Category: ರಾಜಕೀಯ

  • ಮಣೂರು- ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಮಣೂರು- ಕಾಂಗ್ರೆಸ್ ಕಾರ್ಯಕರ್ತರ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ :ಪ್ರಸ್ತುತ ಬಿಜೆಪಿ ಅಭ್ಯರ್ಥಿ ಮೀನುಗಾರಿಕಾ ಸಚಿವರಾಗಿದ್ದಾಗ ಜಾರಿಗೆ ತಂದ ಮೀನುಗಾರ ಮಹಿಳೆಯರ ಸಾಲ ಮನ್ನಾ ಯೋಜನೆ ಬಹುತೇಕ ಫಲಾನುಭವಿಗಳಿಗೆ ಸಿಕ್ಕೇ ಇಲ್ಲ. ಯಾವುದೇ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತರುವುದು ಮುಖ್ಯವಲ್ಲ, ಅರ್ಥಿಕ ಹೊಂದಾಣಿಕೆ ಮಾಡಿ ಅದನ್ನು ಅನುಷ್ಠಾನ ಮಾಡುವುದು ಮುಖ್ಯ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

    ಅವರು ಎ.5ರಂದು ಮಣೂರು ರಾಜಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆಯಲ್ಲಿ ಜಾತಿಯ ಹೆಸರಲ್ಲಿ ಮತ ಕೇಳುವವರು ಅಧಿಕಾರವಿದ್ದಾಗ ಸಮಾಜಕ್ಕೆ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನ ಆತ್ಮಸಾಕ್ಷಿಗೆ ಪ್ರಶ್ನಿಸಿಕೊಳ್ಳಬೇಕು. ಈ ಬಾರಿ ಉಡುಪಿ ಚಿಕ್ಕಮಗಳೂರಿನ ಜನ ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸುವ ಮೂಲಕ ಪ್ರಾಮಾಣಿಕತೆಗೆ ಬೆಲೆ ನೀಡಲಿದ್ದಾರೆ ಎಂದರು.

    ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಸತೀಶ್ ಕುಂದರ್, ಜಿ. ತಿಮ್ಮ ಪೂಜಾರಿ ಕೋಟ, ಗೋಪಾಲ ಬಂಗೇರ, ವಿನಯ ಕುಮಾರ್ ಕಬ್ಯಾಡಿ, ಕೋಟ ರಿಕ್ಷಾ ಯೂನಿಯನ್ ಅಧ್ಯಕ್ಷ ಆಣ್ಣಪ್ಪ, ಬೈಂದೂರು ಪ್ರಕಾಶ್ಚಂದ್ರ ಶೆಟ್ಟಿ ಇದ್ದರು.

    ಕೋಟ ಗ್ರಾ.ಪಂ. ಸದಸ್ಯ ಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

  • ಕೋಟ ಹೋಬಳಿಯಲ್ಲಿ ಬಿಜೆಪಿ ಪ್ರಚಾರ ಬಿರುಸು, ಸಭೆ ಆಯೋಜನೆ

    ಕೋಟ ಹೋಬಳಿಯಲ್ಲಿ ಬಿಜೆಪಿ ಪ್ರಚಾರ ಬಿರುಸು, ಸಭೆ ಆಯೋಜನೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ನಮ್ಮ ಎದುರಾಳಿ ಪಕ್ಷದವರು ನನ್ನ ಆಸ್ತಿ, ಅಭಿವೃದ್ಧಿಗಳ ವಿಚಾರದಲ್ಲಿ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಈ ಅಪಪ್ರಚಾರಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಅವರು ಎ.5ರಂದು ಕೋಟ ಹೋಬಳಿಯ ಕೋಡಿ, ಐರೋಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

    ಕೋಡಿ ಗ್ರಾ.ಪಂ. ವ್ಯಾಪ್ತಿಯ ಹಕ್ಕು ಪತ್ರ ಸಮಸ್ಯೆ ನಮ್ಮ ಸರಕಾರದ ಅವಧಿಯಲ್ಲೇ ಬಹುತೇಕ ಮಂಜೂರಾಗಿದ್ದು ಹಂಚಿಕೆ ಮಾತ್ರ ಕಾಂಗ್ರೆಸ್ ಕಾಲದಲ್ಲಾಗಿದೆ. ಅದನ್ನು ಕೂಡ ನಾವೇ ಮಾಡಿದ್ದು ಎನ್ನುವುದಾಗಿ ಹೇಳುತ್ತಿದ್ದಾರೆ. ಹೀಗೆ ಪ್ರತಿಯೊಂದು ವಿಚಾರದಲ್ಲೂ ಅಪಪ್ರಚಾರ ನಡೆಯುತ್ತಿದ್ದು, ಈ ಬಗ್ಗೆ ಮತದಾರರೇ ತೀರ್ಮಾನ ನೀಡಲಿದ್ದಾರೆ ಎಂದರು.

    ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದಿಂದ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಈ ಚುನಾವಣೆ ರಾಷ್ಟ್ರದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಯಾದ್ದರಿಂದ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಬಲತುಂಬಿ ಎಂದರು.

    ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಟ್ಠಲ ಪೂಜಾರಿ, ಬಿಜೆಪಿ ಮುಖಂಡರಾದ ಸುಪ್ರಸಾದ್ ಶೆಟ್ಟಿ, ಗೋಪಾಡಿ ಸುರೇಶ್ ಶೆಟ್ಟಿ, ರಾಜೇಶ್ ಕಾವೇರಿ, ಮಹಾಬಲ ಕುಂದರ್ ಕೋಡಿ, ಸುರೇಶ್ ಕುಂದರ್, ಶಂಕರ ಅಂಕದಕಟ್ಟೆ, ಗೀತಾ ಖಾರ್ವಿ, ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಇದ್ದರು.

