ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಬಿಜೆಪಿ ಆರಂಭದಲ್ಲಿಯೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವ ನಾನು. ಈಗ ಕಾಂಗ್ರೆಸನ್ನು ಸೋಲಿಸಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸುವುದು ನನ್ನ ಗುರಿ. ಈ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 140 ಕೋಟಿ ಜನರ ಅಪೇಕ್ಷೆ ಅದೇ ಆಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಉಪ್ಪುಂದದ ಪರಿಚಯ ಸಭಾ ಭವನದಲ್ಲಿ ರಾಷ್ಟ್ರ ಭಕ್ತಬಳಗದ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶ ಉಳಿಸಬೇಕು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು, ಬಿಜೆಪಿ ಅಪ್ಪ ಮಕ್ಕಳ ಪಕ್ಷ ಎನ್ನುವ ಅಪವಾದ ತಪ್ಪಬೇಕು, ಭಾರತೀಯ ಜನತಾ ಪಕ್ಷ ಇನ್ನೂ ಗಟ್ಟಿಯಾಗಿ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಈ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳನ್ನು ಶಿಕಾರಿ ಮಾಡುತ್ತೇನೆ. ನರೇಂದ್ರ ಮೋದಿಯವರು ವಿಶ್ವದ ಗಮನ ಸಳೆದ ಪ್ರಧಾನಿ. ಇಡೀ ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಭೇಟಿ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ನರೇಂದ್ರ ಮೋದಿಯವರಿಗೆ ವಿಶ್ವದ ಎಲ್ಲ ರಾಷ್ಟ್ರಗಳು ಗೌರವ ನೀಡುತ್ತಿವೆ. ಇದನ್ನು ಕಾಂಗ್ರೆಸ್ ಸಹಿತ ಅದರ ಮಿತ್ರ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಸೋಲಿನ ಭೀತಿ ಅದಕ್ಕೆ ಕಾಡುತ್ತಿದೆ ಎಂದರು.
ದೇಶದ ಸೈನಿಕರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಯವರು. ದೇಶದ ರಕ್ಷಣೆ, ಶಾಂತಿ ಸುವ್ಯವಸ್ಥೆಗೆ ಅವರು ವಿಶೇಷ ಒತ್ತು ನೀಡಿರುವುದನ್ನು ಇವತ್ತು ಗಮನಿಸಬಹುದು. ದೇಶಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಪ್ರಧಾನಿ ನರೇಂದ್ರ ಮೋದಿಯವರ ಕೈಬಲಗೊಳಿಸುವುದೇ ನನ್ನ ಗುರಿ ಎಂದರು.
ಈ ಸಂದರ್ಭದಲ್ಲಿ ಗೂಳಿಹಟ್ಟಿ ಶೇಖರ, ಶ್ರೀಧರ ಬಿಜೂರು, ನಾರಾಯಣ ಗುಜ್ಜಾಡಿ, ಗೋಪಾಲ ನಾಡ, ವಿನಯ ನಾಯರಿ. ಮೊದಲಾದವರು ಉಪಸ್ಥಿತರಿದ್ದರು.











