ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ:ಯಾರೆಲ್ಲ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೋ ಅವರೆಲ್ಲರ ಬದುಕಿನಲ್ಲಿ ಹೊಸ ಆತ್ಮವಿಶ್ವಾಸ ಇದ್ದೇ ಇರುತ್ತದೆ. ಇದಕ್ಕೆ ಅವರಲ್ಲಿರುವ ದೈಹಿಕ ಹಾಗೂ ಮಾನಸಿಕ ಶಕ್ತಿ ಕಾರಣ. ಅದು ಕ್ರೀಡೆಯಿಂದ ಹೆಚ್ಚಾಗಿ ಸಿಗುತ್ತದೆ ಎಂದು ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ಲ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ಗೌತಮ್ ಶೆಟ್ಟಿ ಅಭಿಪ್ರಾಯಪಟ್ಟರು.



ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ.) ಇವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ನೀಡಿದ ಸನ್ಮಾನವನ್ನು ಸ್ವೀಕರಿಸಿದ ನಂತರ ಮಾತನಾಡಿದರು.
“ಕ್ರೀಡೆ ಎಂದರೆ ಕೇವಲ ಸೋಲು- ಗೆಲುವಿಗೆ ಸೀಮಿತವಾದುದಲ್ಲ. ಅದು ನಮ್ಮ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಇವೆರಡೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿ ಪೂರ್ಣಗೊಳಿಸುತ್ತದೆ. ಉತ್ತಮ ಮಾನಸಿಕ ಆರೋಗ್ಯವನ್ನು ನಾವು ಕ್ರೀಡಾ ಚಟುವಟಿಕೆಯಿಂದ ಪಡೆಯಬಹುದು. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಕ್ರೀಡೆಯಿಂದಾಗುವ ಅನುಕೂಲಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಈ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಬ್ರಹ್ಮಾವರ ತಹಶಿಲ್ದಾರಾದ ರಾಜಶೇಖರ ಮೂರ್ತಿ ಅವರು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವ, ಹಾಕಿಗೆ ಧ್ಯಾನ್ ಚಂದ್ ಅವರ ಕೊಡುಗೆಗಳ ಕುರಿತು ಮಾತನಾಡಿದರು.
ಬ್ರಹ್ಮಾವರ ರೋಟರಿ ಕ್ಲಬ್ ನ ಅಧ್ಯಕ್ಷ ಹರೀಶ್ ಕುಂದರ್,
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಮತ್ತು ಕಾರ್ಯದರ್ಶಿ ಜಾರ್ಜ್ ಡಿ’ ಸಿಲ್ವಾ ಈ ಸಂದರ್ಭದಲ್ಲಿ ಹಾಜರಿದ್ದರು.











