ಕುಂದಾಪುರ ಮಿರರ್ ಸುದ್ದಿ…
ಕೋಟ: ನಮ್ಮ ಎದುರಾಳಿ ಪಕ್ಷದವರು ನನ್ನ ಆಸ್ತಿ, ಅಭಿವೃದ್ಧಿಗಳ ವಿಚಾರದಲ್ಲಿ ವ್ಯಾಪಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಈ ಅಪಪ್ರಚಾರಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೊಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಎ.5ರಂದು ಕೋಟ ಹೋಬಳಿಯ ಕೋಡಿ, ಐರೋಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕೋಡಿ ಗ್ರಾ.ಪಂ. ವ್ಯಾಪ್ತಿಯ ಹಕ್ಕು ಪತ್ರ ಸಮಸ್ಯೆ ನಮ್ಮ ಸರಕಾರದ ಅವಧಿಯಲ್ಲೇ ಬಹುತೇಕ ಮಂಜೂರಾಗಿದ್ದು ಹಂಚಿಕೆ ಮಾತ್ರ ಕಾಂಗ್ರೆಸ್ ಕಾಲದಲ್ಲಾಗಿದೆ. ಅದನ್ನು ಕೂಡ ನಾವೇ ಮಾಡಿದ್ದು ಎನ್ನುವುದಾಗಿ ಹೇಳುತ್ತಿದ್ದಾರೆ. ಹೀಗೆ ಪ್ರತಿಯೊಂದು ವಿಚಾರದಲ್ಲೂ ಅಪಪ್ರಚಾರ ನಡೆಯುತ್ತಿದ್ದು, ಈ ಬಗ್ಗೆ ಮತದಾರರೇ ತೀರ್ಮಾನ ನೀಡಲಿದ್ದಾರೆ ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದಿಂದ ಅಭಿವೃದ್ಧಿಗೆ ಯಾವುದೇ ಅನುದಾನ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಈ ಚುನಾವಣೆ ರಾಷ್ಟ್ರದ ಭವಿಷ್ಯ ನಿರ್ಧಾರ ಮಾಡುವ ಚುನಾವಣೆಯಾದ್ದರಿಂದ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಬಲತುಂಬಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಟ್ಠಲ ಪೂಜಾರಿ, ಬಿಜೆಪಿ ಮುಖಂಡರಾದ ಸುಪ್ರಸಾದ್ ಶೆಟ್ಟಿ, ಗೋಪಾಡಿ ಸುರೇಶ್ ಶೆಟ್ಟಿ, ರಾಜೇಶ್ ಕಾವೇರಿ, ಮಹಾಬಲ ಕುಂದರ್ ಕೋಡಿ, ಸುರೇಶ್ ಕುಂದರ್, ಶಂಕರ ಅಂಕದಕಟ್ಟೆ, ಗೀತಾ ಖಾರ್ವಿ, ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಇದ್ದರು.











