೆ ಜಾರಿಯಾಗಲಿದೆ.ಇದರಿಂದ ಸುಮಾರು 2.5 ಲಕ್ಷ ಕುಟುಂಬಗಳಿಗೆ ವಿದ್ಯುತ್ ಪಡೆಯಲು ನೆರವಾಗುತ್ತದೆ. ಲೋ‌ ವೋಲ್ಟೇಜ್ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಕೊಲ್ಲೂರು ಸಬ್‌ಸ್ಟೇಷನ್ ಅನುಷ್ಠಾನಕ್ಕೆ ಇಲಾಖೆ ಸಿದ್ಧವಿದ್ದು ಅರಣ್ಯ ಇಲಾಖೆ ಸಮಸ್ಯೆ ಹಿನ್ನೆಡೆ ನೀಡುತ್ತಿದ್ದು ಈ ಬಗ್ಗೆ ಶೀಘ್ರ ಬೆಂಗಳೂರಿನಲ್ಲಿ ಸಭೆ ಕರೆದು ಕ್ರಮಕೈಗೊಳ್ಳಲಾಗುತ್ತದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಕಾಂಗ್ರೆಸ್ ಸರಕಾರದ ಬಳುವಳಿಯಾಗಿದ್ದು ಲಕ್ಷಾಂತರ ಮನೆಗಳಿಗೆ ಸಮಸ್ಯೆಯಿದೆ. ರಾಜ್ಯದಲ್ಲಿ 1 ತಿಂಗಳಿನೊಳಗೆ ಈ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು.

    ಸುನೀಲ್ ಕುಮಾರ ಪವರ್ ಮಂತ್ರಿ..
    ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಕ್ಷೇತ್ರವು ಕಳೆದ 70 ವರ್ಷದಿಂದ ಕಾಣದ ಅಭಿವೃದ್ದಿ ಕಾರ್ಯ ಈ ಅವಧಿಯಲ್ಲಿ ನಡೆದಿದೆ. ಫವರ್ ಮಂತ್ರಿಯಾಗಿರುವ ಸುನೀಲ್ ಕುಮಾರ್ ಕ್ರಿಯಾಶೀಲ‌ವ್ಯಕ್ತಿ. ಅವರು‌ ಎಲ್ಲರ ಮನೆ ಬೆಳಗುವ ಫವರ್ ಮಿನಿಸ್ಟರ್. ಸುನೀಲ ಕುಮಾರ್ ಸಚಿವರಾಗಿರುವುದು ಬೈಂದೂರು ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಸಹಕಾರಿಯಾಗಿದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬೈಂದೂರು ಪಟ್ಟಣ ಪಂಚಾಯತ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಘವೇಂದ್ರ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಸಚಿವರನ್ನು ಬಿಜೆಪಿ ಪಕ್ಷದ ವತಿಯಿಂದ ಸಮ್ಮಾನಿಸಲಾಯಿತು. ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಪೂಜಾರಿ ಜಡ್ಡು ವಂದಿಸಿದರು.

  • ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾಗಿ ಕಿರಣ್ ಕೊಡ್ಗಿ ನೇಮಕ

    ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾಗಿ ಕಿರಣ್ ಕೊಡ್ಗಿ ನೇಮಕ

    ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ  ಕಿರಣ್ ಕೊಡ್ಗಿ ಅವರನ್ನು ನೇಮಕಗೊಳಿಸಿದೆ.
    ಅಮಾಸೆಬೈಲು ಕಿರಣ್ ಕೊಡ್ಗಿ ಅವರು ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ
  • ಕುಂದಾಪುರ: ಜಲಸಿರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ

