ಸಿದ್ದಾಪುರ :ಕೆರೆಕಟ್ಟೆ ಸಂತ ಅಂತೋನಿಯರ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರ ಆಶ್ರಮದ ಉದ್ಘಾಟನೆ

0
66

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ದೇವರ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಅಪೇಕ್ಷೆ ಅಥವಾ ಷರತ್ತುಗಳಿರುವುದಿಲ್ಲ. ದೇವರ ಪ್ರೀತಿಯನ್ನು ಅನುಭವಿಸಲು ನಾವು ಯಾವುದೇ ದೊಡ್ಡ ಸಾಧನೆಗಳನ್ನು ಮಾಡಬೇಕಾಗಿಲ್ಲ. ಬದಲಾಗಿ, ಶುದ್ಧವಾದ ಮನಸ್ಸು ಮತ್ತು ಭಕ್ತಿಯಿಂದ ದೇವರನ್ನು ನೆನೆದರೆ ಸಾಕು. ಆತನ ಪ್ರೀತಿಯು ನಮಗೆ ಕಷ್ಟದ ಸಮಯದಲ್ಲಿ ಧೈರ್ಯವನ್ನು, ನೋವಿನಲ್ಲಿ ಸಾಂತ್ವನವನ್ನು ನೀಡುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹೇಳಿದರು.
ಅವರು ಶನಿವಾರ ಸಿದ್ದಾಪುರ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಿದ ನೂತನ ಆಶ್ರಮವನ್ನು ಉದ್ಘಾಟಿಸಿ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.
ಮಾನವರ ಪ್ರೀತಿಯು ಕೆಲವೊಮ್ಮೆ ಕೊನೆಗೊಳ್ಳಬಹುದು, ಆದರೆ ದೈವಿಕ ಪ್ರೀತಿಯು ಎಂದಿಗೂ ಕೊನೆಯಾಗುವುದಿಲ್ಲ. ನಾವು ತಪ್ಪುಗಳನ್ನು ಮಾಡಿದಾಗಲೂ ದೇವರು ನಮ್ಮನ್ನು ಕ್ಷಮಿಸಿ, ಸರಿ ದಾರಿಯಲ್ಲಿ ನಡೆಸುತ್ತಾನೆ. ನಿಸ್ವಾರ್ಥವಾಗಿ ಹಾಗೂ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸಹಾಯ ಮಾಡಿದಾಗ, ಅದರಿಂದ ಬರುವ ಸತ್ಫಲವು ನಿಮ್ಮ ಜೀವನವನ್ನು ರಕ್ಷಿಸುತ್ತದೆ ಮತ್ತು ಒಳಿತನ್ನು ಮಾಡುತ್ತದೆ.
ದೇವರ ಹೆಸರಿನಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಬಡವರಿಗೆ ಮತ್ತು ನಿರ್ಗತಿಕರಿಗೆ ಮಾಡುವ ಸೇವೆಗೆ ಪ್ರತಿಫಲ ಖಂಡಿತವಾಗಿ ಸಿಗುತ್ತದೆ. ನಿಸ್ವಾರ್ಥ ಸೇವೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮನುಷ್ಯನಿಗೆ ಒಳ್ಳೆಯದನ್ನು ಮಾಡುತ್ತದೆ ಎಂದರು.
ಮಹಾಪೋಷಕರಾದ ಫಿಲಿಪ್ ಡಿಕೋಸ್ತಾ ಬಸ್ರೂರು ನೂತನ ಆಶ್ರಮವನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಆಶ್ರಮದ ನಿರ್ಮಾಣಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಮತ್ತು ಮಹೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.
ಪುಣ್ಯಕ್ಷೇತ್ರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ನೂತನ ಧರ್ಮಾಧ್ಯಕ್ಷರನ್ನು ಹಾಗೂ ಶ್ರೇಷ್ಠಗುರುಗಳನ್ನು ಹಾಗೂ ಕ್ಷೇತ್ರದ ರೆಕ್ಟರ್, ಆಶ್ರಮದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆಯನ್ನು ಗೌರವಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಝೇವಿಯರ್ ಲೂವಿಸ್, ಕುಲಪತಿ ವಂ|ಸ್ಟೀವನ್ ಡಿಸೋಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಪಾವ್ಲ್ ರೇಗೊ, ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮ ಭಗಿನಿಯರ ಮುಖ್ಯಸ್ಥೆ ಸಿ|ಎಲ್ಸಿ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಿಂದ ಆಗಮಿಸಿದ ಧರ್ಮಗುರುಗಳು, 6000ಕ್ಕೂ ಅಧಿಕ ಭಕ್ತಾದಿಗಳು ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರದ ರೆಕ್ಟರ್ ವಂ|ಸುನಿಲ್ ವೇಗಸ್ ಸರ್ವರನ್ನು ವಂದಿಸಿದರು. ವಂ|ರೋಯ್ ಲೋಬೊ ಹಾಗೂ ವಂ|ವಿಲ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮಪ್ರಾಂತ್ಯದಲ್ಲಿ ಜನರ ಆಧ್ಯಾತ್ಮಿಕ ಬೆಳವಣಿಗೆಗೆ ಮೊದಲ ಆದ್ಯತೆಯಾಗಿ ಶ್ರಮಿಸುವುದರೊಂದಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಲು ಪ್ರಯತ್ನಿಸುವುದರೊಂದಿಗೆ ಧರ್ಮಪ್ರಾಂತ್ಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಕುರಿತು ಚಿಂತನೆ ನಡೆಸಲಾಗಿದೆ. ಭಕ್ತರ ಹಾಗೂ ಉದಾರ ಮನಸ್ಸಿನ ದಾನಿಗಳು ಇಂತಹ ಉತ್ತಮ ಕಾರ್ಯಕ್ಕೆ ಕೈ ಜೋಡಿಸಿದರು ಕನಸು ನನಸಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ –ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ಬಿಪಪರು ಉಡುಪಿ

Click Here

LEAVE A REPLY

Please enter your comment!
Please enter your name here