ಕುಂದಾಪುರ ಮಿರರ್ ಸುದ್ದಿ…
ಕೋಟ :ಪ್ರಸ್ತುತ ಬಿಜೆಪಿ ಅಭ್ಯರ್ಥಿ ಮೀನುಗಾರಿಕಾ ಸಚಿವರಾಗಿದ್ದಾಗ ಜಾರಿಗೆ ತಂದ ಮೀನುಗಾರ ಮಹಿಳೆಯರ ಸಾಲ ಮನ್ನಾ ಯೋಜನೆ ಬಹುತೇಕ ಫಲಾನುಭವಿಗಳಿಗೆ ಸಿಕ್ಕೇ ಇಲ್ಲ. ಯಾವುದೇ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತರುವುದು ಮುಖ್ಯವಲ್ಲ, ಅರ್ಥಿಕ ಹೊಂದಾಣಿಕೆ ಮಾಡಿ ಅದನ್ನು ಅನುಷ್ಠಾನ ಮಾಡುವುದು ಮುಖ್ಯ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು ಎ.5ರಂದು ಮಣೂರು ರಾಜಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಚುನಾವಣೆಯಲ್ಲಿ ಜಾತಿಯ ಹೆಸರಲ್ಲಿ ಮತ ಕೇಳುವವರು ಅಧಿಕಾರವಿದ್ದಾಗ ಸಮಾಜಕ್ಕೆ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನ ಆತ್ಮಸಾಕ್ಷಿಗೆ ಪ್ರಶ್ನಿಸಿಕೊಳ್ಳಬೇಕು. ಈ ಬಾರಿ ಉಡುಪಿ ಚಿಕ್ಕಮಗಳೂರಿನ ಜನ ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸುವ ಮೂಲಕ ಪ್ರಾಮಾಣಿಕತೆಗೆ ಬೆಲೆ ನೀಡಲಿದ್ದಾರೆ ಎಂದರು.
ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಮಾಜಿ ಅಧ್ಯಕ್ಷ ಭೋಜ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಸತೀಶ್ ಕುಂದರ್, ಜಿ. ತಿಮ್ಮ ಪೂಜಾರಿ ಕೋಟ, ಗೋಪಾಲ ಬಂಗೇರ, ವಿನಯ ಕುಮಾರ್ ಕಬ್ಯಾಡಿ, ಕೋಟ ರಿಕ್ಷಾ ಯೂನಿಯನ್ ಅಧ್ಯಕ್ಷ ಆಣ್ಣಪ್ಪ, ಬೈಂದೂರು ಪ್ರಕಾಶ್ಚಂದ್ರ ಶೆಟ್ಟಿ ಇದ್ದರು.
ಕೋಟ ಗ್ರಾ.ಪಂ. ಸದಸ್ಯ ಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.