  • ಕೋಟ :ಇನ್ಮುಂದೆ ಅಭಿವೃದ್ಧಿಯ ಚುನಾವಣೆ ನಡೆಯುತ್ತದೆ – ಜೆ.ಪಿ.ಹೆಗ್ಡೆ

    ಕೋಟ :ಇನ್ಮುಂದೆ ಅಭಿವೃದ್ಧಿಯ ಚುನಾವಣೆ ನಡೆಯುತ್ತದೆ – ಜೆ.ಪಿ.ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಈ ಬಾರಿಯ ಲೋಕಸಭಾ ಚುನಾವಣೆ ಅಭಿವೃದ್ಧಿ ಆಧಾರಿತ ಚುನಾವಣೆಯಾಗಿ ಮೂಡಿಬರಲಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ತಕಾಶ್ ಹೆಗ್ಡೆ ಹೇಳಿದ್ದಾರೆ.

    ಸಾಲಿಗ್ರಾಮದಲ್ಲಿರುವ ಕೋಟ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಲಿಗ್ರಾಮ ಗ್ರಾಮಿಣಾ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    ನಾನು ಸಂಸದ, ಸಚಿವ, ಶಾಸಕ ಆಗಿದ್ದೇ ಎನ್ನುವುದಕ್ಕಿಂತ ಆ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳಾಗಿದೆ ಎಂಬುದರ ಮೂಲಕ ನಾನು ಮತದಾರರ ಮುಂದೆ ಬಂದಿದ್ದೇನೆ. ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಕೆಲಸ ಮಾಡಿದ್ದು ಕ್ಷೇತ್ರದ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನಾಯಕರ ಹೆಸರಿನಲ್ಲಿ ಮತವನ್ನು ಕೇಳಿ ಗೆದ್ದು ಬಂದರೆ ಅವರು ಮತ್ತೆ ಬರುವುದು 5 ವರ್ಷಗಳ ಬಳಿಕ. ಅಲ್ಲಿಯವರೆಗೆ ಮತದಾರರ ಕಡೆಗೆ ತಿರುಗಿಯೂ ನೋಡುವುದಿಲ್ಲ. ಆದುದರಿಂದ ನಿಮಗೆ ಮತದಾನದ ಮೂಲಕ ಆಯ್ಕೆ ಮಾಡುವಾಗಲೇ ಎಚ್ಚರವಹಿಸಿ ಮತದಾನ ಮಾಡಬೇಕಿದೆ ಎಂದರು.

    ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪುಸ್ತಕದಲ್ಲಿ ಇಟ್ಟ ನವಿಲು ಗರಿ ಎಂದು ಲೇವಡಿ ಮಾಡಿದ್ದರು. ಆದರೆ ನಾವು ನುಡಿದಂತೆ ನಡೆದಿದ್ದೇವೆ. ಇದರಿಂದ ಅರ್ಥಿಕ ನಷ್ಟವಾಗುತ್ತದೆಂಬ ಬಿಜೆಪಿಯವರೇ, ಕೇಂದ್ರ ಸರಕಾರ 11 ಲಕ್ಷ ಕೋಟಿ ಉದ್ದಿಮೆದಾರರ ಸಾಲ ಮನ್ನಾ ಮಾಡಿದಾಗ ನಷ್ಟವಾಗಿಲ್ಲವೇ ಎಂದು ಪ್ರಶ್ನಿಸಿದರು.

    ಈ ಸಂದರ್ಭ ಮಾತನಾಡಿದ ಕೆ. ಗೋಪಾಲ ಪೂಜಾರಿ, ಕೋಟ ಶ್ರೀನಿವಾಸ ಪೂಜಾರಿ ಕಲ್ಲಡ್ಕ ಪ್ರಭಾಕರ್ ಭಟ್ಟರ ಏಜೆಂಟ್. ಅಧಿಕಾರವಿದ್ದಾಗ ಬಿಲ್ಲವರ ಪರ ಕೆಲಸ ಮಾಡುವ, ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ನನ್ನನ್ನು ಭಯೋತ್ಪಾದಕ ಎಂದು ಬೈಂದೂರು ಕ್ಷೇತ್ರಕ್ಕೆ ಬಂದು ಹೇಳಿಕೆ ನೀಡಿದರು. ನಾನು 30 ವರ್ಷದ ರಾಜಕಾರಣದಲ್ಲಿ ಯಾವುದೇ ಅನ್ಯಾಯದ ಕೆಲಸ ಮಾಡಿಲ್ಲ. ಮನೆ ಮಾರಿ, ಆಸ್ತಿ ಮಾರಿ ನಾನು ರಾಜಕಾರಣ ಮಾಡಿದ್ದೇನೆ. ಆದರೆ ಯಾವತ್ತೂ ನಾನು ಬಡವ, ಸರಳ ಎಂದು ಸುಳ್ಳು ಹೇಳುತ್ತಾ ತಿರುಗಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿಗೆ ಮಾತಿನಲ್ಲೇ ತಿವಿದರು.

    ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಎ ಕುಂದರ್ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸರಕಾರದ ಗ್ಯಾರಂಟಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸಭೆಯಲ್ಲಿ ಪುನರುಚ್ಚರಿಸಿದರಲ್ಲದೆ ಹಿಂದಿನ ಕಾಂಗ್ರಸ್ ಅವಧಿಯನ್ನು ಮತ್ತೆ ಪುನರಾವರ್ತನೆಗೋಳ್ಳಲಿದ್ದು ಜಯಪ್ರಕಾಶ್ ಹೆಗ್ಡೆಯವರು ಅತಿ ಹೆಚ್ಚು ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ, ಈ ದಿಸೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಅನುಷ್ಠಾನವನ್ನು ಮನೆ ಮನೆಗೆ ತಿಳಿಹೇಳುವ ಕಾರ್ಯ ಆಗಲಿ ಎಂದು ಕರೆ ಇತ್ತರು.

