Category: ರಾಜಕೀಯ

  • ಬೈಂದೂರು :60ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೊಟ್ಟ ಚೊಂಬನ್ನು 10 ವರ್ಷದಲ್ಲಿ ಮೋದಿ ಅಕ್ಷಯ ಪಾತ್ರೆ ಮಾಡಿದರು : ಬಿ.ವೈ.ಆರ್

    ಬೈಂದೂರು :60ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೊಟ್ಟ ಚೊಂಬನ್ನು 10 ವರ್ಷದಲ್ಲಿ ಮೋದಿ ಅಕ್ಷಯ ಪಾತ್ರೆ ಮಾಡಿದರು : ಬಿ.ವೈ.ಆರ್

    ಮೋದಿಯಿಂದಷ್ಟೇ ದೇಶದ ಅಭಿವೃದ್ದಿ ಸಾಧ್ಯ

    ಬೈಂದೂರು: 60 ವರ್ಷ ಗರೀಬಿ ಹಠಾವೋ ಎಂದ ಕಾಂಗ್ರೆಸ್ಸಿಗರು ತಮ್ಮ ಹೆಂಡತಿ ಮಕ್ಕಳ ಬಡತನ ದೂರ ಮಾಡಿದರೇ ಹೊರತು ಜನಸಾಮಾನ್ಯರ ಬಡತನ ದೂರ ಮಾಡಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

    ಅವರು ಸೋಮವಾರ ಸಂಜೆ ತಗ್ಗರ್ಸೆ ಗುಡ್ಡಿಯಂಗಡಿಯಲ್ಲಿ ಹಮ್ಮಿಕೊಳ್ಳಲಾದ ಎಸ್.ಟಿ. ಸಮಾವೇಶ ಉದ್ಘಾಟಿಸಿ ಮಾತನಾಡಿರು. 67 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶದ ಜನರ ಬಡತನ ದೂರ ಮಾಡಿಲ್ಲ. ಬಡವರ ಮಕ್ಕಳಿಗೆ ವಿದ್ಯಾಭ್ಯಾಸ, ಹೊಟ್ಟೆಗೆ ಹಿಟ್ಟು ನೀಡುವ ಕಾರ್ಯವನ್ನು ಮಾಡಿಲ್ಲ ಎಂದು ಕಿಡಿಕಾರಿದರು.

    ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡಕುಟ್ಟು ಜನಾಂಗವನ್ನು ಗುರುತಿಸಿ ವಾಲ್ಮೀಕಿ ಜಯಂತಿ ಮಾಡುವ ಮೂಲಕ ಆ ಸಮುದಾಯಕ್ಕೆ ಗೌರವ ಸಲ್ಲಿಸುವ ಕಾರ್ಯ ಆರಂಭಿಸಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, ಅಭಿವೃದ್ಧಿಗಾಗಿ ಸಾವಿರಾರೂ ಕೋಟಿ ರೂಪಾಯಿ ಅನುದಾನ ನೀಡಿದರು ಎಂದು ಹೇಳಿದರು.

    ಕಾಂಗ್ರೆಸ್‌ನ ಖಾಲಿ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ದೇಶವನ್ನು ಸುದೀರ್ಘ ವರ್ಷ ಆಡಳಿತ ನಡೆಸಿ ದೇಶದ ಜನತೆಗೆ ಖಾಲಿ ಚೊಂಬು ನೀಡಿತ್ತು. ಕಳೆದ ಹತ್ತು ವರ್ಷದ ಹಿಂದೆ ಆಡಳಿತಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರು ಖಾಲಿ ಚೊಂಬನ್ನು ಅಕ್ಷಯ ಪಾತ್ರೆ ಮಾಡಿದ್ದಾರೆ. ದೇಶದ ಮಹಿಳೆಯರಿಗೆ ಗೌರವ ತಂದುಕೊಡಲು 12 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ. 10 ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸಿದ್ದಾರೆ. ಬೈಂದೂರು ಸೇರಿದಂತೆ ಕ್ಷೇತ್ರದ 2.61 ಲಕ್ಷ ಜನರಿಗೆ ಆಯುಷ್ಮಾನ್ ಯೋಜನೆಯಡಿ 260 ಕೋಟಿ ರೂಪಾಯಿ ಆಸ್ಪತ್ರೆ ಬಿಲ್‌ಗಳನ್ನು ನರೇಂದ್ರ ಮೋದಿ ಸರ್ಕಾರ ಪಾವತಿಸಿದೆ ಎಂದರು.

    ದೇಶದಲ್ಲಿ ಒಟ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡದ 102 ಸದಸ್ಯರನ್ನು ಬಿಜೆಪಿ ಸಂಸದರನ್ನಾಗಿ ಮಾಡಿದೆ. ಈ ಬಾರಿ ಬಿಜೆಪಿ 400ಕ್ಕೂ ಅಧಿಕ ಕ್ಷೇತ್ರದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ನಟಿ ಶ್ರುತಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಮುಖಂಡರಾದ ರಾಮ ನಾಯ್ಕ್ ,ಪ್ರಿಯದರ್ಶಿನಿ ದೇವಾಡಿಗ, ಕೃಷ್ಣಪ್ರಸಾದ್ ಅಡ್ಯಂತಾಯ ಸಹಿತ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಗರು ಸೇರಿದ್ದರು.

  • ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಮೋದಿ ಮತ್ತು ಯಡಿಯೂರಪ್ಪ    ಬೈಂದೂರಿನಲ್ಲಿ ನಡೆದ ಮಂಡಲ ಮಹಿಳಾ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 

    ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಮೋದಿ ಮತ್ತು ಯಡಿಯೂರಪ್ಪ  ಬೈಂದೂರಿನಲ್ಲಿ ನಡೆದ ಮಂಡಲ ಮಹಿಳಾ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 

    ಕುಂದಾಪುರ ಮಿರರ್ ಸುದ್ದಿ…
    ಬೈಂದೂರು : ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಜಿ.ಪಂ-ತಾ.ಪಂ ಹಾಗೂ ಗ್ರಾಪಂಗಳಲ್ಲಿ ಮೀಸಲಾತಿ ಕೊಟ್ಟಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
    ಕೀರಿಮಂಜೇಶ್ವರದಲ್ಲಿ ನಡೆದ ಮಂಡಲ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಶೇ.೩೩ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದ್ಯತೆಯನ್ನು ನೀಡಿದವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಎಂದ ಅವರು, ರಾಜ್ಯದಲ್ಲಿ ಜಿ.ಪಂ-ತಾಪಂ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೇ. ೫೦ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಡುವ ಮೂಲಕ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದರು.
    ರಾಜ್ಯ ಸರ್ಕಾರ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂಬುದನ್ನು ನಮ್ಮ ಮತದಾರರು ಯೋಚಿಸಬೇಕಾಗಿದೆ. ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯನವರು ಇಂದು ಕೇವಲ ೫ ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಈ ಅಕ್ಕಿಯೂ ಸಹ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಅಕ್ಕಿಯಾಗಿದೆ ಎಂದು ಹೇಳಿದರು.
     ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಪ್ರತಿವರ್ಷ ೧ ಲಕ್ಷ ನೀಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ೬೦ ಲಕ್ಷ ಮಹಿಳೆಯರಿದ್ದಾರೆ. ಅವರೆಲ್ಲರಿಗೂ ೧ ಲಕ್ಷ ಹಣ ನೀಡಿದರೆ ಪ್ರತಿ ವರ್ಷ ೬೦ ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹಾಗಾದರೆ ನಮ್ಮ ದೇಶದ ಬಜೆಟ್ ಇರುವುದೇ ೪೫ ಲಕ್ಷ ಕೋಟಿ ಕುಟುಂಬದ ಓರ್ವ ಹೆಣ್ಣು ಮಗಳಿಗೆ ೧ ಲಕ್ಷ ನೀಡಿದರೂ ಸಹ ೩೨ ಲಕ್ಷ ಕೋಟಿ ಹಣ ಬೇಕಾಗುತ್ತದೆ. ಯಾವುದೇ ಅಂಕಿ ಸಂಕಿಯಿಲ್ಲದೇ ಕೇಲವ ಬೊಗಳೆ ಬಿಡುತ್ತಾ ಅಧಿಕಾರವನ್ನು ಹಿಡಿಯುವ ಸಲುವಾಗಿ ಮತದಾರರಿಗೆ ಸಲ್ಲದ ಆಮಿಷಗಳನ್ನು ಒಡ್ಡುತ್ತಿದೆ ಎಂದು ದೂರಿದರು.
    ಮೋದಿ ಸರ್ಕಾರ ಸ್ವಚ್ಚ ಭಾರತ್ ಹೆಸರಿನಲ್ಲಿ ಪ್ರತಿಮನೆಗೆ ಶೌಚಾಲಯ ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಎಲ್.ಪಿ.ಜಿ. ಸಂಪರ್ಕ ಬಡವರಿಗೆ ಮನೆ, ಏಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಆಯುಷ್ಮಾನ್ ಕಾರ್ಡ್ ಯೋಜನೆ ನೀಡುವ ಮೂಲಕ ಬಡವರು ಮಧ್ಯಮ ವರ್ಗದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದರು.
    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿ, ಡಾ. ರಾಜನಂದಿನಿ, ಗಾಯತ್ರಿ ಮಲ್ಲಪ್ಪ, ಭಾಗೀರಥಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
    ಓಟಿಗಾಗಿ ಬಿಟ್ಟಿ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ವಂಚಿಸುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಮ್ಮೆ ಬಿಜೆಪಿಯದ್ದು, ಇಂತಹ ಮಹಿಳೆಯ ಬಗ್ಗೆ ಹಾಗೂ ನಮ್ಮ ಪ್ರಧಾನ ಮಂತ್ರಿ ಮೋದಿಯ ಬಗ್ಗೆ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡುತ್ತಾರೆ. ಅದೇ ರೀತಿ ಅವರ ಪಕ್ಷದ ಸೋನಿಯಾ ಗಾಂಧಿ ಬಗ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆಯೇ? ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. –ಶೃತಿ, ಚಿತ್ರನಟಿ ಹಾಗೂ ಬಿಜೆಪಿ ನಾಯಕಿ 
    ಬೈಂದೂರಿನ ಸಮಗ್ರ ಅಭಿವೃದ್ದಿಯಾಗಬೇಕಾದರೆ ಹಾಗೂ ಬೈಂದೂರು ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾದರೆ ರಾಘಣ್ಣ ಮತ್ತೊಮ್ಮೆ ಸಂಸದರಾಗಲೇಬೇಕು. ಈ ಕ್ಷೇತ್ರ ಜನತೆಗೆ ವರಾಹಿಯಿಂದ ಸಿಹಿ ನೀರನ್ನು ಕುಡಿಸುವ ಯೋಜನೆ ಜಾರಿಗಾಗಿ ರಾಘಣ್ಣ  ಇನ್ನೊಮ್ಮೆ ಸಂಸತ್ತಿಗೆ ಆಯ್ಕೆಯಾಗಲೇಬೇಕಿದೆ. ಕ್ಷೇತ್ರದ ಮತದಾರರು ೧ ಲಕ್ಷಕ್ಕೂ ಅಂತರದ ಮತವನ್ನು ರಾಘಣ್ಣರಿಗೆ ನೀಡಲಿದ್ದಾರೆ. –ಗುರುರಾಜ್ ಗಂಟಿಹೊಳಿ, ಬೈಂದೂರು ಶಾಸಕ
  • ಹೆಮ್ಮಾಡಿ :ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ – ಗೀತಾ ಶಿವರಾಜ್ ಕುಮಾರ್