    ಕುಂದಾಪುರ: ಜಲಸಿರಿ ಯೋಜನೆ ಕಾಮಗಾರಿ ಆಮೆಗತಿಯಲ್ಲಿ

    ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆಯಲ್ಲದೇ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಪುರಸಭೆ ಮಹತ್ವಾಕಾಂಕ್ಷಿ ಯೋಜನೆ ನಿರಂತರ ನೀರು ಪೂರೈಕೆ ಕಾಮಗಾರಿ ಕುರಿತು ವಿವರಣೆ ನೀಡಬೇಕಿದ್ದ ಅಧಿಕಾರಿ ಸಭೆಗೆ ಗೈರಾಗಿದ್ದಾರೆ. ಅವರಿಲ್ಲದೆ ಈ ಯೋಜನೆ ಕುರಿತು ಚರ್ಚೆ ಅಸಾಧ್ಯ. ಅಧಿಕಾರಿ ಸಮಯ ಪಡೆದು ಮತ್ತೊಮ್ಮೆ ಸಭೆ ಕರೆಯಬೇಕು. ಅಲ್ಲಿಯ ತನಕ ನಡೆಯುತ್ತಿರುವ ಕಾಮಗಾರಿಯೂ ಬಂದ್ ಮಾಡಬೇಕು ಎಂದು ಹಿರಿಯ ಸದಸ್ಯ ಮೋಹನ್‍ದಾಸ್ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.
    ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ  ಕುಡಿಯುವ ನೀರು ಹಾಗೂ ಒಳ ಚರಂಡಿ ಯೋಜನೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
    ವಾರಗಳ ಮೊದಲೇ ಅಧಿಕಾರಿಗಳಿಗೆ ಸಭೆಯ ಬಗ್ಗೆ ಮಾಹಿತಿ ನೀಡಿದರೂ ಸಭೆಗೆ ಬಾರದೆ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಚುನಾಯಿತ ಸದಸ್ಯರ ಮಾತಿಗೆ ಅಧಿಕಾರಗಳು ಮನ್ನಣೆ ಕೊಡೋದಿಲ್ಲ ಎಂದಾದರೆ ಸಾಮಾನ್ಯ ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೆ. ಇದು ಸುದೀರ್ಘ ಚರ್ಚೆ ನಡೆಯಬೇಕಾದ ವಿಚಾರ. ಸಾಮಾನ್ಯ ಸಭೆಯಲ್ಲಿ ಸಮಯಾವಕಾಶದ ಕೊರತೆ ಇರುವುದರಿಂದ ಅಲ್ಲಿ ನಮ್ಮ ದಿಕ್ಕು ತಪ್ಪಿಸಿ ನಡೆಯುತ್ತಾರೆ. ಸುದೀರ್ಘ ಚರ್ಚೆ ನಡೆಸುವುದಕ್ಕೋಸ್ಕರವಾಗಿಯೇ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ ಹಠಕ್ಕೆ ಬಿದ್ದು ನಾವೆಲ್ಲರೂ ಸೇರಿ ವಿಶೇಷ ಸಭೆಯನ್ನು ನಡೆಸಲು ಹೇಳಿದ್ದೇವೆ. ಹಲವು ವರ್ಷಗಳ ಕನಸಿದು. ಜನರಿಗೆ 24 ಗಂಟೆಯೂ ಕುಡಿಯುವ ನೀರು ಸಿಗಬೇಕೆನ್ನುವುದು. ಮೇಲಾಧಿಕಾರಿಗಳು ಸಭೆಗೆ ಎಲ್ಲಿಯ ತನಕ ಬರುವುದಿಲ್ಲವೋ ಅಲ್ಲಿಯ ತನಕ ಕಾಮಗಾರಿ ನಿಲ್ಲಿಸಲು ಆದೇಶ ನೀಡಿ ಎಂದು ಅಧ್ಯಕ್ಷರಿಗೆ ಸದಸ್ಯ ಮೋಹನ್‍ದಾಸ್ ಶೆಣೈ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಗಿರೀಶ್ ಜಿ.