    ಕಾರ್ಯಕ್ರಮದಲ್ಲಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅಮೀನ್, ಮಹಿಳಾ ಘಟಕದ ರೇಖಾ ಪಿ ಸುವರ್ಣ, ಮುಖಂಡರುಗಳಾದ ಪ್ರಕಾಶ್‍ಚಂದ್ರ ಶೆಟ್ಟಿ ಕಂಬದ ಕೋಣೆ, ತಿಮ್ಮ ಪೂಜಾರಿ, ರವೀಂದ್ರ ಕಾಮತ್ ಗುಂಡ್ಮಿ, ಗಣೇಶ್ ಬಡಹೋಳಿ, ಪುನೀತ್ ಪೂಜಾರಿ, ಜಹಿರಾ ಎಂ.ಎಸ್. ಸಂಜೀವ, ರಾಜೇಶ್ ಕೆ ನೆಲ್ಲಿಬೆಟ್ಟು, ದಿನೇಶ್ ಬಂಗೇರ, ಗೋಪಾಲ್ ಬಂಗೇರ, ಗಣೇಶ್ ಕೆ ನೆಲ್ಲಿಬೆಟ್ಟು, ಸುಜನ್ ಶೆಟ್ಟಿ, ನಾಗೇಂದ್ರ ಪುತ್ರನ್, ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ,ಪಂಚಾಯತ್ ಸದ್ಯಸರು, ಕೆ ಜಯಪ್ರಕಾಶ್ ಹೆಗ್ಡೆ ಅವರ ಹಿತೈಷಿಗಳು, ಘಟಕದ ಅಧ್ಯಕ್ಷರು ಸದ್ಯಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

  • ಉಡುಪಿ :ಲೋಕಸಭಾ ಸಾರ್ವತ್ರಿಕ ಚುನಾವಣೆ 2024 – ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ13 ಜನ ಅಭ್ಯರ್ಥಿಗಳು 19 ನಾಮಪತ್ರ ಸಲ್ಲಿಕೆ

    ಉಡುಪಿ :ಲೋಕಸಭಾ ಸಾರ್ವತ್ರಿಕ ಚುನಾವಣೆ 2024 – ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ13 ಜನ ಅಭ್ಯರ್ಥಿಗಳು 19 ನಾಮಪತ್ರ ಸಲ್ಲಿಕೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂದಿಸಿದಂತೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ13 ಜನ ಅಭ್ಯರ್ಥಿಗಳು 19 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ. ಜಯಪ್ರಕಾಶ್ ಹೆಗ್ಡೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ, ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿ ಕೆ.ಟಿ ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿಯಾಗಿ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕರ ಪಕ್ಷದ ಅಭ್ಯರ್ಥಿಯಾಗಿ ಶಬರೀಶ್ ಆರ್, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಎಲ್ ರಂಗನಾಥ್ ಗೌಡ, ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಎಂ.ಕೆ ದಯಾನಂದ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಸಚಿನ್ ಬಿ.ಕೆ , ಸ್ವತಂತ್ರ ಅಭ್ಯರ್ಥಿಯಾಗಿ ಸುಧೀರ್ ಕಾಂಚನ್ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿ ವಿಜಯಕುಮಾರ್ ಎಂ.ಜಿ, ಕೆ.ಆರ್ ಕುಸುಮ, ರಾಜ್ ಬಲ್ಲಾಳ್ ಹಾಗೂ ಹೆಚ್ ಸುರೇಶ್ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.

  • ಉಡುಪಿ :ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ : ಕೋಟಾ

    ಉಡುಪಿ :ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ : ಕೋಟಾ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ ; ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ನಾಮಪತ್ರ ಸಲ್ಲಿಕೆಗ ಮುನ್ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಒಳ್ಳೆಯ ಮುಹೂರ್ತದಲ್ಲಿ ನಾಮಪತ್ರ ಹಾಕ್ತೇನೆ ಎಂದ ಅವರು ಹಿರಿಯರು ಗ್ರಾಮಪಂಚಾಯತ್ ಸದಸ್ಯನಿಂದ ನಿಂದ ಆರಂಭವಾಗಿ ಮಂತ್ರಿಯಾದೆ. ಜಿಲ್ಲಾಧ್ಯಕ್ಷನಿಂದ ಒಬಿಸಿ ಮೋರ್ಚಾದವರೆಗೆ ಸಂಘಟನೆ ಮಾಡಿದ್ದೇನೆ. ಮುಜರಾಯಿ ಮಂತ್ರಿಯಾಗಿ ಸಾವಿರಾರು ದೈವಸ್ಥಾನ ದೇವಸ್ಥಾನದಿಂದ ಹಣ ಮಂಜೂರು ಮಾಡಿದೆ. ಒಂದೇ ದಿನ 26 ಸಾವಿರ ಬಡ ಮಕ್ಕಳು ಹಾಸ್ಟೆಲ್ ವ್ಯವಸ್ಥೆಗೆ ಒಳಪಡಿಸಿದೆ. ಮೂರು ಸೇನಾ ತರಬೇತಿ ಶಾಲೆ ದೇಶದಲ್ಲೇ ದಾಖಲೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ ಇದು ಭಾರತದ ಭವಿಷ್ಯದ ಚುನಾವಣೆ. ಅಂದು ಚಿನ್ನ ಅಡವಿಟ್ಟ ಭಾರತ ಇವತ್ತು ಮೋದಿ ಆಡಳಿತದಲ್ಲಿ ಹತ್ತಾರು ದೇಶಕ್ಕೆ ಸಾಲಕೊಟ್ಟ ಭಾರತವಾಗಿದೆ ಎಮದ ಕೋಟಾ, ಸೈನಿಕರಿಗೆ ಶಕ್ತಿಕೊಟ್ಟದ್ದು ಮೋದಿಯ ಆಡಳಿತ ಎಂದರು.