    ಹೆಮ್ಮಾಡಿ :ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ – ಗೀತಾ ಶಿವರಾಜ್ ಕುಮಾರ್

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ನನ್ನ ಬಗ್ಗೆ ವಿರೋಧ ಪಕ್ಷದವರು ತೀರಾ ಖಾಸಗೀ ವಿಚಾರಗಳನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದೆಲ್ಲವೂ ಸುಳ್ಳು. ಸುಳ್ಳು ಅಪಪ್ರಚಾರಕ್ಕೆ ಕಿವಿಗೊಡದೇ ಈ ಬಾರಿ ನನಗೆ ಜನ ಮತ ನೀಡುತ್ತಾರೆ. ಆ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಕೊಡಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

    ಅವರು ಶನಿವಾರ ಸಂಜೆ ಹೆಮ್ಮಾಡಿಯ ಕಟ್ ಬೆಲ್ತೂರು ಪ್ರದೇಶದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಜನರ ಪರವಾಗಿ ನೀಡಿದ ಕೆಲಸಕಾರ್ಯಗಳು ಇಂದು ಜನರ ಮುಂದಿದೆ. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ, ಆಶ್ರಯ ಹೀಗೆ ಈ ಯೋಜನೆಗಳು ಇಂದಿಗೂ ಜನರ ಮನಸಿನಲ್ಲಿದೆ. ಬಂಗಾರಪ್ಪನವರ ಮಗಳಾಗಿ ನಾನು ಕೂಡಾ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಬೈಂದೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಜೆಜೆಎಂ, ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಿ ಹೆಚ್ಚಿನ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ಇದಕ್ಕೂ ಮುನ್ನ ಮಾತನಾಡಿದ ಮಾಜೀ ಶಾಸಕ ಬಿ.ಎಂ.ಸುಕುಮಾರಗ ಶೆಟ್ಟಿ, ಬಿಜೆಪಿಗೆ ಬೆಳೆಯುವ ನಾಯಕರು ಬೇಡ. ನೆಲದ‌ಮೇಲೆ ಕುಳಿತು ಹೇಳಿದ್ದನ್ನು ಮಾಡುವವರು ಬೇಕು. ನನಗೆ, ಹಾಲಾಡಿಯವರಿಗೆ, ರಘುಪತಿ ಭಟ್ರಿಗೆ ಹೀಗೇ ಎಲ್ಲರನ್ನೂ ಹತ್ತಿಕ್ಕಿದ ಬಿಜೆಪಿಗೆ ನಮ್ಮ ಬೆವರು ಹರಿಸಿದ್ದೇ ವ್ಯರ್ಥವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ವೋಟ್ ಹಾಕಿದ್ರೆ ನಿಮಗೆ ಚೊಂಬೇ ಗತಿ ಎನ್ನುವುದು ನೆನಪಿರಲಿ ಎಂದರು.

    ಈ ಸಂದರ್ಭ ಮಾತನಾಡಿದ ನಟ ಶಿವರಾಜ್ ಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡ್ತಾರೆ ಅಂತ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ನಾನು ನಿಮಗೆ ಭರವಸೆ ಕೊಡುತ್ತೇನೆ. ಗೀತಾ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತಾಳೆ. ಅದಕ್ಕೆ‌ ನಾನು ಗ್ಯಾರೆಂಟಿ ಎಂದ ಶಿವರಾಜ್ ಕುಮಾರ್, ಈ ಬಾರೊ ಒಂದೇ ಒಂದು ಬಾರಿ ಅವಕಾಶ ಕೊಟ್ಟು ನೋಡಿ ಎಂದರು.

    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಡಿ.ಆರ್ .ರಾಜು, ಶಂಕರ್ ಪೂಜಾರಿ, ನೇತ್ರಾವತಿ,ಸೈಯ್ಯದ್, ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಉಪಸ್ಥಿತರಿದ್ದರು

  • ಬೈಂದೂರು :ಎ.22ಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬೈಂದೂರು ಭೇಟಿ,ಮಹಿಳಾ ಸಮಾವೇಶ, ಎಸ್.ಟಿ. ಸಮಾವೇಶ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು

    ಬೈಂದೂರು :ಎ.22ಕ್ಕೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಬೈಂದೂರು ಭೇಟಿ,ಮಹಿಳಾ ಸಮಾವೇಶ, ಎಸ್.ಟಿ. ಸಮಾವೇಶ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಏಪ್ರಿಲ್ 22ರಂದು ಸೋಮವಾರ ಬೈಂದೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

    ಬಿ.ವೈ.ರಾಘವೇಂದ್ರ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಮೊದಲ ಬಾರಿಗೆ ಬೈಂದೂರಿಗೆ ಆಗಮಿಸುತ್ತಿದ್ದಾರೆ. ರಾಘವೇಂದ್ರ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಪದಾಧಿಕಾರಿಗಳು ಕಾತರರಾಗಿದ್ದಾರೆ.

    ಮಹಿಳಾ ಸಮಾವೇಶ
    ಎ.22ರ ಬೆಳಗ್ಗೆ 10.30ಕ್ಕೆ ಕಿರಿಮಂಜೇಶ್ವರ ಮೂಕಾಂಬಿಕಾ ಟಿಂಬರ್ ಮಿಲ್ ಸಮೀಪದಲ್ಲಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾದಿಂದ ಹಮ್ಮಿಕೊಂಡಿರುವ ಮಹಿಳಾ ಸಮಾವೇಶದಲ್ಲಿ ಬಿ.ವೈ.ರಾಘವೇಂದ್ರ ಅವರು ಭಾಗವಹಿಸಿ ಪ್ರಮುಖ ಭಾಷಣ ಮಾಡಲಿದ್ದಾರೆ. ಶಾಸಕರಾದ ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ನಟಿ ಶ್ರುತಿ, ಶಿವಮೊಗ್ಗ ಬಿಜೆಪಿ ಉಪಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು, ಬಿ.ಎಸ್. ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

