ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹೆಸ್ಕುತ್ತೂರು ಗ್ರಾಮದ ಕೊರ್ಗಿ ಗ್ರಾಮದ ನಾಗಬ್ರಹ್ಮ ನಂದಿಕೇಶ್ವರ ಚಿಕ್ಕಮ್ಮ ಹಳೆಯಮ್ಮ ಪರಿವಾರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ರೂ.45000.00 ಅನುದಾನವನ್ನು ಮಂಜೂರು ಮಾಡಿದ್ದು, ತಾಲೂಕು ಯೋಜನಾಧಿಕಾರಿ ಸುಧೀರ್ ಹಂಗಳೂರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ವ್ಯವಸ್ಥಾಪನಾ ಸಮಿತಿಯವರಿಗೆ ಹಸ್ತಾಂತರಿಸಿದರು.
ಈ ಬಗ್ಗೆ ಮಾತನಾಡಿದ ಯೋಜನಾಧಿಕಾರಿಯವರು ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಇರಬೇಕೆಂದರೆ ಶ್ರದ್ಧಾ ಕೇಂದ್ರಗಳಾಗಿರುವ ದೇವಸ್ಥಾನಗಳು ಅತ್ಯಗತ್ಯವೆಂದು ಮನಗಂಡಿರುವ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ಮೂಲಕ ದೇಣಿಗೆಯನ್ನು ಒದಗಿಸಿಕೊಡುತ್ತಿದ್ದಾರೆ. ಇದಲ್ಲದೇ ವಾರ್ಷಿಕವಾಗಿ 02 ಬಾರಿ ಯೋಜನೆಯ ಸದಸ್ಯರ ಹಾಗೂ ಸ್ಥಳೀಯರ ಸಹಕಾರದಿಂದ ಗ್ರಾಮದ ದೇವಸ್ಥಾನದ, ಚರ್ಚ್, ಮಸೀದಿಗಳ ಸ್ವಚ್ಛತೆಯನ್ನು ಮಾಡಲಾಗುತ್ತಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಚತೆಗೆ ಪ್ರಮುಖ ಆದ್ಯತೆ ನೀಡಲಾಗಿರುತ್ತದೆ.
ತಾಲೂಕಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರಗಳಿಗೆ ಕಳೆದ 05 ವರ್ಷಂದೀಚೆಗೆ ಒಟ್ಟು 98 ಲಕ್ಷದ 80 ಸಾವಿರ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಿಕೊಡಲಾಗಿದ್ದು, ಇದು ನೆರವು ನೀಡುತ್ತಿರುವ 41ನೇ ದೇವಸ್ಥಾನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ದೇವಸ್ಥಾನದ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಗೌರೀಶ ಹೆಗ್ಡೆ, ಅರ್ಚಕರಾದ ಶ್ರೀ ಸುರೇಶ ಜೋಗಿ,ಒಕ್ಕೂಟದ ಉಪಾಧ್ಯಕ್ಷರಾದ ಭಾರತಿ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ದಿವಾಕರ ಹಾಗೂ ಸೇವಾಪ್ರತಿನಿಧಿ ಗೀತಾ ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.