    ಸಿ.ಟಿ ರವಿ ಮಾತನಾಡಿ, ಹಗರಣಗಳ ಪಕ್ಷ ಕಾಂಗ್ರೆಸ್. ನಮ್ಮದು ನೀತಿ -ನೇತೃತ್ವ ನಿಯತ್ತಿನ ಚುನಾವಣೆ. ಮೋದಿ ಕಾಲದಲ್ಲಿ 7 ರಿಂದ 20 ಲಕ್ಷ ಕೋಟಿವರೆಗೆ ತೆರಿಗೆ ಹಣ ಸಂಗ್ರಹವಾಗಿದೆ. ಕಾಂಗ್ರೆಸ್ 14 ಟಿಕೆಟ್ ಕಾಂಗ್ರೆಸ್ ಕುಟುಂಬಕ್ಕೆ ಕೊಟ್ಟಿದೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಪಕ್ಷದ ಚಾಕರಿ ಮಾಡಲು ಮಾತ್ರ ಇರೋದು. ಕಾಂಗ್ರೆಸ್ ನದ್ದು ಪಪ್ಪು ನೇತೃತ್ವ, ಬಿಜೆಪಿದ್ದು ಜಗತ್ತು ಕೊಂಡಾಡಿದ ನೇತೃತ್ವ ಎಂದು ಮೋದಿಯನ್ನು ಕೊಂಡಾಡಿದರು. ಭಾರತ ಅಮೃತಕಾಲದಲ್ಲಿ ವಿಶ್ವಗುರು ಭಾರತ ಆಗಬೇಕು ಎಂಬುದು ಗುರಿ ಭ್ರಷ್ಟಾಚಾರ ಮುಚ್ಚಿ ಹಾಕಲು, ಜಾತಿಗಾಗಿ, ದೇಶ ಒಡೆಯಲು ಅಧಿಕಾರ ಕೊಡಬೇಡಿ. ಭಯೋತ್ಪಾಧಕರಿಗೆ ಗಲಭೆಕೋರರಿಗೆ ಕಾಂಗ್ರೆಸ್ ಬ್ರದರ್ಸ್ ಅಂತಾರೆ ಬಾಂಬ್ ತಯಾರಿ ಲಿಂಕ್ ಚಿಕ್ಕಮಗಳೂರು, ದ.ಕ ಉಡುಪಿ ಉತ್ತರ ಕನ್ನಡ ಜೊತೆ ಲಿಂಕ್ ಇದೆ ಅದನ್ನು ಮಟ್ಟ ಹಾಕ್ತೇವೆ. ಮತ್ತೆ ಬಾಬ್ರಿ ಮಸೀದಿ ನಿರ್ಮಾಣದ ಕೂಗು ಕೇಳುತ್ತಿದೆ.. ಅವಕಾಶ ಕೊಡ್ತೀರಾ? ಎಂದು ಪ್ರಶ್ನಿಸಿದ ಅವರು, ಮಥುರಾ, ಕಾಶಿ ಪುನರ್ ನಿರ್ಮಾಣ ಮಾಡುವ ತಾಕತ್ತು ಮೋದಿ ಸರಕಾರಕ್ಕಿದೆ. ಕೋಟ ಗೆಲುವಿನೊಂದಿಗೆ ಮೋದಿ ಸರ್ಕಾರದ ನಡೆಯುತ್ತದೆ ಎಂದರು. ಕೋಟ ಕಮಿಟೆಡ್ ಕೇಡರ್. ಹೀ ಈಸ್ ನಾಟ್ ಜಂಪಿಂಗ್ ಸ್ಟಾರ್. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂದರು.

    ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಾನು ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಚೌಟಾ ಮತ್ತು ಉಡುಪಿ ಚಿಕ್ಕಮಗಳೂರಿನಲ್ಲಿ ಕೋಟಾ ಸೇರಿ ಕಾಂಗ್ರೆಸ್ ಗೆ ಗೂಟ ಇಡಲಿದ್ದಾರೆ. ಇದು ಮೋದಿ ಚುನಾವಣೆ ಅಲ್ಲ ಸನಾತನ ಧರ್ಮ ಉಳಿಸುವ ಚುನಾವಣೆ ಎಂದರು. ಸಿದ್ದರಾಮಯ್ಯ ದಾಟಿಯನ್ನು ಅಣಕಿಸಿದ ಯತ್ನಾಳ್, ತಿಹಾರ್ ಜೈಲಿಂದ ಬಂದವ 15 ಲಕ್ಷ ಕೇಳ್ತಾನೆ.. ನಿನ್ನ ಆಸ್ತಿ ಮಾರಿದ್ರೆ ಕೊಡಬಹುದು ಎಂದು ಡಿಕೆಶಿಗೆ ಟಾಂಗ್ ಕೊಟ್ಟರು. ಯಾರನ್ನು ಬಿಡಲ್ಲ, ನಿಮ್ಮನ್ನೂ ಬಿಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದರು. ಈ ಹತ್ತು ವರ್ಷ ಜಸ್ಟ್ ಟ್ರೈಲರ್ ಅಷ್ಟೇ. ಮುಂದಿನ ಪಿಚ್ಚರ್ ಬಾಕಿ ಇದೆ ಎಂದ ಅವರು, ಕೇಜ್ರಿವಾಲ್ ಇಲ್ಲ.. ಡಿಂಗ್ರಿವಾಲನೂ ಜೈಲಿಗೆ ಹೋಗ್ತಾನೆ. ಈಗ ಮಗ -ತಂಗಿ- ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡ್ತಿದ್ದಾರೆ ಎಂದರು. ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ ಎಂದರು. ರಾಹುಲ್ ವರಿಜಿನಾಲಿಟಿ ಪ್ರಶ್ನಿಸಿದ ಯತ್ನಾಳ್, ರಾಹುಲ್ ದೇಗುಲ -ಮಸೀದಿ -ಚರ್ಚ್ ಹೋದಾಗ ಬದಲಾಗ್ತಾನೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ. ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ಮುಂದಿನ ಜನ್ಮದಲ್ಲೇನು ಈಗಲೇ ಮುಸ್ಲಿಂ ಆಗಿಬಿಡು ಎಂದು ಛೇಡಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಮೂರು ಜನರ ಕಂಪನಿ
    ಸಿಎಂ ಗೆ ಸನ್ಮಾನ ಸಂದರ್ಭ ಸತ್ತಮೇಲೆ ಲಿಂಗಾಯತರ ಹೆಣ ಕೂರಿಸಿದಂಗೆ ಕೂರಿಸಿ ಹೂವು ಹಾಕಿದ್ರು. ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತೆ. ಸಿದ್ದರಾಮಯ್ಯ ಇಳಿದರೆ ಕಾಂಗ್ರೆಸ್ ಡುಬುಕ್ ಅಂತ ಬಿದ್ ಬಿಡುತ್ತೆ ಎಂದು ಲೇವಡಿ ಮಾಡಿದರು.