    ದೇವಸ್ಥಾನ ಭೇಟಿ
    ಅಲ್ಲಿಂದ ಮಧ್ಯಾಹ್ನ 12.30ಕ್ಕೆ ಹಳಗೆರಿಯ ಶ್ರೀ ಕಾಲ ಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸ್ಥಳೀಯ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತಕತೆ ನಡೆಸಲಿದ್ದಾರೆ. ಅಲ್ಲಿಂದ ಶಿರೂರು ಕಡೆಗೆ ಪಯಾಣ ಬೆಳೆಸಲಿದ್ದಾರೆ.
    ಮಧ್ಯಾಹ್ನ 3ಕ್ಕೆ ಕಂಚಗೋಡು ಶ್ರೀ ರಾಮ ಮಂದಿರಕ್ಕೆ ಭೇಟಿ, ಮಧ್ಯಾಹ್ನ 3.30ಕ್ಕೆ ಹೆಮ್ಮಾಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ, ಸಂಜೆ 4ಕ್ಕೆ ಬಗ್ವಾಡಿ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4.30ಕ್ಕೆ ಅಂಪಾರುವಿನಲ್ಲಿ ನಡೆಯುವ ಶ್ರೀ ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಎಸ್.ಟಿ. ಸಮಾವೇಶ
    ಸಂಜೆ 6 ಗಂಟೆಗೆ ತಗ್ಗರ್ಸೆ ಗುಡ್ಡಿಯಂಗಡಿಯಲ್ಲಿ ಮಂಡಲ ಬಿಜೆಪಿ ಎಸ್ ಟಿ ಮೋರ್ಚಾದಿಂದ ನಡೆಯುವ ಎಸ್.ಟಿ. ಸಮಾವೇಶದಲ್ಲಿ ಬಿ.ವೈ. ರಾಘವೇಂದ್ರ ಅವರು ಭಾಗವಹಿಸಲಿದ್ದಾರೆ.

    ಅಂದು ಬಿ.ವೈ. ರಾಘವೇಂದ್ರ ಅವರೊಂದಿಗೆ ಶಾಸಕರಾದ ಶ್ರೀ ಗುರುರಾಜ ಗಂಟಿಹೊಳೆ, ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸೇರಿದಂತೆ ಮಂಡಲದ ಪದಾಧಿಕಾರಿಗಳು ಜತೆಗಿರಲಿದ್ದಾರೆ.

    ಚುನಾವಣೆ ಕಾರ್ಯಕ್ಕೆ ವೇಗ ನೀಡಲು ಮತ್ತು ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ಕೊಡಿಸಲು ಶಾಸಕರಾದ ಗುರುರಾಜ ಗಂಟಿಹೊಳೆಯವರು ಈಗಾಗಲೇ ಬೂತ್ ಕಡೆಗೆ-ಸಮೃದ್ಧಿ ನಡಿಗೆ ಕಾರ್ಯಕ್ರಮದ ಮೂಲಕ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದಾರೆ. ನಿರಂತರ ಬೂತ್ ನಡಿಗೆಯ ಮೂಲಕ ಚುನಾವಣಾ ಕಾರ್ಯದಲ್ಲಿ ಕಾರ್ಯಕರ್ತರಿಗೆ, ಮುಖಂಡರಿಗೆ ಉತ್ಸಾಹ, ಹುಮ್ಮಸ್ಸು ತುಂಬುತ್ತಿದ್ದಾರೆ. ಈ ಮಧ್ಯೆ ಬಿ.ವೈ. ರಾಘವೇಂದ್ರ ಅವರು ಬೈಂದೂರಿಗೆ ಆಗಮಿಸುತ್ತಿರುವುದು ಮುಖಂಡರು, ನಾಯಕರು ಹಾಗೂ ಕಾರ್ಯಕರ್ತರಲ್ಲಿ ಚುನಾವಣ ಪ್ರಚಾರದ ಉತ್ಸಾಹ ಇನ್ನಷ್ಟು ಹೆಚ್ಚಲಿದೆ ಎಂದು ಮಂಡಲ ಬಿಜೆಪಿ ಪ್ರಕಟನೆ ತಿಳಿಸಿದೆ.

  • ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಬೈಂದೂರಿನ ಪ್ರತಿ ಬೂತ್ ನಲ್ಲೂ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಪ್ರಾರ್ಥನೆ – ಗಣ್ಯರ ಸಮ್ಮುಖದಲ್ಲಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ

    ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಬೈಂದೂರಿನ ಪ್ರತಿ ಬೂತ್ ನಲ್ಲೂ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಪ್ರಾರ್ಥನೆ – ಗಣ್ಯರ ಸಮ್ಮುಖದಲ್ಲಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಬುಧವಾರ ಸಹಸ್ರಾರು ಕಾರ್ಯಕರ್ತರು, ಗಣ್ಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್‌ಗಳಲ್ಲೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೈಂದೂರಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಮಾಡಿದರು.

    ಬಿ.ವೈ. ರಾಘವೇಂದ್ರ ಅವರು ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್‌ಶೋ ನಡೆಸಿ, ನಂತರ ಬೈಂದೂರಿನ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆ, ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಸಹಿತವಾಗಿ ಪ್ರಮುಖರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

    ಇದೇ ವೇಳೆಗೆ ಬೈಂದೂರಿನ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್‌ಗಳಲ್ಲಿ ಇರುವ ದೇವಸ್ಥಾನದಲ್ಲಿ ಬಿ.ವೈ. ರಾಘವೇಂದ್ರ ಅವರ ಗೆಲುವಿಗಾಗಿ ಕೆಲವು ಕಡೆ 108 ತೆಂಗಿನ ಕಾಯಿ ಸಮರ್ಪಣೆ ಸಹಿತ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬೂತ್‌ನಲ್ಲೂ ಮತ ಪ್ರಮಾಣ ಹೆಚ್ಚಿಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಕಳೆದ ಬಾರಿಗಿಂತ ಕನಿಷ್ಠ ಶೇ.30ರಿಂದ ಶೇ.40ರಷ್ಟು ಮತ ಹೆಚ್ಚು ಬರುವಂತೆ ಕಾರ್ಯನಿರ್ವಹಿಸುವ ಸಂಕಲ್ಪ ಮಾಡಿದರು.