ಕೆ, ಶೇಖರ ಪೂಜಾರಿ, ದೇವಕಿ ಸಣ್ಣಯ್ಯ ಸಭೆಗೆ ಅರೆಬರೆ ಮಾಹಿತಿ ನೀಡಿದರೆ ಆಗೋದಿಲ್ಲ. ಮೇಲಾಧಿಕಾರಿಗಳ ಗೈರಿನಲ್ಲಿ ಜಲಸಿರಿ ಯೋಜನೆ ಚರ್ಚೆಯೇ ಅಪ್ರಸ್ತುತ. ಅಧಿಕಾರಿಗಳು ಬಂದ ನಂತರ ಚರ್ಚೆ ಮಾಡುವಂತೆ ಒತ್ತಾಯಿಸಿದರು. ಬಳಿಕ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಅಧಿಕಾರಿಗಳು ಬಂದ ಮೇಲೆ ಮತ್ತೊಮ್ಮೆ ಸಭೆ ನಡೆಸುವ ಘೋಷಣೆ ಮಾಡಿದ ನಂತರ ಜಲಸಿರಿ ಯೋಜನೆ ಚರ್ಚೆ ಕೈ ಬಿಡಲಾಯಿತು. ಸದಸ್ಯ ಚಂದ್ರಶೇಖರ್ ಖಾರ್ವಿ ಮುಂದಿನ ಸಭೆ ನಡೆಯುವ ತನಕ ಕಾಮಗಾರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದರು.
    ಸಭೆಯಲ್ಲಿ ವಾಕ್ಸಮರ
    ಕುಂದಾಪುರ ಫ್ಲೈ ಓವರ್ ಕಾಮಗಾರಿ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಆಡಳಿತ ಸದಸ್ಯರು ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸದಸ್ಯ ಚಂದ್ರಶೇಖರ ಖಾರ್ವಿ ಫ್ಲೈ ಓವರ್ ಕಾಮಗಾರಿ ನಿಧಾನಗತಿಗೆ ಶಾಸಕರು, ಸಂಸದರು ನೇರ ಕಾರಣ ಎಂದು ಅರೋಪಿಸಿದ ಬೆನ್ನಲ್ಲೇ ಆಡಳಿತ ಪಕ್ಷದ ಸದಸ್ಯರು ಒಂದುಕ್ಷಣ ಕೆಂಡಾಮಂಡಲರಾದರು. ಈವೇಳೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ದೊರಕಿದೆ. ಅಂದು ಸುಮ್ಮನಿದ್ದು ಈಗ ಆರೋಪ ಮಾಡುವುದು ಸರಿಯಲ್ಲ. ಫ್ಲೈ ಓವರ್ ಕಾಂಗಾರಿ ಮೊದಲ ನಕ್ಷೆಯಲ್ಲಿ ಇರಲಿಲ್ಲ. ಎರಡನೇ ಬಾರಿ ಅದನ್ನು ಸೇರಿಸಲಾಗಿದೆ. ನಮ್ಮ ಶಾಸಕ, ಸಂಸದರು ಪ್ರಯತ್ನದಿಂದ ಇಂದು ಕಾಮಗಾರಿ ನಡೆಯುತ್ತಿದೆ ಎಂದು ತಿರುಗೇಟು ನೀಡಿದರು.
    ಯುಜಿಡಿಗೆ ಇನ್ನೂ ಎರಡು ವರ್ಷ
    ಪುರಸಭೆ ಒಳಚರಂಡಿ ಯೋಜನೆ ಆರಂಭದಲ್ಲಿ 48.14 ಕೋಟಿ ರೂ.ಇದ್ದು, ಪ್ರಸಕ್ತ ಯೋಜನೆ ಅನುದಾನ 55.6 ಕೋಟಿ ಆಗಿದ್ದು, 24 ಕೋಟಿ ವೆಚ್ಚದ ಕಾಮಗಾರಿ ಮುಗಿದಿದೆ. ವೆಟ್‍ವೆಲ್, ಎಸ್‍ಟಿಪಿ ಕೆಲಸ ಬಾಕಿಯಿದ್ದು, ಪುರಸಭೆ ಜಾಗ ಒದಗಿಸಿದರೆ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಯುಜಿಡಿ ಅಭಿಯಂತರ ರಕ್ಷಿತ್ ಹೇಳಿದರು. ಈಗಾಗಲೇ ಪುರಸಭೆ ಮೂರು ವೆಟ್‍ವೆಲ್ಲಿಗೆ ಜಾಗ ಕ್ಲಿಯರ್ ಮಾಡಿದ್ದು, ಇನ್ನೆರಡು ವೆಟ್‍ವೆಲ್‍ಗೆ ಜಾಗದ ಸಮಸ್ಯೆ ಪರಿಹರಿಸಿ ನೀಡಲಾಗುತ್ತದೆ. ಒಂದು ವಾರದಲ್ಲಿ ಭೂಮಿ ಕ್ಲಿಯರ್ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾದಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು. ಒಟ್ಟಾರೆ ಕುಂದಾಪುರ ಪುರಸಭೆಯ ಎರಡು ಬೃಹತ್ ಗಾತ್ರದ ಯೋಜನೆಗೆ ಗ್ರಹಣ ಬಡಿದಿದೆ.
    ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
  • ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ

    ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ

    ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ
    ಕುಂದಾಪುರ: ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳಿಗೆ ಎರಡನೇ ಹಂತದಲ್ಲಿ ರವಿವಾರ ಮತದಾನ ನಡೆದಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ ಬೆಳಗ್ಗಿನಿಂದಲೇ ಮತದಾರರು ಉತ್ಸಾಹದಿಂದಲೇ ಬಂದು ಮತ ಚಲಾಯಿಸುತ್ತಿರುವುದು ಕಂಡು ಬಂತು.
    ಕುಂದಾಪುರದ 43 ಗ್ರಾ.ಪಂ.ಗಳ ಒಟ್ಟು ಇರುವ 554 ಸ್ಥಾನಗಳ ಪೈಕಿ 24 ಕಡೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸ್ಪರ್ದೀಸಿರುವ 1,262 ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
    ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 9 ಗಂಟೆಯ ಸುಮಾರಿಗೆ ಒಟ್ಟಾರೆ 43 ಗ್ರಾ.ಪಂ.ಗಳಲ್ಲಿ ಶೇ. 12.41 ಪ್ರತಿಶತ ಮತದಾನವಾಗಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇ. 30.17 ಮಂದಿ ಮತದಾನ ಮಾಡಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಒಟ್ಟಾರೆ ಶೇ. 49.49 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ. 61.32 ರಷ್ಟು ಮತದಾನವಾಗಿತ್ತು. ಸಂಜೆ 5ಗಂಟೆಗೆ ಶೇ. 76.09 ರಷ್ಟು ಮತದಾನ ನಡೆಯಿತು.
    43 ಗ್ರಾ.ಪಂ.ಗಳ ಪೈಕಿ ಒಟ್ಟಾರೆ 20 ನಕ್ಸಲ್ ಭಾಗದ ಮತಗಟ್ಟೆಗಳಿದ್ದು, ಈ ಪೈಕಿ ಮಚ್ಚಟ್ಟುವಿನ 2 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆಯಾಗಿರುವುದರಿಂದ ಚುನಾವಣೆ ನಡೆದಿಲ್ಲ. ಇನ್ನುಳಿದ 18 ಮತಗಟ್ಟೆಗಳಾದ ಕೆರಾಡಿ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಕೆರಾಡಿ ಗ್ರಾ.ಪಂ., ಹೊಸಂಗಡಿ ಗ್ರಾಮದ ಸರಕಾರಿ ಕಿ.ಪ್ರಾ. ಶಾಲೆ, ಹಿ.ಪ್ರಾ. ಶಾಲೆ, ಅಮಾಸೆಬೈಲು ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆ, ಜಡ್ಡಿನಗದ್ದೆ ಶಾಲೆ, ರಟ್ಟಾಡಿ ಶಾಲೆ, ನಡಂಬೂರು ಶಾಲೆ, ಮಚ್ಚಟ್ಟುವಿನ ತೊಂಬಟ್ಟು, ಯಡಮೊಗೆ ಗ್ರಾಮದ ಸರಕಾರಿ ಹಿ.ಪ್ರಾ. ಶಾಲೆಯಲ್ಲಿರುವ ನಕ್ಸಲ್ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗಾಗಿ ಸಶಸ್ತ್ರ ಮೀಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.
    ಎರಡನೇ ಹಂತದ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕರಾದ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ,ಬೈಂದೂರಿನ ಬಿ.ಎಂ. ಸುಕುಮಾರ್, ಮಾಜಿ ಶಾಸಕರಾದ ಎ.ಜಿ. ಕೊಡ್ಗಿ, ಬಿ. ಅಪ್ಪಣ್ಣ ಹೆಗ್ಡೆ, ಕೆ. ಗೋಪಾಲ ಪೂಜಾರಿ, ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮತ ಚಲಾಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.