    ಯಾವುದೇ ಕಾರಣಕ್ಕೂ ಮೋದಿ ಸಂವಿಧಾನ ಬದಲು ಮಾಡಲು ಬಿಡಲ್ಲ. ಅಂಬೇಡ್ಕರ್ ಸಮಾಧಿಗೆ ಕಾಂಗ್ರೆಸ್ 10 ಫೀಟ್ ಜಾಗ ಕೊಟ್ಟಿಲ್ಲ. ನೆಹರೂ, ಇಂದಿರಾ ಸಮಾಧಿ ಸ್ಥಳಕ್ಕೆ ಎಕ್ರೆಗಟ್ಟಲೆ ಮಾಡಿಕೊಂಡಿದ್ದಾರೆ ಎಂದ ಅವರು, ಮತದಾನ ದೇವರ ಧರ್ಮದ ದೇಶದ ಕೆಲಸ. ಎಲ್ಲಾ ಮತದಾರರೂ ಮತದಾನ ಮಾಡಿ ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಯ ದೇವರಾಜ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್, ತೀರ್ಥಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಅರಗ ಜ್ಜಾನೇಂದ್ರ, ವಿಧಾನ ಪರಿಷತ್ ಉಪ ಸಭಾಪತಿ, ಎಮ್.ಕೆ.ಪ್ರಾಣೇಶ್, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ವಿಭಾಗದ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ,
    ದ.ಕ.ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟಾ , ರವೀಂದ್ರ ಬೆಳ್ಮಾಡಿ, ಪ್ರತಾಪ್ ಸಿಂಹ್, ವಿಧಾನ ಪರಿಷತ್ ಸದಸ್ಯ ಬೋಜೆ ಗೌಡ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ್ ಯೋಗೀಶ್ ಶೆಟ್ಟಿ, ರಂಜನ್ ಅಜೀತ್ ಕುಮಾರ್, ಕುಲ್ಯಾಡಿ ಸುರೇಶ್ ನಾಯಕ್, ಮಾಜಿ ಶಾಸಕ ರಘಪತಿ ಭಟ್, ಕೃಷ್ಣ್ ಪಲೆಮಾರ್, ಲಾಲಾಜಿ ಮೆಂಡನ್, ಜೀವರಾಜ್, ಶಿಲ್ಪಾ ಜಿ.ಸುವರ್ಣ, ಸುಧಾಕರ್ ಶೆಟ್ಟಿ, ಮಟ್ಟಾರು ರತ್ನಾಕರ್ ಶೆಟ್ಟಿ, ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

    ಉಡುಪಿ ಜಿಲ್ಲಾಧ್ಯಕ್ಷ್ ಬಿ.ಕಿಶೋರ್ ಕುಮಾರ್ ಸ್ವಾಗತಿಸಿದರು. ರೇಷ್ಮಾ ಉದಯ್ ಶೆಟ್ಟಿ ವಂದಿಸಿದರು.

  • ಉಡುಪಿ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ

    ಉಡುಪಿ: ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ

    ಕುಂದಾಪುರ ಮಿರರ್ ಸುದ್ದಿ…
    ಉಡುಪಿ :ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

    ಕೋಟ ಶ್ರೀನಿವಾಸ್ ಪೂಜಾರಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭ ಮಾಜಿ ಸಚಿವ ಸಿ.ಟಿ ರವಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ, ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಉಪಸ್ಥಿತರಿದ್ದರು.

    ಇನ್ನು ಕೋಟ ಶ್ರೀನಿವಾಸ್ ಪೂಜಾರಿ ಅವರು ನಾಮಪತ್ರ ಸಲ್ಲಿಸುವ ಮುನ್ನ ಪಕ್ಷದ ಕಾರ್ಯಕರ್ತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

  • ಉಡುಪಿ – ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

    ಉಡುಪಿ – ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ನಾಮಪತ್ರ ಸಲ್ಲಿಸಿದ್ದಾರೆ.

    ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಸಮಾವೇಶದ ಬಳಿಕ ಮುಖಂಡರ ಜೊತೆ ತೆರಳಿದ ಜಯಪ್ರಕಾಶ್ ಹೆಗ್ಡೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಅವರಿಗೆ ನಾಮಪತ್ರ ಸಲ್ಲಿಸಿದರು.