    ನಾಮಪತ್ರ ಸಲ್ಲಿಕೆಗೂ ಪೂರ್ವದಲ್ಲಿ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಬೃಹತ್ ಮೆರವಣಿಗೆ ಹೊರಟಿತ್ತು. ಮೆರವಣಿಗೆಯ ಉದ್ದಕ್ಕೂ ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಸಹಸ್ರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಬಿಜೆಪಿಯ ಬಾವುಟ ಮತ್ತು ಕೇಸರಿ ಬಾವುಟ ಹಿಡಿದು ಭಾರತ್ ಮಾತಾ ಕೀ ಜೈ, ಬಿಜೆಪಿಗೆ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕ್ಷೇತ್ರದ ಎಲ್ಲ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಹಾಗೆಯೇ ಬೈಂದೂರಿನಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ಮುಂದಾಳತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

  • ಬೈಂದೂರು :ಗೀತಾ ಯಡಿಯೂರಪ್ಪನ ಡಮ್ಮಿ ಕ್ಯಾಂಡಿಡೇಟ್ : ಈಶ್ವರಪ್ಪ ಹೇಳಿಕೆ

    ಬೈಂದೂರು :ಗೀತಾ ಯಡಿಯೂರಪ್ಪನ ಡಮ್ಮಿ ಕ್ಯಾಂಡಿಡೇಟ್ : ಈಶ್ವರಪ್ಪ ಹೇಳಿಕೆ

    ಕುಂದಾಪುರ ಮಿರರ್ ಸುದ್ದಿ…


    ಬೈಂದೂರು :ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ ಅದು ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದ ಒಳಮರ್ಮ ಹೆಚ್‍ಡಿಕೆಗೆ ಬೇಗ ಅರ್ಥವಾಗಲಿ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

    ಅವರು ಉಪ್ಪುಂದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನ ಇವತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಂದ ಆಗುತ್ತಿದೆ. ಇವರು ಒಂದು ಸಮುದಾಯವನ್ನು ಸಂತ್ರಪ್ತ ಪಡಿಸಲು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಉಳಿಗಾಲವಿಲ್ಲ ಎಂದು ನಂಬಿದವ ನಾನು. ಹಾಗಾಗಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದರು.

    ನನಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿ ಗೆಲ್ಲಿಸೋದಾಗಿ ಭರವಸೆ ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಂಬಿಸಿ ಮೋಸ ಮಾಡಿದರು. ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಅವರಿಗೂ ಕೂಡಾ ನನ್ನಂತೆ ದ್ರೋಹವಾಯಿತು. ಇದಕ್ಕೆಲ್ಲಾ ಕಾರಣರಾದವರ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದರು.

    ಚುನಾವಣೆಗೆ ಸಾಧು ಸಂತರನ್ನು ಮಧ್ಯಕ್ಕೆ ತರೋದು ನೋವಿನ ಸಂಗತಿ. ಇದನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ. ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ.ನನ್ನ ಕೂಗು ಕೇಂದ್ರವನ್ನು ತಲುಪಿದೆ. ಇವತ್ತು ಕೂಡ ಫೆÇೀನ್ ಬಂದಿದೆ. ಅಮಿತ್ ಶಾಗೆ ಅವರಿಗೂ ನನ್ನ ಮಾತು ತಲುಪಿದೆ ಎಂದ ಅವರು, ನಾನು ರಾಜ್ಯದಲ್ಲಿ ಕೆಲಸ ಮಾಡಿಲ್ಲ ಅನ್ನಲಿ, ಆಗ ನಾನು ಉತ್ತರ ಕೊಡುತ್ತೇನೆ. ತಪಸ್ಸಿಂದ ಕಟ್ಟಿದ ಪಕ್ಷ ಇವತ್ತು ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್‍ನರ್ ಶಿಪ್ ಕಂಪನಿ ಅಲ್ಲ. ನನಗೆ ಆರ್ ಎಸ್ ಎಸ್, ಸಂಘ ಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.

    ಎರಡು ಮೂರು ದಿನದಲ್ಲಿ ನನ್ನ ಚಿಹ್ನೆ ಅಂತಿಮವಾಗುತ್ತದೆ. ಚಿಹ್ನೆ ವಿಚಾರದಲ್ಲಿ ನನಗೆ ತಕರಾರು ಇದೆ. ಚುನಾವಣೆಯಲ್ಲಿ ಸಿಂಹ ಹುಲಿ ತರದ ಚಿಹ್ನೆ ಬೇಕು. ಹುರುಪು ಬರುವಂತಹ ಚಿಹ್ನೆ ಬೇಕು ಅಂತ ಬೇಡಿಕೆಯಿಟ್ಟು ಪತ್ರ ಬರೆಯುತ್ತೇನೆ. ಈಗ ಕೊಟ್ಟಿರೋ ಪಟ್ಟಿಯಲ್ಲಿ ಯಾವುದು ಒಳ್ಳೆ ಚಿಹ್ನೆಗಳಿಲ್ಲ. ಹಾಗಾಗಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.

