ಕುಂದಾಪುರ ಮಿರರ್ ಸುದ್ದಿ…

ಬೈಂದೂರು : ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಜಿ.ಪಂ-ತಾ.ಪಂ ಹಾಗೂ ಗ್ರಾಪಂಗಳಲ್ಲಿ ಮೀಸಲಾತಿ ಕೊಟ್ಟಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಕೀರಿಮಂಜೇಶ್ವರದಲ್ಲಿ ನಡೆದ ಮಂಡಲ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಶೇ.೩೩ರಷ್ಟು ಸ್ಥಾನವನ್ನು ಮಹಿಳೆಯರಿಗೆ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದ್ಯತೆಯನ್ನು ನೀಡಿದವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಎಂದ ಅವರು, ರಾಜ್ಯದಲ್ಲಿ ಜಿ.ಪಂ-ತಾಪಂ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಶೇ. ೫೦ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ಕೊಡುವ ಮೂಲಕ ಯಡಿಯೂರಪ್ಪನವರು ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹಿಳಾ ಸಮುದಾಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದರು.
ರಾಜ್ಯ ಸರ್ಕಾರ ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂಬುದನ್ನು ನಮ್ಮ ಮತದಾರರು ಯೋಚಿಸಬೇಕಾಗಿದೆ. ೧೦ ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯನವರು ಇಂದು ಕೇವಲ ೫ ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಈ ಅಕ್ಕಿಯೂ ಸಹ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿರುವ ಅಕ್ಕಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಪ್ರತಿವರ್ಷ ೧ ಲಕ್ಷ ನೀಡುತ್ತೇವೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ೬೦ ಲಕ್ಷ ಮಹಿಳೆಯರಿದ್ದಾರೆ. ಅವರೆಲ್ಲರಿಗೂ ೧ ಲಕ್ಷ ಹಣ ನೀಡಿದರೆ ಪ್ರತಿ ವರ್ಷ ೬೦ ಲಕ್ಷ ಕೋಟಿ ಹಣ ಬೇಕಾಗುತ್ತದೆ. ಹಾಗಾದರೆ ನಮ್ಮ ದೇಶದ ಬಜೆಟ್ ಇರುವುದೇ ೪೫ ಲಕ್ಷ ಕೋಟಿ ಕುಟುಂಬದ ಓರ್ವ ಹೆಣ್ಣು ಮಗಳಿಗೆ ೧ ಲಕ್ಷ ನೀಡಿದರೂ ಸಹ ೩೨ ಲಕ್ಷ ಕೋಟಿ ಹಣ ಬೇಕಾಗುತ್ತದೆ. ಯಾವುದೇ ಅಂಕಿ ಸಂಕಿಯಿಲ್ಲದೇ ಕೇಲವ ಬೊಗಳೆ ಬಿಡುತ್ತಾ ಅಧಿಕಾರವನ್ನು ಹಿಡಿಯುವ ಸಲುವಾಗಿ ಮತದಾರರಿಗೆ ಸಲ್ಲದ ಆಮಿಷಗಳನ್ನು ಒಡ್ಡುತ್ತಿದೆ ಎಂದು ದೂರಿದರು.
ಮೋದಿ ಸರ್ಕಾರ ಸ್ವಚ್ಚ ಭಾರತ್ ಹೆಸರಿನಲ್ಲಿ ಪ್ರತಿಮನೆಗೆ ಶೌಚಾಲಯ ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಎಲ್.ಪಿ.ಜಿ. ಸಂಪರ್ಕ ಬಡವರಿಗೆ ಮನೆ, ಏಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಆಯುಷ್ಮಾನ್ ಕಾರ್ಡ್ ಯೋಜನೆ ನೀಡುವ ಮೂಲಕ ಬಡವರು ಮಧ್ಯಮ ವರ್ಗದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿ, ಡಾ. ರಾಜನಂದಿನಿ, ಗಾಯತ್ರಿ ಮಲ್ಲಪ್ಪ, ಭಾಗೀರಥಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಓಟಿಗಾಗಿ ಬಿಟ್ಟಿ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ವಂಚಿಸುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಮ್ಮೆ ಬಿಜೆಪಿಯದ್ದು, ಇಂತಹ ಮಹಿಳೆಯ ಬಗ್ಗೆ ಹಾಗೂ ನಮ್ಮ ಪ್ರಧಾನ ಮಂತ್ರಿ ಮೋದಿಯ ಬಗ್ಗೆ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡುತ್ತಾರೆ. ಅದೇ ರೀತಿ ಅವರ ಪಕ್ಷದ ಸೋನಿಯಾ ಗಾಂಧಿ ಬಗ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆಯೇ? ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ. –ಶೃತಿ, ಚಿತ್ರನಟಿ ಹಾಗೂ ಬಿಜೆಪಿ ನಾಯಕಿ
ಬೈಂದೂರಿನ ಸಮಗ್ರ ಅಭಿವೃದ್ದಿಯಾಗಬೇಕಾದರೆ ಹಾಗೂ ಬೈಂದೂರು ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾದರೆ ರಾಘಣ್ಣ ಮತ್ತೊಮ್ಮೆ ಸಂಸದರಾಗಲೇಬೇಕು. ಈ ಕ್ಷೇತ್ರ ಜನತೆಗೆ ವರಾಹಿಯಿಂದ ಸಿಹಿ ನೀರನ್ನು ಕುಡಿಸುವ ಯೋಜನೆ ಜಾರಿಗಾಗಿ ರಾಘಣ್ಣ ಇನ್ನೊಮ್ಮೆ ಸಂಸತ್ತಿಗೆ ಆಯ್ಕೆಯಾಗಲೇಬೇಕಿದೆ. ಕ್ಷೇತ್ರದ ಮತದಾರರು ೧ ಲಕ್ಷಕ್ಕೂ ಅಂತರದ ಮತವನ್ನು ರಾಘಣ್ಣರಿಗೆ ನೀಡಲಿದ್ದಾರೆ. –ಗುರುರಾಜ್ ಗಂಟಿಹೊಳಿ, ಬೈಂದೂರು ಶಾಸಕ