    ಈ ಸಂಧರ್ಭದಲ್ಲಿ ಸಚಿವ ಕೆ.ಜೆ.ಜಾಜ್೯, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಚಿಕ್ಕಮಗಳೂರು ಕಾಂಗ್ರೇಸ್ ಅಧ್ಯಕ್ಷ ಅಂಶುಮತ್, ಮೊಟ್ಟಮ್ಮ ಉಪಸ್ಥಿತರಿದ್ದರು.

  • ಬೈಂದೂರಿಗೆ ಮೋದಿಯವರನ್ನು ಕರೆದುಕೊಂಡು ಬರುವೆ : ಬಿ.ವೈ. ರಾಘವೇಂದ್ರ – ಬೈಂದೂರು ಜೆಎನ್‌ಆರ್ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ

    ಬೈಂದೂರಿಗೆ ಮೋದಿಯವರನ್ನು ಕರೆದುಕೊಂಡು ಬರುವೆ : ಬಿ.ವೈ. ರಾಘವೇಂದ್ರ – ಬೈಂದೂರು ಜೆಎನ್‌ಆರ್ ಹಾಲ್‌ನಲ್ಲಿ ಕಾರ್ಯಕರ್ತರ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದೊಳಗೆ ಬರುವ ಬೈಂದೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ಕಲ್ಪನೆಯಿದೆ. ಈಗಾಗಲೇ ಮೀನುಗಾರಿಕೆ, ಪ್ರವಾಸೋದ್ಯಮ, ರಸ್ತೆ, ಶಾಲಾ, ಕಾಲೇಜು ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 687 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

    ಬೈಂದೂರಿನ ಜೆಎನ್‌ಆರ್ ಸಭಾಭವನದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಾತಿ, ಜನಾಂಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಮತ್ತು ಮುಂದೆಯೂ ನೀಡಲಾಗುವುದು. ವಿಶೇಷವಾಗಿ ಮುಂದಿನ ದಿನಗಳಲ್ಲಿ ಯುವಕರಿಗೆ ಸ್ಥಳೀಯವಾಗಿಯೇ ಇನ್ನಷ್ಟು ಉದ್ಯೋಗ ಸೃಷ್ಟಿಗೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಮೋದಿಯವರನ್ನು ಕರೆದುಕೊಂಡು ಬರುವೆ
    ಈ ಬಾರಿ ಬೈಂದೂರು ಕ್ಷೇತ್ರದಿಂದಲೇ 1 ಲಕ್ಷಕ್ಕೂ ಅಧಿಕ ಲೀಡ್ ಬರುವ ನಿರೀಕ್ಷೆಯಿದೆ. ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿ ಹೆಚ್ಚೆಚ್ಚು ಅನುದಾನವನ್ನು ತರಲಾಗುವುದು. ಅಷ್ಟು ಮಾತ್ರವಲ್ಲದೇ ಇಲ್ಲಿನ ಜನತೆ ಪಕ್ಷ, ಪ್ರಧಾನಿಯವರ ಮೇಲಿಟ್ಟಿರುವ ವಿಶ್ವಾಸವನ್ನು ಅವರಿಗೆ ತಿಳಿಸಿ ಮುಂದಿನ ಐದು ವರ್ಷಗಳಲ್ಲಿ ಒಮ್ಮೆಯಾದರೂ ಬೈಂದೂರು ಕ್ಷೇತ್ರಕ್ಕೆ ಮೋದಿಯವರನ್ನು ಕರೆದುಕೊಂಡು ಬರಲಿದ್ದೇನೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಸಭೆ
    ಉದ್ಯೋಗ ಸೇರಿದಂತೆ ವಿವಿಧ ಕಾರಣಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿರುವ ಕ್ಷೇತ್ರದ ಮತದಾರರ ಸಭೆಯನ್ನು ಏಪ್ರಿಲ್ 14ರ ಸಂಜೆ 4 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದು, ಬಿಜೆಪಿ, ಜೆಡಿಎಸ್ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಿಮ್ಮ ಮನೆಯಿಂದ ಯಾರಾದರೂ ಬೆಂಗಳೂರಿನಲ್ಲಿದ್ದರೆ ಅವರಿಗೂ ಮಾಹಿತಿ ನೀಡಿ ಎಂದು ಕೋರಿಕೊಂಡರು.

    ಆಶೀರ್ವಾದ ನೀಡಿ
    ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಏಪ್ರಿಲ್ 18ರಂದು ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ. ಪಕ್ಷದ ನಾಯಕರು ಉಪಸ್ಥಿತರಲಿದ್ದಾರೆ. ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

    ಶಾಸಕರಾದ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಮುಖರು ಉಪಸ್ಥಿತರಿದ್ದರು.

  • ಬೈಂದೂರು :ಮೋದಿಯ ಮತ್ತೊಂದು ಪಟ್ಟಾಭಿಷೇಕದ ಚುನಾವಣೆ : ಬಿವೈಆರ್

    ಬೈಂದೂರು :ಮೋದಿಯ ಮತ್ತೊಂದು ಪಟ್ಟಾಭಿಷೇಕದ ಚುನಾವಣೆ : ಬಿವೈಆರ್

    ಕುಂದಾಪುರ ಮಿರರ್ ಸುದ್ದಿ…

    ನಾಗೂರು: ಭಾರತವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆ ಇದಾಗಿದೆ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಯವರಿಗೆ ಪಟ್ಟಾಭಿಷೇಕ ಮಾಡಬೇಕು ಎಂದು ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

    ನಾಗೂರಿನ ಲಲಿತಾಕೃಷ್ಣ ಕಲಾ ಮಂದಿರದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಕೊಲ್ಲೂರು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ತಾಯಿ ಮೂಕಾಂಬಿಕೆ ಮೋದಿ ಜೀಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವಂತೆ ಬೇಡಿಕೊಂಡಿದ್ದೇವೆ. ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಇದು ಭಾರತವನ್ನು ವಿಶ್ವಗುರುವಾಗಿ ಬೆಳಯಲು ಮೇಲ್ತಂಕಿ ಹಾಕಿದ ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಚುನಾವಣೆಯಾಗಿದೆ ಎಂದರು.