  • ಬೈಂದೂರು :ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳ ಶಿಕಾರಿ – ಕೆ.ಎಸ್ ಈಶ್ವರಪ್ಪ

    ಬೈಂದೂರು :ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳ ಶಿಕಾರಿ – ಕೆ.ಎಸ್ ಈಶ್ವರಪ್ಪ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಬಿಜೆಪಿ ಆರಂಭದಲ್ಲಿಯೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವ ನಾನು. ಈಗ ಕಾಂಗ್ರೆಸನ್ನು ಸೋಲಿಸಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸುವುದು ನನ್ನ ಗುರಿ. ಈ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 140 ಕೋಟಿ ಜನರ ಅಪೇಕ್ಷೆ ಅದೇ ಆಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

    ಅವರು ಉಪ್ಪುಂದದ ಪರಿಚಯ ಸಭಾ ಭವನದಲ್ಲಿ ರಾಷ್ಟ್ರ ಭಕ್ತಬಳಗದ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ದೇಶ ಉಳಿಸಬೇಕು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು, ಬಿಜೆಪಿ ಅಪ್ಪ ಮಕ್ಕಳ ಪಕ್ಷ ಎನ್ನುವ ಅಪವಾದ ತಪ್ಪಬೇಕು, ಭಾರತೀಯ ಜನತಾ ಪಕ್ಷ ಇನ್ನೂ ಗಟ್ಟಿಯಾಗಿ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಈ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳನ್ನು ಶಿಕಾರಿ ಮಾಡುತ್ತೇನೆ. ನರೇಂದ್ರ ಮೋದಿಯವರು ವಿಶ್ವದ ಗಮನ ಸಳೆದ ಪ್ರಧಾನಿ. ಇಡೀ ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಭೇಟಿ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ನರೇಂದ್ರ ಮೋದಿಯವರಿಗೆ ವಿಶ್ವದ ಎಲ್ಲ ರಾಷ್ಟ್ರಗಳು ಗೌರವ ನೀಡುತ್ತಿವೆ. ಇದನ್ನು ಕಾಂಗ್ರೆಸ್ ಸಹಿತ ಅದರ ಮಿತ್ರ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಸೋಲಿನ ಭೀತಿ ಅದಕ್ಕೆ ಕಾಡುತ್ತಿದೆ ಎಂದರು.

    ದೇಶದ ಸೈನಿಕರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಯವರು. ದೇಶದ ರಕ್ಷಣೆ, ಶಾಂತಿ ಸುವ್ಯವಸ್ಥೆಗೆ ಅವರು ವಿಶೇಷ ಒತ್ತು ನೀಡಿರುವುದನ್ನು ಇವತ್ತು ಗಮನಿಸಬಹುದು. ದೇಶಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಪ್ರಧಾನಿ ನರೇಂದ್ರ ಮೋದಿಯವರ ಕೈಬಲಗೊಳಿಸುವುದೇ ನನ್ನ ಗುರಿ ಎಂದರು.

    ಈ ಸಂದರ್ಭದಲ್ಲಿ ಗೂಳಿಹಟ್ಟಿ ಶೇಖರ, ಶ್ರೀಧರ ಬಿಜೂರು, ನಾರಾಯಣ ಗುಜ್ಜಾಡಿ, ಗೋಪಾಲ ನಾಡ, ವಿನಯ ನಾಯರಿ. ಮೊದಲಾದವರು ಉಪಸ್ಥಿತರಿದ್ದರು.

  • ಕೋಟೇಶ್ವರ :ಪ್ರಜ್ಞಾವಂತರ ಜಿಲ್ಲೆಯಲ್ಲಿ ಪ್ರಜ್ಣಾವಂತರು ಪ್ರಜ್ಞಾವಂತ ಹೆಗ್ಡೆಯವರನ್ನೇ ಆಯ್ಕೆ ಮಾಡುತ್ತಾರೆ  : ನಿಕೇತ್ ರಾಜ್ ಮೌರ್ಯ

    ಕೋಟೇಶ್ವರ :ಪ್ರಜ್ಞಾವಂತರ ಜಿಲ್ಲೆಯಲ್ಲಿ ಪ್ರಜ್ಣಾವಂತರು ಪ್ರಜ್ಞಾವಂತ ಹೆಗ್ಡೆಯವರನ್ನೇ ಆಯ್ಕೆ ಮಾಡುತ್ತಾರೆ : ನಿಕೇತ್ ರಾಜ್ ಮೌರ್ಯ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ: ಸಮಾಜದಲ್ಲಿ ನಾವೆಲ್ಲರೂ ಒಟ್ಟಾಗಿರಬೇಕು ಎನ್ನುವುದು ಕಾಂಗ್ರೆಸ್, ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳ ನಡುವೆ ಭೇದ ತಂದಿಡುವ ಉದ್ದೇಶವೇ ಬಿಜೆಪಿ. ಜಾತಿ, ಮತ, ಧರ್ಮಗಳನ್ನು ಮೀರಿದ ವ್ಯಕ್ತಿತ್ವ ಕೆ. ಜಯಪ್ರಕಾಶ್ ಹೆಗ್ಡೆಯವರದ್ದು. ಹೆಗ್ಡೆಯವರು ಪ್ರಾಮಾಣಿಕತೆ, ಸತ್ಯದ ಮೇಲೆ ನಿಂತವರು. ಕ್ಷೇತ್ರದಲ್ಲಿ ಹೆಗ್ಡೆಯವರ ಗೆಲುವು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

    ಬುಧವಾರ ಕೋಟೇಶ್ವರದ ಪೇಟೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಕಾಂಗ್ರೆಸ್ ಗ್ಯಾರಂಟಿಗಳಿಂದ ಜನ ಸಂಭ್ರಮಿಸುತ್ತಿದ್ದಾರೆ. ಬಿಜೆಪಿಬಾಪಹಾಸ್ಯ ಮಾಡುತ್ತಿದ್ದ ಗ್ಯಾರಂಟಿಗಳು ಹಳ್ಳಿ ಹಳ್ಳಿಗಳನ್ನುವತಲುಪಿದೆ. ದೇವಸ್ಥಾನಗಳ ಆದಾಯ ಐದುಬಪಟ್ಟು ಹೆಚ್ಚಾಗಿದೆ. ಮಹಿಳೆಯರು ಉಚಿತ ಬಸ್ಸುಗಳನ್ನು ಖಷಿಯಿಂದ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಕದ್ದ ಗ್ಯಾರಂಟಿಗಳು ಬಿಜೆಪಿಯ ಪತ್ರಿಕೆಗಳಲ್ಲಿವೆ ಎಂದು ಲೇವಡಿ ಮಾಡಿದರು. ದೇಶದ ಏಳು ಲಕ್ಷ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳನ್ನು ಕಟ್ಟಿಸಿದ್ದು ಕಾಂಗ್ರೆಸ್. ಈ ದೇಶ ಬಾಳಿ ಬೆಳಗಲಿ ಎಂದು ಕನಸು ಕಂಡಿದ್ದು ಕಾಂಗ್ರೆಸ್. ಇದು ಕಾಂಗ್ರೆಸ್ ನ ಬದ್ಧತೆ ಎಂದರು.

    ಉಡುಪಿ ಪ್ರತ್ಯೇಕ ‘ಜಿಲ್ಲೆ’ಯಾಗತಕ್ಕಂತಹ ಚಾರಿತ್ರಿಕ ಘಟನೆ ಇಲ್ಲಿ ಏನಾದರೂ ನಡೆದಿದೆ ಎಂದರೇ ಅದಕ್ಕೆ ಕೆ. ಜಯಪ್ರಕಾಶ್ ಹೆಗ್ಡೆಯವರು ಕಾರಣ. ಈ ಬಾರಿಯ ಚುನಾವಣೆ ಸತ್ಯ ಮತ್ತು ಅಸತ್ಯದ ನಡುವಿನ ಯುದ್ಧ. ಸತ್ಯ ಮತ್ತು ಪ್ರಾಮಾಣಿಕತೆ ಗೆಲ್ಲಬೇಕೆಂದರೆ ಜಯಪ್ರಕಾಶ್ ಹೆಗ್ಡೆ ಗೆಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುದೀರ್ ಕುಮಾರ್ ಮುರೋಳಿ ಹೇಳಿದರು.

    ಬೈಂದೂರಿನ ಮಾಜಿ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಮಾತನಾಡಿ, ಸಮರ್ಥನಾಯಕನಾದವನು ಸಾಮಾನ್ಯ ಜನರ ಸಂಪರ್ಕಕ್ಕೆ ಸಿಗುವಂತಿರಬೇಕು. ಹೆಗ್ಡೆಯವರು ಜನ ಸಂಪರ್ಕದಲ್ಲಿರುವವರು. ಆದರೆ ಕೋಟ ಶ್ರೀನಿವಾಸ ಪೂಜಾರಿ ಸುಳ್ಳು ಹೇಳುವುದರ ಮೂಲಕವೇ ತಮ್ಮ ರಾಜಕೀಯ ಜೀವನ ವೃದ್ಧಿಸಿಕೊಂಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಅವರನ್ನು ಒಳಗೊಂಡು ನನಗೂ ಟಿಕೇಟ್ ಸಿಗದೇ ಇರುವ ಹಾಗೆ ಮಾಡಿದ್ದು ಇದೇ ಕೋಟ ಶ್ರೀನಿವಾಸ ಪೂಜಾರಿ ಎಂದು ಆರೋಪಿಸಿದರು. ಇಂತಹಾ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು ಎಂದರು.

    ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿದ್ದ ಉಡುಪಿಯನ್ನು ಜಿಲ್ಲೆಯಾಗಿ ಪರಿವರ್ತಿಸಿ ಸರ್ಕಾರವನ್ನು ನಿಮ್ಮ ಬಳಿಗೆ ತಂದು ನಿಮ್ಮ ಕೆಲಸಗಳು ಸುಲಭವಾಗುವ ಹಾಗೆ ಮಾಡಿದ ತೃಪ್ತಿ ಇದೆ. ಅಭಿವೃದ್ಧಿಯ ಬಗ್ಗೆ ಮಾತ್ರ ಮಾಡುತ್ತೇನೆ, ನಾನು ಮಾಡಿದ ಕೆಲಸವನ್ನೇ ಮುಂದಿಟ್ಟು ನಾನು ಮತ ಯಾಚಿಸುತ್ತೇನೆ, ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ ಎಂದರು.

    ಚುನಾವಣೆಯಲ್ಲಿ ಗೆದ್ದರೇ ಆದ್ಯತೆಯಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ತರುವ ಕೆಲಸವನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು. ಮೀನುಗಾರರಿಗೆ, ಅಡಿಕೆ ಬೆಳೆಗಾರರಿಗೆ ನೀಡಿದ ಯೋಜನೆಗಳನ್ನು ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದರು. ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಕೊಡ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು, ಒಂದು ವೇಳೆ ಅವರು ಹೇಳಿದ ಹಾಗೆ ಮಾಡಿದ್ದಿದ್ದರೇ ಕಳೆದ ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೇ ಅವರು ಹೇಳಿದ್ದನ್ನು ಯಾವುದೂ ಮಾಡುವುದಿಲ್ಲ. ಜನರು ಅವರನ್ನು ಪ್ರಶ್ನಿಸಲೇ ಇಲ್ಲ. ಜನರು ಯಾರನ್ನು ಕೇಳಬೇಕು ..? ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.