    ದೇಶ, ಕರ್ನಾಟಕ, ಕ್ಷೇತ್ರದ ರೈತರು, ಬಡವರು, ಮಹಿಳೆಯರು ಸಹಿತ ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕಾದರೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ 60 ವರ್ಷಕ್ಕೂ ಹೆಚ್ಚು ಕಾಲ ಈ ದೇಶವನ್ನು ಆಳಿದ್ದರೂ ಬಡವರನ್ನು ಅಭಿವೃದ್ಧಿ ಮಾಡಿಲ್ಲ. ಬಡವರು ಬಡವರಾಗಿಯೇ ಇರುವಂತೆ ನೋಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ಅದೆಷ್ಟೋ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ದೇಶ, ರಾಜ್ಯ, ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ವಿವಿಧ ವಿಶ್ವವಿದ್ಯಾಲಯು, ಕೇಂದ್ರೀಯ ವಿದ್ಯಾಲಯ ಸೇರಿದಂತೆ ಅನೇಕ ಕೊಡುಗೆಯನ್ನು ಶಿವಮೊಗ್ಗ ಕ್ಷೇತ್ರಕ್ಕೂ ನೀಡಿದ್ದಾರೆ ಎಂದರು.

    ಸದಾ ನಿಮ್ಮ ಸೇವೆಯಲ್ಲಿ
    ಕಳೆದ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಿದ್ದೀರಿ. ಈ ಬಾರಿಯೂ ಅದಕ್ಕಿಂತ ಹೆಚ್ಚು ಮತ ನೀಡುವ ವಿಶ್ವಾಸವೂ ಇದೆ. ಜೀವನ ಪೂರ್ತಿ ನಿಮ್ಮ ಸೇವೆ ಮಾಡಿದರೂ ಋಣ ತೀರಿಸಲು ಸಾಧ್ಯವಿಲ್ಲ. ಮತದಾರರ ಮೌಲ್ಯವನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯದಲ್ಲಿ ಮುನ್ನೆಡೆಯುತ್ತೇವೆ.
    ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ ಎನ್ನುವ ಅಪಸ್ವರ ಭಾರದಂತೆ ನಡೆದುಕೊಳ್ಳುತ್ತೇವೆ. ಸದಾ ನಿಮ್ಮ ಸೇವೆಯಲ್ಲಿರುತ್ತೇವೆ ಎಂದರು.

    ಜನರ ಬದುಕು ಕಸಿದ ಕಾಂಗ್ರೆಸ್
    ಕಾಂಗ್ರೆಸ್ ಸರಕಾರ ಜನರ ಬದುಕಿಗೆ ಮಾರಕವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಲಿಗೆ 5 ರೂ. ಪ್ರೋತ್ಸಾಹಧನ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ರೈತರು ಬರಗಾಲ ಎದುರಿಸುತ್ತಿದ್ದರೂ ಕಳೆದ 6 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. 650 ಕೋ.ರೂ. ನೀಡಲು ಬಾಕಿಯಿದೆ. ಪ್ರಧಾನ ನರೇಂದ್ರ ಮೋದಿಯವರು ಕೃಷಿ ಸಮ್ಮಾನ ಅಡಿಯಲ್ಲಿ ವಾರ್ಷಿಕ 6 ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿದ್ದು, ಅದಕ್ಕೆ ಬಿ.ಎಸ್.ಯಡಿಯೂಪ್ಪ ಅವರು ಸಿಎಂ ಆಗಿದ್ದಾಗ 4 ಸಾವಿರ ಸೇರಿಸಿ ಕೊಡುತ್ತಿದ್ದರು. ಅದನ್ನು ಈಗ ಕಾಂಗ್ರೆಸ್ ಸರಕಾರ ನಿಲ್ಲಿಸಿಬಿಟ್ಟಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಸರಕಾರ ಜನರ ಬದುಕಿಗೆ ಮಾರಕವಾಗಿದೆ ಎಂದರು.

    298 ಕೋಟಿ ರೂ. ಕಾಮಗಾರಿ
    ಶಿವಮೊಗ್ಗ ಕ್ಷೇತ್ರದ ಕಂಬದಕೋಣೆ ಜಿ.ಪಂ. ವ್ಯಾಪ್ತಿಯಲ್ಲಿ ಸುಮಾರು 298 ಕೋ.ರೂ. ಕಾಮಗಾರಿಯಾಗಿದೆ. ಗ್ರಾಮೀಣ ರಸ್ತೆಗೆ 40 ಕೋ.ರೂ., ಕಿಂಡಿ ಅಣೆಕಟ್ಟಿಗೆ 11 ಕೋ.ರೂ., ಬಂದರಿಗೆ 212 ಕೋ.ರೂ., ಶಾಲಾ ಕಾಲೇಜು ಅಭಿವೃದ್ಧಿಗೆ 2.78 ಕೋ.ರೂ., ಕೆರೆ ಅಭಿವೃದ್ಧಿಗೆ 1.10 ಕೋ.ರೂ., ನದಿ ದಂಡೆ ಸಂಕ್ಷಣೆಗೆ 5.72 ಕೋ.ರೂ ನೀಡಲಾಗಿದೆ. ವಿವಿಧ ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ 25 ಕೋ.ರೂ. ಒದಗಿಸಲಾಗಿದೆ. ಹೀಗೆ ಮುಂದೆಯೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.