    ಈ ಭಾರಿಯ ಚುನಾವಣೆಗೆ 25 ಲಕ್ಷ ಜೀವ ವಿಮೆಯ ಭರವಸೆಯನ್ನು ನಮ್ಮ ಕಾಂಗ್ರೆಸ್ ಕೊಟ್ಟಿದೆ. ನಮ್ಮದು ಭರವಸೆ ಮಾತ್ರವಲ್ಲ. ಅಧಿಕಾರಕ್ಕೆ ಕಾಂಗ್ರೆಸ್ ಪಕ್ಷ ಬಂದರೇ ನೀಡಿದ ಭರವಸೆಯನ್ನು ಕಾರ್ಯರೂಪಕ್ಕೂ ತರುತ್ತೇವೆ. ಅದಕ್ಕೆ ದೊಡ್ಡ ಉದಾಹರಣೆಯೆ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಈ ಚುನಾವಣೆ ಬದುಕು ಮತ್ತು ಭಾವನೆಗಳನ್ನು ಕೆರಳಿಸುವ ಸಿದ್ಧಾಂತದ ನಡುವೆ ನಡೆಯುವ ಚುನಾವಣೆ. ಬದುಕನ್ನು ಕೊಟ್ಟ ಪಕ್ಷಕ್ಕೆ ಮತದಾನ ಮಾಡಬೇಕೋ ಅಥವಾ ಭಾವನೆಗಳನ್ನು ಕೆರಳಿಸುವ ಪಕ್ಷಕ್ಕೆ ಮತದಾನ ಮಾಡಬೇಕೋ ಎಂದು ಪ್ರಾಮಾಣಿಕವಾಗಿ ಪ್ರತಿ ಮತದಾರ ನಿರ್ಧರಿಸುವ ತುರ್ತಿದೆ ಎಂದು ಹೇಳಿದರು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿಯ ಮಾಜಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಮುಂದುವರಿಯಬೇಕಾದರೇ ನಿಮ್ಮ ಮತದಾನ ಕಾಂಗ್ರೆಸ್ ಗೆ ಮಾಡಬೇಕಿದೆ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಅವರು ಹೇಳಿದರು.

    ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್‌, ಕುಂದಾಪುರ ಬ್ಲಾಕ್ ನ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಕಾಶ್ಚಂದ್ರ ಶೆಟ್ಟಿ ಅಶೋಕ್ ಪೂಜಾರಿ ಬೀಜಾಡಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

  • ಎ.18 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ – ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಸಾಥ್

    ಎ.18 ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ – ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಸಾಥ್

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರು ಎಪ್ರಿಲ್ 18ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇದೇ ವೇಳೆಯಲ್ಲಿ ಬೈಂದೂರಿನ ವಿಧಾನಸಭಾ ಕ್ಷೇತ್ರದಿಂದ ಒಂದು ಲಕ್ಷ ಲೀಡ್ ಗಾಗಿ ಪ್ರತಿ ಬೂತ್ ಗಳಲ್ಲೂ ಬಿಜೆಪಿ ಕಾರ್ಯಕರ್ತರು ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಿದ್ದಾರೆ.

    ಬಿ.ವೈ. ರಾಘವೇಂದ್ರ ಅವರು ಈ ಬಾರಿ ಬೃಹತ್ ಅಂತರದ ಗೆಲುವು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ ಈಗಾಗಲೇ ಬಿಜೆಪಿ ಮುಖಂಡರು, ಪ್ರಮುಖರು, ಕಾರ್ಯಕರ್ತರು ಕ್ಷೇತ್ರದಾದ್ಯಂತ ಪ್ರಚಾರ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ನೀಡಲು ಎಲ್ಲ ಪ್ರಯತ್ನಗಳು ಎಡೆಬಿಡದೆ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಬಿ. ವೈ. ರಾಘವೇಂದ್ರ ಅವರು ನಾಮಪತ್ರ ಸಲ್ಲಿಸುವ ದಿನದಂದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಬೂತ್ ಗಳ ದೇವಸ್ಥಾನದಲ್ಲಿ ಏಕಕಾಲದಲ್ಲಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಮತ್ತು ಒಂದು ಲಕ್ಷ ಲೀಡ್ ನೀಡಲು ವಿಶೇಷವಾದ ಸಂಕಲ್ಪವನ್ನು ಮಾಡಲಿದ್ದಾರೆ.

    ನಾಮಪತ್ರ ಸಲ್ಲಿಕೆ ಸಮಾರಂಭಕ್ಕೆ ಬೈಂದೂರಿನ ಜನಪ್ರಿಯ ಶಾಸಕರಾದ ಗುರುರಾಜ ಗಂಟಿಹೊಳೆಯವರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಶಿವಮೊಗ್ಗಕ್ಕೆ ತೆರಳಲಿದ್ದಾರೆ. ನಾಮಪತ್ರ ಸಲ್ಲಿಕೆ ಸಮಾರಂಭವನ್ನು ಯಶಸ್ವಿಯಾಗಿಸಲು ಬೈಂದೂರು ಕ್ಷೇತ್ರದಿಂದಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
    ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠರೂ ಆದ ಎನ್ ಡಿಎ ಮಿತ್ರಕೂಟದ ಎಚ್. ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಎಂಟಿಬಿ ನಾಗರಾಜ, ಬೈರತಿ ಬಸವರಾಜ ಸಹಿತ ಕ್ಷೇತ್ರ ವ್ಯಾಪ್ತಿಯ ಬಿಜೆಪಿ, ಜೆಡಿಎಸ್ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ, ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಸಹಿತವಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ಯರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಬೈಂದೂರು ಮಂಡಲ ಬಿಜೆಪಿ ಮಾಧ್ಯಮ ವಿಭಾಗ ಪ್ರಕಟನೆ ತಿಳಿಸಿದೆ.

  • ಎ.17 : ಕೋಟೇಶ್ವರ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಸಭೆ

    ಎ.17 : ಕೋಟೇಶ್ವರ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯನ್ನು ಎಪ್ರಿಲ್ 17ರಂದು ಕೋಟೇಶ್ವರ ಪೇಟೆಯಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಳ್ಲಲಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    ಈ ಸಭೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಪಕ್ಷದ ಮುಖಂಡರು, ಪಧಾದಿಕಾರಿಗಳು , ಜನಪ್ರತಿನಿದಿಗಳು , ಪ್ರತಿ ಬೂತ್ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.