    ಶಾಸಕರಾದ ಗುರುರಾಜ ಗಂಟಿಹೊಳೆ, ಮಂಡಲ ಅಧ್ಯಕ್ಷರಾದ ದೀಪಾಕ್ ಕುಮಾರ್ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಶೇಖರ್ ಖಾರ್ವಿ ಸಹಿತವಾಗಿ ಪಕ್ಷದ ಕಾರ್ಯಕರ್ತರು ಮುಖಂಡರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  • ಬೈಂದೂರು :ಪೊಳ್ಳು ಹಿಂದುತ್ವವಾದಿಗೆ ಬೈಂದೂರು ಕ್ಷೇತ್ರ ಆದ್ಯತೆ ಕೊಡುವುದಿಲ್ಲ , ಹಿಂದುತ್ವ ನಮ್ಮ ರಕ್ತದಲ್ಲೇ ಇದೆ – ಬಿ.ವೈ.ರಾಘವೇಂದ್ರ

    ಬೈಂದೂರು :ಪೊಳ್ಳು ಹಿಂದುತ್ವವಾದಿಗೆ ಬೈಂದೂರು ಕ್ಷೇತ್ರ ಆದ್ಯತೆ ಕೊಡುವುದಿಲ್ಲ , ಹಿಂದುತ್ವ ನಮ್ಮ ರಕ್ತದಲ್ಲೇ ಇದೆ – ಬಿ.ವೈ.ರಾಘವೇಂದ್ರ

    ಕುಂದಾಪುರ ಮಿರರ್ ಸುದ್ದಿ…
    ನಾಗೂರು: ಪಕ್ಷದ ಚೌಕಟ್ಟಿನಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆ ಆದ ನಂತರದಲ್ಲಿ ಅದೇ ಅಧಿಕೃತವಾಗಲಿದೆ. ಹಿಂದುತ್ವವಾದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದುವೇ ಆಗಿದೆ. ದೇಶದಲ್ಲಿರುವ ಎಲ್ಲರೂ ಹಿಂದುಗಳೇ ಆಗಿದ್ದಾರೆ. ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗುಡುಗಿದರು.

    ನಾಗೂರಿನಲ್ಲಿ ಮಂಗಳವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ವೈ.ರಾಘವೇಂದ್ರ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಅವರ ಪಕ್ಕದಲ್ಲೇ ನನ್ನನ್ನು ನಿಲ್ಲಿಸಿಕೊಂಡು ಪ್ರಚಾರವನ್ನು ಮಾಡಿ, ರಾಘವೇಂದ್ರ ಅವರಿಗೆ ಹಾರೈಸಿ, ಆಶೀರ್ವಾದ ಮಾಡಿದ್ದಾರೆ.‌ ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ ಎಂದರು.

    ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ –
    ದೇಶದಲ್ಲಿರುವ ಎಲ್ಲರೂ ಹಿಂದೂ ವಾದಿಗಳು. ನಾನು ಮಾತೃವಲ್ಲ, ಬಿ.ಎಸ್. ಯಡಿಯೂರಪ್ಪನವರು
    ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದ ಕರಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡು, ಆರೆಸ್ಸೆಸ್ ಪ್ರಚಾರಕರಾಗಿ ಹುಬ್ಬಳ್ಳಿ ಈದ್ಗಾ ಮೈದಾನ ಹೋರಾಟ ಇರಬಹುದು, ಮುರಳಿ ಮನೋಹರ್ ಜೋಶಿಯವರು ಕರೆಕೊಟ್ಟ ಸಂದರ್ಭದಲ್ಲಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಉಗ್ರಗಾಮಿಗಳ ದಾಳಿಯ ಮಧ್ಯದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗವಹಿಸಿದ್ದರು. ಹೀಗಾಗಿ ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶನ ಮಾಡುವ ಅವಶ್ಯಕತೆ ನಮಗಿಲ್ಲ ಎಂದರು.

    ಬಿಎಸ್ವೈ ಯೋಜನೆ ಬಲ –
    ಯಡಿಯೂಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಂದಿರುವ ಒಂದೊಂದು ಯೋಜನೆಯನ್ನು ಜನ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಗೋ ಹತ್ಯೆ ನಿಷೇಧಕ್ಕೆ ಬಿಗಿ ಕಾನೂನು ತಂದಿದ್ದಾರೆ. ಭಾಗ್ಯ ಲಕ್ಷ್ಮೀ ಯೋಜನೆ ಮೂಲಕ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ದೊಡ್ಡ ಪ್ರಯತ್ನ ಮಾಡಿದ್ದಾರೆ. ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿ ಸೇರಿ ಅನೇಕ ಮಹನೀಯರ ಜಯಂತಿ, ಎಲ್ಲ ಮಠ ಮಂದಿರಗಳ ಅಭಿವೃದ್ಧಿ ಕಾರ್ಯಕ್ಕೆ ಆದ್ಯತೆ ನೀಡಿದ್ದರು. ಚುನಾವಣೆಗಾಗಿ ಹಿಂದುತ್ವ ನಮ್ಮದಲ್ಲ. ವೋಟಿಗಾಗಿ ಹಿಂದುತ್ವ ಬಳಸಿಕೊಳ್ಳುವವರಿಂದ ಪಾಠ ಅಗತ್ಯವಿಲ್ಲ ಎಂದು ಹೇಳಿದರು.

    ಯಡಿಯೂರಪ್ಪನವರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಂಡಿದೆ ಮತ್ತು ಕಾಣುತ್ತಿದೆ ಎಂದು ಕಳೆದ ಎರಡು ವಾರದ ಕೆಳಗೆ ಈಶ್ವರಪ್ಪನವರು ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಆಧಿಕ ಅಂತರದಲ್ಲಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವರ ಎರಡೇ ವಾರದಲ್ಲಿ ಈಶ್ವರಪ್ಪನವರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.